ಬೆಳಗಾವಿ : ವಾಹನಗಳ ಮೇಲೆ ಕಲ್ಲು ತೂರಾಟ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವ ಹಿನ್ನೆಲೆ ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಶನಿವಾರ(ಡಿ.18) ಬೆಳಗ್ಗೆ 8ರಿಂದ ಭಾನುವಾರ (ಡಿ.19) ಬೆಳಗ್ಗೆ 6ಗಂಟೆವೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಬೆಳಗಾವಿ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಗುಂಪುಗಂಪುಗಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎಂಇಎಸ್ ಪುಂಡರು ಗಲಭೆ ಸೃಷ್ಟಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಿಸುತ್ತಿದ್ದಂತೆ ಪ್ರತಿಭಟನೆ ನೆಪದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. ಪೊಲೀಸರ ಮೇಲೆ ಮತ್ತು ಪೊಲೀಸ್ ವಾಹನಗಳು ಸೇರಿದಂತೆ ಬೆಳಗಾವಿ ನಗರದ ಕೆಲವು ವಾಹನಗಳ ಮೇಲೆ ನಿನ್ನೆ ರಾತ್ರಿ(ಡಿ.17) ಕೆಲ ಪುಂಡರು ಕಲ್ಲು ತೂರಾಟ ನಡೆಸಿದ್ದರು.
ಈಗ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವಾಗಲೇ ಪಟ್ಟಭದ್ರ ಹಿತಾಸಕ್ತಿಗಳು ಬೀದಿಗೆ ಇಳಿದಿದ್ದು, ಸರಕಾರ ಇದನ್ನು ಸಹಿಸುವುದಿಲ್ಲ.
ಇಂತಹ ಶಕ್ತಿ ಗಳ ವಿರುದ್ಧ ತೀಕ್ಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜನತೆ ವಿಚಲಿತರಾಗದೆ ಎಂದಿನಂತೆ ಶಾಂತಿ ಮತ್ತು ಸೌಹಾರ್ದ ಗಳನ್ನು ಕಾಪಾಡಿ ಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.