Select Your Language

Notifications

webdunia
webdunia
webdunia
webdunia

ಆಗಸದಲ್ಲಿ ನಕ್ಷತ್ರಗಳೇ ಇಲ್ಲ ಕಣೋ...

ಆಗಸದಲ್ಲಿ ನಕ್ಷತ್ರಗಳೇ ಇಲ್ಲ ಕಣೋ...
ರಜನಿ ಭಟ್
WD


ಹೂತೋಟದ ಹಾದಿಯಾಗೆ ಊರಿನಾಚೆ ತೋಪಿನಾಗೆ
ತಂಗಾಳಿ ಬೀಸಿದಾಗೆ ಹೊಂಬಾಳೆ ತೂಗಿದಾಗೆ
ನಿನ್ನ ಪ್ರೀತಿ ನೆನಪು ಕಾಡಿತೋ ನಿಂತಲ್ಲೇ ಕನಸೂ ಕಂಡಿತೋ
ಬಾಳುವಾಸೆ ಮತ್ತೆ ಉಕ್ಕಿ ಬಂದಿತೋ...

ಯಾಕೋ ಗೊತ್ತಿಲ್ಲ ಕಣೋ... ಈ ಹಾಡು ಕೇಳುವಾಗೆಲ್ಲಾ ನೀನೇ ನೆನಪಾಗ್ತೀಯ. ಬೇಡ ಅಂದರೂ ನನ್ನ ಮನಪಟಲದಲ್ಲಿ ನಿನ್ನದೇ ಚಿತ್ರ ಮೂಡುತ್ತದೆ. ಕಳೆದ ವರ್ಷದ ಪ್ರೇಮಿಗಳ ದಿನವೇ ನನ್ನ ಮನದಲ್ಲಿ ಮರುಕಳಿಸುತ್ತದೆ. ಜೀವನದ ಜಂಜಾಟಗಳಿಂದ ನೊಂದ ಮನಸ್ಸು ಬದುಕೇ ಬೇಡವೆಂದು ಎಣಿಸಿದ ಸಂದರ್ಭದಲ್ಲಿ ನಿನ್ನ ಪ್ರೀತಿಯೊಂದೇ ನನ್ನ ಬಾಳಲ್ಲಿ ಸ್ಫೂರ್ತಿ ತುಂಬಿತ್ತು ಕಣೋ. ಕೇವಲ, ನಿನಗಾಗಿ ನಿನ್ನ ಪ್ರೀತಿಗಾಗಿಯಾದರೂ ನಾನು ಬದುಕಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ನಮ್ಮಿಬ್ಬರ ಪ್ರೀತಿಯು ಜಗತ್ತಿನ ಎಲ್ಲಾ ಪ್ರೇಮಿಗಳಿಗೂ ಮಾದರಿಯಾಗುವಂತಿರಬೇಕು ಮುಂತಾದ ಅನೇಕ ಕನಸುಗಳನ್ನು ಕಂಡಿದ್ದೆ. ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ ಎಂದು ನಾನು ನಿನ್ನಲ್ಲಿ ಕೇಳಿದ್ದಾಗ ಆಕಾಶದಲ್ಲಿ ಎಷ್ಟು ನಕ್ಷತ್ರಗಳಿವೆಯೋ ಅಷ್ಟು ಎಂದು ನೀನು ಹೇಳಿದ್ದೆ ಅಲ್ವಾ ಆದರೆ. ನಕ್ಷತ್ರ ಎಣಿಸಲೆಂದು ನಾನು ಆಕಾಶನೋಡಿದರೆ ಆಕಾಶವೆಲ್ಲಾ ಮೋಡ ತುಂಬಿ ನಕ್ಷತ್ರಗಳೇ ಕಾಣುತ್ತಿರಲಿಲ್ಲ. ಇದು ನಮ್ಮಿಬ್ಬರ ಅಗಲುವಿಕೆಯ ಮುನ್ಸೂಚನೆಯಾಗಿತ್ತೇ? ಅದಾಗಿ ಒಂದು ತಿಂಗಳಲ್ಲೇ ನೀನು ನಾನು ಬೇರೆಯಾಗಿಬಿಟ್ಟವಲ್ಲೋ.

