Select Your Language

Notifications

webdunia
webdunia
webdunia
webdunia

ವೆಲೆಂಟೈನ್ಸ್ ಡೇ; ಈ ಗುಲಾಬಿ ಇರುವುದು ನಿನಗಾಗಿ...

ವೆಲೆಂಟೈನ್ಸ್ ಡೇ; ಈ ಗುಲಾಬಿ ಇರುವುದು ನಿನಗಾಗಿ...
, ಸೋಮವಾರ, 13 ಫೆಬ್ರವರಿ 2012 (12:10 IST)
WD
ವೆಲೆಂಟೈನ್ಸ್ ಡೇ ಬಂತೆಂದರೆ ಸಾಕು ಗುಲಾಬಿಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತದೆ. ಮೊದಲಿನಿಂದಲೂ ಪ್ರೇಮಿಗಳಿಗೂ ಚೆಂಗುಲಾಬಿಗೂ ಅವಿನಾಭಾವ ಸಂಬಂಧವಿರುವುದನ್ನು ನಾವು ಕಾಣಬಹುದು. ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಕೈಗೆ ಚೆಂಗುಲಾಬಿಯನ್ನಿಟ್ಟು ಮೆಲ್ಲಗೆ ಐ ಲವ್ ಯೂ ಎಂದು ಉಸುರುತ್ತಾನೆ. ಅವಳು ನಾಚಿ ನೀರಾಗಿ ಬಿಡುತ್ತಾಳೆ. ಹೌದು! ಪ್ರೇಮ ನಿವೇದನೆ ಸಂದರ್ಭವೆಲ್ಲಾ ಈ ಹೂವೇ ಪ್ರೇಮ ಸೇತುವಾಗಿ ಕಾರ್ಯನಿರ್ವಹಿಸುತ್ತದೆ. ಲಕ್ಷಾಂತರ ರೂಪಾಯಿಗಳ ಉಡುಗೊರೆಗಳು ಮಾಡಲಾಗದ ಕೆಲಸವೊಂದನ್ನು ಚೆಂಗುಲಾಬಿಯೊಂದು ಸದ್ದಿಲ್ಲದೆ ಮಾಡಿ ಮುಗಿಸಿಬಿಡುತ್ತದೆ. ಅದಕ್ಕೆ ಅಂತಹವೊಂದು ಅದ್ಬುತ ಶಕ್ತಿಯಿದೆ. ಹಾಗಾಗಿಯೇ ಇರಬೇಕು ಪ್ರೇಮಿಗಳಿಗೆ ಗುಲಾಬಿ ಎಂದರೆ ಎಲ್ಲಿಲ್ಲದ ಪ್ರೀತಿ.

ಹಾಗೆಂದು ಗುಲಾಬಿ ಹೂ ನೀಡಿದ ತಕ್ಷಣ ಆಕೆ ನಿಮ್ಮನ್ನು ಪ್ರೀತಿಸುತ್ತಾಳೆ ಎಂದರ್ಥವಲ್ಲ. ನೀವು ಒಲುಮೆಯಿಂದ ನೀಡಿದ ಹೂವನ್ನು ಆಕೆಯೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದರಷ್ಟೆ ನಿಮ್ಮ ಪ್ರೀತಿಗೆ ಆಕೆ ಒಪ್ಪಿಗೆ ಸೂಚಿಸಿದ್ದಾಳೆಂದರ್ಥ. ಇಲ್ಲಾಂದ್ರೆ... ಬಲತ್ಕಾರವಾಗಿ ನೀಡುವ ವ್ಯರ್ಥ ಪ್ರಯತ್ನ ಖಂಡಿತಾ ಮಾಡಬೇಡಿ. ಅದು ಶೋಭೆಯಲ್ಲ.

ಸಾಮಾನ್ಯವಾಗಿ ಫೆಬ್ರುವರಿ ತಿಂಗಳು ಬರುತ್ತಿದ್ದಂತೆಯೇ ಗುಲಾಬಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಹಾಗಾಗಿ ಕೃಷಿಕರು ವಿವಿಧ ನಮೂನೆಯ ಗುಲಾಬಿ ಹೂಗಳ ಕೃಷಿಯಲ್ಲಿ ತೊಡಗುತ್ತಾರೆ. ಅಷ್ಟೇ ಅಲ್ಲ ನಮ್ಮ ದೇಶದ ಗುಲಾಬಿ ಹೂಗಳಿಗೆ ದೂರದ ಯೂರೋಪ್, ಆಸ್ಟ್ತ್ರೇಲಿಯಾ, ಜಪಾನ್ಗಳಿಂದಲೂ ಬೇಡಿಕೆ ಬರುತ್ತದೆ.

ಇಷ್ಟಕ್ಕೂ ಗುಲಾಬಿಗೂ-ಪ್ರೇಮಕ್ಕೂ ಏನಪ್ಪಾ ಸಂಬಂಧ? ಪ್ರೇಮ ನಿವೇದನೆಯಲ್ಲಿ ಇದೇ ಹೂವನ್ನು ಏಕೆ ಬಳಸುತ್ತಾರೆ ಎಂಬುವುದರ ಮೂಲ ಹುಡುಕಿದರೆ ನಮಗೆ ಒಂದಂತು ಸ್ಪಷ್ಟವಾಗುತ್ತದೆ. ಅದೇನೆಂದರೆ ಮುಳ್ಳಿನ ಗಿಡದಲ್ಲಿ ಅರಳುವ ಹೂ ಮೃದುವಾಗಿಯೂ ಸೊಗಸಾಗಿಯೂ ಇರುತ್ತದೆ. ಹಾಗೆಂದು ಮೈಮರೆತು ಕೈ ಹಾಕಿದರೆ ಗಿಡದ ಮೇಲಿರುವ ಮುಳ್ಳು ಚುಚ್ಚುತ್ತದೆ. ಅಂದರೆ ಪ್ರೇಮವೂ ಅಷ್ಟೆ ಅದು ಸುಖದ ಸುಪ್ಪತ್ತಿಗೆ ಅಲ್ಲ ಮುಳ್ಳಿನ ಹಾದಿಯೇ... ಇದನ್ನು ಅರಿತು ಮುಳ್ಳಿನ ಗಿಡದಲ್ಲಿ ಹೇಗೆ ಸುಂದರ ಹೂ ಅರಳುತ್ತದೆಯೋ ಹಾಗೆಯೇ ನಮ್ಮ ಪ್ರೀತಿಯೂ ಅರಳಬೇಕು ಎಂಬ ಉದ್ದೇಶದಿಂದಲೇ ಗುಲಾಬಿ ಹೂವನ್ನು ಬಳಸಲಾಗುತ್ತಿದೆ ಎಂದರೆ ತಪ್ಪಾಗಲಾರದು.

ಇದೆಲ್ಲದರ ನಡುವೆ ಚೆಂಗುಲಾಬಿಯೇ ಏಕೆ ಪ್ರೇಮದ ಸಂಕೇತವಾಯಿತು? ಎಂಬ ಪ್ರಶ್ನೆಗೂ ಪ್ರೇಮಿಗಳ ವಲಯದಲ್ಲೊಂದು ಸೊಗಸಾದ ಕಥೆಯಿದೆ.

