Select Your Language

Notifications

webdunia
webdunia
webdunia
webdunia

ಈ ಬಾರಿ ಪಾಕಿಸ್ತಾನ ಸೋಲಲು ನಾನು ಬಿಡಲ್ಲ: ಆಫ್ರಿದಿ

ಈ ಬಾರಿ ಪಾಕಿಸ್ತಾನ ಸೋಲಲು ನಾನು ಬಿಡಲ್ಲ: ಆಫ್ರಿದಿ
ಲಂಡನ್ , ಶನಿವಾರ, 20 ಜೂನ್ 2009 (18:10 IST)
ಸತತ ಮೂರನೇ ಬಾರಿ ಪಾಕಿಸ್ತಾನ ನಿರಾಸೆ ಅನುಭವಿಸುವುದನ್ನು ನಾನು ನೋಡಲಾರೆ ಎಂದಿರುವ ಆಲ್-ರೌಂಡರ್ ಶಾಹಿದ್ ಆಫ್ರಿದಿ, ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

10 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್‌ನಲ್ಲಿ ಏನು ನಡೆಯಿತು ಎಂಬುದು ಆಫ್ರಿದಿಗೆ ಈಗಲೂ ನೆನಪಿದೆ. ಹದಿಹರೆಯದವರಾಗಿದ್ದ ಆಫ್ರಿದಿಯವರು ಆಡಿದ್ದ ಪಾಕಿಸ್ತಾನ ತಂಡ ಇದೇ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಸ್ಟೀವ್ ವಾ ನಾಯಕತ್ವದ ಆಸ್ಟ್ರೇಲಿಯಾ ತಂಡದೆದುರು ಶರಣಾಗಿತ್ತು. ಆ ಮೂಲಕ ಪ್ರಶಸ್ತಿ ಆಸೀಸ್ ಪಾಲಾಗಿತ್ತು.

ಆ ನೋವು ಮರುಕಳಿಸಿದ್ದು ಎರಡು ವರ್ಷಗಳ ಹಿಂದಿನ ಟ್ವೆಂಟಿ-20 ವಿಶ್ವಕಪ್ ಉದ್ಗಾಟನಾ ಆವೃತ್ತಿಯ ಫೈನಲ್‌ನಲ್ಲಿ. ಪಾಕಿಸ್ತಾನದ ವಿರುದ್ಧ ಐದು ರನ್‌ಗಳ ಮೇಲುಗೈ ಸಾಧಿಸಿದ್ದ ಭಾರತವು ಜೋಹಾನ್ಸ್‌ಬರ್ಗ್‌ನಲ್ಲಿ ಮೆರೆದಾಡಿತ್ತು. ಆದಾಗ್ಯೂ ಈ ಟೂರ್ನಮೆಂಟ್‌ನಲ್ಲಿ ಆಫ್ರಿದಿ ಅತಿ ಮೌಲ್ಯಯುತ ಆಟಗಾರ ಎಂದು ನಾಮಕರಣಗೊಂಡಿದ್ದರು.

ಪ್ರಭಾವಿ ಆಲ್-ರೌಂಡರ್ ಆಗಿರುವ 29ರ ಹರೆಯದ ಆಫ್ರಿದಿ ಮತ್ತೊಂದು ವೈಫಲ್ಯಕ್ಕೆ ಎಡೆ ಮಾಡಿಕೊಡುವುದಿಲ್ಲ ಎಂದಿದ್ದಾರೆ.

"ಇದನ್ನು ನಾವು ಪಡೆಯಲೇಬೇಕು" ಎಂದು ಗುರುವಾರ ಟ್ರೆಂಟ್‌ಬ್ರಿಡ್ಜ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಅರ್ಧಶತಕ ಹಾಗೂ ಅಗ್ರ ಕ್ರಮಾಂಕದ ಎರಡು ವಿಕೆಟುಗಳನ್ನು ಪಡೆಯುವ ಮೂಲಕ ಪಾಕಿಸ್ತಾನವನ್ನು ಫೈನಲ್‌ಗೆ ಮುನ್ನಡೆಸಿದ ಆಫ್ರಿದಿ ಶಪಥ ಮಾಡಿದ್ದಾರೆ.

"ನನಗೆ ಸಾಧ್ಯವಾದರೆ ನಾನೊಬ್ಬನೇ ಅದನ್ನು ಸಾಧಿಸಿ ತೋರಿಸುತ್ತೇನೆ. ಈ ಹಿಂದಿನ ನಿರಾಸೆಗಳನ್ನು ಮರೆಸಲು ಇದೊಂದು ಸುವರ್ಣಾವಕಾಶ" ಎಂದು ಅವರು ತಂಡವನ್ನೂ ಹುರಿದುಂಬಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಫ್ರಿದಿ 34 ಎಸೆತಗಳಿಂದ 51 ರನ್ ದಾಖಲಿಸಿದ್ದರು. ಇದು ಕಳೆದ 29 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನ ಪರ ಅವರಾಡಿದ ಯಾವುದೇ ಪ್ರಕಾರದ ಕ್ರಿಕೆಟ್‌ನಲ್ಲಿಯೂ ಮೊದಲ ಅರ್ಧಶತಕವೆಂದು ದಾಖಲಾಗಿದೆ. ಅವರು ಈ ಹಿಂದೆ 2007ರಲ್ಲಿ ಅಬುದಾಭಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಬಾರಿ ಅರ್ಧಶತಕ ಮಾಡಿದ್ದರು.

ಆ ಮೂಲಕ ಅವರನ್ನು ತಂಡಕ್ಕೆ ಸೇರಿಸಿದ ಆಯ್ಕೆಗಾರರಿಗೆ ಆಫ್ರಿದಿ ನ್ಯಾಯ ಸಲ್ಲಿಸಿದ್ದಾರೆ. "ನನ್ನನ್ನು ಎಲ್ಲಾ ಸಂದರ್ಭಗಳಲ್ಲೂ ಬೆಂಬಲಿಸಿದ ನಾಯಕ ಯೂನಿಸ್ ಖಾನ್‌ರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಆಫ್ರಿದಿ ತಿಳಿಸಿದ್ದಾರೆ.

"ನೀನು ನಿನ್ನ ಸ್ವಂತ ಆಟವನ್ನು ಆಡಬೇಕು. ಉಳಿದ ವಿಚಾರಗಳ ಬಗ್ಗೆ ಚಿಂತಿಸಬೇಡ ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು ಅವರು ನನಗೆ ತಿಳಿ ಹೇಳಿದ್ದರು. ಅಲ್ಲದೆ ನೀನೊಬ್ಬ ತಂಡದ ಹಿರಿಯ ಆಟಗಾರ. ಹಾಗಾಗಿ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದರು. ಸುದೀರ್ಘ ಅವಧಿಯಿಂದ ಬ್ಯಾಟಿಂಗ್‌ನಲ್ಲಿ ನಾನು ಅತ್ಯುತ್ತಮ ಪ್ರದರ್ಶನ ತೋರಿಸಿರಲಿಲ್ಲ" ಎಂದು ವಿವರಿಸಿದರು.

ತಂಡವು ನನ್ನ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದೆ ಎಂಬುದನ್ನು ನಾನು ಅರಿತಿದ್ದೇನೆ. ಹಾಗಾಗಿ ಅವರ ಭರವಸೆಗಳನ್ನು ಹುಸಿಗೊಳಿಸಲಾರೆ. ಖಂಡಿತಾ ಈ ಬಾರಿ ಕಪ್ ನಾವೇ ಗೆಲ್ಲಲಿದ್ದೇವೆ ಎಂದು ಆಫ್ರಿದಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

1996ರಲ್ಲಿ ಕೀನ್ಯಾ ವಿರುದ್ಧ ನೈರೋಭಿಯಲ್ಲಿ ಲೆಗ್-ಸ್ಪಿನ್ನರ್ ಆಗಿ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದ ಆಫ್ರಿದಿ 37 ಎಸೆತಗಳಿಂದ ಶತಕ ದಾಖಲಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.

276 ಏಕದಿನ ಪಂದ್ಯಗಳನ್ನಾಡಿರುವ ಅವರು 110.91ರ ಸ್ಟ್ರೈಕ್-ರೇಟ್ ಹೊಂದಿದ್ದಾರೆ. ಅಲ್ಲದೆ 26 ಟೆಸ್ಟ್ ಪಂದ್ಯಗಳಿಂದ 37.40ರ ಸರಾಸರಿಯೂ ಅವರ ಹೆಸರಿನಲ್ಲಿದೆ. ಭಾರತದ ವಿರುದ್ಧ 156 ರನ್ ದಾಖಲಿಸಿದ್ದು ಅವರ ಶ್ರೇಷ್ಠ ಗರಿಷ್ಠ ಮೊತ್ತ.

Share this Story:

Follow Webdunia kannada