Select Your Language

Notifications

webdunia
webdunia
webdunia
webdunia

ಸಂಪುಟ ವಿಸ್ತರಣೆ ಗುರುವಾರಕ್ಕೆ ಮುಂದೂಡಿಕೆ

ಸಂಪುಟ ವಿಸ್ತರಣೆ ಗುರುವಾರಕ್ಕೆ ಮುಂದೂಡಿಕೆ
ಮಂಗಳವಾರ ನಡೆಯಬೇಕಿದ್ದ ದ್ವಿತೀಯ ಹಂತದ ಸಂಪುಟ ವಿಸ್ತರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಇದು ಗುರುವಾರಕ್ಕಿಂತ ಮುಂಚಿತವಾಗಿ ನಡೆಯುವ ಸಂಭವವಿಲ್ಲ ಎಂಬುದಾಗಿ ಪ್ರಧಾನಮಂತ್ರಿ ಸಚಿವಾಲಯದ ಹೇಳಿಕೆ ತಿಳಿಸಿದೆ.

"ಎರಡನೆ ಹಂತದಲ್ಲಿ ಹಲವಾರು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಇನ್ನಷ್ಟು ಕಾರ್ಯ ನಿರ್ವಹಿಸಬೇಕಾಗಿದೆ. ಸಂಪುಟ ವಿಸ್ತರಣೆಯು ಕೆಲವೇ ದಿನದಲ್ಲಿ ನಡೆಯಲಿದೆ" ಎಂದು ಪ್ರಧಾನಮಂತ್ರಿ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

ಬುಧವಾರ ಜವಾಹರ್ ಲಾಲ್ ನೆಹರೂ ಅವರ ಪುಣ್ಯತಿಥಿಯಾಗಿರುವ ಕಾರಣ ಅಂದು ನಡೆಯುವುದು ಅಸಂಭವ ಎಂದು ಅವರು ಹೇಳಿದ್ದಾರೆ.

ಡಿಎಂಕೆಯು ಏಳು ಸಚಿವಖಾತೆಗಳನ್ನು ಪಡೆದಿರುವ ಬಳಿಕ ಇತರ ಮಿತ್ರರ ಆಸೆಗಳು ಚಿಗುರಿರುವ ಕಾರಣ ಖಾತೆ ಹಂಚಿಕೆಯ ಬಿಕ್ಕಟ್ಟು ಎದುರಾಗಿದೆ ಎಂಬುದಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ಮೂಲಗಳು ಹೇಳುತ್ತಿವೆ.

ಡಿಎಂಕೆಯು ತನ್ನ ಹಠಸಾಧಿಸಿಕೊಂಡಿರುವ ಬಳಿಕ ಇದೀಗ, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್‌ಸಿಪಿಯು ಹೆಚ್ಚು ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು ಒತ್ತಡ ಹೇರುತ್ತಿವೆ ಎನ್ನಲಾಗಿದೆ.

ಇದೇವೇಳೆ ಕಾಂಗ್ರೆಸ್ ಸಹ ತನ್ನದೇ ಪಕ್ಷದ ಸದಸ್ಯರಿಗೆ ಯಾವ ಖಾತೆ ನೀಡಬೇಕು ಎಂಬ ಕುರಿತು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಗೂ ಇನ್ನಿತರ ಪ್ರಮುಖರೊಂದಿಗೆ ಹಲವು ಸುತ್ತುಗಳ ಮಾತುಕತೆ ನಡೆಸಿದರೂ ಪಟ್ಟಿ ಅಂತಿಮಗೊಂಡಿಲ್ಲ.

ಮನಮೋಹನ್ ಸಿಂಗ್ ಹಾಗೂ ಇತರ 19 ಸಂಪುಟ ಸಚಿವರು ಮೇ 22ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇವರಲ್ಲಿ ಕೆಲವರು ಇದೀಗಾಗಲೇ ಅಧಿಕಾರ ಸ್ವೀಕರಿಸಿ ತಮ್ಮ ಕಾರ್ಯಾರಂಭ ಮಾಡಿದ್ದಾರೆ.

Share this Story:

Follow Webdunia kannada