Select Your Language

Notifications

webdunia
webdunia
webdunia
webdunia

ಆಕೆಯ ಹೆಸರು ಸೈನಾ ನೆಹ್ವಾಲ್....

ಆಕೆಯ ಹೆಸರು ಸೈನಾ ನೆಹ್ವಾಲ್....
ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ 2008ರ ವರ್ಷ ಭರಪೂರ ಸಂಭ್ರಮ. ಚೈನೀಸ್ ತೈಪೇ ಓಪನ್‌ ಗೆದ್ದುಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ. ವಿಶ್ವ ಕಿರಿಯರ ಬ್ಯಾಡ್ಮಿಂಟನ್ ಮತ್ತು ಪುಣೆಯಲ್ಲಿ ನಡೆದ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡ ಖ್ಯಾತಿ. ಜತೆಗೆ ಸೈನಾ ಖ್ಯಾತಿ ಗಗನಚುಂಬಿ ಎನಿಸಿದ್ದು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ. ಪ್ರಪ್ರಥಮ ಬಾರಿಗೆ ಭಾರತೀಯ ಮಹಿಳೆಯೊಬ್ಬಳು ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹೆಗ್ಗುರುತು ಮ‌ೂಡಿಸಿದ್ದರು.

ವಿಶ್ವ ಬ್ಯಾಡ್ಮಿಂಡನ್ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಕಾಣಿಸಿಕೊಂಡ ಖುಷಿಯಲ್ಲಿರುವಾಗಲೇ ಸೈನಾ ನೆಹ್ವಾಲ್‌ರವರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಕೊಡ ಮಾಡುವ ವರ್ಷದ ಭರವಸೆಯ ಆಟಗಾರ್ತಿ ಎಂಬ ಬಿರುದಿಗೆ ಮೊತ್ತ ಮೊದಲ ಬಾರಿಗೆ ಭಾರತೀಯ ಆಟಗಾರ್ತಿ ಆಯ್ಕೆಯಾದ ಸಂಭ್ರಮವನ್ನು ಶಟ್ಲ್ ಪ್ರಿಯರಿಗೆ ಉಣಬಡಿಸಿದ್ದಾರೆ ಸೈನಾ.

18ರ ಹರೆಯದ ಸೈನಾ ನೆಹ್ವಾಲ್ ಜತೆಗೆ ಇತರ ಮ‌ೂವರು ಬ್ಯಾಡ್ಮಿಂಟನ್ ಆಟಗಾರ್ತಿಯರ ಹೆಸರು ಕೂಡ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಟೇಬಲ್ ಮುಂದಿತ್ತು. ಅಂತಿಮವಾಗಿ ಸೈನಾ ನೆಹ್ವಾಲ್ 2008ರ ಅತ್ಯಂತ ಭರವಸೆಯ ಆಟಗಾರ್ತಿ ಎಂದು ಘೋಷಿಸಿದೆ.
PTI

ಇದೀಗ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗೌರವಕ್ಕೆ ಪಾತ್ರವಾಗಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, "ಈ ಗೌರವ ಪಡೆದಿರುವುದರಿಂದ ನಾನು ರೋಮಾಂಚನಗೊಂಡಿದ್ದೇನೆ ಮತ್ತು ತುಂಬಾ ಸಂತಸವಾಗಿದೆ. ಈ ರೀತಿಯ ಅವಾರ್ಡನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಆದರೆ ಈಗ ಅದನ್ನು ಪಡೆದಿದ್ದೇನೆ. ಇದರಿಂದ ನನಗೆ ಸ್ಪೂರ್ತಿಯ ಜತೆಗೆ ಸಾಕಷ್ಟು ಬಲ ಸಿಕ್ಕಂತಾಗಿದೆ. ಇನ್ನಷ್ಟು ಕಠಿಣ ಶ್ರಮವಹಿಸಿ ಉತ್ತಮ ಫಲಿತಾಂಶ ಪಡೆಯಲು ಯತ್ನಿಸುತ್ತೇನೆ" ಎಂದಿದ್ದಾರೆ.

ಈಕೆ ಹೈದರಾಬಾದ್ ಚೆಲುವೆ. ಟೆನಿಸ್‌ನಲ್ಲಿ ಮಿಂಚಿ ಸದ್ಯ ಮರೆಯಲ್ಲಿರುವ ಸಾನಿಯಾ ಮಿರ್ಜಾ ಕೂಡ ಇದೇ ಊರಿನವರು. ಇಂತಿಪ್ಪ ಸೈನಾ ಹುಟ್ಟಿದ್ದು ಹರ್ಯಾಣದ ಹಿಸಾರ್ ಎಂಬಲ್ಲಿ 1990ರ ಮಾರ್ಚ್ 17ರಂದು. ಸೈನಾ ನೆಹ್ವಾಲ್ ತಂದೆ-ತಾಯಿ ಮ‌ೂಲತಃ ಹರ್ಯಾಣದ ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್‌ಗಳು. ಉದ್ಯೋಗದಲ್ಲಿ ತಂದೆ ಡಾ. ಹರ್ವೀರ್ ಸಿಂಗ್ ವಿಜ್ಞಾನಿ. ತಾಯಿ ಉಷಾ ನೆಹ್ವಾಲ್‌‍ರಿಂದ ಸೈನಾ ಕಲಿತದ್ದು ಕೂಡ ಬಹಳ.

ಸೈನಾ ಬಾಲ್ಯಾವಸ್ಥೆಯಲ್ಲಿರುವಾಗಲೇ ಹೈದರಾಬಾದಿಗೆ ಸ್ಥಳಾಂತರಗೊಂಡ ಕುಟುಂಬ ಆಕೆಯನ್ನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿಸಬೇಕೆಂದು ಮಾಡಿದ ಖರ್ಚು ಅಷ್ಟಿಷ್ಟಲ್ಲ. ತನ್ನ ಉಳಿತಾಯ ಮತ್ತು ಭವಿಷ್ಯನಿಧಿಯಿಂದ ಹಣ ತೆಗೆದು ಮಗಳನ್ನು ತರಬೇತಿಗೊಳಿಸಿದ ತಂದೆ ಹರ್ವೀರ್‌ಗೆ ಆರಾಮ ಎನಿಸಿದ್ದು 2002ರ ನಂತರ. ಆ ಹೊತ್ತಿಗೆ ಸೈನಾ ಪ್ರತಿಭೆಯನ್ನು ಗುರುತಿಸಿ ಕೆಲ ಕಂಪನಿಗಳು ಪ್ರೋತ್ಸಾಹ ನೀಡಲು ಮುಂದೆ ಬಂದವು. ಯಶಸ್ಸನ್ನು ಬೆನ್ನಿಗೇರಿಸಿಕೊಂಡಿರುವ ಸೈನಾ ಹಿಂದೆ ಈಗ ಕಂಪನಿಗಳು ಸಾಲುಗಟ್ಟಿ ನಿಂತಿವೆ. ಈಕೆಗೆ ತರಬೇತಿ ನೀಡುತ್ತಿರುವವವರು ಬ್ಯಾಡ್ಮಿಂಟನ್ ದಂತಕತೆ ಪುಲ್ಲೇಲಾ ಗೋಪಿಚಂದ್.

ಬ್ಯಾಡ್ಮಿಂಟನ್‌ನಲ್ಲಿ ಗೈದ ಸಾಧನೆ...
- 2003ರಲ್ಲಿ ಝಕೊಸ್ಲಾವಿಯಾ ಜೂನಿಯರ್ ಓಪನ್ ಗೆಲುವು
- 2004ರ ಕಾಮನ್‌ವೆಲ್ತ್ ಯೂತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ
- 2005ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು
- 2006 ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರನ್ನರ್ ಅಪ್
- 2006ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ
- 2006ರ ಫಿಲಿಫೈನ್ಸ್ ಬ್ಯಾಡ್ಮಿಂಟನ್ ಓಪನ್ ಗೆಲುವು
- 2006ರ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಗೆಲುವು
- 2007ರ ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು
- 2007 ನ್ಯಾಷನಲ್ ಗೇಮ್ಸ್ ಆಫ್ ಇಂಡಿಯಾದಲ್ಲಿ ಸ್ವರ್ಣ ಪದಕ
- 2008ರ ಯೊನೆಕ್ಸ್ ಚೈನೀಸ್ ತೈಪೈ ಓಪನ್ ಗೆಲುವು
- 2008ರ ಇಂಡಿಯನ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು
- 2008ರ ಕಾಮನ್‌ವೆಲ್ತ್ ಯೂತ್ ಗೇಮ್ಸ್ ಚಿನ್ನದ ಪದಕ
- 2008ರ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆಲುವು

Share this Story:

Follow Webdunia kannada