Select Your Language

Notifications

webdunia
webdunia
webdunia
webdunia

ಗೇಲ್ ಏಕಾಂಗಿ ಹೋರಾಟ ವ್ಯರ್ಥ: ಅಜೇಯ ಲಂಕಾ ಫೈನಲ್‌ಗೆ

ಗೇಲ್ ಏಕಾಂಗಿ ಹೋರಾಟ ವ್ಯರ್ಥ: ಅಜೇಯ ಲಂಕಾ ಫೈನಲ್‌ಗೆ
ಲಂಡನ್ , ಶನಿವಾರ, 20 ಜೂನ್ 2009 (09:24 IST)
ತಿಲಕರತ್ನೆ ದಿಲ್‌ಶಾನ್(96ರನ್, 56ಎಸೆತ) ಅವರ ಅವೋಘ ಬ್ಯಾಟಿಂಗ್ ಹಾಗೂ ವೇಗಿ ಮಾಥ್ಯೂಸ್(16ಕ್ಕೆ 3ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ತಂಡ ಶುಕ್ರವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 57ರನ್‌ಗಳ ಹೀನಾಯ ಸೋಲನ್ನು ಕಂಡಿದೆ. ಈ ಮೂಲಕ ಗೇಲ್(63ರನ್, 50ಎಸೆತ) ಅವರ ಏಕಾಂಗಿ ಹೋರಾಟವು ವ್ಯರ್ಥವಾಯಿತು.

PTIPTI
ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಕ್ರಿಸ್ ಗೇಲ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ಪಂದ್ಯದ ಆರಂಭದಲ್ಲಿ ಲಂಕನ್ ದಾಂಡಿಗರು ಸ್ವಲ್ಪ ಪರದಾಟಿದರೂ ನಂತರ ವೇಗದಲ್ಲಿ ರನ್ ಪೇರಿಸ ತೊಡಗಿದರು. ಆರಂಭಿಕ ಆಟಗಾರರಾದ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್‌ಶಾನ್ ಸೇರಿ ಮೊದಲ ವಿಕೆಟ್‌ಗೆ 10.3 ಓವರ್‍‌ಗಳಲ್ಲಿ 73ರನ್ ಒಟ್ಟು ಸೇರಿಸಿದರು. ಈ ಹಂತದಲ್ಲಿ 37 ಎಸೆತಗಳಲ್ಲಿ 24 ರನ್ ಗಳಿಸಿದ್ದ ಜಯಸೂರ್ಯ ಬ್ರಾವೋ ಎಸೆತಕ್ಕೆ ಬಲಿಯಾದರು.

ನಂತರ ಬಂದ ನಾಯಕ ಕುಮಾರ ಸಂಗಾಕ್ಕರ ಶೂನ್ಯಕ್ಕೆ ಮರಳಿ ನಿರಾಸೆ ಮೂಡಿಸಿದರೆ ಮಹೇಲಾ ಜಯವರ್ಧನೆ(2) ಸಹ ಅಲ್ಪದರಲ್ಲೇ ಪೆವಿಲಿಯನ್ ಸೇರಿಕೊಂಡರು. ಆದರೆ ಒಂದು ತುದಿಯಿಂದ ಕೆರೆಬಿಯನ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ಥಳಿಸಿದ ತಿಲಕರತ್ನೆ ದಿಲ್‌ಶಾನ್ 57 ಎಸೆತಗಳಿಂದ ಅಜೇಯ 96ರನ್ ಬಾರಿಸಿದರು. ಅವರ ಈ ಅವೋಘ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳು ಶಾಮೀಲಾಗಿದ್ದವು.

ಕೊನೆಗೆ ಬಂದ ಚಮರ ಸಿಲ್ವಾ(11), ಮುಬಾರಕ್(7) ಹಾಗೂ ಮಾಥ್ಯೂಸ್ ಅಜೇಯ 12ರನ್ ಗಳಿಸಿ ಲಂಕನ್ ಸ್ಕೋರ್ 150ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 158ರನ್ ಗಳಿಸಿತು. ವಿಂಡೀಸ್ ಪರ್ ಡ್ವೇನ್ ಬ್ರಾವೋ ಎರಡು ಹಾಗೂ ಫೋಲಾರ್ಡ್, ಬೆನ್ ಮತ್ತು ಟೇಲರ್ ತಲಾ ಒಂದೊಂದು ವಿಕೆಟ್ ಕಿತ್ತರು.

