Webdunia - Bharat's app for daily news and videos

Install App

ಲಂಕಾ, ವಿಂಡೀಸ್‌ಗಳಲ್ಲಿ ಗೆಲ್ಲೋ ಕುದುರೆ ಯಾವುದು?

Webdunia
ಗುರುವಾರ, 18 ಜೂನ್ 2009 (19:41 IST)
ಅದ್ಭುತ ಸ್ಥಿರ ಪ್ರದರ್ಶನದಿಂದ ಮೇಳೈಸುತ್ತಿರುವ ಶ್ರೀಲಂಕಾ ಮತ್ತು ಅನನ್ಯ ನಿರ್ವಹಣೆಗಳ ಮೂಲಕ ವೆಸ್ಟ್‌ಇಂಡೀಸ್ ತಂಡ ಮಿಂಚುತ್ತಿದ್ದು, ಶುಕ್ರವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಎರಡನೇ ಸೆಮಿಫೈನಲ್‌ನಲ್ಲಿ ತೀವ್ರ ಕುತೂಹಲದೊಂದಿಗೆ ಮುಖಾಮುಖಿಯಾಗಲಿವೆ.

ಕುಂದಿಲ್ಲದ ದಾಖಲೆಗಳು ಮತ್ತು ಅಮೋಘ ಸಮತೋಲನದ ಕಾರಣದಿಂದ ಶ್ರೀಲಂಕಾವು ಪ್ರಬಲ ಹೋರಾಟವನ್ನು ನೀಡುವ ಸಾಧ್ಯತೆಗಳಿದ್ದು, ಕುಮಾರ ಸಂಗಕ್ಕರ ಪಡೆ ಯಾವುದೇ ಸವಾಲನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ.
PTI

ಸನತ್ ಜಯಸೂರ್ಯ ಈ ಟೂರ್ನಮೆಂಟ್‌ನಲ್ಲಿ ಅದ್ಭುತ ಪ್ರದರ್ಶನ ಮೆರೆಯದಿದ್ದರೂ ಈ ಅನುಭವಿ ಆಟಗಾರ ಯಾವುದೇ ಬೌಲಿಂಗ್ ದಾಳಿಯನ್ನು ಏಕಾಂಗಿಯಾಗಿ ಪುಡಿಗಟ್ಟುವ ಸಾಮರ್ಥ್ಯವನ್ನು ಯಾವುದೇ ಕ್ಷಣದಲ್ಲಿ ಮೈಮೇಳೆದುಕೊಳ್ಳಬಹುದು. ಅಂತಹ ಹಲವು ನಿದರ್ಶನಗಳೇ ಅವರ ಕ್ರೀಡಾಜೀವನದಲ್ಲಿ ಇದುವರೆಗೆ ನಡೆದು ಹೋಗಿವೆ. ಈ ಕಾರಣದಿಂದಾಗಿ ಸೆಮಿಫೈನಲ್ ದಿನ ಅವರದಾಗದಿರಲಿ ಎಂದು ವೆಸ್ಟ್‌ಇಂಡೀಸ್ ಪ್ರಾರ್ಥನೆ ಮಾಡಿಕೊಳ್ಳಬಹುದು.

ಜಯಸೂರ್ಯ ಫಾರ್ಮ್‌ ಹೊಂದಿರದಿರುವುದರಿಂದ ಶ್ರೀಲಂಕಾವೇನೂ ಭಾರೀ ಹಿನ್ನಡೆ ಅನುಭವಿಸಿಲ್ಲ. ಅವರ ಜತೆಗಾರ ತಿಲಕರತ್ನೆ ದಿಲ್‌ಶಾನ್ ಐಪಿಎಲ್ ನಂತರ ಸಿಡಿಯುತ್ತಿರುವುದು ಇನ್ನೂ ನಿಂತಿಲ್ಲದಿರುವುದೇ ಇದಕ್ಕೆ ಕಾರಣ. ಆಲ್-ರೌಂಡರ್ ಆಗಿರುವ ಇವರು ಎದುರಾಳಿ ಬೌಲರುಗಳಿಗೆ ನಡುಕ ಹುಟ್ಟಿಸುತ್ತಾ ಬಂದಿದ್ದಾರೆ.

ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆ ಕೂಡ ಸಮಯೋಚಿತ ಆಟದ ಮೂಲಕ ಮಿಂಚಿದವರು. ಎದುರಾಳಿಗಳನ್ನು ಬಗ್ಗು ಬಡಿಯಲು ಬೇಕಾದ ಅಸ್ತ್ರಗಳು ಅವರಲ್ಲಿವೆ.
PTI

ಅದೇ ಹೊತ್ತಿಗೆ ಬೌಲಿಂಗ್‌ನಲ್ಲೂ ಲಂಕಾ ಪಡೆ ಭಾರೀ ಯಶಸ್ಸು ಕಾಣದಿದ್ದರೂ ನಿಯಂತ್ರಿಸುವಲ್ಲಿ ಹಿಂದೆ ಬಿದ್ದಿಲ್ಲ. ಅಂಜೆಲೋ ಮ್ಯಾಥ್ಯೂಸ್, ಅಜಂತಾ ಮೆಂಡಿಸ್, ಲಸಿತ್ ಮಾಲಿಂಗ ಎದುರಾಳಿ ದಾಂಡಿಗರ ಹಣೆಯಲ್ಲಿ ಬೆವರು ಹರಿಸುತ್ತಾ ಬೇಗನೆ ಪೆವಿಲಿಯನ್ ಯಾತ್ರೆ ಮಾಡಿಸುವ ತಾಕತ್ತುಳ್ಳವರು. ಇತ್ತೀಚೆಗೆ ಹಿನ್ನಡೆ ಅನುಭವಿಸುತ್ತಿದ್ದರೂ ಅನುಭವಿ ಮುತ್ತಯ್ಯ ಮುರಳೀಧರನ್ ಬಗ್ಗೆ ವಿವರಿಸ ಬೇಕಾದುದೇನೂ ಇಲ್ಲ.

ಇಷ್ಟೆಲ್ಲದರ ಹೊರತಾಗಿಯೂ ಶ್ರೀಲಂಕಾವನ್ನು ಸೆಮಿಫೈನಲ್‌ನಿಂದಟ್ಟುವ ಸಾಮರ್ಥ್ಯ ವೆಸ್ಟ್‌ಇಂಡೀಸ್ ಪಡೆಗಿದೆ. ಅವರು ಹಾಲಿ ಚಾಂಪಿಯನ್ ಭಾರತ ಹಾಗೂ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನೇ ಮನೆಗೆ ಕಳುಹಿಸಿ ಆಘಾತವನ್ನೇ ನೀಡಿದವರು.

ಆ ತಂಡದ ನಾಯಕ ಕ್ರಿಸ್ ಗೇಲ್ ನೇರ ನಿಲ್ಲಲು ಲಂಕಾ ಬೌಲರುಗಳು ಅವಕಾಶ ನೀಡಿದಲ್ಲಿ ಪ್ರತಿ ಎಸೆತಗಳಿಗೂ ಮೋಕ್ಷ ಕಾಣಿಸುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಲೆಂಡಿಲ್ ಸೈಮನ್ಸ್ ಮತ್ತು ದ್ವಾಯ್ನೆ ಬ್ರಾವೋ ಕೂಡ ಅವರ ಮಟ್ಟದಲ್ಲೇ ಆಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲವರು.
PTI

ಶಿವನಾರಾಯಣೆ ಚಂದರಪಾಲ್ ಮತ್ತು ರಾಮನರೇಶ್ ಸರ್ವಾನ್ ವಿಶೇಷ ಆಟಗಾರರಾಗಿದ್ದರೂ ಈ ಟೂರ್ನಮೆಂಟ್‌ನಲ್ಲೇಕೋ ಅದ್ಭುತ ಪ್ರದರ್ಶನ ನೀಡಿಲ್ಲ. ಹಾಗಂತ ಅವರನ್ನು ಅಪಾಯಕಾರಿಗಳಲ್ಲ ಎಂದು ಪರಿಗಣಿಸಿದರೆ ದ್ವೀಪರಾಷ್ಟ್ರಕ್ಕೆ ದಂಡನೆ ತಪ್ಪದು.

ಬೌಲಿಂಗ್ ವಿಭಾಗದಲ್ಲಿ ಕೂಡ ಮಿಂಚುವ ಸಾಮರ್ಥ್ಯ ಬ್ರಾವೋರದ್ದು. ಫೀಡೆಲ್ ಎಡ್ವರ್ಡ್ಸ್, ಲೆಂಡಿಲ್ ಸೈಮನ್ಸ್, ಜೆರೋಮ್ ಟೇಲರ್ ಕೂಡ ವಿಶ್ವಕಪ್‌ನ ಇದುವರೆಗಿನ ಪಂದ್ಯಗಳಲ್ಲಿ ತಲಾ ಆರಾರು ವಿಕೆಟ್ ಪಡೆದವರು.

ಈ ಎಲ್ಲಾ ಕಾರಣಗಳಿಂದ ಲಂಕಾ ಮತ್ತು ವಿಂಡೀಸ್ ನಡುವೆ ಗೆಲ್ಲುವ ಕುದುರೆ ಯಾವುದು ಎಂದು ಗುರುತಿಸುವುದು ತೀರಾ ಕಠಿಣವಾದ ಕೆಲಸ. ಅದರಲ್ಲೂ ಟ್ವೆಂಟಿ-20ಯೆಂಬುದು ಬಹುತೇಕ ಅನಿಶ್ಚಿತತೆಯ ನಡುವೆಯೇ ಕೆಲವೇ ಓವರ್‌ಗಳಲ್ಲಿ ಮುಗಿಯುವ ಮೂಲಕ ಕೊನೆಯ ಕ್ಷಣದಲ್ಲಿ ಫಲಿತಾಂಶಕ್ಕೇ ತಿರುವು ಕೊಡುವಂತಹುದು.

ನಿಮ್ಮ ಪ್ರಕಾರ ಫೈನಲ್‌ಗೆ ಯಾವ ತಂಡ ಲಗ್ಗೆಯಿಕ್ಕಬಹುದು? ಯಾರು ಫೇವರಿಟ್?

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

RCB vs PBKS:ಆರ್‌ಸಿಬಿ ಆಟಗಾರರ ಬ್ಯಾಟಿಂಗ್‌ ಬಗ್ಗೆ ವೀರೇಂದ್ರ ಸೆಹ್ವಾಗ್ ಟೀಕೆ

IPL 2025 RCB: ಮೊದಲು ಕಪ್ ಗೆಲ್ತಾ ಇರಲಿಲ್ಲ, ಈಗ ಚಿನ್ನಸ್ವಾಮಿಯಲ್ಲೇ ಗೆಲ್ತಾ ಇಲ್ಲ

IPL 2025: ಎಲ್ಲಾ ಚೆನ್ನಾಗಿತ್ತು, ಕೊಹ್ಲಿ ಒಂದು ಸಲಹೆ ಕೊಟ್ಟಿದ್ದೇ ಕೊಟ್ಟಿದ್ದು, ಎಡವಟ್ಟಾಯ್ತು: ವಿಡಿಯೋ

IPL 2025: ಚಿನ್ನಸ್ವಾಮಿಯಲ್ಲಿ ಕಿಂಗ್ಸ್‌ ದರ್ಬಾರ್‌: ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲಿನ ಮುಖಭಂಗ

ಬಿಡುವು ನೀಡಿದ ಮಳೆರಾಯ, RCB vs PBKS ಪಂದ್ಯಾಟ ಶುರು

Show comments