Select Your Language

Notifications

webdunia
webdunia
webdunia
webdunia

ಕಾನ್ಫೆಡರೇಷನ್ ಕಪ್: ಸ್ಪೇನ್ ತಂಡಕ್ಕೆ ಗೆಲುವು

ಕಾನ್ಫೆಡರೇಷನ್ ಕಪ್: ಸ್ಪೇನ್ ತಂಡಕ್ಕೆ ಗೆಲುವು
ರಿಯೊ ಡಿ ಜನೈರೊ , ಶನಿವಾರ, 22 ಜೂನ್ 2013 (14:45 IST)
PTI
ಫೆರ್ನಾಂಡೊ ಟೊರೆಸ್ ತಂದಿತ್ತ ನಾಲ್ಕು ಗೋಲುಗಳ ನೆರವಿನಿಂದ ತಾಹಿತಿ ತಂಡವನ್ನು ಸುಲಭವಾಗಿ ಮಣಿಸಿದ ಸ್ಪೇನ್ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಸಾಧ್ಯತೆಯನ್ನು ಹೆಚ್ಚುಕಡಿಮೆ ಖಚಿತಪಡಿಸಿಕೊಂಡಿತು.

ಮರಕಾನಾ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್ 10-0 ಗೋಲುಗಳ ದಾಖಲೆಯ ಜಯ ಸಾಧಿಸಿತು. ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ ಸ್ಪೇನ್ ಆರು ಪಾಯಿಂಟ್ ಕಲೆಹಾಕಿದರೆ, ತಾಹಿತಿ ಟೂರ್ನಿಯಿಂದ ಹೊರಬಿತ್ತು. ಚೆಲ್ಸೀ ತಂಡದ ಸ್ಟ್ರೈಕರ್ ಟೊರೆಸ್ ಪಂದ್ಯದ 5, 33, 57 ಮತ್ತು 78ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಡೇವಿಡ್ ವಿಲ್ಲಾ (39, 49 ಮತ್ತು 64) ಮೂರು ಗೋಲುಗಳನ್ನು ತಂದಿತ್ತರು. ಇತರ ಗೋಲುಗಳನ್ನು ಡೇವಿಡ್ ಸಿಲ್ವಾ (31, 89) ಹಾಗೂ ಜುವಾನ್ ಮಾಟಾ (66) ಗಳಿಸಿದರು.

ಟೊರೆಸ್ ಪಂದ್ಯದ ಐದನೇ ನಿಮಿಷದಲ್ಲಿ ಗೋಲು ಗಳಿಸಿದರು. ಮುಂದಿನ 25 ನಿಮಿಷಗಳ ಕಾಲ ತಾಹಿತಿ ಆಟಗಾರರು ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಆ ಬಳಿಕ ಪೂರ್ಣ ಪ್ರಭುತ್ವ ಸಾಧಿಸಿದ ಸ್ಪೇನ್ ಗೋಲಿನ ಮಳೆಯನ್ನೇ ಸುರಿಸಿತು. ವಿಶ್ವಚಾಂಪಿಯನ್ನರು ವಿರಾಮದ ವೇಳೆಗೆ 4-0 ಗೋಲುಗಳ ಮುನ್ನಡೆ ಸಾಧಿಸಿದ್ದರು.

ಫಿಫಾ ಟೂರ್ನಿಯಲ್ಲಿ (ಫೈನಲ್ ಹಂತ) ತಂಡವೊಂದು ಪಡೆದ ಅತಿದೊಡ್ಡ ಗೆಲುವು ಇದಾಗಿದೆ. 1954ರ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಹಂಗೇರಿ (9-0), 1982ರ ವಿಶ್ವಕಪ್‌ನಲ್ಲಿ ಎಲ್ ಸಾಲ್ವಡರ್ ಎದುರು ಹಂಗೇರಿ (10-1) ಹಾಗೂ 1974ರ ವಿಶ್ವಕಪ್‌ನಲ್ಲಿ ಜೈರ್ ಎದುರು ಯುಗೊಸ್ಲಾವಿಯಾ (9-0) ಪಡೆದ ಗೆಲುವಿನ ದಾಖಲೆಗಳನ್ನು ಸ್ಪೇನ್ ಮುರಿದಿದೆ.

ಉರುಗ್ವೆಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ಡಿಯಾಗೊ ಫೋರ್ಲಾನ್ ಎರಡನೇ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಉರುಗ್ವೆ ತಂಡ ನೈಜೀರಿಯಾ ವಿರುದ್ಧ 2-1ರಲ್ಲಿ ರೋಚಕ ಗೆಲುವು ಪಡೆಯಿತು. ಅರೆನಾ ಫಾಂಟೆ ನೋವಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 19ನೇ ನಿಮಿಷದಲ್ಲಿ ಡಿಯಾಗೊ ಲುಗಾನೊ ಉರುಗ್ವೆಗೆ ಮುನ್ನಡೆ ತಂದಿತ್ತರೆ, ನೈಜೀರಿಯದ ಜಾನ್ ಒಬಿ ಮೈಕೆಲ್ 37ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು.

ಎರಡನೇ ಅವಧಿಯ 51ನೇ ನಿಮಿಷದಲ್ಲಿ ಫೋರ್ಲಾನ್ ಗೋಲು ಗಳಿಸಿ ಉರುಗ್ವೆ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಅಂಗಳದ ಮಧ್ಯಭಾಗದಲ್ಲಿ ಚೆಂಡನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡ ಲೂಯಿಸ್ ಸೊರೇಜ್ ಅದನ್ನು ಕವಾನಿಗೆ ಪಾಸ್ ಮಾಡಿದರು. ಕವಾನಿ ತಕ್ಷಣ ಚೆಂಡನ್ನು ಫೋರ್ಲಾನ್ ಅವರತ್ತ ಒದ್ದರು. ಎದುರಾಳಿ ರಕ್ಷಣಾ ಆಟಗಾರರು ಧಾವಿಸುವ ಮುನ್ನವೇ ಫೋರ್ಲಾನ್ ಚೆಂಡನ್ನು ತಮ್ಮ ಎಡಗಾಲಿನಿಂದ ಒದ್ದು ನೆಟ್‌ನೊಳಕ್ಕೆ ಕಳುಹಿಸಿದರು.

ನೈಜೀರಿಯಾ ಗೋಲ್‌ಕೀಪರ್ ವಿನ್ಸೆಂಟ್ ಎನ್ಯೆಮ ಮೇಲಕ್ಕೆ ನೆಗೆದರಾದರೂ, ಚೆಂಡನ್ನು ತಡೆಯಲು ವಿಫಲರಾದರು. ಫೋರ್ಲಾನ್‌ಗೆ ಇದು 100ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲಿ ಸ್ಪೇನ್ ಕೈಯಲ್ಲಿ ಸೋಲು ಅನುಭವಿಸಿದ್ದ ಉರುಗ್ವೆ ಈ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಕೋಪಾ ಅಮೆರಿಕಾ ಚಾಂಪಿಯನ್ನರು ಭಾನುವಾರ ನಡೆಯುವ ಪಂದ್ಯದಲ್ಲಿ ತಾಹಿತಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಇದರಲ್ಲಿ ಗೆಲುವು ಪಡೆಯುವುದು ಅನಿವಾರ್ಯ. ಅದೇ ರೀತಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್ ತಂಡ ನೈಜೀರಿಯಾವನ್ನು ಮಣಿಸಬೇಕು. ಉರುಗ್ವೆ ಮತ್ತು ನೈಜೀರಿಯಾ ತಲಾ ಮೂರು ಪಾಯಿಂಟ್ ಹೊಂದಿವೆ.

Share this Story:

Follow Webdunia kannada