Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಉಪಾಂತ್ಯಕ್ಕೆ ಭಾರತ ತಂಡ

ಏಷ್ಯನ್ ಗೇಮ್ಸ್: ಉಪಾಂತ್ಯಕ್ಕೆ ಭಾರತ ತಂಡ
ಇಂಚೆನ್ , ಭಾನುವಾರ, 28 ಸೆಪ್ಟಂಬರ್ 2014 (17:41 IST)
ಭಾರತ ಪುರುಷರ ಹಾಕಿ ತಂಡ ಮಹತ್ವದ ಪಂದ್ಯದಲ್ಲಿ ಚೀನಾ ಎದುರು 2–0 ಗೋಲುಗಳಿಂದ ಗೆಲುವು ಪಡೆದು ಸೆಮಿಫೈನಲ್‌ ಪ್ರವೇಶಿಸಿದೆ.
 
ಪಂದ್ಯದ ಆರಂಭದಿಂದಲೂ ಭಾರಿ ಪೈಪೋಟಿ ಏರ್ಪಟ್ಟಿತು. ಮೊದಲ ಎರಡು ಕ್ವಾರ್ಟರ್‌ಗಳು ಮುಗಿದಾಗ ಯಾವ ತಂಡಗಳಿಂದಲೂ ಗೋಲು ಬಂದಿರಲಿಲ್ಲ. ಡ್ರ್ಯಾಗ್‌ಫ್ಲಿಕ್ಕರ್‌ ಪರಿಣತ ಕರ್ನಾಟಕದ ವಿ.ಆರ್‌. ರಘುನಾಥ್‌ 40ನೇ ನಿಮಿಷದಲ್ಲಿ ಮುನ್ನಡೆ ತಂದುಕೊಟ್ಟರು. ನಂತರದ ಐದೇ ನಿಮಿಷದಲ್ಲಿ ಮತ್ತೊಂದು ಗೋಲು ಭಾರತದ ಮಡಿಲು ಸೇರಿತು. ಬೀರೇಂದ್ರ ಲಾಕ್ರಾ (45ನೇ ನಿ.) ಇದಕ್ಕೆ ಕಾರಣರಾದರು.
 
ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನ ಹೊಂದಿರುವ ಸರ್ದಾರ್ ಸಿಂಗ್ ಸಾರಥ್ಯದ ಭಾರತ  ತಂಡ ಫಾರ್ವರ್ಡ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಎಡವಿತು. 27ನೇ ಕ್ರಮಾಂಕ ಹೊಂದಿರುವ ಚೀನಾದ ರಕ್ಷಣಾ ವಿಭಾಗ ಅಷ್ಟೊಂದು ಬಲಿಷ್ಠವಾಗಿರಲಿಲ್ಲ. ಆದರೂ, ಭಾರತಕ್ಕೆ  ಹೆಚ್ಚು ಗೋಲುಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ.
 
ಪಂದ್ಯದ 29ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿತ್ತು. ಆದರೆ, ರಘುನಾಥ್‌ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೊನೆಯ ಕ್ವಾರ್ಟರ್‌ನಲ್ಲಿ ಮೇಲಿಂದ ಮೇಲೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ರಘುನಾಥ್‌ ಕೈ ಚೆಲ್ಲಿದರು.  ಒಮನ್‌ ಎದುರಿನ ಪಂದ್ಯದ ವೇಳೆ ಡ್ರ್ಯಾಗ್‌ಫ್ಲಿಕ್ಕರ್‌ ರೂಪಿಂದರ್‌ಪಾಲ್‌ ಸಿಂಗ್‌ ಗಾಯಗೊಂಡಿರುವ ಕಾರಣ ಅವರ ಅನುಪಸ್ಥಿತಿ ಕಾಡಿತು.
 
ಚೀನಾ ತಂಡಕ್ಕೆ ಪಂದ್ಯದ 50ನೇ ನಿಮಿಷದಲ್ಲಿ ಒಂದು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತ್ತು. ಆದರೆ, ಭಾರತದ ಗೋಲ್‌ಕೀಪರ್‌ ಪಿ.ಆರ್‌. ರಾಜೇಶ್‌ ಎದುರಾಳಿ ತಂಡ ಗೋಲು ಗಳಿಸದಂತೆ ಎಚ್ಚರಿಕೆ ವಹಿಸಿದರು. ‘ಬಿ’ ಗುಂಪಿನಲ್ಲಿರುವ ಭಾರತ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯ ಎದುರು ಪೈಪೋಟಿ ನಡೆಸಲಿದೆ. ಇನ್ನೊಂದು ಪಂದ್ಯದಲ್ಲಿ  ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳು ಸೆಣಸಲಿವೆ.

Share this Story:

Follow Webdunia kannada