ಬೆಂಗಳೂರು : ಇಂಜಿಯರಿಂಗ್ ಕಾಲೇಜುಗಳಲ್ಲಿ 4 ವರ್ಷದ ಬಿಎಸ್ಸಿ ಆನರ್ಸ್ ಆರಂಭಿಸಲು ಅನುಮತಿ ಪತ್ರ ನೀಡಲಾಗಿದೆ.
ನೂತನ ಶಿಕ್ಷಣ ಪದ್ಧತಿ (NEP) ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡಲಾಗುವುದು ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ನಾಲ್ಕು ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಸಿಲಬಸ್ ಬಿಡುಗಡೆ ಮಾಡಿರುವುದು ಹೊಸ ಅಧ್ಯಾಯವಾಗಿದೆ. ಇದೊಂದು ಐತಿಹಾಸಿಕ ದಿನ ಎಂದು ಸಿಎಂ ಬೊಮ್ಮಾಯಿ ಸಂತಸ ಹಂಚಿಕೊಂಡಿದ್ದಾರೆ.
ಅತ್ಯಂತ ಪ್ರಗತಿಪರವಾಗಿ ಎನ್ಇಪಿ ಜಾರಿಗೊಳಿಸುವಲ್ಲಿ ಯಶಸ್ವಿ ಆಗಿದ್ದೇವೆ. ಸಚಿವ ಡಾ. ಅಶ್ವತ್ಥ್ ನಾರಾಯಣ ಯಶಸ್ವಿಯಾಗಿದ್ದಾರೆ. ಎನ್ಇಪಿ ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡುತ್ತೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೊಡ್ಡ ಬದಲಾವಣೆ ಆಗಲಿದೆ. ಕರ್ನಾಟಕದ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಯಾವತ್ತೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೊಳಪಡಿಸಲಾಗುತ್ತಿದೆ. ನಾನು ಕೂಡ ಇಂಜಿನಿಯರಿಂಗ್ ಸ್ಟೂಡೆಂಟ್ ಆಗಿದ್ದೆ. ನನ್ನ ವಿಷಯದ ಬಗ್ಗೆ ಹೊಸತನ ಕೊಡುವ ಪ್ರಯತ್ನ ಮಾಡಲಾಗಿದೆ. ಹೊಸತನ ಕೊಡುವ ಪ್ರಯತ್ನವನ್ನು ನಾನು ಉದ್ಘಾಟಿಸಿದ್ದೇನೆ. ನಾನೇ ಉದ್ಘಾಟನೆ ಮಾಡಿದ್ದು ತುಂಬಾ ಖುಷಿ ತಂದಿದೆ. ಬದಲಾವಣೆಗೆ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.