Select Your Language

Notifications

webdunia
webdunia
webdunia
webdunia

ವರ್ಷಪೂರ್ತಿ ನಿರೀಕ್ಷಿಸುತ್ತಿದ್ದ ದಿನ ಕೊನೆಗೂ ಬಂತು

ವರ್ಷಪೂರ್ತಿ ನಿರೀಕ್ಷಿಸುತ್ತಿದ್ದ ದಿನ ಕೊನೆಗೂ ಬಂತು
PR
ನಿಜಕ್ಕೂ ಅವಳಲ್ಲಿ ಅಂತಹಾ ಸೌಂದರ್ಯವಿರಲಿಲ್ಲ... ಆದರೂ ಅವಳಂದ್ರೆ ನನಗಿಷ್ಟ. ಯಾಕೆ..? ಊಹುಂ.. ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದೋ ಎಂದು ಮಧ್ಯರಾತ್ರಿಗಳಲ್ಲೂ ಎದ್ದು ಮನಸ್ಸಿನ ಬುಡ್ಡಿಗೆ ಕನಸಿನ ಎಣ್ಣೆ ಹೊಯ್ದು ತಡಕಾಡಿದ್ದಿದೆ. ಬೀರುವಿನಲ್ಲಿಟ್ಟದ್ದನ್ನು ಹುಡುಕುವವನಂತೆ. ನನ್ನಲ್ಲೇ ಕೇಳಿಕೊಂಡು ಸುಸ್ತಾಗಿ ಅವಳ ಮಡಿಲಲ್ಲೇ ನಿದ್ದೆ ಮಾಡುವವನಂತೆ ಬಿದ್ದುಕೊಂಡ ದಿನಗಳೆಷ್ಟೋ.. ಉತ್ತರ ಮಾತ್ರ ನನ್ನಿಂದ ದೂರ... ಬಹುದೂರ.. ಇನ್ನೂ ಸಿಕ್ಕಿಲ್ಲ..!

ನಾನಂದ್ರೆ ಅವಳಿಗೂ ಇಷ್ಟ..! ಯಾಕೆ..? ಅವಳಿಗೂ ಗೊತ್ತಿಲ್ಲ.. ಉತ್ತರ ಸಿಕ್ಕಿಲ್ಲವೆಂದಲ್ಲ. ಹುಡುಕ ಹೋದವಳು ಇನ್ನೂ ಬಂದಿಲ್ಲ. ಬಹುಶಃ ಬರುವುದಿಲ್ಲ.. ಹೊತ್ತು ನೆತ್ತಿಗೆ ಬಂದರೂ ಇನ್ನೂ ಎರಡು ಜಡೆಯ ಹುಡುಗಿಯ ಕನಸು ಕಾಣುತ್ತಿರುವ ನನಗಿದು ಅರ್ಥವಾಗದು ಎಂದವಳಂದುಕೊಂಡಿರಬಹುದೇ?

ಬರುತ್ತಾಳೆನ್ನುವುದು ನನ್ನ ಪ್ರೀತಿಯ ನಂಬಿಕೆ; ಬರುವುದು ನನ್ನ ಪ್ರೀತಿಯ ಸಾಮರ್ಥ್ಯ. ಬರಬಹುದು, ಬರದಿದ್ದರೆ... ಬರುತ್ತಾಳೆ.. ಬರಲೇಬೇಕು. ಗೊಂದಲಗಳು ಕುಣಿಯುತ್ತಿವೆ.. ಮತ್ತೆ ಮತ್ತೆ ಕಾಡುತ್ತಿವೆ. ಬರಲಿಕ್ಕಿಲ್ಲ.. ಬಂದರೂ ಹಾಳು ಪ್ರೀತಿ ದೂರವಿರಲಿ. ಮರೆಯುವ ಕಾರಣಗಳೇ ದೂರಾಗುತ್ತಿವೆ. ಯಾಕೆ ಈ ಪರಿಯಾಗಿ ಕಾಡುತ್ತಿದ್ದಾಳೆ.. ನೋವು ಕೊಟ್ಟವಳು ಎಂದು ನಾನು ಹೇಳಲಾರೆ. ಈಗ ನೇರಾನೇರ ಕೇಳುತ್ತಿದ್ದೇನೆ - ನನ್ನ ಸಾಮ್ರಾಜ್ಯಕ್ಕೆ ಬರ್ತೀಯಾ?

