Select Your Language

Notifications

webdunia
webdunia
webdunia
webdunia

ಬಡವಾದ ಗಾಂಧಿನಗರ: ಈ ವರ್ಷದಲ್ಲಿ ಎದ್ದದ್ದೆಷ್ಟು? ಬಿದ್ದದ್ದೆಷ್ಟು?!

ಬಡವಾದ ಗಾಂಧಿನಗರ: ಈ ವರ್ಷದಲ್ಲಿ ಎದ್ದದ್ದೆಷ್ಟು? ಬಿದ್ದದ್ದೆಷ್ಟು?!
ರಾಧಿಕಾ ವಿಟ್ಲ

ಬಿಡುಗಡೆಯಾಗಿದ್ದು 100ಕ್ಕೂ ಹೆಚ್ಚು ಚಿತ್ರಗಳು. ಆದರೆ ಪ್ರೇಕ್ಷಕರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡು ಶತದಿನಗಳ ಸಂಭ್ರಮ ಆಚರಿಸಿದ್ದು, ಬೆರಳೆಣಿಕೆಯಷ್ಟು! ಅದೂ ಕೇವಲ ಒಂದಂಕಿ!!! ಹಾಗಾದರೆ, 100 ಚಿತ್ರಗಳನ್ನು ಬಿಡುಗಡೆ ಮಾಡಿದ್ದೇ ಕನ್ನಡದ ಸಾಧನೆಯೆನ್ನೋಣವೇ? ಅಥವಾ ಚಿತ್ರರಂಗ 75 ವರ್ಷಗಳ ಅವಧಿಯನ್ನು ಪೂರೈಸಿದ್ದೇ ಮಹಾನ್ ಹಿರಿಮೆಯೆನ್ನೋಣವೇ? 2009ರಲ್ಲಿ ಕನ್ನಡ ಚಿತ್ರರಂಗದ ಏಳುಬೀಳುಗಳನ್ನು ಬಣ್ಣಿಸಲು ತುಸು ಕಷ್ಟ. ಯಾಕೆಂದರೆ ಬಿದ್ದದ್ದೇ ಹೆಚ್ಚು, ಎದ್ದದ್ದು ಕಡಿಮೆ.

MOKSHA
ಹೌದು. ರಾಜ್ಯೋತ್ಸವಕ್ಕೆ ಡಾ.ರಾಜ್ ಕುಮಾರ್ ಅಂಚೆಚೀಟಿ ಬಿಡುಗಡೆ, ಗುಲಾಬಿ ಟಾಕೀಸ್ ಅಭಿನಯಕ್ಕೆ ಉಮಾಶ್ರೀಗೆ ಶ್ರೇಷ್ಠ ನಟಿ ರಾಷ್ಟ್ರಪ್ರಶಸ್ತಿ, ಕನ್ನಡದವರೇ ಆದ ಪ್ರಕಾಶ್ ರೈ ಅವರ ತಮಿಳು ಚಿತ್ರ ಕಾಂಜೀವರಂಗೆ ಶ್ರೇಷ್ಠ ನಟ ರಾಷ್ಟ್ರಪ್ರಶಸ್ತಿಯ ಗರಿಮೆ, ಚಿತ್ರರಂಗ 75 ವರ್ಷಗಳನ್ನೂ ಪೂರೈಸಿದ ಸಂಭ್ರಮ, ಇದೇ ಅಮೃತ ಮಹೋತ್ಸವದ ನೆನಪಿನಲ್ಲಿ 75 ಸಿನಿರಂಗದ ಗಣ್ಯರ ಪುಸ್ತಕ ಬಿಡುಗಡೆ, ಚಲನಚಿತ್ರ ಅಕಾಡೆಮಿಯ ಸ್ಥಾಪನೆ, 18 ಗಂಟೆಗಳ ಅವಧಿಯಲ್ಲಿ ಸುಗ್ರೀವ ಚಿತ್ರ ನಿರ್ಮಾಣದ ದಾಖಲೆ, ರೂಪಾ ಅಯ್ಯರ್ ಅವರ ಮುಖಪುಟ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಹೀಗೆ ಚಿತ್ರರಂಗದ ಬೆಳ್ಳಿ ಕಿರೀಟಕ್ಕೆ ಚಿನ್ನದ ನವಿಲುಗರಿಯನ್ನು ಮುಡಿಸಬಲ್ಲ ಕ್ಷಣಗಳೂ ಇವೆ. ಆದರೆ, ಇದೇ ಸಂದರ್ಭ ಬಿಡುಗಡೆಯಾದ ಚಿತ್ರಗಳಲ್ಲಿ ಬೆಳಕಿಗೆ ಬಂದವುಗಳೆಷ್ಟು?, ಬೆಳಕಿಗೆ ಬಂದರೂ ಮೇಲೆದ್ದಿದ್ದೆಷ್ಟು?, ಮೇಲೆದ್ದರೂ ಓಡಿದ್ದೆಷ್ಟು? ಎಂದು ಲೆಕ್ಕ ಹಾಕುವಾಗ ಮುಖ ಬಾಡುತ್ತವೆ. ತಲೆ ತಗ್ಗುತ್ತವೆ.

