Select Your Language

Notifications

webdunia
webdunia
webdunia
webdunia

ಜನ್ಮಭೂಮಿ, ಕರ್ಮಭೂಮಿಗೆ ನಿಷ್ಠೆ: ಯಡಿಯೂರಪ್ಪ

ಜನ್ಮಭೂಮಿ, ಕರ್ಮಭೂಮಿಗೆ ನಿಷ್ಠೆ: ಯಡಿಯೂರಪ್ಪ
ಚೆನ್ನೈ , ಗುರುವಾರ, 13 ಆಗಸ್ಟ್ 2009 (21:10 IST)
WD
WD
ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕೆಲವೊಂದು ವಿವಾದಗಳಿರುವುದು ನಿಜ. ಅದನ್ನು ಮಾತುಕತೆ ಮೂಲಕ ಪರಿಹರಿಸಿ ಕೊಳ್ಳುತ್ತೇವೆ. ಪರಸ್ಪರ ಕೊಡು-ಕೊಳ್ಳುವಿಕೆಯ ನೀತಿಯಿಂದ ವಿವಾದವನ್ನು ಪರಿಹರಿಸಿ ಕೊಳ್ಳಬಹುದಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಜನ್ಮಭೂಮಿ ಮತ್ತು ಕರ್ಮಭೂಮಿಗೆ ನಿಷ್ಠರಾಗಿ ಇರಬೇಕಾದುದು ಧರ್ಮ. ಹೀಗಾಗಿ ಕರ್ನಾಟಕದಲ್ಲಿರುವ ತಮಿಳು ಭಾಷಿಗರು, ತಮಿಳುನಾಡಿನಲ್ಲಿ ಇರುವ ಕನ್ನಡಿಗರು ಈ ರೀತಿ ನಡೆದುಕೊಳ್ಳುವುದರಿಂದ ಭ್ರಾತೃತ್ವ, ಸೌಹಾರ್ದತೆ ಬೆಳೆಯುವುದು ಸಾಧ್ಯ ಎಂದು ಹೇಳಿದರು.

ಗುರುವಾರ ಚೆನ್ನೈನ ಅಯನಾವರಂನಲ್ಲಿರುವ ಜೀವಾ ಪಾರ್ಕ್‌ನಲ್ಲಿ ಕನ್ನಡ ಸಂತ ಕವಿ ಸರ್ವಜ್ಞನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಐಸಿಎಫ್ ಮೈದಾನದಲ್ಲಿ ಐತಿಹಾಸಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯಗಳು ಸಹಜ, ಪರಸ್ಪರ ವಿಶ್ವಾಸ ಮತ್ತು ವಿಚಾರ ವಿನಿಮಯದಿಂದ ಅದನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ತಮಿಳ್ನಾಡಿನಲ್ಲಿ ತನಗೆ ನೀಡಿರುವ ಅದ್ಧೂರಿಯ ಸ್ವಾಗತದಿಂದ ಸಂತಸಗೊಂಡಿದ್ದೇನೆ ಎಂದು ನುಡಿದ ಮುಖ್ಯಮಂತ್ರಿಗಳು, ತಮಿಳುನಾಡು ಮತ್ತು ಕರ್ನಾಟಕದ ವಿವೇಕಯುತ ತೀರ್ಮಾನದಿಂದ ಉಭಯ ರಾಜ್ಯಗಳಲ್ಲಿ ಸ್ನೇಹ ಉತ್ತಮಗೊಳ್ಳಲಿದೆ. ನಮ್ಮ ನಡುವೆ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ. ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣ ಮಾಡುವುದಕ್ಕೆ ಕರುಣಾನಿಧಿ ಅವರು ನಿರ್ಧರಿಸಿದ್ದು, ಮಹತ್ವದ ತೀರ್ಮಾನ ಬದ್ಧತೆಯ ಕಾರ್ಯವಾಗಿದೆ ಎಂದವರು ಈ ಸಂದರ್ಭದಲ್ಲಿ ನುಡಿದರು.

ಒಂದೇ ತಾಯಿಯ ಮಕ್ಕಳಾದ ನಮ್ಮಲ್ಲಿ ವಿಭಿನ್ನ ನಿಲುವು, ಬೇರೆ ಬೇರೆ ವಿಚಾರಗಳು ಇರುವುದು ಸಹಜ, ಮತ್ತು ಪ್ರಕೃತಿಯ ನಿಯಮವೂ ಆಗಿದೆ. ಆದರೆ, ಅವುಗಳನ್ನು ನಾವುಗಳು ಸ್ನೇಹ ಮತ್ತು ಪ್ರೀತಿಯಿಂದ ಬಗೆಹರಿಸಿಕೊಳ್ಳೋಣ. ದಕ್ಷಿಣ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರಾಜ್ಯದ ಮುಖ್ಯಮಂತ್ರಿಗಳು ಒಂದಡೆ ಕಲೆತು ಸಮಸ್ಯೆಗಳ ನಿವಾರಣೆ ಕುರಿತು ಚರ್ಚಿಸೋಣ. ಇದಕ್ಕಾಗಿ ಅರಿವು ಕಮ್ಮಟಗಳನ್ನು ಆಯೋಜಿಸೋಣ. ಇದಕ್ಕೆ ಕರ್ನಾಟಕ ಉತ್ಸುಕವಾಗಿದ್ದು, ನನ್ನ ಹಿರಿಯಣ್ಣ ಕಲೈಂಜರ್ ಕರುಣಾನಿಧಿ ಸಮ್ಮತಿಸುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಯಡಿಯೂರಪ್ಪ ನುಡಿದರು.

ಜಾಗತಿಕವಾಗಿ ಭಯೋತ್ಪಾದನೆಯು ಹೆಮ್ಮಾರಿಯಾಗಿ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ಪರಸ್ಪರ ಸೌಹಾರ್ದ ಸುಧಾರಣೆಯ ಕಾರ್ಯ ಆಗಬೇಕಿದೆ. ಈ ಮಾದರಿಯ ಕಾರ್ಯಕ್ರಮಗಳು ಪರಸ್ಪರ ನಂಬಿಕೆ, ತಿಳಿವಳಿಕೆ ಹೆಚ್ಚಲು ಪೂರಕವಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ದಕ್ಷಿಣದ 4 ಮಹಾ ದಾರ್ಶನಿಕರ ವಿಚಾರ ಸಂಕಿರಣ:
ದಕ್ಷಿಣ ಭಾರತದ ನಾಲ್ವರು ಮಹಾನ್ ದಾರ್ಶನಿಕರಾದ ಕನ್ನಡದ ಸರ್ವಜ್ಞ, ತಮಿಳುನಾಡಿನ ತಿರುವಳ್ಳುವರ್, ತೆಲುಗಿನ ವೇಮನ ಮತ್ತು ಮಲಯಾಳದ ನಾರಾಯಣ ಗುರುಗಳ ಸಂದೇಶಗಳನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಅವರ ವಿಚಾರ ಧಾರೆಗಳ ಕುರಿತು ಬೆಂಗಳೂರಿನಲ್ಲಿ ವಿಚಾರ ಸಂಕಿರಣವೊಂದನ್ನು ಆಯೋಜಿಸಲಾಗುತ್ತದೆ ಎಂದೂ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಪೆರಿಯಣ್ಣ ಕರುಣಾನಿಧಿ:
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ನನ್ನನ್ನು ಚಿನ್ನ ತಂಬಿ (ಕಿರಿಯ ಸೋದರ) ಎಂದು ಕರೆದಿದ್ದಾರೆ. ಎರಡು ವರ್ಷಗಳ ಹಿಂದೆ ನನ್ನ ಅಣ್ಣನನ್ನು ಕಳೆದುಕೊಂಡಿದ್ದ ನನಗೆ ಕರುಣಾನಿಧಿ ಹಿರಿಯ ಸದೋರನಿದ್ದಂತೆ. ಜ್ಞಾನವೃದ್ಧರಾಗಿರುವ ಹಿರಿಯ ಮುತ್ಸದ್ದಿ ಪೆರಿಯಣ್ಣನಿಗೆ ನನ್ನ ಪ್ರೀತಿ ಪೂರ್ವಕ ವಂದನೆ ಅಭಿನಂದನೆಗಳು ಎಂದು ಯಡಿಯೂರಪ್ಪ ಭಾವ ತುಂಬಿ ನುಡಿದರು.

ತಿರುವಳ್ಳುವರ್ ಅವರ ದ್ವಿಪದಿಯನ್ನು ಉಲ್ಲೇಖಿಸಿದ ಅವರು ತಿರುವಳ್ಳುವರ್ ಅವರು ತಮಿಳು ಕವಿ ಮಾತ್ರವಲ್ಲ ಅವರು ರಾಷ್ಟ್ರದ ಕವಿ. ತಿರುವಳ್ಳುವರ್ ಹಾಗೂ ಸರ್ವಜ್ಢನ ಪ್ರವಚನಗಳು ವಿಶ್ವಕ್ಕೆ ಮಾದರಿ. ವಿಶ್ವಮಾನವತ್ವ ಪ್ರತಿಪಾದಿಸಿರುವ ಈ ಇಬ್ಬರು ಜ್ಞಾನಿಗಳ ಪ್ರತಿಮೆ ಅನಾವರಣ ಮೂಲಕ ಐತಿಹಾಸಿಕ ಬೆಳವಣಿಗೆಗೆ ನಾವು ನಾಂದಿ ಹಾಡಿದ್ದೇವೆ. ಕಳೆದ 18 ವರ್ಷದಿಂದ ಕಗ್ಗಾಂಟಾಗಿದ್ದ ಪ್ರತಿಮೆಗಳ ಅನಾವರಣದ ಕ್ಲಿಷ್ಟ ಸಮಸ್ಯೆಯನ್ನು ಪ್ರಸಕ್ತ ಬಗೆಹರಿಸಿರುವ ರೀತಿ ಇತರರಿಗೆ ಕಣ್ಣು ತೆರೆಸುವಂತದ್ದು ಮತ್ತು ಯಾವುದೇ ಸಮಸ್ಯೆಗಳ ನಿವಾರಣೆಗೆ ಸಿದ್ಧ ಮಾದರಿಯಾಗಿದೆ ಎಂದು ಯಡಿಯೂರಪ್ಪ ನುಡಿದರು.

ಪ್ರಧಾನಿ ಹಾಗೂ ರಾಷ್ಟ್ರಪತಿಗಳವರೆಗೆ ತಲುಪಿದ್ದ ಪ್ರತಿಮೆಗಳ ಅನಾವರಣದ ಸಮಸ್ಯೆಗೆ ನಮ್ಮಿಂದಲೇ ಪರಿಹಾರ ಲಭಿಸಿರುವುದು ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಗಿದೆ. ಇದಕ್ಕೆ ಎರಡೂ ರಾಜ್ಯಗಳ ಜನಸಾಕ್ಷಿಯಾಗಿದ್ದಾರೆ. ಎರಡೂ ಸರ್ಕಾರಗಳ ವಿವೇಕಯುತ ನಿರ್ಣಯಕ್ಕೆ ಒಮ್ಮತದ ಸಮ್ಮತಿಯ ಮುದ್ರೆ ಒತ್ತಿದ್ದಾರೆ. ಇಚ್ಛಾಶಕ್ತಿ ಮತ್ತು ಬದ್ಧತೆ ತೋರುವ ನಾಯಕತ್ವಕ್ಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಮನ್ನಣೆ ಶತಸಿದ್ಧ ಎಂಬುದಕ್ಕೆ ಈ ಕಾರ್ಯಕ್ರಮ ಒಂದು ಅತ್ಯುತ್ತಮ ಉದಾಹರಣೆ ಎಂದಿದ್ದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಡಾ.ವಿ.ಎಸ್.ಆಚಾರ್ಯ, ಸ್ನೇಹ ಸಂಘ ಅಧ್ಯಕ್ಷ ಅಟ್ಟಾವರ ರಾಮದಾಸ್ ಆಶಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ತಮಿಳು ಚಿತ್ರತಾರೆಯರಾದ ಬಿ. ಸರೋಜಾದೇವಿ, ಜಯಂತಿ, ರಜನಿಕಾಂತ್, ಕಮಲಹಾಸನ್, ಪ್ರಕಾಶ್ ರೈ, ಪೂಜಾಗಾಂಧಿ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಹಾಗೂ ತಮಿಳಿನ ಹಿರಿಯ ಸಾಹಿತಿಗಳು ಹಾಗೂ ಪಂಡಿತರೂ ಸಹ ಆಗಮಿಸಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

Share this Story:

Follow Webdunia kannada