ಪುಟ್ಟ ಹಕ್ಕಿಯೊಂದು ಬಿಳಿಗುಲಾಬಿಯನ್ನು ಗಾಢವಾಗಿ ಪ್ರೀತಿಸುತ್ತಿತ್ತು. ಅದನ್ನು ಹೇಳಿಯೂ ಇತ್ತು. ಆದರೆ ಹಕ್ಕಿಯ ಪ್ರೀತಿಯನ್ನು ಅರಿಯದ ಗುಲಾಬಿ ಮಾತ್ರ ಉದ್ದಟತನದಿಂದ ವರ್ತಿಸುತ್ತಿತ್ತು. ಒಂದು ದಿನ ಗೋಗರೆದು ಕೇಳಿದ್ದಕ್ಕೆ ಬಿಳಿ ಗುಲಾಬಿ ನನ್ನ ಬಣ್ಣ ಕೆಂಪಾಗಿ ಬದಲಾದ ದಿನದಿಂದಲೇ ನಿನ್ನನ್ನು ಪ್ರೀತಿಸುತ್ತೇನೆಂದು ಭಾಷೆ ನೀಡಿತು. ಹಕ್ಕಿ ಮಾತ್ರ ಗುಲಾಬಿ ಹೂ ಕೆಂಪಾಗುವುದನ್ನೇ ಕಾಯತೊಡಗಿತು. ಆದರೆ ದಿನ ಉರುಳಿ ವಾರವಾಯಿತು. ವಾರ, ತಿಂಗಳಾಗಿ ಕೊನೆಗೆ ವರ್ಷವಾದರೂ ಬಿಳಿ ಗುಲಾಬಿ ಮಾತ್ರ ಕೆಂಪಾಗಲಿಲ್ಲ. ಇದರಿಂದ ನಿರಾಶೆಗೊಂಡ ಹಕ್ಕಿಯು ಹೂವಿನ ಮೇಲೆ ಕುಳಿತು ಗಿಡದಿಂದ ಮುಳ್ಳನ್ನು ಕಿತ್ತು ತನ್ನ ಎದೆಗೆ ಚುಚ್ಚಿಕೊಂಡಿತು. ಆಗ ಹಕ್ಕಿಯ ಎದೆಯಿಂದ ಹೊರಬಂದ ರಕ್ತ ಬಿಳಿ ಗುಲಾಬಿಯನ್ನೆಲ್ಲಾ ತೊಯ್ದು ಕೆಂಪಾಗಿಸಿತು. ಆದರೆ ಅಷ್ಟರಲ್ಲಿಯೇ ಹಕ್ಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇಷ್ಟೆಲ್ಲಾ ನಡೆದ ಮೇಲೆ ಗುಲಾಬಿಗೆ ಜ್ಞಾನೋದಯವಾಗಿತ್ತು. ತನ್ನ ಅಹಂಕಾರದಿಂದ ಹಕ್ಕಿಯ ಪ್ರಾಣವೇ ಹೋಯಿತಲ್ಲ ಎಂದು ಮಮ್ಮಲ ಮರುಗತೊಡಗಿತ್ತು. ತನಗೋಸ್ಕರ ಪ್ರಾಣವನ್ನೇ ತೆತ್ತ ಗೆಳೆಯನ ನೆನಪಿಗಾಗಿ ಇನ್ನು ಮುಂದೆ ಕೆಂಪು ಬಣ್ಣದಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಿತಂತೆ. ಅಂದಿನಿಂದ ಇಂದಿನವರೆಗೂ ಪ್ರೇಮಿಗಳಿಗೆ ಪ್ರೇಮ ಸೇತುವೆಯಾಗಿ ಕೆಂಪು ಗುಲಾಬಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.

ಪ್ರೇಮಿಗಳ ದಿನದಂದು ಗುಲಾಬಿ ಹೂವುಗಳಲ್ಲಿನ ಒಂದೊಂದು ಬಣ್ಣಕ್ಕೂ ಒಂದೊಂದು ರೀತಿಯ ಅರ್ಥವನ್ನು ಪ್ರೇಮಿಗಳು ಕಲ್ಪಿಸಿಕೊಳ್ಳುತ್ತಾರೆ. ಅದರಂತೆ ಚೆಂಗುಲಾಬಿ ನೀಡಿದರೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದರ್ಥ. ಹೀಗಾಗಿ ಚೆಂಗುಲಾಬಿ ಅಂದ್ರೆ ಪ್ರೀತಿ. ಹಳದಿ ಬಣ್ಣದ ಹೂ ನೀಡಿದರೆ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರ್ಥ ಆದ್ದರಿಂದ ಹಳದಿ ಅಂದ್ರೆ ಸ್ನೇಹ. ಇನ್ನು ಬಿಳಿ ಗುಲಾಬಿ ನಿರಂತರ ಸ್ನೇಹವನ್ನೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ಸೂಚಿಸುತ್ತದೆ.

ಬಿ.ಎಂ.ಲವಕುಮಾರ್, ಮೈಸೂರು

Share this Story:

Follow Webdunia kannada