ಸಿಗರೇಟು ಸುಟ್ಟಾಗ ನಿನ್ನ ನೆನಪುಗಳು ಮಾಸಬಹುದೇನೋ ಅಂದು ಕೊಂಡೆ. ನೀನು ಸುಡುವಷ್ಟು ನೋವನ್ನು ನನಗೆ ಕೊಟ್ಟವಳಲ್ಲ ಎಂದು ತಿಳಿದ ಮೇಲೆ ನಿನ್ನ ಜತೆ ಆ ಚಟವೂ ಸೇರಿಕೊಂಡಿದೆ ಹುಡುಗಿ. ನೀನು ಅದಕ್ಕೆ ಮದ್ದಾಗುತ್ತೀಯೆಂಬ ನಂಬಿಕೆ ನನ್ನಲ್ಲಿ ಉಳಿದಿಲ್ಲ. ಆದರೂ ಯಾಕೋ ನೀನು ಬೇಕೆನಿಸುತ್ತಿದ್ದಿ.

ನಿನ್ನ ಕನಸುಗಳಿಗೆ ಬಣ್ಣ ಮೆತ್ತುವಷ್ಟು ಮೆರುಗು ನನ್ನಲ್ಲಿದೆ ಅಂದುಕೊಂಡವನಲ್ಲ. ನಾನೋ ಬರಿ ಮೈಯವ ಅಂದುಕೊಂಡು ಇನ್ನೂ ಮನಸ್ಸಿನಲ್ಲೇ ಗೂಡು ಕಟ್ಟಿ ತಿರುಗುವ ಅಬ್ಬೇಪಾರಿ. ಸಂಸಾರದ ಚಿಂತೆ ಇನ್ನೂ ತುಂಬಾ ದೂರವಿದೆ ಎಂಬ ಆಲಸ್ಯ. ನಿಧಾನವಾಗಿ ಕೂತು ಯೋಚಿಸಿದಾಗ ನೆನಪಾಗುತ್ತದೆ ಇಪ್ಪತ್ತರ ಮೇಲಿನ ಮತ್ತೇಳು ಮುಗಿಯಿತೆಂದು..! ಬದುಕಿನ ಬಗ್ಗೆ ಬೆಟ್ಟದ ಕಲ್ಪನೆಗಳು ನನಗಿಲ್ಲ. ಹುಳುಕು ತೊಳೆದು ಸ್ವಚ್ಛವಾಗಿ ನಿನ್ನ ಜತೆಗಿರಬಲ್ಲೆನೆಂಬ ಭರವಸೆ ನಾಲಗೆಯ ತುದಿಯಲ್ಲಿದೆ. ಆದರೂ ಏಕೋ..

ಯಾಕೋ ನಿನ್ನಷ್ಟು ಆಪ್ತರು ಇತ್ತೀಚೆಗೆ ಯಾರು ಸಿಗುತ್ತಿಲ್ಲ. ಆದರೂ ನನ್ನ ಎಡಗಾಲು ಬೇಡ ಅನ್ನುತ್ತಿದೆ ಹುಡುಗಿ. ಏನ್ಮಾಡಲಿ.. ಬಿಸಿ ನೀರಿನ ಸ್ನಾನದ ಕೋಣೆಯಲ್ಲಿಯೂ ಸಣ್ಣಗೆ ನಡುಗುವ ನನಗೀಗ ನೀನೇ ನೆನಪಾಗುತ್ತಿ. ಬಹುಶಃ ಮತ್ತೆ ಪ್ರೀತಿಯ ಗಾಳಿ ನನ್ನ ಕಡೆ ಬೀಸುತ್ತಿದೆ ಎಂದುಕೊಂಡಿದ್ದೇನೆ... ನೀರವತೆ ಕಡಿಮೆಯಾಗುತ್ತಿದೆ. ನೋವುಗಳು ಮಾಯವಾಗುತ್ತಿವೆ. ಕಲಿಸಿದ್ದು ನೀನೇ ತಾನೆ..

