ಬೆಂಗಳೂರು (ಸೆ18) : ಕೊರೋನಾ ವೈರಸ್ ಕಾರಣಕ್ಕೆ ಕಳೆದ ಒಂದೂವರೆ ವರ್ಷಗಳಿಂದ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳ ಪರೀಕ್ಷೆ ನಡೆಸುವುದನ್ನು ಪೊಲೀಸ್ ಇಲಾಖೆ ನಿರ್ಬಂಧಿಸಿದ್ದರು.
ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಸೋಂಕಿಗೆ ತುತ್ತಾಗುವ ಭಯದಿಂದಾಗಿ ಇಲಾಖೆ ಇಂತಹ ತೀರ್ಮಾನಕ್ಕೆ ಬರಲಾಗಿತ್ತು. ಆದರೆ, ಇದೀಗ ಕೊರೋನಾ ಸಂಖ್ಯೆ ಕ್ರಮೇಣ ಇಳಿಯುತ್ತಿವೆ. ಅಲ್ಲದೆ, ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳಿಂದಾಗಿ ಪ್ರಸ್ತುತ ರಸ್ತೆ ಅಪಘಾತಗಳೂ ಅಧಿಕವಾಗುತ್ತಿದೆ. ಹೀಗಾಗಿ ಪೊಲೀಸರು ಒಂದೂವರೆ ವರ್ಷದ ಬಳಿಕ ಮತ್ತೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಆರಂಭ ಮಾಡಿದ್ದು, ಕುಡಿದು ವಾಹನ ಚಲಾಯಿಸುವವರು ದಂಡ ವಿಧಿಸಬೇಕಾಗುತ್ತದೆ ಎಚ್ಚರ! ಕುಡಿದು ವಾಹನ ಚಲಾಯಿಸಿದರೆ ಹುಷಾರ್!
ಬೆಂಗಳೂರಿನಲ್ಲಿ ಇತ್ತೀಚೆಗೆ ವಾಹನ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಕೋರಮಂಗಲದಲ್ಲಿ ಇತ್ತೀಚೆಗೆ ಹೊಸೂರು ಭಾಗದ ಶಾಸಕನ ಮಗ ಮತ್ತು ಸೊಸೆ ಸೇರಿದಂತೆ ಒಟ್ಟು 7 ಜನ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣ ಭಾರೀ ಸದ್ದು ಮಾಡಿತ್ತು. ಅಲ್ಲದೆ, ಕುಡಿದು ವಾಹನ ಚಲಾವಣೆ ಮಾಡುತ್ತಿರುವ ಕಾರಣಕ್ಕೆ ಅನೇಕ ಅಪಘಾತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಉಂಟಾಗುತ್ತಿದೆ.
ಹೀಗಾಗಿ ಸಾಲು ಸಾಲು ಅಪಘಾತದಿಂದ ಎಚ್ಚೆತ್ತ ಟ್ರಾಫಿಕ್ ಪೊಲೀಸರು ಒಂದೂವರೆ ವರ್ಷದ ಬಳಿಕ ಮತ್ತೆ ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಆರಂಭವಾಗಿದೆ. ವಾರದಲ್ಲಿ ಮೂರು ದಿನ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುವಂತೆ ಆದೇಶ ಹೊರಡಿಸಲಾಗಿದ್ದು, ವೀಕೆಂಡ್ ನಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಶಾಕ್ ನೀಡದಂತಾಗಿದೆ.
ಕುಡಿದು ಕಾರಲ್ಲಿ ಮೋಜು ಮಸ್ತಿ ಮಾಡಿಕೊಂಡು ಬಂದ್ರೆ ಮುಲಾಜೇ ಇಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲು ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ವೀಕ್ ಎಂಡ್ ನಲ್ಲಿ ರಾತ್ರಿ 9 ರಿಂದ ಟ್ರಾಫಿಕ್ ಪೊಲೀಸರು ಫೀಲ್ಡಿಗೆ ಇಳಿಯಲಿದ್ದು, ಕುಡಿದು ವಾಹನ ಚಲಾಯಿಸುವವರ ಮೇಲೆ ದಂಡ ಮಾತ್ರವಲ್ಲದೆ, ಕಾನೂನು ಕ್ರಮವನ್ನೂ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಟೆಸ್ಟ್ ಮಾಡುವ ವಿಧಾನ ಮಾತ್ರ ಹಿಂದಿನಂತಿರಲ್ಲ, ಈ ವಿಧಾನವನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಕೊರೋನಾ ಹಿನ್ನೆಲೆ ಈ ಹಿಂದಿನಂತೆ ಆಲ್ಕೋಹಾಲ್ ಬ್ರೀತ್ ಟೆಸ್ಟರ್ ಮೂಲಕ ಪರೀಕ್ಷೆ ಮಾಡದೆ, ಕುಡಿದು ಬರೋರರನ್ನ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಕುಡಿದು ಬಂದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲಿದ್ದಾರೆ ಎನ್ನಲಾಗಿದೆ.