Select Your Language

Notifications

webdunia
webdunia
webdunia
webdunia

ವೆಲೆಂಟೈನ್ಸ್ ಡೇ:ಪ್ರೇಮಿಗಳೇ, ನಿಮ್ಮ ಪ್ರೇಮ ಚಿರಾಯುವಾಗಲಿ...

ವೆಲೆಂಟೈನ್ಸ್ ಡೇ:ಪ್ರೇಮಿಗಳೇ, ನಿಮ್ಮ ಪ್ರೇಮ ಚಿರಾಯುವಾಗಲಿ...
, ಮಂಗಳವಾರ, 14 ಫೆಬ್ರವರಿ 2012 (11:03 IST)
WD
ಫೆಬ್ರುವರಿ 14 ಪ್ರೇಮಿಗಳ ಪಾಲಿಗೆ ತುಂಬಾ ಮಹತ್ವವಾದ ದಿನ... ಇಂದು ಪ್ರೇಮಿಗಳಲ್ಲಿ ಸಂಭ್ರಮವೋ ಸಂಭ್ರಮ... ಗ್ರೀಟಿಂಗ್ಸ್ ಕಾರ್ಡ್ಸ್‌ ಅಂಗಡಿಗಳಲ್ಲಿ ನೂಕು ನುಗ್ಗಲು... ಮೊಬೈಲ್‌ಗಳು ರಿಂಗಣಿಸುತ್ತವೆ.... ಮೆಸೇಜುಗಳು ಅತ್ತಿಂದ ಇತ್ತ ಹರಿದಾಡುತ್ತವೆ... ಒಟ್ಟಾರೆ ಎಲ್ಲವೂ ಪ್ರೇಮಮಯ.

ಪ್ರೇಮಿಗಳಲ್ಲಿ ಅದೇನೋ ಅದುಮಿಡಲಾರದ ಉತ್ಸಾಹ... ಸಂಭ್ರಮ... ಉಲ್ಲಾಸ... ಕಾತರ... ತನ್ನ ಪ್ರಿಯಕರನ ಎದೆಯ ಮೇಲೆ ತಲೆಯಿಟ್ಟು ಏನೇನೋ ಉಸುರುವ ಅಭಿಲಾಷೆ, ಕುಣಿದು ಕುಪ್ಪಳಿಸಬೇಕೆನ್ನುವ ತವಕ... ತಾನು ಪ್ರೀತಿಸುವ ಪ್ರಿಯತಮೆಗೆ ಗುಲಾಬಿ ಹೂವನ್ನೀಡಿ ಐ ಲವ್ ಯೂ ಎನ್ನುವ ಕನಸು... ಹ್ಯಾಪೀ ವ್ಯಾಲೆಂಟನ್ ಡೇ...ಹೌದು! ಎಲ್ಲರಿಗೂ ಒಂದು ದಿನವಿರುವಂತೆ ಪ್ರೇಮಿಗಳಿಗೂ ಒಂದು ದಿನ ಹಾಗಾಗಿ ಆ ದಿನ ಪ್ರೇಮಿಗಳು ಸಂಭ್ರಮಪಡಲೇ ಬೇಕಲ್ಲವೇ? ಹಾಗೆನೋಡಿದರೆ ಪಾಶ್ಚಿಮಾತ್ಯರಿಗಷ್ಟೇ ಸೀಮಿತವಾಗಿದ್ದ ಪ್ರೇಮಿಗಳ ದಿನಾಚರಣೆ ಭಾರತಕ್ಕೂ ಕಾಲಿಟ್ಟು ಬಹಳ ವರ್ಷಗಳೇ ಆಗಿದ್ದರೂ ಅಲ್ಲಲ್ಲಿ ಕದ್ದು ಮುಚ್ಚಿ ನಡೆಯುತ್ತಿತ್ತು. ಆದರೆ ಈಗ ಸಾರ್ವಜನಿಕವಾಗಿ ನಡೆಯುವಂತಾಗಿದೆ. ಹೀಗಾಗಿ ಬಸ್‌ಸ್ಟ್ಯಾಂಡ್, ಪಾರ್ಕ್, ಕಾಲೇಜ್ ಕ್ಯಾಂಪಸ್ ಹೀಗೆ ಎಲ್ಲೆಂದರಲ್ಲಿ ಪ್ರೇಮಿಗಳ ದರ್ಬಾರ್... ಯಾರಾದರು ನೋಡಿಯಾರು ಎಂಬ ಭಯವೆಲ್ಲಾ ಮಾಯವಾಗಿ ಅಲ್ಲಿ ಪ್ರೇಮಿಗಳ ಪರೇಡ್ ನಡೆಯುತ್ತದೆ. ಜೊತೆಗೆ ಎಲ್ಲರ ಮುಂದೆ ಪ್ರೇಮಿಗಳಂತೆ ಗುರುತಿಸಿಕೊಳ್ಳುವುದೇ ಒಂದು ಫ್ಯಾಷನ್ ಆಗಿದೆ.