159ರ ಸವಾಲನ್ನು ಬೆನ್ನತ್ತಿದ ವಿಂಡೀಸ್‌ಗೆ ಆರಂಭದಲ್ಲೇ ಲಂಕಾ ವೇಗಿ ಮಾಥ್ಯೂಸ್ ಆಘಾತವನ್ನಿತ್ತರು. ಮಾರ್ಷಲ್, ಸಿಮನ್ಸ್ ಹಾಗೂ ಬ್ರಾವೋ ಅವರನ್ನು ಪ್ರಥಮ ಓವರ್‌ನಲ್ಲೇ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮಾಥ್ಯೂಸ್ ಶೂನ್ಯಕ್ಕೆ ಬಲಿ ತೆಗೆದುಕೊಂಡರು. ನಂತರದ ಕೆಲಸವನ್ನು ಲಂಕನ್ ಸ್ಪಿನ್ನರ್‌ಗಳಾದ ಮುತಯ್ಯ ಮುರಳೀಧರನ್(3ವಿಕೆಟ್), ಮೆಂಡೀಸ್(2 ವಿಕೆಟ್) ಯಶಸ್ವಿಯಾಗಿ ನಿಭಾಯಿಸಿದರು.

ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ವಿಂಡೀಸ್ ಕೇವಲ 17.4 ಓವರ್‌ಗಳಲ್ಲಿ 101ಕ್ಕೆ ಸರ್ವಪತನ ಕಂಡಿತ್ತು. ಆದರೆ ಏಕಾಂಗಿ ಹೋರಾಟ ನೀಡಿದ ನಾಯಕ ಕ್ರಿಸ್ ಗೇಲ್ 50 ಎಸೆತಗಳಲ್ಲಿ 63ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳೂ ಸೇರಿದ್ದವು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಪಂದ್ಯಶ್ರೇಷ್ಠನಾದ ರಾಮ್ ನರೇಶ್ ಸರ್ವಾನ್(5), ಶಿವನಾರಾಯಣ್ ಚಂದ್ರಪಾಲ್(7), ಪೋಲಾರ್ಡ್(3), ವಿಕೆಟ್ ಕೀಪರ್ ರಾಮ್‌ದಿನ್(9), ಟೇಲರ್(2). ಸಮ್ಮಿ(1), ಬೆನ್(0) ಯಾರು ಸಹ ಎಚ್ಚೆತ್ತುಕೊಳ್ಳಲೇ ಇಲ್ಲ.

ಲಂಕಾ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ವೇಗಿ ಮಾಥ್ಯೂಸ್ ಹಾಗೂ ಸ್ಪಿನ್ನರ್ ಮುರಳೀಧರನ್ ತಲಾ ಮೂರು ವಿಕೆಟ್ ಕಿತ್ತರೆ, ಅಂಜತಾ ಮೆಂಡೀಸ್ 2 ಹಾಗೂ ಉದನಾ ಮತ್ತು ಲಸಿತಾ ಮಾಲಿಂಗ ತಲಾ ಒಂದೊಂದು ವಿಕೆಟ್ ಕಿತ್ತರು.

ಪಂದ್ಯ ಪುರುಷೋತ್ತಮನಾದ ಶ್ರೀಲಂಕಾದ ತಿಲಕರತ್ನೆ ದಿಲ್‌ಶಾಲ್(96ರನ್) ಈ ಮೂಲಕ ಪ್ರಸಕ್ತ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತವನ್ನು ಪೇರಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲದೆ ಇದು ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಲಂಕಾ ದಾಂಡಿಗನೊಬ್ಬನಿಂದ ಪಂದ್ಯವೊಂದರಲ್ಲಿ ದಾಖಲಾಗುವ ಸರ್ವಾಧಿಕ ವೈಯಕ್ತಿಕ ಗಳಿಕೆಯು ಹೌದು.

ಭಾನುವಾರ ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಏಷ್ಯಾದ ಎರಡು ಪ್ರಬಲ ತಂಡಗಳಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಪರಸ್ಪರ ಹೋರಾಟ ನಡೆಸಲಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10ಕ್ಕೆ ಆರಂಭವಾಗಲಿದೆ.


Share this Story:

Follow Webdunia kannada