ಹೌದು, ಒಂದೆಡೆ ಪರಭಾಷೆಯಿಂದ ಚಿತ್ರಗಳು ರಿಮೇಕಾಗುತ್ತಲೇ ಇದೆ. ನಟರು ಸಾಲುಸಾಲಾಗಿ ಒಂದಾದ ಮೇಲೊಂದರಂತೆ ನಟಿಸಿ ನಟಿಸಿ ಚಿತ್ರಗಳ ಗುಡ್ಡೆ ಹಾಕುತ್ತಿದ್ದಾರೆ. ಇನ್ನೊಂದೆಡೆ, ಪರಭಾಷಾ ಚಿತ್ರಗಳು ಕನ್ನಡ ನೆಲದಲ್ಲಿ ಮಾರುಕಟ್ಟೆ ಕುದುರಿಸಿಕೊಳ್ಳುತ್ತಲೇ ಸಾಗಿವೆ. ಸುದೀಪ್ ಬಾಲಿವುಡ್ಡಿನಲ್ಲಿ ನಟಿಸಿ ಸುದ್ದಿ ಮಾಡಿದರೂ, ಕನ್ನಡದಲ್ಲಿ ರಿಮೇಕ್‌ನಲ್ಲಿ ನಟಿಸೋದನ್ನು ನಿಲ್ಲಿಸುತ್ತಿಲ್ಲ. ದರ್ಶನ್, ಯೋಗೀಶ್ ಅವರ ಒಂದೊಂದೇ ರಿಮೇಕ್ ಚಿತ್ರಗಳು ದಿನವೂ ಸೆಟ್ಟೇರುತ್ತವೆ. ಮುಂಗಾರು ಮಳೆಯ ಯಶಸ್ಸಿನ ನಂತರ ಕನ್ನಡ ಚಿತ್ರರಂಗದಲ್ಲಿ ಗಣೇಶ್ ಸೇರಿದಂತೆ ಎಲ್ಲರೂ ಧಾರಾಳ ಮಳೆ ಸುರಿಯುತ್ತಲೇ ಇದ್ದಾರೆ. ಪ್ರವಾಹವೆದ್ದು ಜನ ಕೊಚ್ಚಿಹೋಗುತ್ತಿದ್ದಾರೆ. ಆದರೂ ಈ ಪ್ರಕ್ರಿಯೆ ನಿಲ್ಲುತ್ತಿಲ್ಲ. ಪ್ರೇಕ್ಷಕ ಆಗಸ ದಿಟ್ಟಿಸುವಷ್ಟರಲ್ಲಿ, ಭಟ್ಟರು ಸ್ವಲ್ಪ ಬಿಸಿಲು ನೀಡುವ ಪ್ರಯತ್ನವನ್ನು ಮನಸಾರೆ ಮಾಡಿದ್ದಾರೆ.

