ಬೆಂಗಳೂರು : ರಾಜ್ಯದಲ್ಲಿ ಇದೀಗ ಮುಂಗಾರು ಚುರುಕು ಪಡೆಯುತ್ತಿದೆ. ಆದರೆ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಮಳೆ ಎಲ್ಲಾ ಕಡೆ ವ್ಯಾಪಿಸಿಲ್ಲ. ಇಂದು ಉತ್ತರಕನ್ನಡದಲ್ಲಿ ಭಾರೀ ಮಳೆಯಾಗಿದೆ.
ಕಾರವಾರದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ಮೇಲೆ ಬೃಹತ್ ಬಂಡೆ ಉರುಳಿದೆ. ಪರಿಣಾಮ ಏಕ ಮುಖ ಸಂಚಾರ ಬಂದ್ ಮಾಡಲಾಗಿದೆ. ಅವಘಡಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನಲಾಗ್ತಿದೆ. ಹೊನ್ನಾವರದ ಕಡ್ನೀರ್ ಬಳಿ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಉಡುಪಿ, ದಕ್ಷಿಣ ಕನ್ನಡದಲ್ಲೂ ಮಳೆಯಾಗ್ತಿದೆ. ಬೆಳಗಾವಿಯಲ್ಲೂ ಒಂದಿಷ್ಟು ಮಳೆಯಾಗಿದೆ. ಆದರೆ ಇದು ಕೃಷಿಗೆ ಸಾಕಾಗ್ತಿಲ್ಲ. ಹೀಗಾಗಿ ಜನ ಕಪ್ಪೆ ಮದುವೆ, ಕತ್ತೆ ಮದುವೆಗಳಿಗೆ ಮೊರೆ ಹೋಗ್ತಿದ್ದಾರೆ. ವಿಜಯಪುರದ ಕಲಕೇರಿಯ ಜನ ಮಳೆಗಾಗಿ ಸಮಾಧಿಗಳಿಗೆ ನೀರುಣಿಸುವ ಶಾಸ್ತ್ರ ಮಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಚಿತ್ರಣ ಆಶಾದಾಯಕವಾಗಿಲ್ಲ. ಕಳೆದ 26ದಿನದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ 61%ರಷ್ಟು ಮಳೆ ಕೊರತೆಯಾಗಿದೆ.