ಜಗತ್ತಿನ ಕನಸು ಕಣ್ಗಳಲ್ಲಿ ತುಂಬಿ, ನಗೆಯ ರೂಪವಾಗಿ ಹರಿದು ಅಡಿಕಣ್ಣಲ್ಲಿ ನೋಡಿದ ಆ ನಿನ್ನ ನೋಟ, ಬಸ್ಸಲ್ಲಿ ಪಯಣದ ಸ್ಟಾಪ್ ಬಂದಾಗ ಇಳಿಯಲು ಮರೆತ ಆ ದಿನ, ನನಗೆಂದೇ ತುಂಬಾ ಕಾಳಜಿಯಿಂದ ತಂದುಕೊಟ್ಟ ಆ ಮುದ್ದಾದ ಬೆಕ್ಕಿನ ಫೋಟೋ... ಹೇಗೆ ಮರೆಯಲಿ ಇದನ್ನೆಲ್ಲಾ. ಪ್ರತಿದಿನ ನಾವಿಬ್ಬರೂ ಆ ಭೇಟಿಯಾಗುತ್ತಿದ್ದ ಆ ಸ್ಥಳಕ್ಕೆ ನನ್ನ ಪ್ರೀತಿಯ ಬೆಕ್ಕು ನವ್ಯನನ್ನೂ ಕರೆತರುತ್ತಿದ್ದೆ. ಆಗೆಲ್ಲಾ ನೀನು ಹೇಳುತಿದ್ದೆ ನಮ್ಮಿಬ್ಬರ ಈ ಪ್ರೀತಿಗೆ ನಿನ್ನ ನವ್ಯನೇ ಸಾಕ್ಷಿ ಅಂತ. ಈಗ ಪ್ರತಿದಿನ ನವ್ಯನ ಮುಖದಲ್ಲಿ ನಿನ್ನನ್ನೇ ಕಾಣುತ್ತಿದ್ದೇನೆ ಕಣೋ.

ಕೇವಲ 'ಜಾತಿ' ಎಂಬ ಅಡ್ಡಗೋಡೆಯು ನಮ್ಮ ಬೆಸುಗೆಯ ಬಂಧನಕ್ಕೆ ಮುಳುವಾಯಿತಲ್ಲ. ಪ್ರಪಂಚದಲ್ಲಿ ಯಾಕಾದರೂ ಜಾತಿ ಭೇದಗಳಿವೆಯೋ ಅನಿಸುತ್ತದೆ. ಪ್ರೀತಿ ಕುರುಡು ಅಂತ ಹೇಳ್ತಾರೆ. ಪ್ರೀತಿಗೆ ಜಾತಿ ಅಂತರವಿಲ್ಲ, ಬಡವ ಬಲ್ಲಿದನೆಂಬ ಭೇದವಿಲ್ಲ ಎಂದೆಲ್ಲಾ ಹೇಳ್ತಾರೆ. ಆದರೆ ಈ ರೀತಿ ಹೇಳುವವರೆ ಯಾರಾದರೂ ವಿರೋಧ ಪಂಗಡಗಳ ಪ್ರೇಮಿಗಳಿದ್ದರೆ ಅವರನ್ನು ವಿರೋಧಿಸುತ್ತಾರೆ. ಈ ಪ್ರೇಮಿಗಳನ್ನು ದೂರ ಮಾಡಲು ಪ್ರಯತ್ನಿಸುತ್ತಾರೆ. ಎಂತಾ ಕ್ರೂರ ಜಗತ್ತು ಅಲ್ವೇನೋ. ಪ್ರೀತಿ ಎಂಬ ಪದವನ್ನು ಯಾರಾದರೂ ಕಂಡುಹಿಡಿದರೋ. ಯಾಕಾದರೂ ಕಂಡುಹಿಡಿದರೋ ಅಂತ ಅನಿಸುತ್ತದೆ ಕಣೋ.

ಆ ದಿನ ನಿನ್ನ ಹುಟ್ಟುಹಬ್ಬಕ್ಕಾಗಿ, ನಾನು ನಿನಗೆ ಕೊಟ್ಟಿದ್ದ ಕಪ್ಪು ಬಣ್ಣದ ಟೀ ಶರ್ಟ್. ಅದನ್ನು ನೀನು ಹಾಕಿಕೊಂಡ ದಿನ ಎಷ್ಟು ಚೆನ್ನಾಗಿ ಕಾಣಿಸಿಕೊಂಡಿದ್ದಿ ಅಂದರೆ ನಿನ್ನನ್ನೇ ನೋಡುತ್ತಾ ಇರೋಣ ಅನಿಸುತ್ತಿತ್ತು. ಅದನ್ನು ನಿನಗೆ ಹೇಳಿದ ಮೇಲೆ ಪ್ರತಿದಿನ ಅದೇ ಶರ್ಟ್‌ ಹಾಕುತ್ತೇನೆ ಆಗ ನೀನು ಬೇರೆ ಹುಡುಗರನ್ನು ನೋಡುವುದೇ ಇಲ್ಲ ನನ್ನನ್ನು ಮಾತ್ರ ನೋಡುತ್ತೀಯಾ ಅಂತ ತಮಾಷೆ ಮಾಡಿದ್ದೀಯಲ್ವಾ? ಆಗೆಲ್ಲಾ ನಿನ್ನನ್ನು ರೇಗಿಸಲೆಂದೇ ಬೇರೆ ಹುಡುಗರ ಬಗ್ಗೆ ಹೇಳುತ್ತಿದ್ದೆ. ಈ ಹುಡುಗ ಎಷ್ಟು ಚಂದ ಇದ್ದಾನೆ ಅಲ್ವಾ ಅಂತ ಸುಮ್ಮನೆಯಾದರೂ ಹೇಳುತ್ತಿದ್ದೆ. ಆಗ ನಿನಗೆ ಎಷ್ಟೊಂದು ಕೋಪ ಬರ್ತಿತ್ತು ಅಲ್ವಾ . ಬೇರೆ ಹುಡುಗರು ಎಷ್ಟು ಚಂದ ಅಂತೆಲ್ಲಾ ನಾನು ಹೇಳುತ್ತಿದ್ದರೂ ನನ್ನ ಮನದಲ್ಲೆಲ್ಲಾ ನೀನೇ ತುಂಬಿರುತ್ತಿದ್ದೇ ಕಣೋ. ಈಗಲೂ ಅಷ್ಟೆ. ಪ್ರಾಮಿಸ್.

