ದೆಹಲಿ ರಾಜಪಥ್ನಲ್ಲಿ ಭಾರತದ ಸ್ವತಂತ್ರ್ಯೋತ್ಸವದ ಅಮೃತಮಹೋತ್ಸವ ಸಂಭ್ರಮ, ಕೋವಿಡ್ ಮಾರ್ಗಸೂಚಿಯ ನಡುವೆ ಗಣರಾಜ್ಯೋತ್ಸವ ಪರೇಡ್ ಸಂಭ್ರಮದಿಂದ ನಡೆಯಿತು.
ರಾಜಪಥ್ನಲ್ಲಿ ವಿರಾಟ್ ಭಾರತದ ಒಂದು ವಿಹಾಂಗಮ ನೋಟವನ್ನು ಪ್ರದರ್ಶಿಸಲಾಯಿತು. ನವ ಭಾರತದ ಮಿಲಿಟರಿ ಶಕ್ತಿ ಇಂದಿನ ಸಮಾರಂಭದಲ್ಲಿ ಅನಾವರಣಗೊಂಡಿತು.
ಈ ಸಮಾರಂಭದಲ್ಲಿ ಮೊಟ್ಟ ಮೊದಲ ಬಾರಿಗೆ 75 ವಿಮಾನಗಳು ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಇದರೊಂದಿಗೆ ಪರೇಡ್ನಲ್ಲಿ ಹಲವು ರಾಜ್ಯಗಳ ಸ್ತಬ್ಧ ಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಗರ ಕಣ್ಮನ ಸೆಳೆಯಿತು.
ಬೆಳಗ್ಗೆ 10:30 ಸುಮಾರಿಗೆ ಆರಂಭಗೊಂಡ ಪರೇಡ್ ಕಾರ್ಯಕ್ರಮ 12:15ಕ್ಕೆ ಮುಕ್ತಾಯಗೊಂಡಿತು. ಪ್ರತಿ ವರ್ಷ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿತ್ತು. ಈ ಬಾರಿ 30 ನಿಮಿಷ ತಡವಾಗಿ ಆರಂಭಗೊಂಡಿತು. ರಾಜಪಥ್ನಲ್ಲಿ ಮಂಜು ಆವರಿಸಿಕೊಂಡಿದ್ದ ಕಾರಣ ಈ ಬಾರಿ ಕಾರ್ಯಕ್ರಮವನ್ನು ಪೂರ್ವನಿಗದಿಯಂತೆ 10:30ಕ್ಕೆ ಆರಂಭಿಸಲಾಯಿತು.
ಕೊರೊನಾ ಕಾಟದಿಂದಾಗಿ ಕಳೆದ ಬಾರಿಯಂತೆ ಈ ವರ್ಷ ಕೂಡಾ ಯಾವುದೇ ವಿದೇಶಿ ಮುಖ್ಯ ಅತಿಥಿಗೆ ಆಹ್ವಾನ ನೀಡಿಲ್ಲ. ಈ ಮೂಲಕ ಸತತ 2ನೇ ವರ್ಷ ಯಾವುದೇ ವಿದೇಶಿ ಅತಿಥಿ ಇಲ್ಲದೆ ಗಣರಾಜ್ಯೋತ್ಸವದ ಆಚರಣೆ ನಡೆಯಿತು.