Select Your Language

Notifications

webdunia
webdunia
webdunia
webdunia

ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008

ಉಗ್ರರ ಮೇಲುಗೈ * ದಿಕ್ಕೆಟ್ಟು ಎಚ್ಚೆತ್ತ ಯುಪಿಎ * ಕೊನೆಗೂ ಕಾನೂನಿಗೆ ಹಲ್ಲು ಬಂತು

ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008
ಅವಿನಾಶ್ ಬಿ.
WD
ಮೊದಲೇ ಹೇಳಿಬಿಡುತ್ತೇನೆ, 2008ರತ್ತ ಹಿಂತಿರುಗಿ ನೋಡಲೂ ಭಯವಾಗುತ್ತಿದೆ. ಅಷ್ಟೊಂದು ರಕ್ತ-ಸಿಕ್ತವಾಗಿತ್ತು. ಭಯೋತ್ಪಾದನೆಯೇ ಪಾರಮ್ಯ ಮೆರೆದ ಈ ವರ್ಷದಲ್ಲಿ, ಸ್ಫೋಟಗಳಿಗಿಂತಲೂ ದೇಶವನ್ನು ಬಹುವಾಗಿ ಕಾಡಿದ ಅಂಶವೇನು ಎಂದು ಕೇಳಿದರೆ, ಬರಬಹುದಾದ ಉತ್ತರ 'ಓಟು ಬ್ಯಾಂಕು ರಾಜಕಾರಣ'. ಹಾದಿ ತಪ್ಪಿದ, ಬಾಲ್ಯದಿಂದಲೇ ದುರ್ಬೋಧನೆಗೊಳಗಾದ ಮತಾಂಧ ಭಯೋತ್ಪಾದಕರು ಮುಗ್ಧ ಜನರನ್ನು ಮನಬಂದಂತೆ, ಪಟಾಕಿ ಸಿಡಿಸಿದಷ್ಟೇ ಸುಲಭವಾಗಿ ಬಾಂಬ್‌ಗಳನ್ನು ಇರಿಸಿ ಸಿಡಿಸುತ್ತಿದ್ದರೆ, ಓಟು ಬ್ಯಾಂಕು ರಾಜಕಾರಣಿಗಳು ತಮ್ಮ ರಕ್ತ ಸಿಕ್ತ ಕೈಯನ್ನು ತೊಳೆದುಕೊಳ್ಳಲೂ ಪುರುಸೊತ್ತಿಲ್ಲದಂತೆ ಬೆಚ್ಚಿ ಬೀಳಬೇಕಾಯಿತು, ಮತ್ತು ಜನರು ಜಾಗೃತರಾಗಿದ್ದಾರೆ. ಆದುದರಿಂದ ಮಾತಿಗಿಂತ ಕೃತಿಯೇ ಈಗಿನ ಅನಿವಾರ್ಯತೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಯಿತು.

ಓಟು ಬ್ಯಾಂಕು ರಾಜಕಾರಣದ ಬೆಂಬಲ ಒಂದೆಡೆಯಾದರೆ, ಭಾರತದಲ್ಲಿ ಏನು ಮಾಡಿದರೂ ಅಲ್ಲಿನ ಬೇಹುಗಾರಿಕಾ ಇಲಾಖೆ ಮತ್ತು ರಕ್ಷಣಾ ಪಡೆಗಳ ನಡುವೆ ಇಲ್ಲದ ಸಾಮರಸ್ಯವು ತಮಗೆ ವರದಾನವಾಗುತ್ತದೆ, ಮಾನವ ಹಕ್ಕುಗಳ ಹೋರಾಟಗಾರರ ಧೋರಣೆ ನಮ್ಮ ನೆರವಿಗಿದೆ ಎಂಬುದನ್ನು ಹಲವಾರು ಪ್ರಕರಣಗಳಿಂದ ಅರಿತುಕೊಂಡಿರುವ ಭಯೋತ್ಪಾದಕರು ಎಗ್ಗಿಲ್ಲದೆ ತಮ್ಮ ಕೆಲಸ ಮಾಡುತ್ತಲೇ ಹೋದರು. ವಿದೇಶೀ ಬೇಹುಗಾರಿಕಾ ಸಂಸ್ಥೆಗಳು ಇಂಥದ್ದೊಂದು ದಾಳಿಯಾಗುತ್ತದೆ ಎಂದು ಭಾರತವನ್ನು ಎಚ್ಚರಿಸಿದರೂ, ಆ ಎಚ್ಚರಿಕೆಯ ಸೂಚನೆಯನ್ನು ಕುರ್ಚಿಯಡಿ ಇರಿಸಿದ ಅಧಿಕಾರಿಗಳು ನಿದ್ದೆಹೋದರು. ಎಚ್ಚೆತ್ತುಕೊಳ್ಳುವಾಗ ಎಲ್ಲವೂ ಆಯೋಮಯ. ದೇಶದಲ್ಲಿ ಭಾರತ-ಪಾಕ್ ಯುದ್ಧದ ವಾತಾವರಣವು ಅದಾಗಲೇ ಮೂಡಿ ಆಗಿತ್ತು.

ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಹಿಂದಿನ ಎನ್‌ಡಿಎ ಸರಕಾರ ಜಾರಿಗೊಳಿಸಿದ್ದ ಭಯೋತ್ಪಾದಕ ಚಟುವಟಿಕೆ ನಿಯಂತ್ರಣ ಕಾಯ್ದೆ (ಪೋಟಾ) ರದ್ದುಗೊಳಿಸಿದ್ದು. ಅದರ ನಂತರ ದೇಶದೆಲ್ಲೆಡೆ ಪಾಕಿಸ್ತಾನಿ ಮೂಲದ ಉಗ್ರಗಾಮಿಗಳ ಆಟಾಟೋಪ ಹೆಚ್ಚಾಗಿದ್ದು ಕಾಕತಾಳೀಯವೋ, ಅಥವಾ ಇದರ ಪರಿಣಾಮವೋ ಎಂಬುದಿನ್ನೂ ಚರ್ಚೆಯಾಗುತ್ತಿದೆ. ಯುಪಿಎ ಸರಕಾರದ ಆಳ್ವಿಕೆಯ ಕೊನೆಯ ವರ್ಷವಾಗಿರುವ 2008, ಹಿಂದೆಂದೂ ಕಂಡು ಕೇಳರಿಯದ ರಕ್ತಪಾತವನ್ನು ಕಂಡಿದ್ದಂತೂ ಸತ್ಯ.

ಆರು ತಿಂಗಳ ಅವಧಿಯಲ್ಲಿ ದೇಶದೆಲ್ಲೆಡೆ ಸುಮಾರು 65ಕ್ಕೂ ಸ್ಫೋಟ ಪ್ರಕರಣಗಳು, ಅವುಗಳಲ್ಲಿ ಹಲವು ಸರಣಿ ಬಾಂಬ್ ಸ್ಫೋಟಗಳು, ಸಂಭವಿಸಿ ದೇಶದ ಜನರಲ್ಲಿ ಆತಂಕದ ವಾತಾವರಣ ಮೂಡಿಸಿತು. ಆದರೆ, ಇವೆಲ್ಲವುಗಳಲ್ಲಿ ಅತ್ಯಂತ ಭೀಕರವಾದುದೆಂದರೆ ನವೆಂಬರ್ ತಿಂಗಳ 26ರಂದು ವಾಣಿಜ್ಯ ರಾಜಧಾನಿ ಮುಂಬಯಿ ಮೇಲೆ ನಡೆದ ಉಗ್ರಗಾಮಿಗಳ ದಾಳಿ. ಈ ಘಟನೆಯಲ್ಲಿ ನಾಗರಿಕರ ಆಕ್ರೋಶಕ್ಕೆ ರಾಜಕಾರಣಿಗಳು ನೇರವಾಗಿ ಗುರಿಯಾದಾಗ ಅವರು ಎಚ್ಚೆತ್ತುಕೊಂಡರು.

ಅದುವರೆಗೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಉಗ್ರವಾದವನ್ನು ಖಂಡಿಸುತ್ತೇವೆ, ಭಯೋತ್ಪಾದನೆಗೆ ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸುತ್ತೇವೆ ಎಂಬುದಷ್ಟೇ ರಾಜಕಾರಣಿಗಳ ಬಾಯಲ್ಲಿ ಮೊಳಗುತ್ತಿದ್ದ ಮೂಲ ಮಂತ್ರವಾಗಿದ್ದರೆ, ಮುಂಬಯಿ ದಾಳಿಯು ನಿಜಕ್ಕೂ ನಮ್ಮನ್ನಾಳುವವರು ಮಾತಿಗಿಂತ ಕೃತಿಗೆ ಹೆಚ್ಚು ಗಮನ ನೀಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಪ್ರತಿ ಬಾರಿ ದಾಳಿಯಾದಾಗಲೂ ಅದೇ ರಾಗ ಹಾಡುತ್ತಿದ್ದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಲೆದಂಡವೂ ಆಯಿತು. ಮಹಾರಾಷ್ಟ್ರ ಸರಕಾರದಲ್ಲಿಯೂ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ರಾಜೀನಾಮೆ ತೆತ್ತರು. ಬಳಿಕ ಸಂಸತ್ತಿನಲ್ಲಿ ರಾಜಕಾರಣಿಗಳೆಲ್ಲರೂ ಪಕ್ಷಭೇದ ಮರೆತು, ಭಯೋತ್ಪಾದನೆ ವಿರುದ್ಧ ಹೋರಾಡುವ ಪಣ ತೊಟ್ಟರು.

