Select Your Language

Notifications

webdunia
webdunia
webdunia
webdunia

ಪುನೀತ್ ಹಿಂದಿಕ್ಕಿದ ಸುದೀಪ್: TRPನಲ್ಲಿ 'ಬಿಗ್ ಬಾಸ್' ನಂ.1

ಪುನೀತ್ ಹಿಂದಿಕ್ಕಿದ ಸುದೀಪ್: TRPನಲ್ಲಿ 'ಬಿಗ್ ಬಾಸ್' ನಂ.1
, ಶುಕ್ರವಾರ, 5 ಏಪ್ರಿಲ್ 2013 (13:47 IST)
PTI
ನಿರೀಕ್ಷೆಯಂತೆಯೇ ಸುವರ್ಣ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮವನ್ನು ಈಟಿವಿ ಕನ್ನಡದ 'ಬಿಗ್ ಬಾಸ್' ಹಿಂದಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ನಿರೂಪಕರಾಗಿರುವ ರಿಯಾಲಿಟಿ ಶೋ ಒಂದೇ ವಾರದಲ್ಲಿ ಸಪ್ಪೆಯನ್ನಾಗಿ ಮಾಡಿದೆ!

'ಕನ್ನಡದ ಕೋಟ್ಯಧಿಪತಿ'ಯ ಶೈಲಿಗೆ ಹೋಲಿಸಿದರೆ 'ಬಿಗ್ ಬಾಸ್ ಕನ್ನಡ' ಭಿನ್ನ. ಬೇರೆಯದೇ ಕಲ್ಪನೆಯ ಕಾರ್ಯಕ್ರಮಗಳಾಗಿರುವುದರಿಂದ ಈ ಎರಡನ್ನು ಯಾವ ರೀತಿಯಿಂದಲೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆದರೆ ಸ್ಪರ್ಧಾತ್ಮಕ ಚಾನೆಲ್‌ಗಳ ನಡುವೆ ಹೋಲಿಕೆ ಸಹಜ. ಇದಕ್ಕೆ ಪುಷ್ಠಿ ನೀಡುವುದು ಟಿಆರ್‌ಪಿ - ಟಿವಿಆರ್ ರೇಟಿಂಗ್ಸ್. ಇದರಲ್ಲಿ 'ಬಿಗ್ ಬಾಸ್ ಕನ್ನಡ' ಮುಂಚೂಣಿಯಲ್ಲಿದೆ.

ಮಾರ್ಚ್ 24ರಂದು ಆರಂಭವಾಗಿದ್ದ ಬಿಗ್ ಬಾಸ್‌ಗೆ ಮೊದಲ ನಾಲ್ಕು ದಿನ ಸಿಕ್ಕಿದ ಟಿವಿಪಿ 2.2. ಆದರೆ ಸುದೀಪ್ ನಡೆಸಿಕೊಟ್ಟ ಶುಕ್ರವಾರ ಮತ್ತು ಶನಿವಾರದ ಎರಡು ಸಂಚಿಕೆಗಳಿಗೆ ಕ್ರಮವಾಗಿ 2.28 ಮತ್ತು 3.45 ರೇಟಿಂಗ್ ಸಿಕ್ಕಿದೆ. ಅಂದರೆ ಒಟ್ಟಾರೆ ಸರಾಸರಿ ಟಿವಿಪಿ 2.5.

ಅತ್ತ ಪುನೀತ್ ನಿರೂಪಕರಾಗಿರುವ 'ಕನ್ನಡದ ಕೋಟ್ಯಧಿಪತಿ' ರೇಟಿಂಗ್ ತೀವ್ರ ಕುಸಿತ ಕಂಡಿದೆ. ಕಾರ್ಯಕ್ರಮ ಆರಂಭದಲ್ಲಿ 2.8 ಟಿವಿಆರ್ ಇದ್ದದ್ದು, ಈಗ 1.8ಕ್ಕೆ ಕುಸಿದಿದೆ.

ಇನ್ನೊಂದು ಮೂಲದ ಪ್ರಕಾರ, 'ಬಿಗ್ ಬಾಸ್ ಕನ್ನಡ'ಕ್ಕೆ ಇಡೀ ವಾರ 4.4ರ ಟಿವಿಆರ್ ರೇಟಿಂಗ್ ಸಿಕ್ಕಿದೆ. ನರ್ಸ್ ಜಯಲಕ್ಷ್ಮಿ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ದಿನ ಗರಿಷ್ಠ, ಅಂದರೆ 6.3 ಟಿವಿಆರ್ ಸಿಕ್ಕಿದೆ. ಕಾರ್ಯಕ್ರಮದ ಆರಂಭವಾದ ದಿನ, ಅಂದರೆ ಮಾರ್ಚ್ 24ರಂದು 4.7 ಟಿವಿಆರ್ ಲಭಿಸಿದೆ. ಇದರಿಂದ ಈಟಿವಿ ಕನ್ನಡದ ಒಟ್ಟಾರೆ ವೀಕ್ಷಕರ ಸಂಖ್ಯೆಯಲ್ಲಿ ಶೇ.46ರಷ್ಟು ಹೆಚ್ಚಳ ಕಂಡಿದೆ. ಅಷ್ಟು ಮಾತ್ರವಲ್ಲ, ಕನ್ನಡದ ಯಾವುದೇ ಚಾನೆಲ್‌ನ ಯಾವುದೇ ಕಾರ್ಯಕ್ರಮಕ್ಕೆ 6.3ರ ರೇಟಿಂಗ್ ಇದುವರೆಗೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ 6.3 ಟಿವಿಆರ್ ಸಿಕ್ಕಿದೆ.

ಸುದೀಪ್ ಪ್ರತಿಕ್ರಿಯೆ:

ನಾನು ಟಿಆರ್‌ಪಿಗೆ ಹೆಚ್ಚು ಒತ್ತು ನೀಡುವುದಿಲ್ಲ. ಆದರೆ ವೀಕ್ಷಕರಿಂದ ಸಿಕ್ಕಿರುವ ಪ್ರತಿಕ್ರಿಯೆಯಿಂದ ರೋಮಾಂಚನಗೊಂಡಿದ್ದೇನೆ. ವೀಕ್ಷಕರನ್ನು ಹಿಡಿದಿಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವುದು ನನಗೆ ಖುಷಿ ಕೊಟ್ಟಿದೆ.
- ಕಿಚ್ಚ ಸುದೀಪ್, ಬಿಗ್ ಬಾಸ್ ನಿರೂಪಕ

Share this Story:

Follow Webdunia kannada