ಪ್ರೀತಿಯ ಮಾತುಗಳು ಮತ್ತೆ ನನ್ನ ಬಾಯಿಯಿಂದ ಬರುತ್ತಿದೆ. ನಿನ್ನಿಷ್ಟದ ಫಲವತ್ತಾದ ಹಳೆ ಮಾತುಗಳಿಗೆ ಮತ್ತೆ ಮೊರೆ ಹೋಗುತ್ತಿದ್ದೇನೆ.. ಅವುಗಳಿಗೆ ಕಿವಿಯಾಗುತ್ತಿದ್ದೇನೆ. ಪಕ್ಕನೆ ಮುಖ ನೋಡಿದವರೆಲ್ಲ ಪ್ರೀತಿಗಿಲ್ಲಿ ಜಾಗವಿರಲಿಕ್ಕಿಲ್ಲವೆಂದುಕೊಂಡವರೇ. ಮೋಸ ಮಾಡಿದವನು ಎಂಬ ಹಣೆ ಪಟ್ಟಿ ಬೇರೆ ಥಳುಕು ಹಾಕಿಕೊಂಡಿದೆ. ಅದನ್ನೆಲ್ಲ ತಿಳಿಯುವ ಅವರಿಗೆಲ್ಲಿಯ ತಾಳ್ಮೆ ಬಿಡು. ನಿನ್ನಷ್ಟು ನನ್ನನ್ನು ಹಚ್ಚಿಕೊಂಡಿರಲಿಕ್ಕಿಲ್ಲ ಎಂದು ಆಗೆಲ್ಲ ಅಂದುಕೊಳ್ಳುತ್ತೇನೆ. ಮತ್ತೆ ನಿಜ ಮಾಡ್ತೀಯಾ ಚಿನ್ನಾ..?

ನಮ್ಮ ಉತ್ತುಂಗದ ದಿನಗಳು ದೂರವಿಲ್ಲ ಎಂಬಂತೆ ಬಯಲುದಾರಿಗಳು ಕಾಣಿಸುತ್ತಿವೆ. ತೇಲುಗಣ್ಣಿನ ಪರದೆಯಲ್ಲಿ ಹಚ್ಚ ಹಸುರ ದಿನಗಳು ತೇಲಿ ಬರುತ್ತಿವೆ. ಆ ದಿನಗಳು ಮರೆಯಲಾಗದ್ದು ಎಂಬುದು ನಮಗಿಂತ ಹೆಚ್ಚು ಬೇರೆ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ ಬಿಡು. ಪ್ರೀತಿಯಲ್ಲಿ ಅಷ್ಟೆಲ್ಲ ಸುಖಗಳಿರುತ್ತವೆ ಎಂದು ತಿಳಿಸಿ ಹೇಳಿದವಳು ನೀನೇ ತಾನೇ? ಅದು ನಿಜಕ್ಕೂ ಪ್ರೀತಿಯಾಗಿತ್ತಾ ಅಥವಾ ವ್ಯಾಮೋಹವೇ ಎಂದು ನಂತರದ ದಿನಗಳಲ್ಲಿ ಬಿಟ್ಟೂ ಬಿಡದೆ ಕಾಡಿದ್ದಿದೆ. ಮೋಹವಿಲ್ಲದ ಪ್ರೀತಿಯಾದರೂ ಎಂತಹುದು ಎಂದು ನಾನು ಅದನ್ನು ಪ್ರೀತಿಯೆಂದೇ ನಂಬಿಕೊಂಡಿದ್ದೇನೆ.

ನಿಜಕ್ಕೂ ನಾನು ನಿನಗೆ ಇಷ್ಟವಾಗಿದ್ದೆನಾ? ಇದು ನನಗೆ ಆಗಾಗ ಕಾಡುವ ಪ್ರಶ್ನೆ. ಉತ್ತರಿಸಲು ನನ್ನ ಬಳಿ ಯಾರಿದ್ದಾರೆ? ಅದಷ್ಟೂ ವರ್ಷಗಳಿಂದ ಕೆರೆಸಿಕೊಂಡ ಗಡ್ಡವೂ ಒರಟೊರಟಾಗತೊಡಗಿದೆ. ಎಷ್ಟಾದರೂ ನೀನು ನೇವರಿಸಿದ್ದಲ್ಲವೇ ಎಂಬುದಕ್ಕೆ ಈಗಲೂ ಕೈಯಾಡಿಸುತ್ತಿರುತ್ತೇನೆ. ಆಗಲೂ ಯೋಚನೆ ಅದೇ.. ಮತ್ತೆ ಬರುತ್ತೀಯಾ..?

Share this Story:

Follow Webdunia kannada