Select Your Language

Notifications

webdunia
webdunia
webdunia
webdunia

ನಂಗೆ ಕಾಂಗ್ರೆಸ್‌ನಿಂದ ಅವಮಾನವಾಗಿದೆ: ಲಾಲೂ ಕೂಗು

ನಂಗೆ ಕಾಂಗ್ರೆಸ್‌ನಿಂದ ಅವಮಾನವಾಗಿದೆ: ಲಾಲೂ ಕೂಗು
ನವದೆಹಲಿ , ಮಂಗಳವಾರ, 19 ಮೇ 2009 (15:11 IST)
ಮಹತ್ತರವಾದುದನ್ನು ಸಾಧಿಸುತ್ತೇವೆಂಬ ಭಾವನೆಯೊಂದಿಗೆ ಯುಪಿಎ ಜತೆಗಿದ್ದೇವೆ ಅನ್ನತ್ತಲೇ, ಚುನಾವಣೆ ವೇಳೆ ದೂರ ಸರಿದು ಎಲ್‌ಜೆಪಿ ಮತ್ತು ಸಮಾಜವಾದಿ ಪಕ್ಷದೊಂದಿಗೆ ಸೇರಿ ಹೊಸದೊಂದು ಮೈತ್ರಿ ಮಾಡಿಕೊಂಡಿದ್ದ ಲಾಲೂಪ್ರಸಾದ್ ಯಾದವ್ ಅವರಿಗೀಗ ಹೊಡೆತಗಳ ಮೇಲೆ ಹೊಡೆತಗಳು ಬೀಳುವಂತಿದೆ.

ಭಾರೀ ಆತ್ಮ ವಿಶ್ವಾಸದಿಂದ ಬೀಗಿದ ಲಾಲು ಅವರ ಆರ್‌ಜೆಡಿ ಪಕ್ಷ ಈ ಚುನಾವಣೆಯಲ್ಲಿ ಗಳಿಸಿದ್ದು ಕೇವಲ ನಾಲ್ಕು ಸ್ಥಾನ. ಕಳೆದ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗಳಿಸಿದ್ದ ಆರ್‌ಜೆಡಿ ಈ ಸಲವೂ ಉತ್ತಮ ಮೊತ್ತಗಳಿಸ ಬಹುದು ಎಂಬ ಲಾಲೂ ಚಿಂತನೆ ನುಚ್ಚುನೂರಾಗಿದೆ.

ಚುನಾವಣೆ ವೇಳೆ ತಮ್ಮ ಕೈಬಿಟ್ಟ ಕಾರಣ ಸಿಟ್ಟುಗೊಂಡಿರುವ ಕಾಂಗ್ರೆಸ್ ಲಾಲೂಗೆ ತಕ್ಕ ಪಾಠಕಲಿಸಲು ಮುಂದಾಗಿದ್ದು, ಲಾಲೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಂಶಯವಾಗಿದೆ. ಈ ಅವಮಾನವನ್ನು ಸಹಿಸಲಾಗದ ಲಾಲೂ ಸೋಮವಾರ ನಡೆದ ಸಂಪುಟ ಸಭೆಯಲ್ಲಿ, ಕಾಂಗ್ರೆಸ್ ತನ್ನನ್ಯಾಕೆ ಪದೇಪದೇ ಅವಮಾನಿಸುತ್ತಿದೆ ಎಂದು ಕೇಳಿದ್ದಾರೆ.

ಇದಕ್ಕೂ ಮುನ್ನ ಅವರು ಬಿಹಾರದಲ್ಲಿ ಕಾಂಗ್ರೆಸನ್ನು ಬದಿಗಿಟ್ಟು ಚುನಾವಣೆಗೆ ಸ್ಫರ್ಧಿಸಿರುವುದು ಒಂದು ದೊಡ್ಡ ತಪ್ಪು ಎಂದು 'ತಪ್ಪೊಪ್ಪಿ'ಕೊಂಡಿದ್ದರು.

ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ದೂರವಾಣಿ ಕರೆ ನೀಡಿ ಸಂಪುಟ ಸಭೆಗೆ ಆಹ್ವಾನಿಸಿದ್ದರಾದರೂ, ಅವರಿಗೆ ಸಚಿವ ಖಾತೆ ನೀಡುವ ಯಾವುದೇ ಸುಳಿವು ನೀಡಿಲ್ಲ.

ಕಾಂಗ್ರೆಸ್ ಲಾಲು ಪಕ್ಷವನ್ನು ಚುನಾವಣಾ ಪೂರ್ವ ಮಿತ್ರ ಪಕ್ಷವೆಂದು ಪರಿಗಣಿಸುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಲಾಲೂ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್‌ಗೆ ಇಷ್ಟಇಲ್ಲ ಎಂದು ಮೂಲಗಳು ಹೇಳುತ್ತಿವೆ.

Share this Story:

Follow Webdunia kannada