Select Your Language

Notifications

webdunia
webdunia
webdunia
webdunia

ಧೋನಿ 'ಹನಿಮೂನ್ ಅವಧಿ' ಮುಗಿದು ಹೋಗಿದೆ: ವಾ

ಧೋನಿ 'ಹನಿಮೂನ್ ಅವಧಿ' ಮುಗಿದು ಹೋಗಿದೆ: ವಾ
ನವದೆಹಲಿ , ಶನಿವಾರ, 20 ಜೂನ್ 2009 (13:21 IST)
PTI
ಮಹೇಂದ್ರ ಸಿಂಗ್ ಧೋನಿ ಒಬ್ಬ ಶ್ರೇಷ್ಠ ನಾಯಕ ಎಂದಿರುವ ಆಸ್ಟ್ರೇಲಿಯಾದ ದಂತಕತೆ ಸ್ಟೀವ್ ವಾ ಪ್ರಕಾರ ಟೀಮ್ ಇಂಡಿಯಾ ನಾಯಕನ ಮಧುಚಂದ್ರದ ಅವಧಿ ಮುಗಿದು ಹೋಗಿದೆ; ಅಲ್ಲದೆ ಈಗಿರುವ ಸಂಕಷ್ಟಗಳಿಂದ ಹೊರ ಬರಲು ಅವರಿಗೆ ಅಲ್ಪಕಾಲದ ವಿರಾಮ ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಧೋನಿಯವರ ಹನಿಮೂನ್ ಅವಧಿಯು ಮುಗಿದಂತೆ ಭಾಸವಾಗುತ್ತಿದೆ. ಅವರೀಗ ಕೆಲವು ದಿನಗಳ ವಿಶ್ರಾಂತಿಯನ್ನು ಪಡೆಯುವುದು ಅವಶ್ಯಕ" ಎಂದು ವಾ ಸಲಹೆ ನೀಡಿದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತವನ್ನು ಅನೂಹ್ಯ ವೈಭವಗಳೆಡೆಗೆ ಮುನ್ನಡೆಸಿದ್ದ ಧೋನಿ, ಇಂಗ್ಲೆಂಡ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ ಸೂಪರ್ ಎಂಟರಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಅವಮಾನಕಾರಿಯಾಗಿ ಭಾರತ ಹೊರ ಬಿದ್ದ ನಂತರ ತೀವ್ರ ಟೀಕೆಗಳಿಗೊಳಗಾಗುತ್ತಿದ್ದಾರೆ.

ನಿಮ್ಮ ಪ್ರಕಾರ ನಾಯಕರಾಗಿ ಸೌರವ್ ಗಂಗೂಲಿ ಶ್ರೇಷ್ಠರೋ ಅಥವಾ ಧೋನಿಯೋ ಎಂದು ವಾ ಅವರಲ್ಲಿ ಪ್ರಶ್ನಿಸಿದಾಗ ಉತ್ತರಿಸಲು ಸಮಯ ತೆಗೆದುಕೊಂಡ ಅವರು ಕೊನೆಗೂ, "ಧೋನಿ ಒಬ್ಬ ಅದ್ಭುತ ನಾಯಕ" ಎಂದರು.

ಅದೇ ಹೊತ್ತಿಗೆ ಟ್ವೆಂಟಿ-20 ವಿಶ್ವಕಪ್‌ನಿಂದ ಆರಂಭದಲ್ಲೇ ಹೊರಬಿದ್ದಿರುವ ಎರಡು ಅಗ್ರ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದೂ ವಾ ಅಭಿಪ್ರಾಯಪಟ್ಟಿದ್ದಾರೆ.

"ಟ್ವೆಂಟಿ-20ಯೆಂದರೆ ಅಲ್ಲಿ ಹಲವು ಅಚ್ಚರಿಗಳೇ ತುಂಬಿಕೊಂಡಿರುತ್ತವೆ. ಆ ದಿನ ನೀವು ತೀವ್ರ ತೀಕ್ಷ್ಣವಾಗಿ ಮತ್ತು ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವ ತಂಡವೂ ಕ್ರಿಕೆಟ್‌ನ ಈ ಪ್ರಕಾರದಲ್ಲಿ ಸೋಲಬಹುದು" ಎಂದು 'ಸ್ಟೀವ್ ವಾ ಫೌಂಡೇಶನ್ ಗ್ಲೋಬಲ್' ಸಂಸ್ಥೆಯ ಭಾರತೀಯ ಆವೃತ್ತಿಯನ್ನು ಉದ್ಘಾಟನೆಗೊಳಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.
webdunia
PTI

ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ಯಶಸ್ವೀ ಕಪ್ತಾನಗಳಲ್ಲೊಬ್ಬರು ಎಂಬ ಗೌರವ ಪಡೆದಿರುವ ವಾ ಪ್ರಕಾರ ಆಸ್ಟ್ರೇಲಿಯಾ ತಂಡದ ಅಜೇಯತೆ ಅವಧಿ ಮುಗಿದು ಹೋಗಿದೆ. ಆದರೆ ಇದು ಕ್ರೀಡೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂಬುದು ಅವರ ಅನಿಸಿಕೆ.

"ಭಾರತದ ವಿರುದ್ಧ ತಾಯ್ನೆಲದಲ್ಲಿ ಅವರು ಸೋತ ನಂತರ ಆಸ್ಟ್ರೇಲಿಯಾದ ಸೋಲರಿಯದ ತೇಜಸ್ಸು ಮಾಯವಾಗಿದೆ. ಆದರೆ ಇದು ಆಟದ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ. ಯಾಕೆಂದರೆ ಆಟದ ಸವಾಲುಗಳು ಇದರಿಂದ ಬಲವಾಗುತ್ತವೆ" ಎಂದರು.

ಭಾರತದ ಬಗೆಗಿನ ಭದ್ರತಾ ಪರಿಸ್ಥಿತಿಗಳನ್ನು ವಿಶ್ಲೇಷಿಸಿದ ಅವರು, "ಕಳೆದ ನವೆಂಬರ್ 26ರ ದಾಳಿಯ ಸಂದರ್ಭದಲ್ಲಿ ನಾನು ಮುಂಬೈಯಲ್ಲೇ ಇದ್ದೆ. ಆಸ್ಟ್ರೇಲಿಯಾದ ವಿಚಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಅಧಿಕಾರವಿಲ್ಲ. (ದೆಹಲಿಗೆ 2010ರ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ತಂಡವನ್ನು ಕಳುಹಿಸುವುದು ಮುಂತಾದುವು) ಆದರೆ ಭಾರತ ಸುರಕ್ಷಿತ ಜಾಗವೆಂಬ ಸಂದೇಶವನ್ನು ನಾನು ನೀಡಬಲ್ಲೆ. ಡೇವಿಸ್ ಕಪ್ ಪಂದ್ಯಕ್ಕಾಗಿ ಟೆನಿಸ್ ಆಸ್ಟ್ರೇಲಿಯಾವು ಭಾರತ ಪ್ರವಾಸ ಮಾಡಬೇಕಿತ್ತು" ಎಂದು ತಿಳಿಸಿದ್ದಾರೆ.

Share this Story:

Follow Webdunia kannada