ನಿಜಹೇಳಬೇಕೆಂದರೆ ಪ್ರೇಮ ಹುಟ್ಟದ ಹೃದಯವೇ ಇಲ್ಲ ಎನ್ನಬೇಕು. ಆದರೆ ಅದು ಬೆಳೆದು ಹೆಮ್ಮರವಾಗಲು ಮಾತ್ರ ಹೆತ್ತವರ ಆಶೀರ್ವಾದ ಬೇಕಾಗುತ್ತದೆ. ನಾವು ಪ್ರೇಮಕ್ಕೆ ಸಂಬಂಧಿಸಿದ ಹಲವು ಪ್ರಸಂಗಗಳನ್ನು ರಾಮಾಯಣ, ಮಹಾಭಾರತದ ಕಾಲದಿಂದಲೇ ನೋಡುತ್ತಾ ಬಂದಿದ್ದೇವೆ. ಆದರೆ ನಮಗೆ ಪ್ರೇಮಿಗಳೆಂದಾಕ್ಷಣ ರೋಮಿಯೋ-ಜೂಲಿಯೆಟ್, ಸಲೀಂ-ಅನಾರ್ಕಲಿ ನೆನಪಾಗುತ್ತಾರೆ. ಅವರ ಪ್ರೇಮ ಕಥೆಗಳನ್ನು ಓದಿದವರು ಪ್ರೇಮಿಗಳೆಂದರೆ ಹಾಗಿರಬೇಕು ಅವರಂತೆಯೇ ಅಮರವಾಗಿರಬೇಕೆಂದುಕೊಳ್ಳುತ್ತಾರೆ.

ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ. ಒಮ್ಮೆ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಬಿಡುತ್ತದೆ. ಆಹಾ... ಪ್ರೇಮಲೋಕ ಎಂತಹ ವಿಸ್ಮಯ? ವರ್ಣಿಸಿದಷ್ಟೂ ಮುಗಿಯದ ಸುಂದರ ಅದ್ಬುತ ಲೋಕ. ಅವಳ ಒಂದೇ ಒಂದು ಹೂ ನಗುವಿಗೆ ದಿನವೀಡೀ ಕಾತರಿಸುವ ಪ್ರೇಮಿ... ಅವನ ಪ್ರೀತಿ ತುಂಬಿದ ಮಾತಿಗೆ, ಸ್ಪರ್ಶಕ್ಕೆ ಮುದುಡಿ ಹೋಗುವ ಪ್ರೇಯಸಿ... ನಿಜವಾಗಿಯೂ ಎಂತಹ ಸುಂದರಲೋಕ ಅಲ್ವಾ? ಪ್ರೇಮ ಅಂದ್ರೆ ಪ್ರಣಯ, ದೇಹ ಸಂಬಂಧ ಅರ್ಥಾತ್ ಕಾಮವನ್ನು ತ್ಯಜಿಸಿದ ಪ್ರೀತಿ, ಕರುಣೆ, ಅನುಕಂಪ ತುಂಬಿದ ಸಂಬಂಧ. ಪ್ರೀತಿ ಪವಿತ್ರವಾಗಿರಬೇಕು. ಹಾಗಿದ್ದರೆ ಮಾತ್ರ ಪ್ರೇಮಕ್ಕೆ, ಪ್ರೇಮಿಗಳಿಗೆ ಕಿಮ್ಮತ್ತು. ಇಲ್ಲಾಂದ್ರೆ ಒಂದು ಕ್ಷಣ ಮರೆತು ಮಾಡುವ ರಾದ್ದಾಂತ ಜೀವನ ಪೂರ್ತಿ ಕೊರಗುವಂತೆ ಮಾಡುತ್ತದೆ. ಪ್ರೇಮವೇ ವಿಚಿತ್ರ ಅದಕ್ಕೆ ಹೇಳಿಕೊಳ್ಳುವಂತಹ ತನ್ನದೇ ಆದ ಯಾವ ಗುಣವೂ ಇಲ್ಲ. ನಾವು ಹೇಗೆ ನಡೆಸಿಕೊಳ್ಳುತ್ತೇವೆಯೋ ಅದು ಸಹ ಹಾಗೆಯೇ ತಮ್ಮೊಂದಿಗೆ ನಡೆದು ಬರುತ್ತದೆ.

ಪವಿತ್ರವಾದ ಒಂದು ಕ್ಷಣದ ಪ್ರೇಮವಾದರೂ ಸಾಕು. ಏಕೆಂದರೆ ಅದು ಭವಸಾಗರ ದಾಟಿಸುವ ಹಡಗಾಗಿ ಬಿಡುತ್ತದೆ. ಪ್ರೀತಿಯ ಹುಟ್ಟನ್ನು ಹುಡುಕಲು ಅದಕ್ಕೆ ಮೂಲವೂ ಇಲ್ಲ ಹೇಳಿಕೊಡೋದಕ್ಕೆ ಗುರುವೂ ಬೇಕಾಗಿಲ್ಲ. ನಿಷ್ಕಲ್ಮಶ ಮನಸ್ಸು ಯಾವುದೋ ಒಂದು ಕ್ಷಣದಲ್ಲಿ ಒಂದಾಗಿ ಬಿಟ್ಟರೆ ಸಾಕು ಅಲ್ಲಿಂದಲೇ ಪ್ರೀತಿಯೆಂಬ ಕಾರಂಜಿಯ ಥಕಥೈ ಆರಂಭವಾಗಿ ಬಿಡುತ್ತದೆ. ಪ್ರೇಮ ಮತ್ತು ಮದುವೆ ಎರಡು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರೀತಿಯ ಮುಂದಿನ ಹಂತವೇ ಮದುವೆ ಎಂದರೆ ತಪ್ಪಾಗಲಾರದು. ಹಾಗೆಂದು ಪ್ರೀತಿಸಿದವರೆಲ್ಲಾ ಮದುವೆಯಾಗಿದ್ದರಾ? ಎಂಬ ಪ್ರಶ್ನೆಯೂ ಕಾಡದಿರದು. ಪ್ರೀತಿಸಿದವರ ಪೈಕಿ ಕೆಲವರು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೆ ಮತ್ತೆ ಕೆಲವರ ಪ್ರೀತಿ ದುರಂತದಲ್ಲಿ ಅಂತ್ಯ ಕಂಡ ಉದಾಹರಣೆಗಳೂ ಇವೆ. ಪ್ರೀತಿಸಿದವರು ಕೆಲವೊಂದು ಕಾರಣದಿಂದ ಕಳೆದು ಹೋಗಬಹುದು, ಮತ್ಯಾರನ್ನೋ ಮದುವೆಯಾಗಿ ಬಿಡಬಹುದು. ಆದರೆ ಒಂದಂತು ಸತ್ಯ ಪ್ರೇಮ ಸಾಯುವುದಿಲ್ಲ. ಅದು ಒಮ್ಮೆ ಹುಟ್ಟಿದರಾಯಿತು ಮತ್ತೆ ಎಲ್ಲೋ ಒಂದು ಮೂಲೆಯಲ್ಲಿದ್ದುಕೊಂಡೇ ಆಗಾಗ್ಗೆ ನಮಗೆ ಪಂಚ್ ನೀಡುತ್ತಲೇ ಇರುತ್ತದೆ.

ಪ್ರೇಮವೆಂಬುವುದು ಸಾಗರದಂತೆ. ಅಲ್ಲಿ ಈಜಿ ಗೆದ್ದವರಿಗಿಂತ ಸೋತವರ ಸಂಖ್ಯೆಯೇ ಹೆಚ್ಚಾಗಿದೆ. ಅದರಿಂದ ಅವರು ಕಳೆದು ಕೊಂಡಿದ್ದಕ್ಕೆ ಲೆಕ್ಕವಿಲ್ಲ. ಆದರೆ ಪ್ರೀತಿ ಕಳೆದು ಹೋದ ತಕ್ಷಣ ಬದುಕೇ ಕಳೆದು ಹೋಯಿತು ಇನ್ಯಾಕೆ ಎಂದು ಆತ್ಮಹತ್ಯೆಗೆ ಮುಂದಾಗುವವರು ಒಂದು ಕ್ಷಣ ಯೋಚಿಸಿ ಅಂತಹ ನಿರ್ಧಾರ ಕೈಗೊಳ್ಳಬೇಡಿ. ಈ ಜಗತ್ತಿನಲ್ಲಿ ನಾವು ಪ್ರೀತಿಸಿದವರು ನಮಗೆ ಸಿಗದಿರಬಹುದು ಆದರೆ ನಮ್ಮನ್ನು ಪ್ರೀತಿಸುವವರು ಎಲ್ಲೋ ಒಂದು ಕಡೆ ಇದ್ದೇ ಇರುತ್ತಾರೆ. ಅದೆಲ್ಲಾ ಒತ್ತಟ್ಟಿಗಿರಲಿ ಇವತ್ತು ನಾವು ಆಚರಿಸುತ್ತಿರುವ ವ್ಯಾಲೆಂಟೈನ್ ಡೇ ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಅದಕ್ಕೆ ಹಲವು ಶತಮಾನಗಳ ಇತಿಹಾಸವಿರುವುದನ್ನು ಕಾಣಬಹುದು.

ಅದು ಕ್ರಿ.ಶ. 269ನೇ ಇಸವಿಯ ದಿನಗಳು... ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾಅಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಆತ ಮದುವೆ ಎಂದರೆ ಕೆಂಡಾಮಂಡಲವಾಗುತ್ತಿದ್ದನು. ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು.

ದೊರೆ ಕ್ಲಾಡಿಯಸ್‌ನ ಈ ಹುಚ್ಚಾಟ ಪಾದ್ರಿ ವೆಲೆಂಟೈನನ್ನು ಕೆರಳಿಸಿತ್ತು. ಹಾಗಾಗಿ ದೊರೆಯ ನೀತಿಯನ್ನು ಖಂಡಿಸುತ್ತಾ ದೊರೆ ಕ್ಲಾಡಿಯಸ್‌ಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದ್ದನು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ಪಾದ್ರಿ ವೆಲೆಂಟೈನ್ ಪ್ರೇಮಿಗಳನ್ನು ಒಂದುಗೂಡಿಸುತ್ತಿರುವ ವಿಚಾರ ದೊರೆ ಕ್ಲಾಡಿಯಸ್ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ವೆಲೆಂಟೈನ್ ಮೇಲೆ ಕೆಂಡಾಮಂಡಲನಾದನಲ್ಲದೆ, ಅವನಿಗೆ ಮರಣದಂಡನೆಯನ್ನು ವಿಧಿಸಿದನು. ಅದರಂತೆ ಫೆಬ್ರುವರಿ 14ರಂದು ಪಾದ್ರಿ ವೆಲೆಂಟೈನನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಪಾದ್ರಿ ವೆಲೆಂಟೈನ್‌ ಸ್ಮರಣೆಗಾಗಿ ಆ ದಿನವನ್ನು ವೆಲೆಂಟೈನ್ ಡೇ ಎಂದು ಆಚರಿಸಲಾಗುತ್ತಿದೆ.ವೆಲೆಂಟೈನ್ ಡೇಯನ್ನು ಪಾಶ್ಚಿಮಾತ್ಯರು ಹಬ್ಬದಂತೆ ಆಚರಿಸುತ್ತಾರೆ. ಆ ದಿನ ಶುಭಾಷಯದ ವಿನಿಮಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಾರೆ.