ನೀನು ಯಾವತ್ತೂ ಸಂತೋಷವಾಗಿರಬೇಕು ಕಣೋ. ನಿನ್ನ ಪ್ರತಿದಿನದ ಸಂತೋಷವನ್ನು ಬೊಗಸೆಯಲ್ಲಿ ಸೆರೆ ಹಿಡಿದು ನನ್ನ ಹೃದಯದಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದೇನೆ. ಅದನ್ನು ಯಾರಿಗೂ ಕದಿಯಲು ಸಾಧ್ಯವಿಲ್ಲ ಅಂತ ಹೇಳಿದ್ದೀಯಲ್ವಾ. ಆದರೆ ನೀನು ನನ್ನಿಂದ ದೂರ ಹೋದ ಮೇಲೆ ನನ್ನ ಸಂತೋಷವೆಲ್ಲಾ ಕಣ್ಮರೆಯಾಗಿದೆ ಕಣೋ. ನಿನ್ನ ಸಂತೋಷವನ್ನು ನನ್ನ ಹೃದಯದಲ್ಲದೆ ಬೇರಾರ ಹೃದಯದಲ್ಲೂ ಭದ್ರವಾಗಿರಿಸಲು ಸಾಧ್ಯವೇ ಇಲ್ಲ. ಅದೊಂಥರಾ ಸೇಫ್ ಲಾಕರ್ ಇದ್ದಂತೆ ಎಂದು ಹೇಳುತ್ತಿದ್ದೆ ಅಲ್ವಾ ಆದರೆ ಈಗ ಆ ಸೇಫ್ ಲಾಕರ್‌ನ ಕೀಯೇ ಕಳೆದು ಹೋಗಿದೆಯಲ್ವಾ?

ಜಗತ್ತಿನಲ್ಲಿರುವ ಎಲ್ಲಾ ಪ್ರಣಯ ಹಕ್ಕಿಗಳನ್ನು ನೋಡುವಾಗ ದೇವರು ನಮ್ಮ ಜೋಡಿಯ ಮೇಲೆ ಮಾತ್ರ ಯಾಕೆ ಮುನಿಸು ತೋರಿಸಿಬಿಟ್ಟ ಅಂತ ಅನಿಸುತ್ತಿದ್ದೆ. ಬಾನ ಚಂದಿರನೂ ಆತನ ಪ್ರೇಮಜೋಡಿಗಳ ಪಟ್ಟಿಯಿಂದ ನಮ್ಮ ಹೆಸರನ್ನು ಅಳಿಸಿ ಹಾಕಿಬಿಟ್ಟ. ಜೀವಕ್ಕೆ ಜೀವ ನೀಡುವಂತಿದ್ದ ಪ್ರೇಮಿಗಳನ್ನು ಕ್ರೂರ ಜಗತ್ತು ದೂರ ಮಾಡಿ ನಮ್ಮಿಬ್ಬರ ಹೃದಯದಲ್ಲೂ ಅಳಿಸಿಹೋಗದಂತಹ ಗಾಯ ಮಾಡಿಬಿಟ್ಟಿದೆ.

ಈಗ ಮತ್ತೊಂದು ಪ್ರೇಮಿಗಳ ದಿನ ಬಂದಿದೆ. ಆದರೆ ಹೋದ ವರ್ಷದ ಪ್ರೀತಿ ಈ ವರ್ಷ ಇಲ್ಲ. ಹೋದ ವರ್ಷ ಇದ್ದ ಖುಷಿ ಈ ವರ್ಷ ಇಲ್ಲ. ಯಾಕೆ ಈ ಥರಾ?. ಇದೊಂದು ಮರೀಚಿಕೆಯಲ್ಲವೇ. ಇರಲಿ ಬಿಡು. ನಿನ್ನ ಜೊತೆ ಕಳೆದ ಆ ಸವಿಕ್ಷಣದ ನೆನಪುಗಳೊಂದಿಗೆ ನಾನಿನ್ನೂ ಬದುಕುತ್ತಿದ್ದೇನೆ. ನನಗೆ ಇದೊಂದೇ ಸಾಕು. ನೀನೆಲ್ಲಿದ್ದರೂ ಚೆನ್ನಾಗಿರು. ಹೇಗಿದ್ದರೂ ಚೆನ್ನಾಗಿರು. ಎಂದಿಗೂ ನಿನಗಾಗಿ ನಾನು ಕಾಯುತ್ತಿರುವೆ.

Share this Story:

Follow Webdunia kannada