ದಾವಣಗೆರೆ : ಕರ್ನಾಟಕದಲ್ಲಿ ಮೆಡಿಕಲ್ ಸೀಟುಗಳ ಶುಲ್ಕವನ್ನು ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣಗೆರೆಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜುಗಳ ಸೀಟುಗಳು ಕಡಿಮೆ ಶುಲ್ಕವೇ ಇದೆ. ಖಾಸಗಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಾಗಿದೆ. ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೂ ಮೆಡಿಕಲ್ ಸೀಟು ಸಿಗುತ್ತಿಲ್ಲ.
ಇದರಿಂದ ಶುಲ್ಕ ಹೆಚ್ಚಾಗುತ್ತಿರುವ ಕಾರಣ ಅವರು ವಿದೇಶಗಳಲ್ಲಿ ವ್ಯಾಸಂಗ ಮಾಡಲು ತೆರಳುತ್ತಿದ್ದಾರೆ. ಹಾಗಾಗಿ ಶುಲ್ಕ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಜೊತೆಗೆ ಉಕ್ರೇನ್ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ವಿದ್ಯಾಭ್ಯಾಸ ಮೊಟಕುಗೊಳಿಸಿ ಕರ್ನಾಟಕಕ್ಕೆ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.