webdunia
MOKSHA
ನಂ.1 ಪುನೀತ್!: ಕಳೆದ ವರ್ಷ 2008ರಲ್ಲಿ ನಾಯಕ ನಟರ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೂ, ಗೋಲ್ಡನ್ ಸ್ಟಾರ್ ಗಣೇಶ್‌ಗೂ ತೀವ್ರ ಪೈಪೋಟಿಯಿತ್ತು. ಆದರೆ ಈ ವರ್ಷವಿಡೀ ಗೋಲ್ಡನ್ ಸ್ಟಾರ್‌ನ ಹೊಳಪು ಕಡಿಮೆಯಾದಂತಿದೆ. ಪವರ್ ಸ್ಟಾರ್‌ನ ಪವರ್ ಮೇಲಾಗಿದೆ. ಅನಾಯಾಸವಾಗಿ ನಂ.1 ನಟನೆಂದು ಪುನೀತ್‌ಗೆ ಕಿರೀಟ ಧಾರಣೆ ಮಾಡಬಹುದು. ಯಾಕಂದರೆ, ಪುನೀತ್ ತನ್ನ ಹಳೆಯ ಸಕ್ಸಸ್ ರೇಟನ್ನೇ ಉಳಿಸಿಕೊಂಡಿದ್ದಾರೆ. ರಾಜ್ ಗಿಮಿಕ್ಕುಗಳಿಂದ ಸುದ್ದಿ ಮಾಡಿತಾದರೂ, ಪುನೀತ್ ದಯೆಯಿಂದ ಚಿತ್ರ ನಿರ್ಮಾಪಕರ ಜೇಬಿಕೆ ಕತ್ತರಿ ಹಾಕಲಿಲ್ಲ. ಪುನೀತ್ ನೀಡಿದ ಚಿತ್ರಗಳಲ್ಲಿ ಬಹುತೇಕವು ಯಶಸ್ವಿಯಾಗಿರುವುದರಿಂದ ಪುನೀತ್ ಇಂದಿಗೂ ಭಾರೀ ಬೇಡಿಕೆಯ ನಟ.

ಗೋಲ್ಡನ್ ಸ್ಟಾರ್ ಗಣೇಶ್ ಸರ್ಕಸ್ ಮೂಲಕ ಪ್ಲಾಪ್ ತಾರೆಯೆನಿಸಿಬಿಟ್ಟರು. ಈಗ ಮತ್ತೆ ತನ್ನದೇ ನಿರ್ಮಾಣದ ಮಳೆಯಲಿ ಜೊತೆಯಲಿ ಚಿತ್ರದ ಮೂಲಕ ಅದೇ ಹಳೇ ಮಳೆ ಸುರಿಸಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ನಂದ ಬಿಟ್ಟರೆ, ಹೊಡಿಮಗ, ಭಾಗ್ಯದ ಬಳೆಗಾರ ಎಲ್ಲವೂ ಬಂದ ಹಾಗೇ ಹೊರಟು ಹೋಗಿವೆ. ಆದರೂ, ಅವರ ಉತ್ಸಾಹ ಮಾತ್ರ ಕುಂದಿಲ್ಲ. ಇನ್ನು ಉಳಿದ ನಟರ ಪೈಕಿ, ನಟನೆಯೇ ಬರೋದಿಲ್ಲ ಎಂಬ ಕುಖ್ಯಾತಿಗೊಳಗಾಗಿದ್ದ, ಯುವನಟಿಯರ ಜೊತೆ ಮರಸುತ್ತಿ ಆಗಾಗ ಸುದ್ದಿ ಮಾಡುವ ಗುಳಿಕೆನ್ನೆಯ ದಿಗಂತ್ ಈ ವರ್ಷ ಸಾಕಷ್ಟು ಏಳಿಗೆ ಕಂಡಿದ್ದಾರೆ. ಅವರ ನಟನೆಯ ಹೌಸ್‌ಪುಲ್ 50 ದಿನ ಓಡಿದೆ. ಭಟ್ಟರ ಮನಸಾರೆಯಲ್ಲಿ ದಿಗಂತ್ ನಟನೆಯೂ ಸಾಕಷ್ಟು ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡಿದೆ. ದುನಿಯಾ ಖ್ಯಾತಿಯ ವಿಜಯ್‌ರ ತಾಕತ್, ಜಂಗ್ಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶ್ರೀನಗರ ಕಿಟ್ಟಿ ಸವಾರಿ ಚಿತ್ರದ ಯಶಸ್ಸಿನ ಮೂಲಕ ಸದ್ಯ ಬೇಡಿಕೆ ಕುದುರಿಸಿಕೊಂಡಿದ್ದಾರೆ. ಲೂಸ್ ಮಾದ ಖ್ಯಾತಿಯ ಯೋಗೀಶ ಅಂಬಾರಿಯಲ್ಲಿ ಮಿಂಚಿದ ಮೇಲೆ ಸಾಲು ಸಾಲು ರಿಮೇಕ್ ಚಿತ್ರಗಳಲ್ಲೇ ನಟಿಸಿ ಯಶಸ್ಸಿನ ಬೆನ್ನೇರಲು ಹರಸಾಹಸ ಮಾಡುತ್ತಿದ್ದಾರೆ. ಆದರೂ, ಕೈಯಲ್ಲಿ ಎಣಿಸಲಾಗದಷ್ಟು ಚಿತ್ರಗಳ ಪಟ್ಟಿಯೇ ಇದೆ.
webdunia
MOKSHA


ರಮೇಶ್ ಅರವಿಂದ್ ಕಡಿಮೆ ಬಜೆಟ್ಟಿನ ಚಿತ್ರಗಳಲ್ಲಿ ಸಾಲುಸಾಲಾಗಿ ನಗು ಉಕ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಹೇಳಿಕೇಳಿ ಕಡಿಮೆ ಬಜೆಟ್ಟಾದ್ದರಿಂದ ಅವರ ವೆಂಕಟ ಇನ್ ಸಂಕಟ, ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ ಮತ್ತಿತರ ಕೆಲವು ಚಿತ್ರಗಳು ನಿರ್ಮಾಪಕರ ಕೈಕಚ್ಚಿಲ್ಲ. ಉಪೇಂದ್ರ ಈ ವರ್ಷ ನಿರ್ದೇಶನಕ್ಕೆ ಮರಳುವ ಬಾಂಬು ಸ್ಫೋಟಿಸಿದ್ದಾರಾದರೂ, ಬಿಡುಗಡೆ ಕಂಡ ಅವರ ನಟನೆಯ ದುಬೈ ಬಾಬು, ರಜನಿಗಳ ಮೂಲಕ ಮೋಡಿ ಮಾಡಲು ಸಾಧ್ಯವಾಗಿಲ್ಲ. ದರ್ಶನ್ ಅವರ ಅಭಯ್, ಯೋಧ ಹಾಗೇನೂ ಜಾದೂ ಮಾಡಲಿಲ್ಲ. ಸುದೀಪ್ ವೀರಮದಕರಿ ಎಂಬ ರಿಮೇಕ್ ಚಿತ್ರ ನಿರ್ದೇಶಿಸಿದರು, ಚಿತ್ರ ಹೇಗೋ ಶತದಿನೋತ್ಸವ ಆಚರಿಸಿಕೊಂಡಿದೆ. ವಿಜಯ್ ರಾಘವೇಂದ್ರ, ಶ್ರೀಮುರಳಿ, ಪ್ರೇಮ್, ಅಜಯ್ ಏನು ಮಾಡಿದರೂ ಈಗ ಬರಕತ್ತಾಗುತ್ತಿಲ್ಲ.

ಇವೆಲ್ಲವುಗಳ ನಡುವೆಯೂ, ಯಶ್ ಎಂಬ ಕನ್ನಡದ ಹೊಸ ಹುಡುಗ ಭರವಸೆ ಮೂಡಿಸುತ್ತಿದ್ದಾನೆ. ಹರೀಶ್ ರಾಜ್ ಕಲಾಕಾರ್ ಮೂಲಕ ನಿರ್ದೇಶನದ ಆಸಕ್ತಿ ಪ್ರದರ್ಶಿಸಿದ್ದಾರೆ. ಜೋಶ್‌ನಲ್ಲಿ ಹೊಸ ಹುಡುಗರೇ ಗಾಂಧಿನಗರಕ್ಕೆ ಮಾಯೆಯ ಬಲೆ ಬೀಸಿದ್ದಾರೆ. ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ ವಾಯುಪುತ್ರದ ಮೂಲಕ ಎಂಟ್ರಿ ಕೊಟ್ಟು ಹಲವರ ಹುಬ್ಬೇರಿಸಿದ್ದಾರೆ. ಆದರೆ, ಆ ದಿನಗಳು ಖ್ಯಾತಿಯ ಚೇತನ್ ಬಿರುಗಾಳಿ ಸೃಷ್ಟಿಸಿದರೂ, ಏನೂ ಪ್ರಯೋಜನವಾಗಿಲ್ಲ. ಹಿರಿಯ ವಿಷ್ಣುವರ್ಧನ್ ಅವರ ನಂಯಜಮಾನ್ರು, ಬಳ್ಳಾರಿ ನಾಗ ಎರಡೂ ಬಂದ ಹಾಗೇ ಎದ್ದು ಹೋಗಿವೆ. ಕ್ರೇಜಿ ರವಿಚಂದ್ರನ್ ಅವರ ಪತ್ತೆಯೇ ಇಲ್ಲ. ವಿನೋದ್ ರಾಜ್ ತಮ್ಮ ಯಾರದು? ಮೂಲಕ ಮರಳಿದರೂ, ಚಿತ್ರ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ನೀರಸವಾಗಿಹೋಯಿತು. ಕಾಶೀನಾಥ್ ಮಗ ಅಲೋಕ್, ಎಸ್.ನಾರಾಯಣ್ ಮಗ ಪಂಕಜ್, ಜಗ್ಗೇಶ್ ಮಗ ಗುರುರಾಜ್ ಗಾಂಧಿನಗರದಲ್ಲಿ ಹುಲ್ಲುಕಡ್ಡಿ ಅಲುಗಾಡಿಸಲೂ ಸಾಧ್ಯವಾಗಿಲ್ಲ.

webdunia
MOKSHA
ನಂ.1 ಐಂದ್ರಿತಾ!: ನಾಯಕಿಯರಲ್ಲಿ ನೋಡೋದಾದರೆ, ನಟಿಯರ ಪೈಕಿ ಪರಭಾಷಾ ಚಿತ್ರನಟಿಯರ ಸಾಲುಸಾಲು ಆಮದು ನಡೆದಿದೆ. ಪಾರ್ವತಿ ಮೆನನ್, ನವ್ಯಾ ನಾಯರ್, ಗೌರಿ ಮುಂಜಾಲ್, ನಿಶಾ ಕೊಠಾರಿ, ಮೀರಾ ಜಾಸ್ಮಿನ್, ರಾಗಿಣಿ, ರಾಧಿಕಾ ಗಾಂಧಿ, ಪ್ರಿಯಾಮಣಿ, ಅಂಜನಾ ಸುಖಾನಿ, ಆರತಿ ಛಾಬ್ರಿಯಾ, ಸೆಲಿನಾ ಜೇಟ್ಲಿ, ಯುವಿಕಾ ಚೌಧರಿ, ರೆಜಿನಾ, ಬಿಯಾಂಕಾ, ಶಿರಿನ್... ಹೀಗೆ. ಮಳೆ ಹುಡುಗಿ ಪೂಜಾ ಗಾಂಧಿ ಈ ವರ್ಷ ನೀಡಿದ ಅನು, ಇನಿಯ, ಹುಚ್ಚಿ... ಹೀಗೆ ಸಾಲು ಸಾಲು ತೋಪಾದರೂ, ಕನ್ನಡನಾಡಲ್ಲೇ ನೆಲೆಸಿ, ಕನ್ನಡ ಕಲಿತು ಮಾತಾಡಿ ಕನ್ನಡದವರೇ ಆಗಿ ಹೋಗಿದ್ದಾರೆ. ಅಕ್ಕನಂತೆ ನಟಿಯಾಗಲು ಬಂದ ತಂಗಿ ರಾಧಿಕಾ ಗಾಂಧಿ ಅಕ್ಕನಂತೆ ನಟಿಸಲು ಬರದೆ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಾಗಿದ್ದಾರೆ.

ಆದರೆ, ಮೆರವಣಿಗೆ ಚಿತ್ರದ ಮೂಲಕ ಎಂಟ್ರಿ ಕೊಟ್ಟು ಈ ವರ್ಷ ಸೂರಿಯ ಜಂಗ್ಲಿ ಚಿತ್ರದಲ್ಲಿ ಉದಾರವಾಗಿ ಮೈದೋರಿ ಗ್ಲ್ಯಾಮರ್ ಬೊಂಬೆ ಎನಿಸಿಕೊಂಡ ಸೌಗಂಧಿಕಾ ಪುಷ್ಪ ಖ್ಯಾತಿಯ ಐಂದ್ರಿತಾ ಭಟ್ಟರ ಕೈಗೆ ಸಿಕ್ಕು ಮನಸಾರೆಯಲ್ಲಿ ಕಣ್ಣ ಮಿಂಚಿನಲ್ಲೇ ಕೋಲ್ಮಿಂಚು ಹರಿಸಿದ್ದಾರೆ. ಐಂದ್ರಿತಾಳ ಬೆರಗುಗಣ್ಣಿನ ಸೌಂದರ್ಯಕ್ಕೆ ಕನ್ನಡಿಗರು ಬೆರಗಾಗಿ ಸೋತಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ ಗೆದ್ದುಕೊಂಡ ನಟಿ ರಾಧಿಕಾ ಪಂಡಿತ್ ಲವ್‍‌ಗುರು ಹಾಗೂ ಒಲವೇ ಜೀವನ ಲೆಕ್ಕಾಚಾರ ಚಿತ್ರಗಳಲ್ಲಿ ತಾನು ಪ್ರತಿಭಾವಂತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ರಾಧಿಕಾ ಪಂಡಿತ್ ತುಂಬಾ ಚ್ಯೂಸಿಯಾಗಿದ್ದರಿಂದ ಸಂಖ್ಯೆಯ ಮಟ್ಟಿನಲ್ಲಿ ಹೇಳೋದಾದ್ರೆ ನಟಿಸಿದ ಚಿತ್ರಗಳು ಕಡಿಮೆ. ಇನ್ನು ನಮ್ಮ ರಮ್ಯ ಈ ಬಾರಿ ಕಾಣಿಸಿಕೊಳ್ಳಲೇ ಇಲ್ಲ. ಬರೀ ವಿವಾದಗಳಲ್ಲೇ ಕಾಲಹರಣವಾಗಿಹೋಯಿತು. ಗಾಸಿಪ್ ಕಾಲಂಗಳಲ್ಲಿ ಆಗೀಗ ಕಾಣಿಸಿಕೊಳ್ಳುವ ಶುಭಾ ಪೂಂಜಾಳ ಸಿನಿಮಾ ಸುದ್ದಿಯೇ ಇಲ್ಲ. ಶರ್ಮಿಳಾ ಮಾಂಡ್ರೆ ಶತಪ್ರಯತ್ನ ಮಾಡುತ್ತಿದ್ದರೂ ಈ ವರ್ಷ ಇವರ ವೃತ್ತಿ ಜೀವನದಲ್ಲಿ ಅಂಥದ್ದೇನೂ ಜರುಗಿಲ್ಲ. ಮಾಲಾಶ್ರೀ ಕನ್ನಡದ ಕಿರಣ್ ಬೇಡಿಯ ಮೂಲಕ ಮತ್ತೆ ಬಂದು ಹಾಗೆ ಹೋದರು.

ಕನ್ನಡದ ಕುಡಿಗಳ ಪೈಕಿ ಪುಟ್ಟ ಹುಡುಗಿ ಅಮೂಲ್ಯ ಕಾಲೇಜು ಮೆಟ್ಟಿಲೇರಿ ದೊಡ್ಡವಳಾಗಿ ಪ್ರೇಮಿಸಂ, ನಾನು ನನ್ನ ಕನಸಿನ ನಿರೀಕ್ಷೆಯಲ್ಲಿದ್ದಾಳೆ. ಹರಿಪ್ರಿಯಾ ಸುಂದರ ಮೊಗದಿಂದ ಮೋಡಿ ಮಾಡುತ್ತಾರಾದರೂ, ನಿಧಾನವಾಗಿ ಅವಕಾಶ ಗಿಟ್ಟಿಸುತ್ತಿದ್ದಾರೆ. ವರ್ಷದ ಕೊನೆಯಲ್ಲಿ ಆಕೆಯ ನಟನೆಯ ಕಳ್ಳರ ಸಂತೆ ಭರವಸೆಯ ಆಶಾಕಿರಣ ಮೂಡಿಸಿದೆ. ಅಂಬಾರಿ ಖ್ಯಾತಿಯ ಸುಪ್ರೀತಾ, ಸುಂದರ್ ರಾಜ್ ಮಗಳು ಮೇಘನಾ ರಾಜ್, ರಾಜೇಂದ್ರಬಾಬು ಮಗಳು ನಕ್ಷತ್ರ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು ಭವಿಷ್ಯಕ್ಕಾಗಿ ಕಾದಿದ್ದಾರೆ.

webdunia
PR
ಬಿದ್ದದ್ದೆಷ್ಟು, ಎದ್ದದ್ದೆಷ್ಟು?: ಇನ್ನು ಚಿತ್ರಗಳ ಪೈಕಿ ಬಿಡುಗಡೆಯಾಗಿದ್ದು ಹಿಂದೆಂದೂ ಕಂಡಿರದ ದಾಖಲೆಯ ಸಂಖ್ಯೆ. 100ಕ್ಕೂ ಹೆಚ್ಚು. ಇವುಗಳಲ್ಲಿ ಶತದಿನೋತ್ಸವ ಆಚರಿಸಿದ ಚಿತ್ರಗಳು ಮೂರು. ಜೋಶ್, ಸವಾರಿ ಹಾಗೂ ಅಂಬಾರಿ. ವೀರಮದಕರಿ ಹಾಗೂ ನಂದ ಬೆಂಗಳೂರು ಹೊರತಪಡಿಸಿ ಹೊರಗೆಲ್ಲೋ ಶತದಿನೋತ್ಸವ ಆಚರಿಸಿದೆಯೆಂದು ಚಿತ್ರತಂಡ ಸಂಭ್ರಮಪಟ್ಟವು. ಇನ್ನು 50 ದಿನಗಳ ಸಂಭ್ರಮಾಚರಣೆ ಕಂಡ ಚಿತ್ರಗಳು ಜಂಗ್ಲಿ, ಕಿರಣ್ ಬೇಡಿ, ಹೌಸ್‌ಫುಲ್, ಲವ್‌ಗುರು, ಎದ್ದೇಳು ಮಂಜುನಾಥ, ತಾಕತ್, ಯೋಧ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ರಾಜ್, ಮನಸಾರೆ ಚಿತ್ರಗಳು. ನೆರೆಹಾವಳಿ ಸಂದರ್ಭ ಬಿಡುಗಡೆ ಕಂಡರೂ, ಮನಸಾರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ಉಲ್ಲಾಸವನ್ನೇ ಸೃಷ್ಟಿಸುತ್ತಿದೆಯೆಂದರೆ ತಪ್ಪಲ್ಲ.

ಭವಿಷ್ಯದ ಆಶಾಕಿರಣ: ನಿರ್ದೇಶಕರ ಪೈಕಿ ಮುಂಗಾರು ಮಳೆ ಖ್ಯಾತಿಯ ಯೋಗರಾಜ ಭಟ್ಟರು ಮನಸಾರೆಯ ಮೂಲಕ ಮತ್ತೊಮ್ಮೆ ಉತ್ತುಂಗಕ್ಕೇರಿದ್ದಾರೆ. ಮಠ ನೀಡಿದ ಗುರುಪ್ರಸಾದ್, ಎದ್ದೇಳು ಮಂಜುನಾಥದ ಮೂಲಕ ಮತ್ತೆ ಭರವಸೆ ಮೂಡಿಸಿದ್ದಾರೆ. ಅನುಭವಿ ನಿರ್ದೇಶಕ ಎಸ್. ನಾರಾಯಣ್ ಮಗನ ಮೋಹದಿಂದಲೋ ಏನೋ, ಮತ್ತೆ ಮತ್ತೆ ಸೋಲುಂಡಿದ್ದಾರೆ. ಜೋಗಿ ಖ್ಯಾತಿಯ ಪ್ರೇಮ್, ರಾಜ್ ಮೂಲಕ ಏನೂ ಮಾಡಲಾಗಲಿಲ್ಲ. ದುನಿಯಾದ ಸೂರಿ ಜಂಗ್ಲಿ ಮೂಲಕ ಮತ್ತೆ ಯಶಸ್ಸನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ತಾಜ್ ಮಹಲ್ ಖ್ಯಾತಿಯ ಚಂದ್ರು ಪ್ರೇಮ್‌ಕಹಾನಿಯಲ್ಲಿ ಸೋತಿದ್ದಾರೆ. ಅಂಬಾರಿಯ ಮೂಲಕ ಅರ್ಜುನ್ ಎಂಬ ಹೊಸ ನಿರ್ದೇಶಕ ಭರವಸೆ ಮೂಡಿಸಿದ್ದಾರೆ. ಲವ್‌ಗುರು ಮೂಲಕ ಪ್ರಶಾಂತ್, ಸವಾರಿಯ ಮೂಲಕ ಜೇಕಬ್ ವರ್ಗೀಸ್ ಬೆಳ್ಳಿತೆರೆಯಲ್ಲಿ ಕೊಂಚ ಆಶಾಕಿರಣ ಮೂಡಿಸಿದ್ದಾರೆ.

ಸಂಗೀತದಲ್ಲಿ ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲನಾಥರ ಮಗ ಮಣಿಕಾಂತ್ ಕದ್ರಿ, ಸವಾರಿ ಮೂಲಕ ಕನ್ನಡಕ್ಕೆ ಭರವಸೆಯ ಬೆಳಕು ಚೆಲ್ಲಿದ್ದಾರೆ. ಹರಿಕೃಷ್ಣ ಎಂದಿನಂತೆ ಇಂಪಾದ ಟ್ರ್ಯಾಕ್‌ಗಳನ್ನು ನೀಡುತ್ತಿದ್ದಾರೆ. ಈ ವರ್ಷ ರಾಜ್, ಮನಸಾರೆ, ಪರಿಚಯ, ಮಳೆ ಬರಲಿ ಮಂಜೂ ಇರಲಿ, ಜಂಗ್ಲಿ, ಅಂಬಾರಿ, ಸವಾರಿ, ಮಳೆಯಲಿ ಜೊತೆಯಲಿ ಹೀಗೆ ಹಲವು ಚಿತ್ರಗಳ ಮತ್ತೆ ಮತ್ತೆ ಕೇಳಬಯಸುವ ಇಂಪಾದ ಹಾಡುಗಳನ್ನು ನೀಡುತ್ತಿದ್ದಾರೆ. ಈ ಹಾಡುಗಳ ಸಾಹಿತ್ಯದಲ್ಲೂ ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್ ಭಾರೀ ಪ್ರಚಾರದಲ್ಲಿದ್ದಾರೆ.

ಒಟ್ಟಾರೆಯಾಗಿ 2009ರ ವರ್ಷ ಕನ್ನಡ ಚಿತ್ರರಸಿಕರ ಪಾಲಿಗೆ ಯುಗಾದಿ. ಆದರೆ ಹೆಚ್ಚು ಬೇವು, ಕಡಿಮೆ ಬೆಲ್ಲ. ಮುಂದೇನು? ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಆದರೆ ಉತ್ತರ ಮಾತ್ರ ಯಾರ ಮುಂದೂ ಇಲ್ಲ. ಆಶಾಭಾವನೆಯೊಂದೇ ಇದೆ.

Share this Story:

Follow Webdunia kannada