ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲ ಬಾರಿಗೆ ಇಂದು (ಮಾರ್ಚ್ 4) ವಿಧಾನಸೌಧದಲ್ಲಿ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ,
ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ – ಪಾಲುದಾರಿಕೆಯೊಂದಿಗೆ ಅಭಿವೃದ್ಧಿ ಹಾಗೂ ನವಭಾರತಕ್ಕಾಗಿ ನವ ಕರ್ನಾಟಕ – ಹೊಸ ಚಿಂತನೆ, ಹೊಸ ಚೈತನ್ಯದ ಜತ ಹೊಸ ಮುನ್ನೋಟ ಎಂಬ ನೆಲೆಯಲ್ಲಿ ಪಂಚಸೂತ್ರಗಳ ಆಧಾರದಲ್ಲಿ ಬಜೆಟ್ ಇದೆ.
ಬಜೆಟ್ನಲ್ಲಿ ಆಹಾರ ಇಲಾಖೆಗೆ 2,288 ಕೋಟಿ ರೂಪಾಯಿ ಅನುದಾನ, ವಸತಿ ಇಲಾಖೆಗೆ 3,594 ಕೋಟಿ ರೂಪಾಯಿ ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,713 ಕೋಟಿ ಅನುದಾನ, ಕೃಷಿ & ತೋಟಗಾರಿಕೆ ಇಲಾಖೆಗೆ 8,457 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 9,389 ಕೋಟಿ ಅನುದಾನ, ಲೋಕೋಪಯೋಗಿ ಇಲಾಖೆಗೆ 10,447 ಕೋಟಿ ರೂ.,
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 11,222 ಕೋಟಿ ರೂ., ಜಲ ಸಂಪನ್ಮೂಲ ಇಲಾಖೆಗೆ 20,601 ಕೋಟಿ ಅನುದಾನ, ಶಿಕ್ಷಣ ಇಲಾಖೆಗೆ 31,980 ಕೋಟಿ ರೂಪಾಯಿ ಅನುದಾನ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಗೆ 17,325 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ 16,076 ಕೋಟಿ ರೂ. ಅನುದಾನ, ಕಂದಾಯ ಇಲಾಖೆಗೆ 16,388 ಕೋಟಿ ರೂಪಾಯಿ ಅನುದಾನ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ 13,982 ಕೋಟಿ ರೂ., ಇಂಧನ ಇಲಾಖೆಗೆ 12,655 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.