Select Your Language

Notifications

webdunia
webdunia
webdunia
webdunia

ಹಪಹಪಿಸುತ್ತಿರುವ ದೇಶಕ್ಕೋಸ್ಕರವಾದ್ರೂ ಗೆಲ್ಲೇಬೇಕು: ಯೂನಿಸ್

ಹಪಹಪಿಸುತ್ತಿರುವ ದೇಶಕ್ಕೋಸ್ಕರವಾದ್ರೂ ಗೆಲ್ಲೇಬೇಕು: ಯೂನಿಸ್
ನಾಟಿಂಗ್‌ಹ್ಯಾಮ್ , ಶುಕ್ರವಾರ, 19 ಜೂನ್ 2009 (18:00 IST)
PTI
ಕ್ರಿಕೆಟ್ ಬಡತನ ಅನುಭವಿಸುತ್ತಿರುವ ತನ್ನ ದೇಶದ ಮಿಲಿಯನ್‌ಗಟ್ಟಲೆ ಜನತೆಯಲ್ಲಿ ಮತ್ತೆ ಸಂತಸದ ಅಲೆ ಮೂಡಿಸುವುದಕ್ಕೋಸ್ಕರ ತಾವು ಟ್ವೆಂಟಿ-20 ವಿಶ್ವಕಪ್ ಗೆಲ್ಲಲಿದ್ದೇವೆ ಎಂದು ಪಾಕಿಸ್ತಾನ ನಾಯಕ ಯೂನಿಸ್ ಖಾನ್ ತಿಳಿಸಿದ್ದಾರೆ.

ನಾವೀಗ ಕೇವಲ ಒಂದೇ ಒಂದು ಪಂದ್ಯವನ್ನು ಗೆದ್ದರೆ ಕಪ್ ನಮ್ಮದಾಗಲಿದೆ. ಆ ಗೆಲುವಿಗಾಗಿ ನಮ್ಮಿಂದ ಸಾಧ್ಯವಾಗುವ ಶ್ರೇಷ್ಠ ಪ್ರದರ್ಶನವನ್ನೇ ನಾವು ನೀಡುತ್ತೇವೆ ಎಂದು ದಕ್ಷಿಣ ಆಫ್ರಿಕಾ ವಿರುದ್ಧ ಟ್ರೆಂಟ್ ಬ್ರಿಡ್ಜ್‌ನಲ್ಲಿ ಗೆಲುವು ದಾಖಲಿಸಿದ ನಂತರ ವಿಶ್ವಾಸ ವ್ಯಕ್ತಪಡಿಸಿದರು.

"ತವರಿನ ಜನರ ಮುಖದಲ್ಲಿ ಮತ್ತೆ ಸಂತೋಷ ಅರಳುವುದನ್ನು ನಾವು ಬಯಸುತ್ತಿದ್ದೇವೆ. ಚಾಂಪಿಯನ್‌ಶಿಪ್ ಗೆಲ್ಲುವುದೆಂದರೆ ಅವರಿಗದು ಬೃಹತ್ ಮಟ್ಟದ ಹೆಮ್ಮೆ. ಅದೇ ನಮಗೆ ಫೈನಲ್ ಪಂದ್ಯದಲ್ಲಿ ಸ್ಪೂರ್ತಿಯಾಗಲಿದೆ. ಇನ್ನೊಂದೇ ಒಂದು ಪಂದ್ಯ ಗೆದ್ದರೂ ವಿಶ್ವಕಪ್ ನಮ್ಮದಾಗಲಿದೆ" ಎಂದು ಪ್ರಶಸ್ತಿಯ ತೀರಾ ಹತ್ತಿರದಲ್ಲೇ ಅಡ್ಡಾಡುತ್ತಿರುವ ನಾಯಕ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿನ ಭದ್ರತಾ ಬೆದರಿಕೆಗಳ ಕಾರಣ ವಿದೇಶಿ ತಂಡಗಳು ಅಲ್ಲಿಗೆ ಪ್ರವಾಸ ಕೈಗೊಳ್ಳಲು ಕಳೆದ ಅನೇಕ ವರ್ಷಗಳಿಂದ ಹಿಂದೇಟು ಹಾಕುತ್ತಿವೆ. ಇದೇ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಪಂದ್ಯಗಳನ್ನು ಆ ದೇಶದಿಂದ ಬೇರೆಡೆಗೆ ಸ್ಥಳಾಂತರಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆದ ಮೇಲಂತೂ ಕ್ರೀಡಾ ಕ್ಷೇತ್ರವೂ ಉಗ್ರರ ಗುರಿಯಾಗಿದೆ ಎಂಬುದು ಜಾಗತಿಕ ಭೀತಿಗೆ ಕಾರಣವಾಗಿದೆ.
webdunia
PTI

ಎರಡು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವಿರುದ್ಧ ಸೋಲುಂಡಿದ್ದ ಪಾಕಿಸ್ತಾನ ರನ್ನರ್-ಅಪ್ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ ಪಾಕ್ ಫೈನಲ್ ಪ್ರವೇಶಿಸಿದೆ. ಭಾನುವಾರದ ಈ ಪಂದ್ಯದಲ್ಲಿ ಶ್ರೀಲಂಕಾ ಅಥವಾ ವೆಸ್ಟ್‌ಇಂಡೀಸ್ ತಂಡವನ್ನು ಯೂನಿಸ್ ಪಾಳಯ ಮುಖಾಮುಖಿಯಾಗಲಿದೆ.

ಫೈನಲ್‌ ಮುಖಾಮುಖಿಗೆ ಯಾವ ತಂಡ ಬಂದರೂ ಅದರ ಬಗ್ಗೆ ನಮಗೇನೂ ಭೀತಿಯಿಲ್ಲ ಎಂದಿರುವ ಯೂನಿಸ್ ಎರಡನೇ ಸೆಮಿಫೈನಲ್ ಪಂದ್ಯವನ್ನು ಶುಕ್ರವಾರ ವೀಕ್ಷಿಸುವುದಾಗಿ ತಿಳಿಸಿದ್ದಾರೆ.

ಲಂಕಾ ಮತ್ತು ವಿಂಡೀಸ್‌ಗಳೆರಡೂ ಪ್ರಬಲ ತಂಡಗಳು. ಅದು ದಕ್ಷಿಣ ಆಫ್ರಿಕಾದ ವಿರುದ್ಧ ನಾವು ಆಡಿದಂತೆ ನಮ್ಮಿಂದ ಸಾಧ್ಯವಾಗುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ ಎಂದರು.

ಗೆಲುವಿಗೆ ಪ್ರಮುಖ ಕಾರಣನಾದ ಆಫ್ರಿದಿ ಬಗ್ಗೆ ಮಾತನಾಡುತ್ತಾ ಖಾನ್, "ತನ್ನ ಸ್ವಂತ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಶಕ್ತಿ ಹೊಂದಿರುವ ಆಟಗಾರರಲ್ಲಿ ಅವರು ಕೂಡ ಪ್ರಮುಖರು. ಅದನ್ನೇ ಇಲ್ಲವರು ಮಾಡಿದ್ದಾರೆ ಮತ್ತು ಫೈನಲ್‌ನಲ್ಲೂ ಅದನ್ನು ಪುನರಾವರ್ತಿಸಲಿದ್ದಾರೆ ಎಂಬ ಭರವಸೆ ನಮಗಿದೆ" ಎಂದರು.

Share this Story:

Follow Webdunia kannada