ಒಂದೆಡೆ ಪ್ರೇಮಿಗಳು ಒಟ್ಟಾಗಿ ಕಲೆತು ಮೋಜು ಮಸ್ತಿಯಲ್ಲಿ ತೊಡಗುವುದರ ಮೂಲಕ ಪ್ರೇಮಲೋಕದಲ್ಲಿ ವಿಹರಿಸುತ್ತಾ ಮೈಮರೆತು ತೇಲಾಡುತ್ತಾರೆ. ವೆಲೆಂಟೈನ್ ಡೇಯಂದು ಪ್ರೇಮಿಗಳನ್ನು ಸೆಳೆಯಲು ಕೆಲವು ಹೋಟೆಲ್, ರೆಸ್ಟೋರೆಂಟ್‌ಗಳು ನಾನಾ ಸಿದ್ಧತೆಗಳನ್ನು ಮಾಡುತ್ತವೆ. ಒಂದು ಕಾಲದಲ್ಲಿ ಪಾಶ್ಚಿಮಾತ್ಯರಿಗಷ್ಟೇ ಸೀಮಿತವಾಗಿದ್ದ ವೆಲೆಂಟೈನ್ ಡೇ ಆಚರಣೆ ಇದೀಗ ನಿಧಾನವಾಗಿ ಭಾರತಕ್ಕೂ ಕಾಲಿಟ್ಟಿದೆ. ಕಳೆದ ಕೆಲವು ದಶಕಗಳಿಂದ ಇಲ್ಲಿ ಕೆಲವರ ವಿರೋಧದ ನಡುವೆಯೂ ಆಚರಣೆ ಸಾಗಿದೆ. ಶ್ರೀಮಂತರು ಐಷರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ, ಕುಣಿತ ಅಂತಅದ್ದೂರಿಯಾಗಿ ಆಚರಿಸಿದರೆ, ಮತ್ತೆ ಕೆಲವರು ಶುಭಾಶಯದೊಂದಿಗೆ ಕೆಂಪು ಗುಲಾಬಿಯನ್ನಿಟ್ಟು ಮೆತ್ತಗೆ ಐ ಲವ್ ಯೂ ಎಂದು ಉಸುರುತ್ತಾರೆ.

ಪಾಶ್ಚಿಮಾತ್ಯರಿಗೆ ಹೋಲಿಸಿದರೆ ತನ್ನದೇ ಆದ ಸಂಸ್ಕ್ಕತಿಯನ್ನು ಹೊಂದಿರುವ ಭಾರತದಲ್ಲಿ ಪ್ರೀತಿ, ಪ್ರೇಮಕ್ಕೆ ಗೌರವಿದೆ. ಹಾಗಾಗಿ ಅದಕ್ಕೆ ಕಾಮದ ವಾಸನೆ ಬೆರೆಸದೆ ನಿರ್ಮಲ, ನಿಷ್ಕಲ್ಮಶವಾದ ಪ್ರೀತಿಯನ್ನು ಬೆರೆಸಿದ್ದೇ ಆದರೆ ಪ್ರೇಮಕ್ಕೆ ಅರ್ಥವಿರುತ್ತದೆ. ಜೊತೆಗೆ ಪ್ರೇಮಿಗಳಿಗೆ ಗೌರವವಿರುತ್ತದೆ. ಇಲ್ಲಾಂದ್ರೆ ಮೈಮರೆತು ಮಾಡುವ ಪ್ರಮಾದ ಕೊನೆ ತನಕ ಬಾಳಿಗೆ ಕಪ್ಪುಚುಕ್ಕೆಯಾಗಿ ನಮ್ಮನ್ನು ಜೀವಂತವಾಗಿಯೇ ಸುಡುತ್ತಿರುತ್ತದೆ. ಪ್ರೇಮಿಗಳು ಸದಾ ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ಪ್ರೇಮವನ್ನು ರೋಮಿಯೋ-ಜೂಲಿಯಟ್ನಂತೆ ದುರಂತ ಅಂತ್ಯ ಕಾಣಲು ಬಿಡದೆ ಕೃಷ್ಣ-ರುಕ್ಮಿಣಿಯಂತೆ ಚಿರಾಯುವಾಗಿರುವಂತೆ ನೋಡಿಕೊಳ್ಳಬೇಕು. ಎಲ್ಲರ ಪ್ರೀತಿಯೂ ಸದಾ ಹಾಗೆಯೇ ಇರಲಿ... ಪ್ರೇಮಿಗಳೇ ನಿಮ್ಮ ಪ್ರೇಮ ಚಿರಾಯುವಾಗಿರಲಿ.

ಬಿ.ಎಂ.ಲವಕುಮಾರ್, ಮೈಸೂರು

Share this Story:

Follow Webdunia kannada