ತತ್ಪರಿಣಾಮವಾಗಿ, ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ರಚನೆಗೆ, ಮತ್ತು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಗೆ (ಯುಎಪಿಎ) ಮತ್ತಷ್ಟು ಕಠಿಣ ರೂಪ ನೀಡಲು ಸಂಸತ್ತಿನಲ್ಲಿ ಒಮ್ಮತ ದೊರೆಯಿತು. ಭಯೋತ್ಪಾದಕ ಚಟುವಟಿಕೆ ತಡೆಗೆ ಪೋಟಾದಂತಹ ಕಾನೂನಿನ ಅಗತ್ಯವಿದೆ ಎಂಬುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ತಡವಾಗಿಯಾದರೂ ಮನವರಿಕೆಯಾಗಿದ್ದು, ಮುಂಬಯಿ ದಾಳಿ ಪ್ರಕರಣದ ಪ್ರಧಾನ ಪರಿಣಾಮ. ಬಹುಶಃ ವರ್ಷವಿಡೀ ನಡೆದ ಭಯೋತ್ಪಾದಕರ ದಾಳಿಯ ಧನಾತ್ಮಕ ಪರಿಣಾಮ ಇದು ಎಂದು ವ್ಯಾಖ್ಯಾನಿಸಬಹುದಾದರೂ, ಪ್ರತಿಯೊಂದರಲ್ಲೂ ದ್ವೇಷ ರಾಜಕಾರಣದಲ್ಲಿ ತೊಡಗುತ್ತಲೇ ಇದ್ದ ರಾಜಕಾರಣಿಗಳು ತಮ್ಮ ಮಾತಿಗೆ ಎಷ್ಟರ ಮಟ್ಟಿಗೆ ಬದ್ಧರಾಗುತ್ತಾರೆ ಎಂಬುದು ಕಾದು ನೋಡಬೇಕಷ್ಟೆ.

ಇದಕ್ಕೆ ಮೊದಲು, ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಿಂದೂ ಉಗ್ರಗಾಮಿಗಳ ಕೈವಾಡವಿದೆ ಎಂಬೊಂದು ಸುದ್ದಿ ಸ್ಫೋಟವಾಯಿತು. ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಸೇನೆಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಸ್ವಘೋಷಿತ ಶಂಕರಾಚಾರ್ಯ ದಯಾನಂದ ಪಾಂಡೆ ಮತ್ತಿತರ "ಅಭಿನವ ಭಾರತ" ಹಿಂದೂ ಸಂಘಟನೆಯ 11 ಮಂದಿ ಬಂಧನಕ್ಕೀಡಾಗಿ ಅವರ ಕೈವಾಡದ ಬಗ್ಗೆ ಸಾಕ್ಷ್ಯಾಧಾರ ಸಂಗ್ರಹಣೆ ಚುರುಕು ಪಡೆದಿತ್ತು. ರಾಷ್ಟ್ರಾದ್ಯಂತ ಇದು ಸಂಚಲನ ಮೂಡಿಸಿತು. ಪ್ರಜ್ಞಾ ಸಿಂಗ್ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿರುವ ಬೈಕಿನಲ್ಲಿ ಸ್ಫೋಟ ಸಂಭವಿಸಿದೆ ಎಂಬ ವಿಚಾರ ತಿಳಿದಿದ್ದರೂ, ತನಿಖೆಯನ್ನು ಚುರುಕುಗೊಳಿಸುತ್ತಿರುವುದರ ಹಿಂದೆ, ಹಲವು ರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿದೆ ಮತ್ತು ಲೋಕಸಭಾ ಚುನಾವಣೆಯೂ ಎದುರಿಗಿದೆ ಎಂಬ ಅಂಶವೂ ಎದ್ದುಕಾಣತೊಡಗಿತು.

ನೂರಾರು ಸಾವು-ನೋವು ಸಂಭವಿಸಿದ ಸರಣಿ ಸ್ಫೋಟ ಪ್ರಕರಣಗಳ ಬದಲಾಗಿ, ಐವರ ಸಾವಿಗೆ ಕಾರಣವಾದ ಪ್ರಕರಣವೊಂದರ ತನಿಖೆಗೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಷ್ಟೊಂದು ಧಾವಂತ ತೋರಿದ್ದೇಕೆ ಎಂಬ ಸಂಶಯವೊಂದು ಬಹುಸಂಖ್ಯಾತ ಸಮುದಾಯದಲ್ಲಿ ಸುಳಿದಾಡುತ್ತಾ, ಇದರ ಹಿಂದೆ ಕಾಣದ ಕೈಗಳ ಶಕ್ತಿ ಇದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಾಗ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿ ಘರ್ಜಿಸಿದವು. ಓಟ್ ಬ್ಯಾಂಕ್ ರಾಜಕಾರಣ ಎಲ್ಲೆಡೆಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ಕಂದಕವನ್ನು ಮತ್ತಷ್ಟು ಆಳವಾಗಿಸುವ ಲಕ್ಷಣಗಳು ಕಂಡುಬಂದಾಗ... ನಡೆಯಿತು ಮುಂಬಯಿಯಲ್ಲಿ ರಕ್ತದೋಕುಳಿ...

ಬಟಾ ಬಯಲಾದ ಪಾಕಿಸ್ತಾನ

ದೇಶದ ಹೆಗ್ಗುರುತಾಗಿದ್ದ ಮುಂಬಯಿ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್, ಮತ್ತು ನಾರಿಮನ್ ಹೌಸ್‌ಗಳಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರು ದಾಂಧಲೆ ಎಬ್ಬಿಸಿ ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡರು. ಒಬ್ಬ ಉಗ್ರಗಾಮಿ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ಪ್ರದೇಶದ ಅಜ್ಮಲ್ ಅಮೀರ್ ಕಸಬ್ - ಸಿಕ್ಕಿಬಿದ್ದ. ಅವನೀಗ ಭಾರತ-ಪಾಕಿಸ್ತಾನ ನಡುವಣ ಸಂಬಂಧದ ಬಲವಾದ ಕೊಂಡಿಯಾಗಿ ಮಾರ್ಪಟ್ಟಿದ್ದಾನೆ. ಅವನು ಬಾಯಿಬಿಡುತ್ತಿರುವ ವಿಷಯಗಳೆಲ್ಲವೂ ಅಂತಾರಾಷ್ಟ್ರೀಯ ಸ್ತರದಲ್ಲಿ ಪಾಕಿಸ್ತಾನದ ಮಾನವನ್ನು ಮೂರಾಬಟ್ಟೆ ಮಾಡುತ್ತಿದೆ. ದಾವೂದ್ ಇಬ್ರಾಹಿಂ ಮೊದಲಾದ ಉಗ್ರಗಾಮಿಗಳು ನಮ್ಮಲ್ಲಿಲ್ಲ, ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವುದು ನಮ್ಮವರಲ್ಲ, ಭಾರತದ ವಿರುದ್ಧ ಕತ್ತಿ ಮಸೆಯಲು ನಮ್ಮ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದೆಲ್ಲ ಬೊಗಳೆ ಬಿಡುತ್ತಿದ್ದ ಪಾಕಿಸ್ತಾನ ಸರಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗುತ್ತಲೇ ಬಂತು.

ಉಗ್ರವಾದ ಮಟ್ಟ ಹಾಕುವ ನಿಟ್ಟಿನಲ್ಲಿ ಭಾರತದೊಂದಿಗೆ ಕೈಜೋಡಿಸಬೇಕಾಗಿದ್ದ ಅಲ್ಲಿನ ಸರಕಾರ, ಕ್ಷಣ ಕ್ಷಣಕ್ಕೂ ತನ್ನ ಹೇಳಿಕೆ ಬದಲಾಯಿಸುತ್ತಾ, ಜಾಗತಿಕವಾಗಿ ನಗೆಪಾಟಲಿಗೀಡಾಯಿತು. ಚುನಾಯಿತ ಸರಕಾರವೊಂದರ ಬದಲಾಗುತ್ತಿರುವ ಹೇಳಿಕೆಗೆ ಐಎಸ್ಐ ಮತ್ತು ಪಾಕ್ ಸೇನೆಯ ತೆರೆಮರೆಯ ಅಟ್ಟಹಾಸವೇ ಕಾರಣ ಎಂಬ ಶಂಕೆಗೆ ಪುಷ್ಟಿಯೂ ದೊರೆಯತೊಡಗಿತು. ಉಗ್ರರೆಲ್ಲರೂ ಪಾಕಿಸ್ತಾನದವರೇ ಎಂದು ದೇಶ-ವಿದೇಶದ ಬೇಹುಗಾರಿಕಾ ಸಂಸ್ಥೆಗಳು ತನಿಖೆಯ ಆಧಾರದಲ್ಲಿ ಸಾರಿ ಸಾರಿ ಹೇಳಿದರೂ, ನಮಗೆ ಸಾಕ್ಷ್ಯ ಕೊಡಿ ಅಂತಲೇ ಪಾಕಿಸ್ತಾನ ಪಟ್ಟು ಹಿಡಿಯತೊಡಗಿತು. ಅಲ್ಲಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತೊಮ್ಮೆ ಮಿಸ್ಟರ್ 10% ಎಂದು ಸಾಬೀತುಮಾಡಿಕೊಂಡರು. ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆ ಅಲ್ಲಿಗೇ ಸ್ಥಗಿತವಾಯಿತು.

ಮುಂಬಯಿ ಕಲಿಸಿದ ಪಾಠ

ಮುಂಬಯಿ ದಾಳಿ ಪ್ರಕರಣ ಮುಖ್ಯವಾಗಿ ಐದು ಅಂಶಗಳ ಮೇಲೆ ಬೆಳಕು ಚೆಲ್ಲಿತು. ಒಂದನೆಯದು ಆಳುವವರು ಓಟು ಬ್ಯಾಂಕ್ ರಾಜಕಾರಣ ಬಿಟ್ಟು ಉಗ್ರವಾದದ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಮನ ಮಾಡಿದರು.

ಎರಡನೆಯದು, ದೇಶದ ಮುಸಲ್ಮಾನ ಬಂಧುಗಳು ಭಯೋತ್ಪಾದನೆಯಿಂದ ನಲುಗಿದವರ ಪರವಾಗಿ ನಿಂತು, ಹಿಂದೂಗಳೊಂದಿಗೆ ಏಕತೆ ಪ್ರದರ್ಶಿಸಿದರು. ಈ ಮೂಲಕ ಪ್ರತಿಯೊಂದು ಘಟನೆಯಲ್ಲಿಯೂ ಕೋಮು ಎಂಬ ಅಂಶ ಎಲ್ಲಿ ಹೆಕ್ಕಿಕೊಳ್ಳಲು ಸಿಗುತ್ತದೆ ಎಂದು ಕೆದಕಿ ನೋಡುವ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಿದರು. ಭಯೋತ್ಪಾದನೆಯನ್ನು ಇಸ್ಲಾಂ ಬೋಧಿಸುವುದಿಲ್ಲ ಎಂದು ಸಾರಿ ಸಾರಿ ಹೇಳಿದರಲ್ಲದೆ, ಹಿಂದೂಗಳ ದುಃಖದೊಂದಿಗೆ ಸಹಭಾಗಿಗಳಾದರು. ದೇಶದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿರುವುದು ಒಳಗಿನವರಲ್ಲ, ಹೊರಗಿನವರು ಎಂಬುದು ಭಾರತೀಯರೆಲ್ಲರ ಅರಿವಿಗೆ ಬರತೊಡಗಿದೆ. ಖುರಾನ್ ಯಾವತ್ತಿಗೂ ಉಗ್ರವಾದವನ್ನು ಬೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಸಲ್ಮಾನ ಧಾರ್ಮಿಕ ಮುಂದಾಳುಗಳು, ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದ್ದಾರಲ್ಲದೆ, ಹಿಂದೂ ಸಹೋದರರ ಜತೆಗೆ ಕೈಜೋಡಿಸಿದ್ದಾರೆ, ಸಾಂತ್ವನ ಹೇಳಿದ್ದಾರೆ. ಜನ ಎಚ್ಚೆತ್ತುಕೊಂಡಿದ್ದಾರೆ. ಇದು ಕೂಡ ಶುಭ ಲಕ್ಷಣ.

ಮೂರನೇ ಪರಿಣಾಮವೆಂದರೆ ಭಾರತ-ಪಾಕಿಸ್ತಾನ ಸಂಬಂಧದ ಮೇಲೆ. ಪಾಕಿಸ್ತಾನದಲ್ಲಿ ಬಹು-ಅಧಿಕಾರ ಕೇಂದ್ರಗಳಿರುವವರೆಗೆ ಅದನ್ನು ಎಳ್ಳಷ್ಟೂ ನಂಬಬಾರದು ಎಂಬುದು ಭಾರತಕ್ಕೆ ಮನವರಿಕೆಯಾಯಿತು.ಪಾಕಿಸ್ತಾನ ಸುಳ್ಳು ಹೇಳುತ್ತಿರುವುದೆಲ್ಲ ಸಾಬೀತಾಯಿತು. ಪಾಕಿಸ್ತಾನ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಾ, ತಿಪ್ಪರಲಾಗ ಪ್ರವೀಣ ಎಂದೇ ಗುರುತಿಸಲ್ಪಟ್ಟಿತು. ಇದೀಗ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಪಾಕಿಸ್ತಾನಕ್ಕೆ ಅಮೆರಿಕ, ಬ್ರಿಟನ್, ಜರ್ಮನಿ, ರಷ್ಯಾ ಮತ್ತಿತರ ದೇಶಗಳಿಂದ ಒತ್ತಡವೂ ಬರತೊಡಗಿತು. ವಿಶ್ವಸಂಸ್ಥೆಯೂ ಛೀಮಾರಿ ಹಾಕಿತು. ಪಾಕಿಸ್ತಾನವು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲ್ಪಡುವಷ್ಟರ ಮಟ್ಟಿಗೆ ತಲುಪಿ ಅದರ ಮಾನ ಹರಾಜಾಯಿತು. ಭಾರತ-ಪಾಕ್ ನಡುವೆ ಮತ್ತದೇ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಯಿತು.

ನಾಲ್ಕನೇ ವಿಚಾರವೆಂದರೆ, ನಮ್ಮ ಪೊಲೀಸ್ ಪಡೆಗಳು, ಭದ್ರತಾ ಪಡೆಗಳನ್ನು ಇನ್ನಾದರೂ ಆಧುನೀಕರಣಗೊಳಿಸಬೇಕಾದ ವಿಷಯವೂ ಮನದಟ್ಟಾಗಿದೆ. ಉಗ್ರಗಾಮಿಗಳು ಜಿಪಿಎಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನದ ನೆರವು ಪಡೆಯುತ್ತಿದ್ದರೆ, ನಮ್ಮ ಪೊಲೀಸರು ಅದೇ ಹಳೇ ಕಾಲದ ಮಣಭಾರದ ಬಂದೂಕು ಎತ್ತಿ, ಲಾಠಿ ಬೀಸುತ್ತಿರುತ್ತಾರೆ. ಅವರಿಗೂ ಆಧುನಿಕ ತಂತ್ರಜ್ಞಾನದ ಪರಿಚಯ ಮಾಡಿಸಬೇಕು, ಅವರಿಗೆ ಮತ್ತಷ್ಟು ಬಲ ತುಂಬಬೇಕು ಎಂಬ ವಿಚಾರವು ಈಗ ಚರ್ಚೆಯಾಗುತ್ತಿರುವುದು ಶುಭ ಸೂಚನೆಗಳಲ್ಲೊಂದು.

ಐದನೇ ವಿಚಾರವಂತೂ ಮೋಸ್ಟ್ ಡೇಂಜರಸ್. ಪಾಕಿಸ್ತಾನದಿಂದ 10 ಮಂದಿ ಉಗ್ರಗಾಮಿಗಳು ಭಾರತೀಯ ಮೀನುಗಾರಿಕಾ ಬೋಟ್ 'ಕುಬೇರ'ವನ್ನು ಅಪಹರಿಸಿ ಮುಂಬಯಿಗೆ ಕಾಲಿಟ್ಟರು. ಶಸ್ತ್ರಾಸ್ತ್ರ, ಗ್ರೆನೇಡ್‌ಗಳ ಸಮೇತ ಬೋಟಿನಲ್ಲಿ ಬಂದಿದ್ದರವರು. ತಟ ರಕ್ಷಣಾ ಪಡೆಯಿತ್ತು, ನಮ್ಮ ಬೇಹುಗಾರಿಕಾ ಸಂಸ್ಥೆಗಳಿದ್ದವು, ಭಯೋತ್ಪಾದನಾ ನಿಗ್ರಹ ದಳವಿತ್ತು, ರಾಷ್ಟ್ರೀಯ ಭದ್ರತಾ ದಳವಿತ್ತು, ನೌಕಾಪಡೆಯೂ ಇತ್ತು. ಹಾಗಿದ್ದರೆ, ಇವರ್ಯಾರಿಗೂ ಗೊತ್ತಾಗದಂತೆ ಈ ಉಗ್ರಗಾಮಿಗಳು ನುಸುಳಿದ್ದು ಹೇಗೆ? ಇಲ್ಲಿ ಈ ಪಡೆಗಳ ನಡುವೆ ಸಾಮರಸ್ಯವಿಲ್ಲ ಎಂಬುದು ಒಂದೆಡೆ ಬಯಲಾದರೆ, ಸೌಲಭ್ಯಹೀನ ತಟರಕ್ಷಣಾ ಪಡೆಯ ಸಾಮರ್ಥ್ಯ ಯಾವ ಮಟ್ಟಿಗಿರುತ್ತದೆ ಎಂಬ ಹುಳುಕೂ ಹೊರಬಿತ್ತು. ಇನ್ನಾದರೂ ಅದು ಸುಧಾರಣೆಯಾಗುತ್ತದೆ ಎಂಬ ಆಶಯ ಬಡ ಪ್ರಜೆಗಳದು.

ಮುಂದಿನ ಪುಟದಲ್ಲಿ: 2008 - ಭಯೋತ್ಪಾದಕರು ಮೇಳೈಸಿದ ವರ್ಷ

2008 - ಭಯೋತ್ಪಾದಕರು ಮೇಳೈಸಿದ ವರ್
ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಆಗಿ-ಹೋದ ಉಗ್ರಗಾಮಿ-ಭಯೋತ್ಪಾದನೆ-ಹಿಂಸಾಚಾರ ಪ್ರಕರಣಗಳನ್ನು ಪಟ್ಟಿ ಮಾಡುವುದಾದರೆ, ಕಳೆದೊಂದು ವರ್ಷದಲ್ಲಿ 800ಕ್ಕೂ ಹೆಚ್ಚು ಮಂದಿ ಭಯೋತ್ಪಾದನೆಗೆ ಬಲಿಯಾಗಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿ ಸಲವೂ, ಉಗ್ರಗಾಮಿಗಳು ತಮ್ಮ ಉದ್ದೇಶ ಈಡೇರಲು ಬಿಡುವುದಿಲ್ಲ, ಭಯೋತ್ಪಾದನೆ ಮಟ್ಟ ಹಾಕುತ್ತೇವೆ ಎಂಬ ಚರ್ವಿತ ಚರ್ವಣ ಹೇಳಿಕೆ ನೀಡುತ್ತಿದ್ದ ಗೃಹ ಮಂತ್ರಿ ಶಿವರಾಜ್ ಪಾಟೀಲ್, ಮುಂಬಯಿ ದಾಳಿ ಬಳಿಕ, ದೇಶದ ಗುಪ್ತಚರ ಇಲಾಖೆಯ ಮತ್ತು ಭದ್ರತಾ ವೈಫಲ್ಯಕ್ಕೆ 'ಬಲಿ ಪಶು'ವಾದರು.

webdunia
PTI
ಉಗ್ರವಾದಿ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಅಂಕೆಗೆ ಸಿಗದಷ್ಟು ಮೇಳೈಸುತ್ತಿದ್ದರೆ ಕೇಂದ್ರ ಸರಕಾರವು ಜನರಿಂದ ವ್ಯಾಪಕ ಟೀಕೆಗೊಳಗಾಯಿತು. ಕಟ್ಟುನಿಟ್ಟಿನ ನಿಯಂತ್ರಣ ಕ್ರಮ, ಕಾನೂನು ಇಲ್ಲದಿರುವುದೇ ಎಲ್ಲದಕ್ಕೂ ಕಾರಣ. ಭಯೋತ್ಪಾದನೆ ಮಟ್ಟ ಹಾಕುವಲ್ಲಿ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂಬುದೂ ಮತ್ತೊಂದು ಅಂಶ. ಹೀಗಾಗಿ ಜನಾಕ್ರೋಶವು ಅತಿರೇಕಕ್ಕೆ ಹೋಗುವ ಮೊದಲು ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಮತ್ತು ರಾಜಕಾರಣಿಗಳು, ಸಂಸತ್ತಿನಲ್ಲಿ ಕೊನೆಗೂ ನಿರ್ಣಯ ಕೈಗೊಂಡಿದ್ದಾರೆ. ಇದು ಶುಭ ಲಕ್ಷಣ.

* ನವೆಂಬರ್ 26, 2008: ಮುಂಬಯಿಯಲ್ಲಿ ಉಗ್ರರ ದಾಳಿ, ನವೆಂಬರ್ 26ರಂದು ಪಾಕಿಸ್ತಾನದ ಲಷ್ಕರ್-ಇ-ತೋಯ್ಬಾ ಸಂಘಟನೆಯ 10 ಉಗ್ರಗಾಮಿಗಳು ಹೋಟೆಲ್ ತಾಜ್, ಒಬೆರಾಯ್ ಟ್ರೈಡೆಂಟ್, ನಾರಿಮನ್ ಹೌಸ್‌ಗಳಿಗೆ ನುಗ್ಗಿ, ವಿದೇಶೀಯರೂ ಸೇರಿದಂತೆ 181 ಮಂದಿಯನ್ನು ಗುಂಡಿಟ್ಟು ಕೊಂದರು. ರೈಲ್ವೇ ನಿಲ್ದಾಣ, ಕೆಫೆ, ಸಿನಿಮಾ ಮಂದಿರ, ವಸತಿ ನಿಲಯದಲ್ಲಿ ಓಡಾಡಿದ ಉಗ್ರಗಾಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸುತ್ತಾ ಬಂದರು. ಹೋಟೆಲುಗಳಲ್ಲಿ ಗ್ರಾಹಕರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಹಲವರನ್ನು ಕ್ರೂರವಾಗಿ ಚಿತ್ರ ಹಿಂಸೆ ನೀಡಿ, ಗುಂಡಿಟ್ಟು ಕೊಂದರು. ಭದ್ರತಾ ಪಡೆಗಳ ಕಮಾಂಡೋ ಕಾರ್ಯಾಚರಣೆಯಲ್ಲಿ 9 ಮಂದಿ ಪಾಕಿಸ್ತಾನಿ ಉಗ್ರರು ಹತರಾಗಿದ್ದು, ಒಬ್ಬಾತ, ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ಭಾರತದ ವೀರ ಯೋಧರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಚಕಮಕಿ ಚತುರ ವಿಜಯ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ಮೇಜರ್ ಉಣ್ಣಿಕೃಷ್ಣನ್ ಮುಂತಾದವರು ವೀರ ಮರಣವನ್ನಪ್ಪಿದರು. ಸತತ 62 ಗಂಟೆಗಳ ಕಾಲ ನಡೆದ ನಿರಂತರ ಹೋರಾಟದ ಬಳಿಕ ಹೋಟೆಲುಗಳಲ್ಲಿ ಅವಿತಿದ್ದ ಉಗ್ರಗಾಮಿಗಳನ್ನು ತೆರವುಗೊಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು.

* ಅಸ್ಸಾಂ, ಅಕ್ಟೋಬರ್ 30, 2008: 13 ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 77 ಮಂದಿ ಸಾವು ಮತ್ತು ಇನ್ನೂರಕ್ಕೂ ಹೆಚ್ಚು ಮಂದಿಗೆ ಗಾಯ.

* ಇಂಫಾಲ, ಅಕ್ಟೋಬರ್ 21, 2008: ಮಣಿಪುರ ಕಮಾಂಡೋ ಸಂಕೀರ್ಣದದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಕ್ಕೆ 17 ಬಲಿ.

* ಕಾನ್ಪುರ, ಅಕ್ಟೋಬರ್ 14, 2008: ಕರ್ನಲ್ ಗಂಜ್ ಮಾರುಕಟ್ಟೆಯಲ್ಲಿ ಬಾಡಿಗೆ ಸೈಕಲ್‌ನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 8 ಮಂದಿಗೆ ಗಾಯ.

* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 29, 2008: ಜನನಿಬಿಡ ಮಾರುಕಟ್ಟೆಯಲ್ಲಿ ಮೋಟಾರು ಬೈಕಿನಲ್ಲಿ ಇರಿಸಿದ ಬಾಂಬ್ ಸ್ಫೋಟಿಸಿ 5 ಮಂದಿ ಸಾವು.
.
* ನವದೆಹಲಿ, ಸೆಪ್ಟೆಂಬರ್ 27, 2008: ಮೆಹ್ರೌಲಿಯ ಜನನಿಬಿಡ ಮಾರುಕಟ್ಟೆಯತ್ತ ಎಸೆದ ಕಚ್ಚಾ ಬಾಂಬ್ ಸ್ಫೋಟಿಸಿ ಮೂರು ಸಾವು.

* ನವದೆಹಲಿ, ಸೆಪ್ಟೆಂಬರ್ 13, 2008: ನಗರದ ವಿವಿಧೆಡೆ ಆರು ಕಡೆಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 26 ಜನರ ಸಾವು.

* ಅಹಮದಾಬಾದ್, ಜುಲೈ 26, 2008: ಎರಡು ಗಂಟೆಗಳ ಅವಧಿಯಲ್ಲಿ 20 ಕಡೆ ಬಾಂಬ್‌ಗಳು ಒಂದರ ಮೇಲೊಂದರಂತೆ ಸ್ಫೋಟಿಸಿ 57 ಜನರ ಸಾವು.

* ಬೆಂಗಳೂರು, ಜುಲೈ 25, 2008: ಆರು ಕಡೆ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಒಬ್ಬ ಮಹಿಳೆ ಸಾವು, ಹಲವರಿಗೆ ಗಾಯ.

* ಜೈಪುರ, ಮೇ 13, 2008: ಸರಣಿ ಬಾಂಬ್ ಸ್ಫೋಟಗಳಲ್ಲಿ 68 ಜನರ ದುರಂತ ಮರಣ.

ಮೇಲಿನವು 2008ರಲ್ಲಿ ನಡೆದ ಭಯೋತ್ಪಾದನಾ ದಾಳಿಗಳು. ಸ್ವಲ್ಪ ಹಿಂದಕ್ಕೆ ನೋಟ ಹರಿಸಿದರೆ ಮತ್ತಷ್ಟು ದಾಳಿಗಳು ನಡೆದಿವೆ.

* ಹೈದರಾಬಾದ್, ಆಗಸ್ಟ್ 25, 2007: ಎರಡು ಕಡೆ ನಡೆದ ಸ್ಫೋಟಗಳಲ್ಲಿ 42 ಮಂದಿ ಸಾವು.

* ಸಂಜೋತಾ ಎಕ್ಸ್‌ಪ್ರೆಸ್, ಫೆಬ್ರವರಿ 19, 2007: ಭಾರತ-ಪಾಕಿಸ್ತಾನ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಬಾಂಬ್ ಸ್ಫೋಟಿಸಿ 66 ಮಂದಿ ಸಾವು.

* ಮಾಲೆಗಾಂವ್, ಮಹಾರಾಷ್ಟ್ರ, ಸೆಪ್ಟೆಂಬರ್ 8, 2006: ಎರಡು ಕಡೆ ನಡೆದ ಸ್ಫೋಟಗಳಲ್ಲಿ 40 ಮಂದಿಯ ಸಾವು.

* ಮುಂಬಯಿ, ಜುಲೈ 11, 2006: ಉಪನಗರೀಯ ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಏಳು ಸ್ಫೋಟಗಳು ನಡೆದು 209 ಮಂದಿಯ ದುರ್ಮರಣ.

* ವಾರಾಣಸಿ, ಮಾರ್ಚ್ 7, 2006: ಮಂದಿರ, ರೈಲು ನಿಲ್ದಾಣ ಸೇರಿದಂತೆ ಮೂರು ಕಡೆ ನಡೆದ ಸ್ಫೋಟಗಳಲ್ಲಿ 21 ಮಂದಿ ಸಾವು.

* ನವದೆಹಲಿ, ಅಕ್ಟೋಬರ್ 29, 2005: ದೀಪಾವಳಿ ಮುನ್ನಾ ದಿನ ನಡೆದ ಮೂರು ಸ್ಫೋಟಗಳಿಗೆ 61 ಮುಗ್ಧ ಜನರ ಸಾವು.

* ಮುಂಬಯಿ, ಆಗಸ್ಟ್ 25, 2003: ಗೇಟ್ ವೇ ಆಫ್ ಇಂಡಿಯಾ ಸಮೀಪ ಸೇರಿದಂತೆ ಎರಡು ಕಡೆ ಸಂಭವಿಸಿದ ಸ್ಫೋಟಗಳಲ್ಲಿ 46 ಜನರ ದುರಂತ ಮೃತ್ಯು.

* ಗಾಂಧಿನಗರ, ಸೆಪ್ಟೆಂಬರ್ 24, 2002: ಅಕ್ಷರಧಾಮ ಮಂದಿರದ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ 34 ಭಕ್ತರ ಹತ್ಯೆ.

Share this Story:

Follow Webdunia kannada