Webdunia - Bharat's app for daily news and videos

Install App

ಇತಿಹಾಸ ತಿದ್ದಿ ವಿಶ್ವಕಪ್ ಮುಡಿಗೇರಿಸಿಕೊಂಡ ಪಾಕಿಸ್ತಾನ

Webdunia
ಸೋಮವಾರ, 22 ಜೂನ್ 2009 (08:36 IST)
PTI
ಎಲ್ಲರ ನಿರೀಕ್ಷೆಗಳನ್ನೂ ಉಲ್ಟಾ-ಪಲ್ಟಾ ಮಾಡಿರುವ ಪಾಕಿಸ್ತಾನ ತನ್ನ ವಿಶ್ವಕಪ್ ಮುಯ್ಯಿಯನ್ನು ಅದೇ ಕ್ರೀಡಾಂಗಣದಲ್ಲಿ ತೀರಿಸಿಕೊಳ್ಳುವ ಮೂಲಕ ಕಪ್ ಎತ್ತಿಕೊಂಡು ಹೋಗಿದೆ. ಶ್ರೀಲಂಕಾದಂಥ ಶ್ರೀಲಂಕಾವನ್ನೇ ಎಂಟು ವಿಕೆಟ್‌ಗಳಿಂದ ಮಣಿಸಿ ಕ್ರಿಕೆಟ್ ದಾಹವನ್ನು ಟ್ವೆಂಟಿ-20 ವಿಶ್ವಕಪ್‌ನಿಂದ ನೀಗಿಸಿಕೊಂಡಿದೆ.

ಭಾನುವಾರ ಬೃಹತ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಅಪಾರ ಕ್ರೀಡಾಭಿಮಾನಿಗಳೆದುರು ಮಿಂಚಿದ ಪಾಕಿಸ್ತಾನವು ಕಳೆದ 17 ವರ್ಷಗಳಲ್ಲೇ ಪ್ರಮುಖ ಪ್ರಶಸ್ತಿಯನ್ನು ಗಳಿಸುವ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ತನ್ನ ನಿರ್ಲಕ್ಷ್ಯ ಸಲ್ಲದು ಎಂಬ ಸಂದೇಶವನ್ನು ಅಗ್ರ ಕ್ರಿಕೆಟ್ ರಾಷ್ಟ್ರಗಳಿಗೆ ನೀಡಿದೆ.

ಕಳೆದ ಬಾರಿಯ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಫೈನಲ್‌ನಲ್ಲಿ ಅಲ್ಪ ಅಂತರದಿಂದ ಪರಾಜಯ ಹೊಂದಿ ಪ್ರಶಸ್ತಿ ತಪ್ಪಿಸಿಕೊಂಡಿದ್ದ ಪಾಕಿಸ್ತಾನವು ಪಡೆದೇ ತೀರುವ ಉತ್ಸಾಹದಿಂದ ಹೊರಟಿತ್ತು. ಟೂರ್ನಮೆಂಟ್ ಆರಂಭದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದ ಈ ತಂಡ ನಂತರ ಪುಟಿದೆದ್ದು ಸೆಮಿಫೈನಲ್ ತಲುಪಿದ್ದೇ ಒಂದು ಸಾಹಸ. ಇದೀಗ ಚಾಂಪಿಯನ್‌ ಪಟ್ಟವನ್ನೂ ಯೂನಿಸ್ ಖಾನ್ ಪಡೆ ಅಲಂಕರಿಸಿದೆ.

ಈ ಪಂದ್ಯದಲ್ಲಿ ಶಾಹಿದ್ ಆಫ್ರಿದಿಯವರ ಅಮೋಘ ಬ್ಯಾಟಿಂಗ್ ಮತ್ತು ಕ್ರಿಕೆಟ್ ಪುನರ್ಜನ್ಮ ಪಡೆದಿರುವ ಆಲ್-ರೌಂಡರ್ ಅಬ್ದುಲ್ ರಜಾಕ್ ಕಿತ್ತ ಪ್ರಮುಖ ಮೂರು ವಿಕೆಟ್‌ಗಳು ಪಾಕಿಸ್ತಾನಕ್ಕೆ ವರವಾಗಿ ಪರಿಣಮಿತು.

ನಿಜಕ್ಕೂ ಭಾನುವಾರ ನಡೆದದ್ದು ಸಖೇದಾಶ್ಚರ್ಯಗಳ ಸರಣಿ. ಟೂರ್ನಮೆಂಟ್‌ವುದ್ದಕ್ಕೂ ಆಡಿದ್ದ ತಿಲಕರತ್ನೆ ದಿಲ್‌ಶಾನ್‌ ಫೈನಲ್ ಪಂದ್ಯದಲ್ಲಿ ಒಂದೇ ಒಂದು ರನ್ ಮಾಡಲಾಗದಿದ್ದ ಕ್ಷಣದಲ್ಲೇ ಲಂಕಾಕ್ಕೆ ಸೋಲಿನ ಮುನ್ಸೂಚನೆ ದೊರೆತಂತಿತ್ತು. ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದವರು ಮೊಹಮ್ಮದ್ ಅಮೀರ್.
PTI

ಕೇವಲ ಐದು ಓವರುಗಳಲ್ಲಿ ಮತ್ತೆ ಮೂರು ಅಗ್ರ ಕ್ರಮಾಂಕದ ವಿಕೆಟ್‌ಗಳನ್ನು ಕಳೆದುಕೊಂಡಾಗ ಲಂಕಾ ತನ್ನ ಅವಸಾನವನ್ನು ಕಂಡುಕೊಂಡಾಗಿತ್ತು. ಸನತ್ ಜಯಸೂರ್ಯ (17), ಜೆಹಾನ್ ಮುಬಾರಕ್ (0) ಮತ್ತು ಮಹೇಲಾ ಜಯವರ್ಧನೆ (1)ಯವರನ್ನು ರಜಾಕ್ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಅಪಾಯಕಾರಿ ದಾಂಡಿಗರನ್ನು ಪಾಕ್ ನೀಗಿಸಿಕೊಂಡಿತ್ತು.

ಇವಿಷ್ಟು ಒತ್ತಡದ ನಡುವೆಯೂ ದಿಟ್ಟ ಪ್ರದರ್ಶನ ತೋರಿಸಿದ್ದು ನಾಯಕ ಕುಮಾರ ಸಂಗಕ್ಕರ. ಅವರು ಅಜೇಯ ಅರ್ಧಶತಕ (64) ಸಿಡಿಸಿ ತಂಡವನ್ನು ಆಧರಿಸಿದ್ದಾರೆ. 52 ಎಸೆತಗಳನ್ನೆದುರಿಸಿದ್ದ ಸಂಗಕ್ಕರ ಏಳು ಬೌಂಡರಿಗಳಿಗೆ ಕಾರಣರಾಗಿದ್ದರು.

ಅಂಜೆಲೋ ಮ್ಯಾಥ್ಯೂಸ್ 24 ಎಸೆತಗಳಿಂದ ಅಜೇಯ 35 ರನ್ ಗಳಿಸಿದರು. ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಅವರ ಇನ್ನಿಂಗ್ಸ್‌ನಿಂದ ಹೊರ ಬಂದಿತ್ತು.

ಚಾಮರ ಸಿಲ್ವಾ (14) ಮತ್ತು ಇಸುರು ಉದಾನ (1) ಕ್ರಮವಾಗಿ ಉಮರ್ ಗುಲ್ ಮತ್ತು ಶಾಹಿದ್ ಆಫ್ರಿದಿಗೆ ಬಲಿಯಾದರು. ಆರು ವಿಕೆಟ್ ಕಳೆದುಕೊಂಡಿದ್ದ ಲಂಕಾ ನಿಗದಿತ 20 ಓವರುಗಳಲ್ಲಿ 138 ರನ್ ಗಳಿಸಿತ್ತು.

ಸಂಗಕ್ಕರ ಹೊರತುಪಡಿಸಿ ಪ್ರಮುಖ ದಾಂಡಿಗರನ್ನು ಬೇಗನೆ ಔಟ್ ಮಾಡಲು ಯಶಸ್ವಿಯಾದ ಪಾಕಿಸ್ತಾನ ಆಗಲೇ ವಿಶ್ವಕಪ್ ಅರ್ಧ ಗೆದ್ದುಕೊಂಡಿತ್ತು. ಅದೇ ಉತ್ಸಾಹದಲ್ಲಿ ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಅಸ್ಪ್ರಶ್ಯ ರಾಷ್ಟ್ರವು 18.4 ಓವರುಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 139 ರನ್ ಗಳಿಸುವ ಮೂಲಕ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

ಆರಂಭಿಕ ಆಟಗಾರರಾದ ಕಮ್ರಾನ್ ಅಕ್ಮಲ್ 28 ಎಸೆತಗಳಿಂದ 37 ಹಾಗೂ ಶಾಹ್ಜೈಬ್ ಹಸನ್ 23 ಎಸೆತಗಳಿಂದ 19 ರನ್ ಮಾಡಿದ್ದಾಗ ಕ್ರಮವಾಗಿ ಜಯಸೂರ್ಯ ಹಾಗೂ ಮುರಳೀಧರನ್ ಬಲೆಗೆ ಬಿದ್ದಿದ್ದರು.
PTI

ನಂತರ ಮೊದಲೇ ಭರವಸೆ ನೀಡಿದಂತೆ ತಂಡವನ್ನು ಗೆಲುವಿನ ಗುರಿ ತಲುಪಿಸಿದ್ದು ಶಾಹಿದ್ ಆಫ್ರಿದಿ. ಅವರಿಗೆ ತಕ್ಕ ಸಾಥ್ ನೀಡಿದವರು ಶೋಯಿಬ್ ಮಲಿಕ್. ಲಂಕಾದ ಯಾವ ಬೌಲರ್‌ಗೂ ಇವರಿಬ್ಬರ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ ಆಫ್ರಿದಿ ನಂತರ ಸುರಕ್ಷಿತ ವಲಯದಲ್ಲಿದ್ದೇವೆ ಎಂಬುದನ್ನು ಮನಗಂಡು ಲಂಕಾ ಎಸೆತಗಳನ್ನು ದಂಡಿಸಲಾರಂಭಿಸಿದರು. ಸೆಮಿಫೈನಲ್‌ನಲ್ಲಿ ಅರ್ಧಶತಕಕ್ಕೆ ಕಾರಣರಾಗಿದ್ದ ಅವರು ಇಲ್ಲೂ ಅದನ್ನೇ ಪುನರಾವರ್ತಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ತನ್ನ ಇನ್ನಿಂಗ್ಸ್‌ನಲ್ಲಿ 40 ಎಸೆತಗಳನ್ನೆದುರಿಸಿದ್ದ ಆಫ್ರಿದಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಚಚ್ಚಿ 54 ರನ್ ಗಳಿಸಿದ್ದಾರೆ. ಶೋಯಿಬ್ ಮಲಿಕ್ 22 ಎಸೆತಗಳಿಂದ 24 ರನ್ ಮಾಡಿದ್ದರು.

ಗೆಲುವಿನ ಪ್ರದರ್ಶನ ನೀಡಿದ ಆಫ್ರಿದಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ಸಿಡಿದಿದ್ದ ತಿಲಕರತ್ನೆ ದಿಲ್‌ಶಾನ್ ಸರಣಿ ಶ್ರೇಷ್ಠರಾದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments