ಬರ್ನ್ : ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಶನಿವಾರ ಘೋಷಣೆ ಮಾಡಿದೆ.
WHOಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಜಾಗತಿಕವಾಗಿ ಏಕಾಏಕಿ ಹರಡುತ್ತಿರುವ ಮಂಕಿಪಾಕ್ಸ್ ಅಂತಾರಾಷ್ಟ್ರೀಯ ಕಾಳಜಿಯಿಂದಾಗಿ ತುರ್ತು ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
ಕಳೆದ ತಿಂಗಳು WHOತುರ್ತು ಸಭೆ ನಡೆಸಿ, ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿ ಅಲ್ಲ, ಇದು ಹೆಚ್ಚು ಅಪಾಯಕಾರಿಯಾಗಿಲ್ಲ ಎಂದು ತಿಳಿಸಿತ್ತು. ಈ ಘೋಷಣೆ ಬಳಿಕ ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳು ಏರಿಕೆ ಕಂಡವು. ಇದೀಗ ಒಟ್ಟು 75 ದೇಶಗಳಲ್ಲಿ ಮಂಕಿಪಾಕ್ಸ್ ಕಂಡುಬಂದಿದ್ದು, ಸೋಂಕಿಗೆ 16,000 ಜನರು ಗುರಿಯಾಗಿದ್ದಾರೆ ಹಾಗೂ 5 ಜನ ಮಂಕಿಪಾಕ್ಸ್ನಿಂದ ಸಾವನ್ನಪ್ಪಿದ್ದಾರೆ.
ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿಯ ಪರಿಗಣನೆಗೆ ತೆಗೆದುಕೊಳ್ಳಲು ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಈ ಹಿಂದೆ ಮಂಕಿಪಾಕ್ಸ್ ವೈರಸ್ ಅನ್ನು ಎದುರಿಸಿರದ ದೇಶಗಳಲ್ಲಿ ಇದು ಅತ್ಯಂತ ವೇಗವಾಗಿ ಹರಡುತ್ತಿದೆ.
ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು 3 ಮಾನದಂಡಗಳನ್ನು ಪೂರೈಸಲಾಗಿದೆ. ತುರ್ತು ಪರಿಸ್ಥಿತಿಯ ಸಲಹೆಯೂ ಒಮ್ಮತಕ್ಕೆ ಬಾರದೇ ಇರುವುದು ಕೂಡಾ ಇದೀಗ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದೆ.