Select Your Language

Notifications

webdunia
webdunia
webdunia
webdunia

2011 ಹಿನ್ನೋಟ; ಗವರ್ನರ್ ಮುಖಭಂಗ, ವರದಿ ಸ್ಫೋಟ-ಯಡ್ಡಿ ತಲೆದಂಡ

2011 ಹಿನ್ನೋಟ; ಗವರ್ನರ್ ಮುಖಭಂಗ, ವರದಿ ಸ್ಫೋಟ-ಯಡ್ಡಿ ತಲೆದಂಡ
, ಮಂಗಳವಾರ, 20 ನವೆಂಬರ್ 2012 (15:04 IST)
2011 ನೋಡ, ನೋಡುತ್ತಿದ್ದಂತೆಯೇ ಹಿಂದೆ ಸರಿಯತೊಡಗಿದ್ದು, ಇನ್ನೇನು 2012ಕ್ಕೆ ಕಾಲಿಡಲು ದಿನಗಣನೆ ಆರಂಭವಾಗಿದೆ. ಅಬ್ಬಾ...ಅದೆಷ್ಟು ಬೇಗ ಒಂದು ವರ್ಷ ಜಾರಿ ಹೋಯಿತು ಎಂಬ ಉದ್ಘಾರ ಹೊರಬರುವುದು ಸಹಜ. ಆದರೆ ಕಳೆದುಹೋಗುತ್ತಿರುವ ವರ್ಷದ ಕುರಿತು ಒಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ ರಾಜ್ಯ ರಾಜಕೀಯದಲ್ಲಿ ಹುಟ್ಟಿಸಿದ ವಿವಾದ, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ನೇರ ಜಂಗೀಕುಸ್ತಿಗೆ ಇಳಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸು, ಕೇಂದ್ರದ ತಿರಸ್ಕಾರ, ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ, ಎಫ್ಐಆರ್ ದಾಖಲು, ಸರ್ಕಾರ ಹಾಗೂ ಹಾಲಿ ಮತ್ತು ಮಾಜಿ ಸಿಎಂ, ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ ಲೋಕಾಯುಕ್ತ ಅಕ್ರಮ ಗಣಿ ವರದಿ, ಯಡಿಯೂರಪ್ಪ ತಲೆದಂಡ, ಆಣೆ ಪ್ರಮಾಣ, ಡಿನೋಟಿಫಿಕೇಷನ್ ಹಗರಣ, ಜೈಲುಯಾತ್ರೆ...ಹೀಗೆ ಹತ್ತು ಹಲವು ಪ್ರಮುಖ ಘಟನಾವಳಿಗಳು...

ಹೀರೋ ಆಗಲು ಹೋಗಿ ವಿಲನ್ ಆದ ಗವರ್ನರ್:
2011ರಲ್ಲಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ ಎರಡು ಪ್ರಮುಖ ಘಟನೆಗಳೆಂದರೆ ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಲ್ಲಿಂದ ರಾಜಭವನ ಮತ್ತು ಆಡಳಿತರೂಢ ಬಿಜೆಪಿ ನಡುವೆ ಮೊದಲ ವಾರ್ ಆರಂಭಗೊಂಡಿತ್ತು. ತದನಂತರ ನ್ಯಾ.ಸಂತೋಷ್ ಹೆಗ್ಡೆಯವರು ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸಲ್ಲಿಸಿದ ಅಂತಿಮ ವರದಿ.

ಮಾ.10ರಂದು ಬಿಜೆಪಿ 11 ಮಂದಿ ಹಾಗೂ ಪಕ್ಷೇತರ ಐವರು ಶಾಸಕರು ಸರ್ಕಾರಕ್ಕೆ ತಮ್ಮ ಬೆಂಬಲ ವಾಪಸ್ ಪಡೆದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ರಾಜ್ಯಾಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿತ್ತು.

ಕೇಂದ್ರ ರಾಜ್ಯಪಾಲರಿಗೆ ಖಡಕ್ ಸಂದೇಶ ರವಾನಿಸಿ ಮತ್ತೊಮ್ಮೆ ಬಹುಮತ ಸೂಚಿಸಲು ಯಡಿಯೂರಪ್ಪಗೆ ಅವಕಾಶ ಕೊಡಿ ಎಂದಿತ್ತು. ಅದರಂತೆ ರಾಜ್ಯಪಾಲರು ಅವಕಾಶ ಕೊಟ್ಟಾಗ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದರು. ಇದರಿಂದ ಕೇಂದ್ರ ಸರ್ಕಾರ ರಾಜ್ಯಪಾಲರ ಶಿಫಾರಸು ತಿರಸ್ಕರಿಸಿತ್ತು.

ಏತನ್ಮಧ್ಯೆ ಬಿಜೆಪಿ ಮತ್ತು ಐವರು ಪಕ್ಷೇತರರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದಾಗ ಯಡಿಯೂರಪ್ಪ ಮತ್ತು ಗವರ್ನರ್ ವಿರುದ್ಧ ಮತ್ತೊಂದು ಸುತ್ತಿನ ಸಮರ ಆರಂಭವಾಗಿತ್ತು. ಅನರ್ಹತೆ ರದ್ದುಗೊಂಡ ಶಾಸಕರ ಪೈಕಿ 11 ಮಂದಿ ಬಿಜೆಪಿಗೆ ತಮ್ಮ ಬೆಂಬಲವಿರುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಲು ರಾಜಭವನಕ್ಕೆ ತೆರಳಿದ್ದರು. ಆದರೆ ಈ ಶಾಸಕರನ್ನು ರಾಜಭವನದೊಳಗೆ ಬಿಟ್ಟುಕೊಳ್ಳದೆ ವಿವಾದ ಸೃಷ್ಟಿಸಿಕೊಂಡಿದ್ದರು. ಅಷ್ಟೇ ಅಲ್ಲ ಈ ಪತ್ರವನ್ನು ಪರಿಗಣಿಸದೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಈ ಬಾರಿಯೂ ರಾಜ್ಯಪಾಲರ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಹೀಗೆ ರಾಜ್ಯಪಾಲರು ಎರಡು ಬಾರಿ ಮುಖಭಂಗಕ್ಕೀಡಾಗಿದ್ದರು.

ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಅವರು ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಅಂತೂ ತಾನು ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದ್ದು, ನನಗೇನು ಮಾಡಬೇಕೆಂದು ಗೊತ್ತಿದೆ ಎನ್ನುತ್ತಲೇ ಜನವರಿ 21ರಂದು ರಾತ್ರಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಅದರ ಬೆನ್ನಲ್ಲೇ ಲೋಕಾಯುಕ್ತ ವಿಶೇಷ ಕೋರ್ಟ್ ನಲ್ಲಿ ಎರಡು ಮೊಕದ್ದಮೆ ದಾಖಲಾಗುವ ಮೂಲಕ ಯಡಿಯೂರಪ್ಪ ಅಡಕತ್ತರಿಯಲ್ಲಿ ಸಿಲುಕಿಬಿಟ್ಟಿದ್ದರು.

ನಂತರ ರಾಜ್ಯಪಾಲರ ವಿರುದ್ಧ ಆಕ್ರೋಶ, ಅಧಿಕಾರರೂಢ ಬಿಜೆಪಿಯಿಂದಲೇ ರಾಜ್ ಬಂದ್ ಗೆ ಕರೆ, ಆಟೋ ರಿಕ್ಷಾಗಳಿಗೆ ಬೆಂಕಿ, ಗಲಾಟೆ ನಡೆದಿತ್ತು. ನಂತರ ದಾಖಲೆ ತೋರಿಸಿದ್ರೆ 24 ಗಂಟೆಯೊಳಗೆ ರಾಜೀನಾಮೆ ಕೊಡುವುದಾಗಿ ಯಡಿಯೂರಪ್ಪ ಸವಾಲ್, ಗೌಡರು ಹಾಗೂ ಕುಟುಂಬದ ವಿರುದ್ಧ ವಾಗ್ದಾಳಿ.

ಲೋಕಾಯುಕ್ತ ವರದಿ ಸ್ಫೋಟಕ್ಕೆ ಯಡಿಯೂರಪ್ಪ ತಲೆದಂಡ:
ಭ್ರಷ್ಟಾಚಾರ, ಸ್ವಜನಪಕ್ಷಪಾತ ಆರೋಪದಡಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಯಡಿಯೂರಪ್ಪನವರಿಗೆ ಆಘಾತ ತಂದೊಡ್ಡಿದ್ದು ಲೋಕಾಯುಕ್ತರ ಗಣಿ ವರದಿ. ವಿಶೇಷ ಏನಪ್ಪಾ ಅಂದ್ರೆ ನ್ಯಾ.ಹೆಗ್ಡೆ ವರದಿ ಸರ್ಕಾರಕ್ಕೆ ಸಲ್ಲಿಸುವ ಮೊದಲೇ ಟೈಮ್ಸ್ ನೌ ಚಾನೆಲ್ ವರದಿಯಲ್ಲಿನ ಸ್ಫೋಟಕ ಅಂಶವನ್ನು ಬಟಾಬಯಲು ಮಾಡುವ ಮೂಲಕ ರಾದ್ದಾಂತ ಸೃಷ್ಟಿಸಿತ್ತು. ಇದರಿಂದ ಲೋಕಾಯುಕ್ತರ ಮೇಲೆ ಗೂಬೆ, ವರದಿ ಸೋರಿಕೆ ಹಿಂದೆ ಕೈವಾಡದ ಆರೋಪ, ಬಿಜೆಪಿ ಕಿಡಿ...ಹೀಗೆ ಹಲವು ಬೆಳವಣಿಗೆ ನಡೆದಿತ್ತು. ನಂತರ ಲೋಕಾಯುಕ್ತರು ಗಣಿ ವರದಿಯನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸಿದ್ದರು. ಅದರಲ್ಲಿ ಹಾಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಸೋಮಣ್ಣ, ರೆಡ್ಡಿ ಸಹೋದರರು, ಶ್ರೀರಾಮುಲು ಹೆಸರು ಉಲ್ಲೇಖವಾಗಿತ್ತು.

ಪ್ರತಿಪಕ್ಷಗಳ ಕೂಗಾಟ, ಒತ್ತಡದಿಂದ ಕಂಗೆಟ್ಟ ಬಿಜೆಪಿ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಗಾದಿ ಬಿಡುವಂತೆ ಜು.28ರಂದು ಸೂಚನೆ. ರಾಜಿನಾಮೆ ವಿಚಾರದಲ್ಲಿ ಕಿಡಿಕಿಡಿಯಾದ ಯಡಿಯೂರಪ್ಪ ಸಾಕಷ್ಟು ಒತ್ತಡ ತಂತ್ರ, ನಾಟಕ, ಬಲಪ್ರದರ್ಶನ ಎಲ್ಲಾ ಮಾಡಿದ್ದರು. ಅಂತೂ ಕೊನೆಗೂ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಿಗೆ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಮುಖ್ಯಮಂತ್ರಿ ಗದ್ದುಗೆ ಏರಿದ್ದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸುವ ಮುನ್ನ ಭ್ರಷ್ಟಾಚಾರದ ಆರೋಪದ ಸುಳಿಗೆ ಸಿಕ್ಕು ರಾಜೀನಾಮೆ ಕೊಟ್ಟಿದ್ದರು.

ರಾಜೀನಾಮೆ ಕೊಟ್ಟ ನಂತರ ಬಿಜೆಪಿಯಲ್ಲಿ ನಡೆದ ರಾಜಕೀಯ ಕಸರತ್ತು ಮಾತ್ರ ಅಸಹ್ಯ ಹುಟ್ಟಿಸುವಂತೆ ಮಾಡಿತ್ತು. ಲಿಂಗಾಯಿತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಕೊಡಬಾರದೆಂಬ ಪಟ್ಟು ಯಡಿಯೂರಪ್ಪನವರದ್ದು, ಶೆಟ್ಟರ್ ಅವರಿಗೆ ಕೊಡಬೇಕೆಂದು ಈಶ್ವರಪ್ಪ ಬಣದ ಪಟ್ಟು. ಉಭಯ ಬಣಗಳ ರಾಜಕೀಯ ತಿಕ್ಕಾಟಕ್ಕೆ ನಾಂದಿ ಹಾಡಲು ಬಿಜೆಪಿ ಹೈಕಮಾಂಡ್ ತನ್ನ ಇದ್ದಬದ್ದ ಯುಕ್ತಿಯನ್ನೆಲ್ಲಾ ಖರ್ಚು ಮಾಡಿತ್ತು. ಹೈಕಮಾಂಡ್ ಫರ್ಮಾನಿಗೆ ತೆಪ್ಪಗಾದ ಬಣಗಳು ಒಕ್ಕಲಿಗ ಸಮುದಾಯದ ಸದಾನಂದ ಗೌಡರಿಗೆ ಪಟ್ಟ ಕಟ್ಟಲು ನಿರ್ಧಾರ, ಅದಕ್ಕೆ ಚುನಾವಣೆ, ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದ ಸದಾನಂದ ಗೌಡರು ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು 2011ರ ಹೈಲೈಟ್. ಜತೆಗೆ ತಾನು ಆರು ತಿಂಗಳಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾಗಿ, ಮತ್ತೆ ಮುಖ್ಯಮಂತ್ರಿಗಾದಿ ಏರುತ್ತೇನೆ ಎಂದು ಯಡಿಯೂರಪ್ಪ ಆ ಸಂದರ್ಭದಲ್ಲಿ ಘೋಷಿಸಿದ್ದರು. ಅದರಂತೆ ಯಡಿಯೂರಪ್ಪನವರ ಚಾಣಕ್ಯ ತಂತ್ರಗಾರಿಕೆ ಸಶೇಷ....2012ಕ್ಕೂ ಮುಂದುವರಿಯಲಿದೆ....

Share this Story:

Follow Webdunia kannada