ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆ ಬರೆಯಬೇಕು ಎಂದು ಪಿಯುಸಿ ಬೋರ್ಡ್ ಸಮವಸ್ತ್ರ ಕಡ್ಡಾಯಗೊಳಿಸಿದೆ.
ಈ ಹಿಂದೆ ರಾಜ್ಯದಲ್ಲಿ ಹಿಜಬ್ ವಿವಾದ ಬಳಿಕ ಶಾಲಾ-ಕಾಲೇಜ್ಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಆ ಬಳಿಕ ಇದೀಗ ದ್ವಿತೀಯ ಪಿಯುಸಿ ಎಕ್ಸಾಂಗೆ ಹಿಜಬ್ ನಿಷೇಧದ ಬಗ್ಗೆ ಪಿಯುಸಿ ಬೋರ್ಡ್ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿಗಧಿ ಪಡಿಸಿದ ಸಮವಸ್ತ್ರ ಧರಿಸಬೇಕು. ಖಾಸಗಿ ಕಾಲೇಜುಗಳು ಕಾಲೇಜ್ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರ ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಗಾಗಲೇ ಪಿಯುಸಿ ಬೋರ್ಡ್ ತಾಂತ್ರಿಕ ಕಾರಣ ನೀಡಿ 3-4 ಬಾರಿ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆಯಲಿದೆ.