ಬೆಂಗಳೂರು : ಪಿಎಸ್ಐ ಪರೀಕ್ಷಾ ಅಕ್ರಮದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರದ ಧೋರಣೆಗೆ ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ತೋರಿದ ನಡವಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮರು ಪರೀಕ್ಷೆ ನಡೆಸಲು ಸಿಐಡಿ ವರದಿ ಕೊಟ್ಟರೂ ಆದೇಶ ಹೊರಡಿಸಲು ಮೀನಾಮೇಷ ಎಣಿಸಿದ ಸರ್ಕಾರವನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವರು, ಮರು ಪರೀಕ್ಷೆ ಆದೇಶವನ್ನು ತರಾತುರಿಯಲ್ಲಿ ಹೊರಡಿಸಿದ್ದಾರೆ.
ಜೊತೆಗೆ ದಿವ್ಯಾ ಹಾಗರಗಿ ಬಂಧನದೊಂದಿಗೆ ರಾಜ್ಯ ಸರ್ಕಾರವೂ ನಿಟ್ಟುಸಿರುಬಿಟ್ಟಿದೆ. ಈಗೇನಾದರೂ ಮರು ಪರೀಕ್ಷೆ ಆದೇಶ ಹೊರಡಿಸದಿದ್ದರೆ ದಿವ್ಯಾ ಹಾಗರಗಿ ಬಂಧನ ಆಗದಿದ್ದರೆ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ, ಅವರಿಗೆ ಮುಜುಗರದ ಸನ್ನಿವೇಶ ಎದುರಾಗುತ್ತಿತ್ತು.
ಗೃಹ ಇಲಾಖೆ ನಿಭಾಯಿಸಲಾಗದೇ ಒದ್ದಾಡುತ್ತಿರುವ ಆರಗ ಜ್ಞಾನೇಂದ್ರರನ್ನು ಬದಲಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗ್ತಿದೆ. ಮೇ ಮೊದಲ ವಾರದ ಬಳಿಕ ಆರಗ ಜ್ಞಾನೇಂದ್ರರಿಂದ ಗೃಹ ಖಾತೆ ಹಿಂಪಡೆದು, ಅವರಿಗೆ ಬೇರೆ ಖಾತೆಯ ಹೊಣೆ ನೀಡುವ ಸಂಭವ ಇದೆ. ಆರಗ ಜ್ಞಾನೇಂದ್ರ ಕಾರ್ಯವೈಖರಿ ಬಗ್ಗೆ ಸ್ವತಃ ಬಿಜೆಪಿ ಪಕ್ಷದಲ್ಲೇ ಭಾರೀ ಅಸಮಾಧಾನವಿದೆ.