ದೇಶದ ಹಲವೆಡೆ ಇಂದು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 11ರಂದು ಹಿಮಾಚಲಪ್ರದೇಶ, ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಮಳೆಯು ಭಾರಿ ಅನಾಹುತವನ್ನುಂಟು ಮಾಡಿತ್ತು.
ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪಕ್ಕದ ಪ್ರದೇಶಗಳಲ್ಲಿ ಜುಲೈ 12 ರಂದು( 115.6 ರಿಂದ 204.4 ಮಿಮೀ) ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಭಾರೀ ಮಳೆಯ ನಡುವೆ, ಹವಾಮಾನ ಇಲಾಖೆ ಜುಲೈ 12 ಕ್ಕೆ ಆರೆಂಜ್ ಅಲರ್ಟ್ ನೀಡಿದೆ.
ಸತತ ಭಾರೀ ಮಳೆಯಿಂದಾಗಿ ಉತ್ತರಾಖಂಡದ ಸೋನ್ಪ್ರಯಾಗ ಮತ್ತು ಗೌರಿಕುಂಡ್ನಲ್ಲಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜುಲೈ 12-13ರಂದು ಬಿಹಾರದಲ್ಲಿ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 12 ರಂದು 204.4 ಮಿ.ಮೀಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ. ಸಿಕ್ಕಿಂ, ಪಶ್ಚಿಮ ಬಂಗಾಳಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಇಂದು ಅರುಣಾಚಲ ಪ್ರದೇಶ, ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮಹಾಮಳೆ ಸುರಿಯಲಿದೆ ಎಂದು ಹೇಳಲಾಗಿದೆ. ಪಂಜಾಬ್ ಹಾಗೂ ಹರ್ಯಾಣದಲ್ಲಿ ಸತತ 3 ದಿನಗಳ ಭಾರಿ ಮಳೆ ಬಳಿಕ ಈಗ ಕೊಂಚ ಬಿಡುವು ಪಡೆದಿದೆ. ಈ ಪ್ರದೇಶದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಪಂಜಾಬ್ ಪಟಿಯಾಲಾ, ರೂಪನಗರ, ಮೋಗಾ, ಲುಧಿಯಾನದಲ್ಲಿ 9 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ ಹಾಗೂ ಮೇಘಾಲಯ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಬಿಹಾರದಲ್ಲಿ ಮುಂದಿನ 2 ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.