Select Your Language

Notifications

webdunia
webdunia
webdunia
webdunia

ನಿಧಾರಗತಿಯ ಓವರ್-ರೇಟ್; ಲಂಕಾಕ್ಕೆ ಐಸಿಸಿ ದಂಡ

ನಿಧಾರಗತಿಯ ಓವರ್-ರೇಟ್; ಲಂಕಾಕ್ಕೆ ಐಸಿಸಿ ದಂಡ
ಲಂಡನ್ , ಶನಿವಾರ, 20 ಜೂನ್ 2009 (12:20 IST)
ವೆಸ್ಟ್‌ಇಂಡೀಸ್ ವಿರುದ್ಧ 57 ರನ್ನುಗಳ ಅಂತರದಿಂದ ಓವಲ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಗೆದ್ದ ಶ್ರೀಲಂಕಾ ತಂಡಕ್ಕೆ ನಿಧಾನಗತಿಯ ಓವರ್-ರೇಟ್ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ದಂಡ ವಿಧಿಸಿದೆ.

ಕುಮಾರ ಸಂಗಕ್ಕರ ಪಡೆಯು ವೆಸ್ಟ್‌ಇಂಡೀಸ್‌ಗೆ ಬೌಲಿಂಗ್ ಮಾಡಿ ಪಂದ್ಯ ಮುಗಿಯುವ ಹೊತ್ತಿನಲ್ಲಿ ಒಂದು ಓವರ್‌ನಷ್ಟು ಅವಧಿ ನಿಧಾನವಾಗಿತ್ತು ಎಂದು ಆಸ್ಟ್ರೇಲಿಯನ್ ಮ್ಯಾಚ್ ರೆಫ್ರಿ ಆಲನ್ ಹಾರ್ಸ್ಟ್‌ರವರು ಐಸಿಸಿ ಗಮನಕ್ಕೆ ತಂದಿದ್ದರು.

ಐಸಿಸಿ ನಡವಳಿಕೆ ನಿಯಮಾವಳಿ ಪ್ರಕಾರ ನಿಗದಿತ ಸಮಯದಲ್ಲಿ ಪ್ರತೀ ಓವರ್ ಮುಗಿಸಲಾಗದ ತಂಡದ ಪ್ರತೀ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇಕಡಾ ಐದು ಮತ್ತು ನಾಯಕನಿಗೆ ಎರಡು ಪಟ್ಟು ದಂಡ ವಿಧಿಸಿರುವ ನಿರ್ಧಾರವನ್ನು ಶನಿವಾರ ಐಸಿಸಿ ಪ್ರಕಟಿಸಿದೆ.

ಅದರಂತೆ ನಾಯಕ ಕುಮಾರ ಸಂಗಕ್ಕರ ತನ್ನ ಈ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 10ನ್ನು ಕಳೆದುಕೊಂಡಿದ್ದಾರೆ. ಅವರ ತಂಡದ ಉಳಿದ ಆಟಗಾರರ ಸಂಭಾವನೆಯಲ್ಲಿ ಶೇಕಡಾ ಐದು ಕಡಿತವಾಗಿದೆ.

ವೆಸ್ಟ್‌ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 158 ರನ್ ದಾಖಲಿಸಿತ್ತು. ಇದರಲ್ಲಿ ಪ್ರಮುಖ ಮೊತ್ತ ದಾಖಲಿಸಿದ್ದು ತಿಲಕರತ್ನೆ ದಿಲ್‌ಶಾನ್. ಅವರು ಅಮೋಘ ಬ್ಯಾಟಿಂಗ್ ಮೂಲಕ ಅಜೇಯ 96 ರನ್ ದಾಖಲಿಸಿದ್ದರು. ಆದರೆ ವೆಸ್ಟ್‌ಇಂಡೀಸ್ ಇನ್ನೂ 14 ಎಸೆತಗಳು ಬಾಕಿ ಉಳಿದಿರುವಾಗಲೇ 101ಕ್ಕೆ ಸರ್ವಪತನ ಕಂಡಿತ್ತು.

ವೇಗದ ಬೌಲರ್ ಅಂಜೆಲೋ ಮ್ಯಾಥ್ಯೂಸ್ ವೆಸ್ಟ್ಇಂಡೀಸ್ ಆರಂಭಿಕ ಮೂರು ವಿಕೆಟುಗಳನ್ನು ಕಿತ್ತಿದ್ದರು. ಒಟ್ಟಾರೆ ಮೂರು ವಿಕೆಟ್ ಪಡೆದ ಅವರು ನೀಡಿದ ರನ್ 16 ಮಾತ್ರ.

ಫೈನಲ್ ಪ್ರವೇಶಿಸಿರುವ ಶ್ರೀಲಂಕಾವು ತನ್ನ ಏಷಿಯಾ ಎದುರಾಳಿ ಪಾಕಿಸ್ತಾನವನ್ನು ಲಾರ್ಡ್ಸ್‌ನಲ್ಲಿ ಭಾನುವಾರ ಎದುರಿಸಲಿದೆ. ಪಾಕಿಸ್ತಾನವು ಕಪ್ ಗೆಲ್ಲುವ ನೆಚ್ಚಿನ ತಂಡ ದಕ್ಷಿಣ ಆಫ್ರಿಕಾವನ್ನು 7 ವಿಕೆಟುಗಳಿಂದ ಮಣಿಸುವ ಮೂಲಕ ಗುರುವಾರ ಮೊದಲ ಸೆಮಿಫೈನಲ್ ಯಶಸ್ವಿಯಾಗಿ ಮುಗಿಸಿತ್ತು.

Share this Story:

Follow Webdunia kannada