ಡ್ರಗ್ಸ್ ಪಿಡುಗನ್ನು ನಿರ್ಣಾಮ ಮಾಡುವ ಪಣ ತೊಟ್ಟಿರುವ ಪೊಲೀಸ್ ಇಲಾಖೆಯು ಇದೀಗ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ಸಿನಿಮಾಗಳಲ್ಲಿ ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳು ಇದ್ದರೆ, ಅಂತಹ ಸಿನಿಮಾಗಳಿಗೆ ನೋಟಿಸ್ ನೀಡಲಾಗುವುದು ಎಂದು ಹೈದರಾಬಾದ್ ಪೊಲೀಸ್ ತಿಳಿಸಿದ್ದಾರೆ.
ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಮಾದಾಪುರದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಿನಿಮಾ ನಿರ್ಮಾಪಕರು ಬಂಧನಕ್ಕೊಳಗಾಗಿದ್ದರು. ಅಲ್ಲದೇ, ಸಿನಿಮಾ ರಂಗದಲ್ಲಿ ಡ್ರಗ್ಸ್ ವೈಹಿವಾಟು ಜೋರಾಗಿದೆ ಎನ್ನುವ ಆರೋಪ ಕೂಡ ಇದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ತೋರಿಸಿದರೆ ನೋಟಿಸ್ ನೀಡಿ, ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದಿದ್ದಾರೆ.
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಯ್ ದೇವರಕೊಂಡ ಅವರ ಸಹೋದರನ ಬೇಬಿ ಚಿತ್ರ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ಡ್ರಗ್ಸ್ ಬಳಕೆ ಕುರಿತಾಗಿ ದೃಶ್ಯವಿದೆ. ಅದರಿಂದ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ನೋಟಿಸ್ ನೀಡಲಾಗಿದೆ. ಸಿನಿಮಾ ಪರಿಶೀಲನೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.