Select Your Language

Notifications

webdunia
webdunia
webdunia
webdunia

ದೇಶಕ್ಕಾಗಿ ವಿಶ್ವಕಪ್ ಗೆಲ್ಲಿ: ಯೂನಿಸ್‌ಗೆ ಜರ್ದಾರಿ ಕರೆ

ಪಿಸಿಬಿಯಿಂದ ಆಫ್ರಿದಿಗೆ 50 ಲಕ್ಷ ರೂ. ನಗದು ಬಹುಮಾನ

ದೇಶಕ್ಕಾಗಿ ವಿಶ್ವಕಪ್ ಗೆಲ್ಲಿ: ಯೂನಿಸ್‌ಗೆ ಜರ್ದಾರಿ ಕರೆ
ಕರಾಚಿ , ಶನಿವಾರ, 20 ಜೂನ್ 2009 (19:05 IST)
PTI
ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ದೇಶದ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ರಾಷ್ಟ್ರಕ್ಕಾಗಿ ಪ್ರಶಸ್ತಿ ಗೆದ್ದುಕೊಡುವಂತೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ತನ್ನ ತಂಡಕ್ಕೆ ಕರೆ ನೀಡಿದ್ದಾರೆ.

ದೇಶವು ತೀವ್ರ ಸಂಕಷ್ಟದಲ್ಲಿದ್ದು ಇಲ್ಲಿ ಜಯಭೇರಿ ಬಾರಿಸುವ ಮೂಲಕ ಪಾಕಿಸ್ತಾನದ ಜನತೆಯನ್ನು ಹುರಿದುಂಬಿಸಿ ಎಂದು ಯೂನಿಸ್ ಖಾನ್‌ರನ್ನು ಲಂಡನ್‌ನಲ್ಲಿ ಭೇಟಿ ಮಾಡಿದ ಅಧ್ಯಕ್ಷರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

"ವಿಶ್ವಕಪ್ ಗೆಲ್ಲುವ ಮೂಲಕ ದೇಶಕ್ಕೆ ವಿಶೇಷ ಕೊಡುಗೆಯನ್ನು ನೀಡಿ" ಎಂದು ಅಧ್ಯಕ್ಷರು ಯೂನಿಸ್‌ಗೆ ತಿಳಿಸಿದ್ದಾರೆ.

ಕಷ್ಟಕಾಲವನ್ನು ಎದುರಿಸುತ್ತಿರುವ ದೇಶದ ಮಿಲಿಯನ್‌ಗಟ್ಟಲೆ ಜನತೆಯ ಮುಖದಲ್ಲಿ ಮುಗುಳ್ನಗುವನ್ನು ಮರಳಿಸುವ ಸಾಮರ್ಥ್ಯ ಈಗ ತಂಡಕ್ಕಿದೆ ಎಂದು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ತಂಡವು ಅಂತಿಮ ಹಂತದವರೆಗೂ ಗೆಲುವಿಗಾಗಿ ಹೋರಾಟ ನಡೆಸುತ್ತದೆ ಮತ್ತು ದೇಶದ ಜನತೆ ತಲೆ ತಗ್ಗಿಸುವಂತೆ ಮಾಡಲಾರೆವು ಎಂದು ನಾಯಕ ಯೂನಿಸ್ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
webdunia
pti

ಅದೇ ಹೊತ್ತಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು ಅದ್ಭುತ ಗೆಲುವಿನೊಂದಿಗೆ ಟ್ವೆಂಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಇಜಾಜ್ ಭಟ್ ಲಂಡನ್‌ನಲ್ಲಿ ಆಟಗಾರರ ಜತೆ ಉಪಹಾರ ಸೇವಿಸಿದ್ದಲ್ಲದೆ, ಸಮಾಲೋಚನೆ ನಡೆಸಿದರು ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಆಲ್-ರೌಂಡರ್ ಶಾಹಿದ್ ಆಫ್ರಿದಿಯವರಿಗೆ ಇದೇ ಸಂದರ್ಭದಲ್ಲಿ 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ಭಟ್ ಘೋಷಿಸಿದ್ದಾರೆ.

ಎರಡು ವರ್ಷಗಳ ಹಿಂದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಸೋಲುಂಡಿದ್ದ ಪಾಕಿಸ್ತಾನ ತಂಡವು ಈ ಬಾರಿ ವಿಶ್ವಕಪ್ ಗೆದ್ದಲ್ಲಿ ಪಾಕಿಸ್ತಾನ ತಂಡದ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡುವುದಾಗಿಯೂ ಭಟ್ ಆಶ್ವಾಸನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada