Select Your Language

Notifications

webdunia
webdunia
webdunia
webdunia

ಅಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ

ಅಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ
ಚಂದ್ರಾವತಿ ಬಡ್ಡಡ್ಕ
ಭಾರತ ದೇಶವು 2008ರಲ್ಲಿ ಚಂದ್ರಯಾನದಂತಹ ಮಹತ್ವದ ಸಾಧನೆಯನ್ನು ಕಂಡು ಚಪ್ಪಾಳೆ ಹೊಡೆದಿದೆ. ಅಂತೆಯೇ ಮುಂಬೈಯಲ್ಲಿ ಉಗ್ರರು ಕೆನೆದ ಭಯೋತ್ಪಾದನೆಯ ಹೇಷಾರವವನ್ನು ಕಂಡು ಕಣ್ಣೀರು ಸುರಿಸಿದೆ. ವೋಟಿಗಾಗಿ ನೋಟಿನ ಮೂಲಕ ಪ್ರಜಾಪ್ರಭುತ್ವದ ಅಣಕ, ಸರಣಿ ಬಾಂಬ್ ಸ್ಫೋಟಗಳ ಅನುರಣನ, ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪಗಳು ಪರಸ್ಪರ ಸ್ಫರ್ಧೆಗೆ ಒಡ್ಡಿಕೊಂಡಿವೆ. ಆಗಿ ಹೋದ ವರ್ಷದ ಒಳಿತು-ಕೆಡುಕುಗಳನ್ನು ತಕ್ಕಡಿಗೆ ಹಾಕಿ ನೋಡಿದರೆ ರಾಜತಾಂತ್ರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಒಳಿತುಗಳಿಗಿಂತ ಕೆಡುಕುಗಳೇ ಹೆಚ್ಚು ತೂಗುತ್ತವೆ ಎಂಬುದು ವಿಷಾದನೀಯ.
WD

ಸ್ವಲ್ಪಸಿಹಿ
ಚಂದ್ರಲೋಕಕ್ಕೆ ಮಾನವರಹಿತ ಉಪಗ್ರಹ ಚಂದ್ರಯಾನ-1ರ ಉಡಾವಣೆ, ಏಕಕಾಲಕ್ಕೆ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ದೇಶೀಯ ಉಪಗ್ರಹವಾಹಕ ನೌಕೆ ಪಿಎಸ್ಎಲ್‌ವಿ ಒಯ್ದಿರುವುದು, ಅಣುವ್ಯಾಪಾರ ಒಕ್ಕೂಟದಲ್ಲಿ 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿರುವುದು, ಕನ್ನಡ, ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ, ಅರವಿಂದ ಅಡಿಗರಿಗೆ ಬೂಕರ್ ಪ್ರಶಸ್ತಿ, ಭಿಮಸೇನ್ ಜೋಷಿಯವರಿಗೆ ಭಾರತ ರತ್ನ, ಭಾರತ-ಅಮೆರಿಕ ಅಣು ಒಪ್ಪಂದ, ಒಲಿಂಪಿಕ್ಸ್‌ನಲ್ಲಿ ಪ್ರಥಮ ಚಿನ್ನ, ವಿಶ್ವಮಟ್ಟದಲ್ಲಿ ಬಲಿಷ್ಠವಾದ ಭಾರತದ ಕ್ರಿಕೆಟ್,.... ಎಲ್ಲವೂ 2008 ರಾಷ್ಟ್ರಕ್ಕೆ ನೀಡಿದ ಗರಿಗಳು.

ತುಂಬ ಹುಳಿ
ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂಬಂತೆ ಸಂಸತ್ತಿನಲ್ಲಿ ಝಣಝಣಿಸಿದ ನೋಟಿನ ಕಂತೆಗಳು, ವರ್ಷ ಪೂರ್ತಿ ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟಗಳು, ಅಣು ಒಪ್ಪಂದ ಮೂಲಕ ರಾಷ್ಟ್ರದ ಅಮೂಲ್ಯ ಹಕ್ಕುಗಳನ್ನು ಅಮೆರಿಕಕ್ಕೆ ಒತ್ತೆಯಿಟ್ಟದ್ದು, ಆಮ್ ಆದ್ಮಿ ತೇಕಲಾಗದಂತೆ ಉಬ್ಬರಿಸಿ ಅಬ್ಬರಿಸಿದ ಹಣದುಬ್ಬರ, ಆಕಾಶಕ್ಕೇರಿದ ಅಗತ್ಯವಸ್ತುಗಳ ಬೆಲೆ, ಪಾತಾಳಕ್ಕಿಳಿದ ಶೇರು ಸೂಚ್ಯಂಕ, ಹಿಂದೂ ಭಯೋತ್ಪಾದನೆ ಎಂಬ ಪರಿಕಲ್ಪನೆ, ಅಮರನಾಥ್ ಮಂದಿರ ಮಂಡಳಿಗೆ ಭೂ ಹಸ್ತಾಂತರದ ಪಶ್ಚಾತ್ ಕಂಪನಗಳ ಗೋಲಿಬಾರ್, ಗುಜ್ಜಾರ್ ಚಳುವಳಿಗಾರರ ಮೇಲೆ ಪೋಲೀಸರ ಗುಂಡು, ಬಿಹಾರಕ್ಕೆ ಅಕ್ಷರಶಃ ದುಃಖವಾದ ಕೋಸಿ ನದಿ ಹುಟ್ಟಿಸಿದ ಅವಾಂತರ, ಈಶಾನ್ಯ ರಾಜ್ಯಗಳಲ್ಲಿ ಹರಿದ ಪ್ರವಾಹ, ಮುಂದುವರಿದ ರೈತರ ಆತ್ಮಹತ್ಯೆ ಎಂಬ ಧಾರಾವಾಹಿ, ಮುಂಬೈಯಲ್ಲಿ ಮೆರೆದಾಡಿದ ಉತ್ತರಭಾರತೀಯರ ವಿರುದ್ಧದ ದಂಗೆ, ಒರಿಸ್ಸಾ, ಕರ್ನಾಟಕಗಳಲ್ಲಿ ನಡೆದ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ, ಇವೆಲ್ಲವುಗಳಿಗೆ ಮುಕುಟವಿಟ್ಟಂತೆ ಉಗ್ರರು 26/11ರಂದು ಮುಂಬೈಯಲ್ಲಿ ನಡೆಸಿದ ಅತ್ಯಂತ ಅಮಾನವೀಯ ಪಾಶವೀ ದಾಳಿಗಳಿಂದ ದೇಶ ಅಕ್ಷರಶಃ ನಲುಗಿತು.

ಹಾಗೆ ನೋಡಿದರೆ 2008 ಎಂಬ ವಿಕೋಪಗಳ ವರ್ಷದ ಆರಂಭ ಮುಂಬೈನ ಜುಹು ಬೀಚಿನ ಪಕ್ಕದ ಹೋಟೇಲೊಂದರಲ್ಲಿ ನಡೆದ ಹೊಸ ವರ್ಷದ ಮೋಜಿನ ಕೂಟದಲ್ಲಿ ಯುವತಿಯರಿಬ್ಬರ ಮೇಲಿನ ಲೈಂಗಿಕ ಕಿರುಕುಳದ ಸುದ್ದಿಯೊಂದಿಗೆ ಆರಂಭವಾಗಿದೆ. ಕಳೆದ ಹನ್ನೆರಡು ತಿಂಗಳತ್ತ ಒಂದು ಹಿನ್ನೋಟ ಹರಿಸಿದರೆ ಘಟನೆಗಳು ತಾಮುಂದು, ನಾಮುಂದು ಎಂಬಂತೆ ಕುಣಿಯುತ್ತವೆ. ಎಲ್ಲವನ್ನೂ ಸಂಘಟಿತವಾಗಿ ನೀಡುವ ನಿಟ್ಟಿನಲ್ಲಿ ನಾಲ್ಕೈದು ವಿಭಾಗಳದೊಳಗೆ ಹುದುಗಿಸಿ ನಮ್ಮ ಪ್ರೀತಿಯ ಓದುಗಮಿತ್ರರ ಮುಂದಿಡುವ ಪ್ರಯತ್ನ ಮಾಡಲಾಗಿದೆ ಒಪ್ಪಿಸಿಕೊಳ್ಳುವಂಥವರಾಗಿ.

ವೋಟಿಗಾಗಿ ನೋಟು
ರಾಜಕೀಯವಾಗಿ ರಾಷ್ಟ್ರವು ಈ ವರ್ಷ ಹಲವು ಏರುಪೇರುಗಳನ್ನು ಕಂಡಿದೆ. ಅಣುಒಪ್ಪಂದದಲ್ಲಿ ಯುಪಿಎ ಸರಕಾರ ಮುಂದುವರಿದಾಗ, ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟುಮಾಡುವಂತಹ ಒಪ್ಪಂದದಲ್ಲಿ ಕಾರ್ಯಗತವಾಗಲು ಅವಕಾಶ ನೀಡೆವು ಎಂದ ಎಡಪಕ್ಷಗಳು ಬೆಂಬಲ ಹಿಂತೆಗೆದಾಗ, ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಸಂಸದೀಯ ಬಲದಲ್ಲಿ ಅಲ್ಪಸಂಖ್ಯಾತವಾಯಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ಮತಯಾಚಿಸಿದಾಗ ನಡೆದ ನಾಟಕಗಳು ಮತ್ತು ನಾಚಿಕೆಗೇಡುಗಳು ಪಕ್ಷಾತೀತವಾಗಿತ್ತು. ಪಕ್ಷದ ವಿಪ್ ಉಲ್ಲಂಘಿಸಿ ವಿವಿಧ ಪಕ್ಷಗಳ ಸದಸ್ಯರು ಸರ್ಕಾರದ ಪರವಾಗಿ ಅಥವಾ ವಿರೋಧವಾಗಿ ಮತ ಚಲಾಯಿಸಿದ ಮತ್ತು ತಟಸ್ಥ ನಿಲುವು ತಳೆದ ಘಟನೆಗಳು ನಡೆಯಿತು. ಸಿಕ್ಕ ಅವಕಾಶವನ್ನು ದಕ್ಕಿಸಿಕೊಂಡ ಅತೃಪ್ತ ಸಂಸದರು ಎದುರುಪಕ್ಷಗಳತ್ತ ಕುಡಿನೋಟ ಬೀರಿ, ಅವರ ಪ್ರೀತಿಗೆ ಪಾತ್ರರಾಗಿ ಸೂಟ್‌ಕೇಸ್‌ ಪಡೆದುಕೊಂಡರು. ಇದಾದ ಬಳಿಕ ಕೆಲವರು ಪಕ್ಷಕ್ಕೆ ರಾಜೀನಾಮೆ ಬಿಸಾಡಿದರೆ, ಮತ್ತೆ ಕೆಲವರು ಉಚ್ಚಾಟಿಸಿಕೊಂಡರು.
webdunia
PTI

ಎಲ್ಲ ಲೆಕ್ಕಾಚಾರವನ್ನು ಮೀರಿ, ಅತ್ಯಂತ ಸಾತ್ವಿಕ ರಾಜಕಾರಣಿ ಎಂದು ಕರೆಸಿಕೊಂಡಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಮತ ಗೆಲ್ಲುವಲ್ಲಿ ಕಾಣದ ಕೈಗಳು ಕೆಲಸಮಾಡಿದ್ದವು ಎಂಬುದನ್ನು ಸಂಖ್ಯಾ ಲೆಕ್ಕಾಚಾರಗಳು ತೋರಿಸಿಕೊಟ್ಟವು.

ವಿಶ್ವಾಸ ಮತದ ಗೊತ್ತುವಳಿ ಮೇಲೆ ಚರ್ಚೆ ನಡೆಸಿದಾಗ ಪ್ರಮುಖ ವಿರೋಧ ಪಕ್ಷ ಎನ್‌ಡಿಎ, ಆಡಳಿತಾರೂಢ ಯುಪಿಎ ಸರ್ಕಾರದ ಪರ ಮತಚಲಾಯಿಸಲು ಕುದುರೆ ವ್ಯಾಪಾರ ಮಾಡಿದೆ ಎಂಬ ಆರೋಪ ಹೊರಿಸಿತು. ಈ ಆರೋಪಕ್ಕೆ ಆಡಳಿತ ಪಕ್ಷ ಪುರಾವೆ ಕೇಳಿತು. ಪುರಾವೆ ಒದಗಿಸಲು ಮುಂದಾದ ಬಿಜೆಪಿ ಸಂಸದರು, ಲಂಚ ನೀಡಿದ ಹಣವೆಂದು ನೋಟಿನ ಕಂತೆಗಳನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದರು. ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಒಂದು ಕ್ಷಣ ಏನಾಗುತ್ತಿದೆ ಎಂಬುದೇ ಗೊತ್ತಾಗದ ಪರಿಸ್ಥಿತಿ. ಮೂವರು ಬಿಜೆಪಿ ಸದಸ್ಯರನ್ನು ಒಲಿಸಿಕೊಳ್ಳಲು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರು ನೀಡಿದ ಒಂದು ಕೋಟಿ ರೂಪಾಯಿ ಇದೆಂದೂ, ಈ ಹಣವನ್ನು ನೀಡುವಾಗ ಸಿಎನ್ಎನ್-ಐಬಿಎನ್ ವಾಹಿನಿಯು ಕುಟುಕು ಕಾರ್ಯಾಚರಣೆ ನಡೆಸಿದೆ ಎಂದೂ ಹೇಳಲಾಯಿತು.
ಅದೇನೇ ಇದ್ದರೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ತಿನಲ್ಲಿ ನಡೆದ ಈ ಘಟನೆ ಪ್ರಜಾಸತ್ತೆಯ ಕಪ್ಪುಚುಕ್ಕೆ. ಈ ದೃಶ್ಯಗಳು ದೂರದರ್ಶನಗಳಲ್ಲಿ ನೇರಪ್ರಸಾರವಾಗುತ್ತಿದ್ದು, ವಿಶ್ವದ ಮುಂದೆ ಲಂಗೋಟಿ ಬಿಚ್ಚಿ ನಿಂತಂತಹ ಮುಜುಗರದ ಪರಿಸ್ಥಿತಿಯನ್ನು ರಾಷ್ಟ್ರ ಎದುರಿಸಿದ್ದು 2008ರ ಘೋರ ದುರಂತಗಳಲ್ಲಿ ಒಂದು. ಆಮೇಲೆ ಸಂಸದರು ಆರೋಪಮುಕ್ತವಾಗಿದ್ದೂ ಆಗಿ ಹೋಯಿತು.

ಉತ್ತರಭಾರತೀಯರು V/s ಮರಾಠಿಗರು
ಮಹಾರಾಷ್ಟ್ರದಲ್ಲಿ ಅದರಲ್ಲೂ ವಿಶೇಷವಾಗಿ ಮುಂಬೈಯಲ್ಲಿ ಉತ್ತರಭಾರತೀಯರೇ ತುಂಬಿದ್ದು ತಮ್ಮ ನೆಲದಲ್ಲೇ ಮರಾಠಿಗರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ನಡೆಸಿದ ಚಳುವಳಿ ಮತ್ತು ತದನಂತರದ ಪಕ್ಕಾ ರಾಜಕೀಯಗಳಿಂದಾಗಿ ಮುಂಬೈಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳು ತೀವ್ರ ತೊಂದರೆ ಎದುರಿಸುವಂತಾಯಿತು. ಮರಾಠಿಗರ ಕಣ್ಣಲ್ಲಿ ರಾಜ್‌ಠಾಕ್ರೆ ಹೀರೋ ಆಗ ಹೊರಟರು.

ಮುಂಬೈಯಲ್ಲಿ ನಡೆದ ರೈಲ್ವೇ ಮಂಡಳಿ ಪರೀಕ್ಷೆಯಲ್ಲಿ ಮರಾಠಿಗರಿಗೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪರೀಕ್ಷೆಗೆ ಬಂದ ಬಿಹಾರಿಗಳನ್ನು ಎಂಎನ್ಎಸ್ ಮತ್ತು ಶಿವಸೇನಾದ ಕಾರ್ಯಕರ್ತರು ಚೆನ್ನಾಗಿ ಥಳಿಸಿದರು. ಪರೀಕ್ಷೆಗೆ ಬಂದ ಓರ್ವ ಅಭ್ಯರ್ಥಿ ಸಾವನ್ನಪ್ಪಿದ, ಈತ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಕಾಲುಜಾರಿ ಬಿದ್ದನೆಂದು ರೈಲ್ವೇ ನಿಲ್ದಾಣದ ಸಿಸಿಟಿವಿ ಹೇಳುತ್ತದೆ ಎಂದು ಬಳಿಕ ಸಾರಲಾಯಿತು.

ಬಿಹಾರಿಗಳಿಗೆ ನಾವು ಬಡಿದೆವು ಎಂದು ಶಿವ ಸೇನೆ ಹೇಳಿಕೊಂಡಿತು. 'ಮರಾಠಿಗರ ರಕ್ಷಣೆ' ಎಂಬ ಮರಾಠಿ ಸೆಂಟಿಮೆಂಟಿನ ನಮ್ಮ ಚಳುವಳಿಯನ್ನು ಎಂಎನ್ಎಸ್ ಹೈಜಾಕ್ ಮಾಡುತ್ತದೆ ಎಂದು ಶಿವಸೇನೆ ದೂರಿತು.

ಇದಾದ ಬಳಿಕ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಹಾರ ಮತ್ತು ಉತ್ತರ ಭಾರತದ ರಾಜಕಾರಣಿಗಳು ಠಾಕ್ರೆ ವಿರುದ್ಧ ದಂಗೆ ಎದ್ದರು. ಬಿಹಾರಿಗಳ ವಿಚಾರವೆಂದು ಬಿಹಾರದ ರಾಜಕಾರಣಿಗಳೆಲ್ಲ ಒಗ್ಗಟ್ಟು ಪ್ರದರ್ಶಿಸಿದರೂ, ವಿವಿಧ ಪಕ್ಷಗಳ ರಾಜಕಾರಣಿಗಳು (ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್‌ರಂತಹ) ತಾಕತ್ತಿದ್ದರೆ ರಾಜೀನಾಮೆ ನೀಡುವ ಸವಾಲುಗಳನ್ನು ಪರಸ್ಪರ ಹಾಕಿಕೊಂಡರು. ಕೊನೆಗೆ ಯಾರೂ ರಾಜೀನಾಮೆ ನೀಡಿಲ್ಲ, ಅಥವಾ ಸಂಸದರು ನೀಡಿದ ರಾಜೀನಾಮೆ ಸ್ವೀಕೃತವಾಗಲಿಲ್ಲ ಎಂಬುದು ಬೇರೆ ವಿಚಾರ.
webdunia
PTI

ಈ ಮಧ್ಯೆ, ರಾಹುಲ್ ರಾಜ್ ಎಂಬ 21ರ ಹರೆಯದ ಉನ್ಮತ್ತ ಯುವಕನೊಬ್ಬ ಏಕಾಂಗಿಯಾಗಿ ಸಶಸ್ತ್ರ ದಂಗೆ ದಾಖಲಿಸಿ ಪೊಲೀಸರ ಗುಂಡಿಗೆ ಬಲಿಯಾದ ಘಟನೆಯೂ 2008ರ ಕಾಲಗರ್ಭದಲ್ಲಿ ಸೇರಿದೆ. ಮುಂಬೈಗೆ ಆಗಮಿಸಿದ್ದ ಈ ಹುಡುಗ, ಕೈಯಲ್ಲಿ ಪಿಸ್ತೂಲು ಹಿಡಿದು ಬೆಸ್ಟ್ ಬಸ್ಸೊಂದರಲ್ಲೇರಿ, ಬಸ್ಸನ್ನು ಒತ್ತೆಯಾಗಿಸಿಕೊಳ್ಳಲು ಪ್ರಯತ್ನಿಸಿದ್ದ. ಬಸ್ಸಿನ ನಿರ್ವಾಹಕ ಮತ್ತು ಪ್ರಯಾಣಿಕರೊಡನೆ ದುಂಡಾವರ್ತನೆ ತೋರಿದ್ದು, ತಾನು ರಾಜ್ ಠಾಕ್ರೆಯನ್ನು ಕೊಲ್ಲಲು ಬಂದಿದ್ದೇನೆ ಎನ್ನುತ್ತಾ ದಾಂಧಲೆ ಎಬ್ಬಿಸಿ ಸಾರ್ವಜನಿಕರಿಗೆ ಸಂಕಟ ನೀಡಿದ್ದ. ಕೈಯಲ್ಲಿ ಪಿಸ್ತೂಲು ಹಿಡಿದಿದ್ದ ಈತನ ಮೇಲೆ ಪೊಲೀಸರು ಗುಂಡು ಹಾರಿಸಿದಾಗ, ಈತ ಸಾವನ್ನಪ್ಪಿದ್ದ. ಈ ಘಟನೆಯೂ ಸಾಕಷ್ಟು ವಿವಾದಕ್ಕೀಡಾಗಿತ್ತು.

ಲೋಕಲ್ ರೈಲಿನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಯುವಕನೊಬ್ಬನ ಮೇಲೆ ನಡೆದ ಹಲ್ಲೆಯಿಂದಾಗಿ ಆತ ಅಸುನೀಗಿದ ಘಟನೆಯೂ ವಿವಾದಕ್ಕೆಡೆ ಮಾಡಿತ್ತು. ನಾಲ್ಕು ಮಂದಿ ಉತ್ತರ ಪ್ರದೇಶದ ಯುವಕರು ಹಬ್ಬಕ್ಕೆ ಊರಿಗೆ ತೆರಳುತ್ತಿದ್ದರು. ರೈಲಿನಲ್ಲಿದ್ದ ಸುಮಾರು ಹನ್ನೊಂದು ಮಂದಿಯಿದ್ದ ಮರಾಠಿ ಭಾಷಿಕರ ತಂಡಕ್ಕೂ ಇವರಿಗೂ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಹಿಂದಿ ಮಾತನಾಡುತ್ತಿದ್ದ ಇವರು ಹೊಂದಿದ್ದ ಸೂಟ್‌ಕೇಸ್‌ಗಳನ್ನು ಕಂಡ ಮರಾಠಿ ಯುವಕರು, ಊರಿಗೆ ಹೋದ ನೀವು ಅಲ್ಲೇ ಇರಿ ಮತ್ತೆ ಮರಳಬೇಡಿರೆಂದರಂತೆ. ಹೀಗೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದು, ಆಯಕಟ್ಟಿನ ಜಾಗಕ್ಕೆ ಏಟು ಬಿದ್ದಿದ್ದ ಯುವಕನೊಬ್ಬ ಸಾವನ್ನುಪ್ಪಿದ್ದ.

ಹೀಗೆಲ್ಲ ಮರಾಠಿಗರ ಹಿತಕಾಪಾಡಲು ಮುಂದಾದ ಎಂಎನ್ಎಸ್ ಮುಖ್ಯಸ್ಥರು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಬಿದ್ದ ಅಮಿತಾಭ್ ಬಚ್ಚನ್ ಕುಟುಂಬ, ಹಿಂದಿಮಾತಾಡುತ್ತೇನೆಂದು ಸಿನಿಮಾ ಸಮಾರಂಭದಲ್ಲಿ ಜಯಾಬಚ್ಚನ್ ನೀಡಿದ್ದ ಹೇಳಿಕೆಗೆ ರಾಜಕೀಯ ಲೇಪನವಾಯಿತು. ಕೊನೆಗೆ ಅಮಿತಾಭ್ ಬಚ್ಚನ್ ಕ್ಷಮೆಯನ್ನೂ ಯಾಚಿಸಿದರು. ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಸವಾಲು ಹಾಕಿದ ರಾಜ್ ಠಾಕ್ರೆ ಎರಡೆರಡು ಬಾರಿ ಬಂಧನಕ್ಕೀಡಾಗಿ ಜಾಮೀನು ಪಡೆದರು. ಉದ್ರೇಕಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ಆದೇಶ ಹೊರಡಿಸಿದ್ದರೂ, ಪತ್ರಿಕಾಗೋಷ್ಠಿಗಳನ್ನು ಕರೆದರು.

ನವೆಂಬರ್ 26ರಂದು ಮುಂಬೈ ಮೇಲೆ ಉಗ್ರರು ಹಿಂದೆಂದೂ ಕಾಣದಂತಹ ಘೋರ ರೀತಿಯ ದಾಳಿ ನಡೆಸಿ, ಮುಂಬೈಯ ತಾಜ್, ಒಬೇರಾಯ್ ಹೋಟೇಲುಗಳು ಮತ್ತು ನಾರಿಮನ್ ಹೌಸ್‌ಗಳನ್ನು ಒತ್ತೆಯಾಗಿಸಿ, ಯದ್ವಾತದ್ವಾ ಗುಂಡುಹಾರಿಸಿದರು. ಈ ವೇಳೆ ಬಂದ ಎನ್ಎಸ್‌ಜಿ ಕಮಾಂಡೋಗಳು ಉಗ್ರರ ಹೆಡೆಮುರಿ ಕಟ್ಟಿದರು. ಈ ಘಟನೆಯ ಬಳಿಕ ಮರಾಠಿಗರ ರಕ್ಷಣೆಯ ನೆಪ ಇಟ್ಟು ರಾಜಕೀಯ ಮಾಡಿದ ರಾಜ್ ಠಾಕ್ರೆ ತೀವ್ರ ಟೀಕೆಗೊಳಗಾದರು. ಮುಂಬೈಯನ್ನು ಉಗ್ರರ ಹಿಡಿತದಿಂದ ಮರಳಿ ಪಡೆಯಲು ಪ್ರಾಣದ ಹಂಗುತೊರೆದು ಕಾದಾಡಿದ ಎನ್ಎಸ್‌ಜಿಯಲ್ಲಿ ರಾಷ್ಟ್ರದ ಎಲ್ಲ ಭಾಗದ ಕಮಾಂಡೋಗಳು ಇದ್ದರು, ಈಗೇನು ಹೇಳುತ್ತೀರಿ ರಾಜ್ ಠಾಕ್ರೆ ಎಂಬ ಪ್ರಶ್ನೆಗಳು ಕೇಳಲ್ಪಟ್ಟವು.

ಈ ಘಟನೆಯ ಬಳಿಕ ಮಾತ್ರ ರಾಜ್ ಠಾಕ್ರೆ ಮಾಧ್ಯಮಗಳ ಮುಂದೆ ಕಾಣಲೂ ಇಲ್ಲ; ಕಮಕ್-ಕಿಮಕ್ ಅನ್ನಲೂ ಇಲ್ಲ!

ನಕ್ಸಲ್ ರಗಳೆ
ಒರಿಸ್ಸಾ, ಛತ್ತೀಸ್‌ಗಢ ಮತ್ತು ಕರ್ನಾಟಕಗಳಲ್ಲಿ ನಕ್ಸಲರು ತಮ್ಮ ಅಟ್ಟಹಾಸವನ್ನು ಮುಂದುವರಿಸಿದ್ದಾರೆ. ಪೊಲೀಸರ ಗಸ್ತು ವಾಹನದ ಮೇಲೆ ನಕ್ಸಲರು ನಡೆಸಿರುವ ಹೊಂಚು ದಾಳಿಯಲ್ಲಿ 15 ಪೊಲೀಸರು ಸಾವನ್ನಪ್ಪಿದ್ದರು. ಅಂತೆಯೇ ಕರ್ನಾಟಕ ಮತ್ತು ಛತ್ತೀಸ್‌ಗಢವೂ ನಕ್ಸಲ್‌ಬಾರಿ ಚಳುವಳಿಯಿಂದ ಮುಕ್ತವಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ಮೂವರು ನಕ್ಸಲರು ಪೊಲೀಸರೊಂದಿಗೆ ನಡೆಸಿರುವ ದಾಳಿಯಲ್ಲಿ ಸಾವನ್ನಪ್ಪಿದ ನೆನಪಿನ್ನೂ ಹಸಿಹಸಿ.

ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ
ನಕ್ಸಲ್ ಹಿಂಸೆಯಂತೆಯೇ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಒರಿಸ್ಸಾ ಮತ್ತು ಕರ್ನಾಟಕದಲ್ಲಿ ದಾಳಿಗಳು ನಡೆದಿದ್ದು, ಈ ಪ್ರಕರಣವು ಸಂಸತ್ತಿನಲ್ಲಿ ಧ್ವನಿಸಿದ್ದವು. ಒರಿಸ್ಸಾದಲ್ಲಿ ಕಳೆದ ಕ್ರಿಸ್‌ಮಸ್ ಆಚರಣೆ ವೇಳೆಗೆ ಹಿಂದೂ ಸಂಘಟನೆಗಳು ಮತ್ತು ಕ್ರೈಸ್ತರ ನಡುವೆ ಘರ್ಷಣೆಗಳಾಗಿದ್ದು ಹಲವಾರು ಕೈಸ್ತ ಪ್ರಾರ್ಥನಾ ಮಂದಿರಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ಆಶ್ರಮವಾಸಿಯಾಗಿದ್ದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರ ನಾಲ್ವರ ಹತ್ಯೆಯಾಗಿರುವುದು ಈ ಎರಡು ಸಮುದಾಯದ ನಡುವಿನ ಘರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
webdunia
PTI

ಅಂತೆಯೇ ಕರ್ನಾಟಕದ ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಿಂದೂ ದೇವರುಗಳ ವಿರುದ್ಧ ಅವಹೇಳನ ಬರಹಗಳನ್ನು ಪ್ರಕಟಿಸಿ, ಬಲವಂತದ ಮತಾಂತರ ನಡೆಯುತ್ತದೆ ಎಂಬ ಅರೋಪಗಳೊಂದಿಗೆ ಕೆಲವು ಅನಧಿಕೃತ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಸಾಂಕ್ರಾಮಿಕ ಎಂಬಂತೆ ಈ ಘಟನೆ ಪಕ್ಕದ ಪ್ರದೇಶಗಳಿಗೂ ವ್ಯಾಪಿಸಿ ಗಲಭೆ, ಘರ್ಷಣೆಗಳಿಗೆ ನಾಂದಿಯಾಗಿತ್ತು.

ಒರಿಸ್ಸಾದಲ್ಲಿ ಚರ್ಚುಗಳ ಮೇಲೆ ನಡೆದ ದಾಳಿಯ ವೇಳೆಗೆ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪವು ಸಾರ್ವಜನಿಕ ಖಂಡನೆಗೀಡಾಗಿತ್ತು. ಪೊಲೀಸರು ಸನ್ಯಾಸಿನಿಯ ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪಗಳು ವಿವಾದಕ್ಕೆಡೆ ಮಾಡಿದ್ದವು. ಆದರೆ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಯಿತು, ಠಾಣೆಗೆ ದೂರು ನೀಡಲು ತೆರಳಿದಾಗ ಹಾಕಿಕೊಳ್ಳಲು ಬಟ್ಟೆಯನ್ನೂ ನೀಡಿಲ್ಲ, ತಾನು ಪೆಟ್ಟಿಕೋಟಿನಲ್ಲೇ ತೆರಳಬೇಕಾಯಿತು ಎಂದೆಲ್ಲ ಪತ್ರಿಕಾಗೋಷ್ಠಿಯಲ್ಲಿ ಬರೆದು ತಂದ ಹೇಳಿಕೆಯನ್ನು ಓದಿದ್ದ ಅದೇ ಸನ್ಯಾಸಿನಿ, ಪೊಲೀಸರಿಗೆ ಹೇಳಿಕೆ ನೀಡಿದಾಗ ಇದಕ್ಕೆ ವ್ಯತಿರಿಕ್ತ ಎಂಬಂತಹ ಹೇಳಿಕೆ ನೀಡಿದ್ದರು. "ತನ್ನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ, ತಾನು ಆತನಿಂದ ತಪ್ಪಿಸಿಕೊಳ್ಳಲು ಸೆಣಸಾಡಿದೆ. ಬಳಿಕ ಮತ್ತಿಬ್ಬರು ಅತ್ಯಾಚಾರ ಎಸಗಲು ಮುಂದಾದಾಗ ಹಿಂದೂ ಒಬ್ಬ ನನ್ನನ್ನು ರಕ್ಷಿಸಿದ್ದು, ಸಾಮೂಹಿಕ ಅತ್ಯಾಚಾರವಾಗುವುದನ್ನು ತಪ್ಪಿಸಿದ" ಎಂಬ ಹೇಳಿಕೆ ನೀಡಿದ್ದಾರೆ. ಈ ಎರಡು ಹೇಳಿಕೆಯನ್ನು ಗಮನಿಸಿದಾಗ ಒಟ್ಟಾರೆ ಘಟನೆಯ ಮೇಲೆಯೇ ಸಂಶಯ ಹುಟ್ಟಿಕೊಳ್ಳುತ್ತದೆ.

ಉಗ್ರರ ದಾಳಿಗಳು
ರಾಷ್ಟ್ರವು ವರ್ಷವಿಡೀ ಭಯೋತ್ಪಾದನಾ ದಾಳಿಯಿಂದ ನಲುಗಿ ಹೋಗಿದೆ. ದೆಹಲಿ, ಮುಂಬೈ, ಬೆಂಗಳೂರು, ಗುವಾಹತಿ, ಅಹಮದಾಬಾದ್, ಲಕ್ನೋ, ಜೈಪುರ ಸೇರಿದಂತೆ ರಾಷ್ಟ್ರದ ಉದ್ದಗಲದಲ್ಲಿ ಉಗ್ರರು ದಾಳಿ ನಡೆಸುತ್ತಲೇ ಹೋದರು. (ಭಯೋತ್ಪಾದನಾ ದಾಳಿಯ ಕುರಿತೇ ಈ ವಿಶೇಷ ಪುಟದಲ್ಲಿ ಮತ್ತೊಂದು ಲೇಖನವಿದೆ) ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಆಗದ ಷಂಡತನ, ಕೊಳಕು ರಾಜಕೀಯದಿಂದಾಗಿ ಅದೆಷ್ಟೋ ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿರುವುದು 2008ರ ಇನ್ನೊಂದು ವಿಪರ್ಯಾಸ.
webdunia
ND

ಯಾವತ್ತೋ ಸತ್ತುಹೋಗಿರುವ ಬಾಬರನೆಂಬೋ ಮುಸ್ಲಿಮ, ರಾಮ ಹುಟ್ಟಿದ ಅಯೋಧ್ಯೆಯಲ್ಲಿದ್ದ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿದ ಎಂಬ ಕಾರಣಕ್ಕೆ ಸದರೀ ಬಾಬರನ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹೊರಟು, ಈಗ್ಗೆ ಹದಿನಾರು ವರ್ಷದ ಹಿಂದೆ ಅಲ್ಲಿದ್ದ ಪುರಾತನ ಮಸೀದಿಯನ್ನು ಕೆಡವಿರುವುದು, ಕಾಂದಹಾರ್ ವಿಮಾನ ಅಪಹರಣವಾದಾಗ, ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷೆಯ ಹಿನ್ನೆಲೆಯಲ್ಲಿ ಅಪಹರಣಕಾರರ ಬೇಡಿಕೆಗೆ ತಲೆಬಾಗಿ ಸೆರೆಯಲ್ಲಿದ್ದ ಉಗ್ರ ಮಸೂದ್‍‌ನನ್ನು ಬಿಡುಗಡೆ ಮಾಡಿರುವುದು, ಸಂಸತ್ ಮೇಲೆ ದಾಳಿ ನಡೆಸಿರುವ ರೂವಾರಿ ಅಫ್ಜಲ್ ಗುರು ಎಂಬಾತನ ವಿರುದ್ಧ ಸರ್ವೋಚ್ಛ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ಜಾರಿಗೆ ತರಲು ಆತ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ನೆಪ ಒಡ್ಡುತ್ತಿರುವುದು, ವಿಧ್ವಂಸಕ ಕಾರ್ಯಗಳನ್ನು ನಡೆಸಿರುವ ದುರುಳರ ಮಾನವಹಕ್ಕುಗಳ ಸಂರಕ್ಷಣೆಯ ಬಗ್ಗೆ ವ್ಯಕ್ತವಾಗುವ ಪ್ರತಿಭಟನೆಗಳು ಮತ್ತು ಒಟ್ಟಾರೆಯಾಗಿ ವೋಟ್‌ಬ್ಯಾಂಕ್ ರಾಜಕೀಯ - ಈ ಎಲ್ಲವುಗಳ ಫಲ ಎಂಬಂತೆ ಈ ವರ್ಷದ ನವೆಂಬರ್ 26ರಂದು ಮುಂಬೈಯಲ್ಲಿ ಹಿಂದೆಂದೂ ನಡೆಯದಿರುವಂತೆ ದಾಳಿ ನಡೆದು ಹೋಯಿತು.

ಚೆನ್ನಾಗಿ ಅಭ್ಯಾಸ ನಡೆಸಿದ ಕ್ರೀಡಾಪಡುಗಳು ಆಟದ ಅಂಗಳಕ್ಕೆ ಇಳಿದಷ್ಟೇ ಸಲೀಸಾಗಿ ಮುಂಬೈಯನ್ನು ತಮ್ಮ ಆಡುಂಬೊಲವಾಗಿ ಮಾಡಿಕೊಂಡ ತರಬೇತುಗೊಂಡ ಬೆರಳೆಣಿಕೆಯ ಹತ್ತು ಮಂದಿ ಉಗ್ರರು ಸಲೀಸಾಗಿ ಎಲ್ಲೆಂದರಲ್ಲಿ ನುಗ್ಗಿ ಗುಂಡು, ಗ್ರೆನೇಡುಗಳನ್ನು ಹಾರಿಸಿದ ಪರಿ ಇಷ್ಟುದೊಡ್ಡ ರಾಷ್ಟ್ರದ ಭದ್ರತಾ ವ್ಯವಸ್ಥೆಯನ್ನು ಅಣಕಿಸಿ ಅಣಕಿಸಿ ನಕ್ಕಿತು. ದಾಳಿಕೋರರ ದೇಹಭಾಷೆಯು ಇಲ್ಲಿ ಏನೂಮಾಡಿದರೂ ದಕ್ಕಿಸಿಕೊಂಡೇವೂ ಎಂಬಂತಿತ್ತು. ಪ್ರತಿಯೊಂದು ವಿಚಾರವನ್ನು, ತಮ್ಮ ದಾಳಿಯ ಗುರಿಗಳನ್ನು ಚೆನ್ನಾಗಿ ಅಭ್ಯಸಿಸಿದ್ದ ಉಗ್ರ ಹುಡುಗರು ಅತ್ಯಂತ ಹರ್ಷದಿಂದ, ಲವಲವಿಕೆಯಿಂದ, ಆತ್ಮವಿಶ್ವಾಸದಿಂದ ಲೀಲಾಜಾಲವಾಗಿ ತಮ್ಮ ದುಷ್ಕೃತ್ಯವನ್ನು ನಡೆಸುತ್ತಿದ್ದರು ಎಂದು ಇವರ ದಾಳಿಯಿಂದ ಪಾರಾದವರು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಭದ್ರತಾ ಮತ್ತು ಬೇಹುಗಾರಿಕಾ ವ್ಯವಸ್ಥೆಯು ಈ ಉಗ್ರರ ಭಯೋತ್ಪಾದನಾ ಬದ್ಧತೆಯಿಂದ ಕಲಿಯಬೇಕಿರುವುದು ಬಹಳಷ್ಟಿದೆ ಎಂಬ ಸಂದೇಶ ರವಾನೆಯಾಗಿದೆ.

ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಲು ಹಾಕಲು ಹೊರಟಿರುವ ನಮ್ಮ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ಛೀ..ಥೂ ಎಂಬುದಾಗಿ ಉಗಿಸಿಕೊಂಡಿದ್ದಾರೆ. ಇದೀಗ ಜ್ಞಾನೋದಯವಾದಂತೆ ಸರಕಾರವೂ ಉಗ್ರರ ವಿರುದ್ಧ ಉಗ್ರ ಕ್ರಮಕೈಗೊಳ್ಳಲು ಮುಂದಾಗಿದೆ ಮತ್ತು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಕಾನೂನು ಕಠಿಣಗೊಳಿಸಿದೆ, ರಾಷ್ಟ್ರೀಯ ತನಿಖಾ ಏಜೆನ್ಸಿ ಹುಟ್ಟು ಪಡೆದಿದೆ. ಪಾಕಿಸ್ತಾನದೊಂದಿಗಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ.

ಈ ಎಲ್ಲ ಘಟನೆಗಳನ್ನು ಕಂಡ ಜನಸಾಮಾನ್ಯನಿಗೆ ಉಗ್ರವಾದ, ಭಯೋತ್ಪಾದನೆ ಅಥವಾ ಆತಂಕವಾದವೆಂಬ ಶಬ್ದ ಈಗ ಅತ್ಯುಗ್ರವಾಗಿ ಕೇಳಿ ಭಯ ಇಲ್ಲವೇ ಆತಂಕ ಹುಟ್ಟಿಸದೇ, ಅತ್ಯಂತ ಸಹಜ ಶಬ್ದ ಎಂಬಂತೆ ಕಿವಿಯ ತಮಟೆಗೆ ಅಪ್ಪಳಿಸುತ್ತದೆ.

ಹಿಂದೂ ಭಯೋತ್ಪಾದನೆ
ಮಾಲೆಗಾಂವ್‌ನಲ್ಲಿ ಸೆಪ್ಟೆಂಬರ್ 29ರಂದು ನಡೆಸಿರುವ ಬಾಂಬ್ ದಾಳಿಯ ಹಿಂದೆ ಹಿಂದೂ ಸಂಘಟನೆ ಅಭಿನವ್ ಭಾರತ್ ಎಂಬುದರ ಕೈವಾಡ ಇದೆ ಎಂಬುದಾಗಿ ತನಿಖೆಯಲ್ಲಿ ಪತ್ತೆಯಾಗಿರುವುದು ಭಯೋತ್ಪಾದನೆಯ ಪಟ್ಟಿಗೆ ಹಿಂದೂ ಭಯೋತ್ಪಾದನೆ ಎಂಬ ಹೆಸರು ಸೇರಿಕೊಂಡಿತು. ಸಾಧ್ವಿ ಪ್ರಜ್ಞಾ (ಪ್ರಗ್ಯಾ) ಸಿಂಗ್ ಠಾಕೂರ್ ಎಂಬಾಕೆಯ ದ್ವಿಚಕ್ರವಾಹನವನ್ನು ಬಳಸಿ ಸ್ಫೋಟ ನಡೆಸಲಾಗಿದೆ ಎಂದು ತಿಳಿದ ಮುಂಬೈ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದರ ಎಳೆಯನ್ನು ಹಿಡಿದು ಸುಮಾರು ಹನ್ನೊಂದು ಜನರನ್ನು ಬಂಧಿಸಿದೆ. ಬಂಧಿತರಲ್ಲಿ ದಯಾನಂದ ಪಾಂಡೆ ಎಂಬ ಸ್ವಯಂ ಘೋಷಿತ ಸ್ವಾಮೀಜಿ, ಸೇವಾನಿರತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಅಭಿನವ ಭಾರತ್‌ನ ಇತರ ಕಾರ್ಯಕರ್ತರು ಸೇರಿದ್ದಾರೆ. ಸ್ಫೋಟಕ್ಕೆ ಬಳಸಿರುವ ಈ ದ್ವಿಚಕ್ರವಾಹನವನ್ನು ತಾನು ಮಾರಾಟ ಮಾಡಿದ್ದೇನೆ ಎಂಬುದು ಸಾಧ್ವಿ ಹೇಳಿಕೆ.
webdunia
PTI

ಬೇರಾವ ಬಾಂಬ್ ಸ್ಫೋಟ ಪ್ರಕರಣಕ್ಕಿಂತ ಹೆಚ್ಚಿನ ಆಸಕ್ತಿಯಿಂದ, ಚುರುಕಿನಿಂದ ಪ್ರಕರಣದ ಹಿಂದೆ ಪೊಲೀಸರು ಮುರಕ್ಕೊಂಡು ಬಿದ್ದಿರುವುದು, ತನಿಖೆಯ ವೇಗ, ಮಾಧ್ಯಮಗಳಿಗೆ ಸೋರುತ್ತಿದ್ದ ವಿಚಾರಗಳು, ನ್ಯಾಯಾಲಯಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು, ಈ ಪ್ರಕರಣದ ಆರೋಪಿಗಳ ಮಾನವಹಕ್ಕುಗಳ ಬಗ್ಗೆ ಯಾರೂ ವಹಿಸದ ಕಾಳಜಿ ಎಲ್ಲವುಗಳೂ ಪ್ರಕರಣವನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆ ನೀಡುವ ಧಾವಂತದ ಹಿಂದೆ ಬೇರೇನೋ ಇದೆ ಎಂಬ ವಾಸನೆ ಹೊರಡುವಂತೆ ಮಾಡಿತ್ತು. ಪೋಟಾ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿರುವ ಮಹಾರಾಷ್ಟ್ರದ ಪೋಲೀಸರು ಈ ಆರೋಪಿಗಳ ಮೇಲೆ ಪೋಟಾ ಕಾಯ್ದೆಯಂತಹ ಮೋಕೋ ಕಾನೂನನ್ನು ಹೇರಿದ್ದಾರೆ. ಈ ಮೂಲಕ ಬಿಜೆಪಿಗೆ 'ಹೆಂಗೆ?' ಎಂಬ ಲುಕ್ ಕೊಟ್ಟಿತು.

ಆದರೆ ಮುಂಬೈ ದಾಳಿಯು ರಾಷ್ಟ್ರವನ್ನೇ ನಡುಗಿಸಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಸದ್ಯಕ್ಕೀಗ ಮಾಲೆಗಾಂವ್ ಸ್ಫೋಟ ಪ್ರಕರಣ ಸುದ್ದಿಯಲ್ಲಿಲ್ಲ. ಈ ಪ್ರಕರಣದ ಬೆನ್ನುಬಿದ್ದು, ಎದ್ದುಬಿದ್ದು ವರದಿ ಮಾಡುತ್ತಿದ್ದ ಮಾಧ್ಯಮಗಳೂ ಈ ಪ್ರಕರಣವನ್ನು ಸದ್ಯದ ಮಟ್ಟಿಗೆ ಮರೆತಂತಿದೆ.

ಯಾರೇ ಆಗಲಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ಮೂಲಕ ಯಾವುದೇ ಸುಧಾರಣೆ ತರಲು ಸಾಧ್ಯವಿಲ್ಲ. ಉಗ್ರರು ಎಲ್ಲರೂ ಉಗ್ರರೇ. ಅವರು ಜಾತಿ, ಮತ, ಧರ್ಮಗಳನ್ನು ಮೀರಿದವರು. ಎಲ್ಲರ ವಿರುದ್ಧವೂ ಉಗ್ರ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅನಿವಾರ್ಯ ಮತ್ತು ಅವಶ್ಯಕ ಕೂಡ. ಕೆಲವರ ಮೇಲೆ ಮೃದು ಧೋರಣೆ ಮತ್ತು ಇನ್ನು ಕೆಲವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಈ ಕುರಿತು ಜನಸಾಮಾನ್ಯರು ಏನೆಂದು ಅರ್ಥೈಸಿಕೊಳ್ಳಬೇಕು?

ಉಗ್ರರಿಗೆ ಜೀವತೆತ್ತ ರಾಷ್ಟ್ರಯೋಧರು
ಮುಂಬೈದಾಳಿಕೋರರ ವಿರುದ್ಧ ಹೋರಾಡುವ ವೇಳೆಗೆ, ರಾಷ್ಟ್ರವು ಧೀರ ಯೋಧರನ್ನು ಕಳೆದು ಕೊಂಡಿದೆ. ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ, ಎನ್‌ಕೌಂಟರ್ ತಜ್ಞ ವಿಜಯ್ ಸಾಲಸ್ಕರ್, ಧೀರ ಪೊಲೀಸ್ ಅಧಿಕಾರಿ ಅಶೋಕ್ ಕಾಮ್ಟೆ, ಎನ್ಎಸ್‌ಜಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗಜೇಂದ್ರ ಸಿಂಗ್ ಪೊಲೀಸ್ ಪೇದೆಗಳಾದ ಪ್ರಕಾಶ್ ಮೋರೆ, ಅಂಬಾದಾಸ್ ಪವಾರ್, ಎಂ,ಸಿ ಚೌಧರಿ, ಶಶಾಂಕ್ ಶಿಂಧೆ, ಬಾಪುಸಾಹೇಬ್ ದುರ್ಗುಡೆ, ಬಾಬಾಸಾಹೇಬ್ ಭೋಂಸ್ಲೆ, ಅರುಣ್ ಚಿಟ್ಟೆ, ಜಯಂತ್ ಪಾಟೀಲ್, ಯೋಗೇಶ್ ಪಾಟಿಲ್, ಅಂಬಾದಾಸ್ ಪವಾರ್, ವಿಜಯ್ ಖಾಂಡೇಕರ್, ರಾಹುಲ್ ಶಿಂಧೆ, ಮುಖೇಶ್ ಜಾಧವ್ ಇವರುಗಳು ಉಗ್ರರೊಂದಿಗೆ ಹೋರಾಡುವ ವೇಳೆ ವೀರಮರಣವನ್ನಪ್ಪಿದ್ದು, ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ.

ಇದಲ್ಲದೆ, ದೆಹಲಿಯ ಜಾಮಿಯಾ ನಗರದಲ್ಲಿ ಅಗಡಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸಧಿಕಾರಿ ಮೋಹನ್ ಚಂದ್ರಾ ಶರ್ಮಾ ಎಂಬವರು ಸಾವನ್ನಪ್ಪಿದ್ದರು. ಇವರೆಲ್ಲರ ಸಾವು ನಿಜ ಅರ್ಥದಲ್ಲಿ ತುಂಬಲಾರದ ನಷ್ಟ.

ಅಣುಒಪ್ಪಂದ
ಅಣುಒಪ್ಪಂದ ಕಾರ್ಯಗತವಾಗಿರುವುದು 2008ರಲ್ಲಿ ಯುಪಿಎ ಸರ್ಕಾರ ತಲುಪಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು. ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿಹಾಕಿದ್ದು ಭಾರತ ಅಮೆರಿಕದ ಸಹಾಯದೊಂದಿಗೆ ಅಣುಶಕ್ತಿ ಉತ್ಪಾದಿಸಲು ಶಕ್ತ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತವು 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿದೆ. ಐಎಇಎಯು ಅಣು ಒಪ್ಪಂದಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಭಾರತವು ಇತರ ಅಣುಶಕ್ತಿ ರಾಷ್ಟ್ರಗಳೊಂದಿಗೆ ಅಣು ವಹಿವಾಟು ನಡೆಸಬಹುದಾಗಿದೆ. ಆದರೆ ಈ ಒಪ್ಪಂದ ಆರೋಪ ವಿರೋಧಗಳಿಂದ ಮುಕ್ತವಾಗಿಲ್ಲ. ರಾಷ್ಟ್ರದ ಸಾರ್ವಭೌಮತೆಯನ್ನು ಯುಪಿಎ ಸರ್ಕಾರ ಅಮೆರಿಕದ ಮುಂದೆ ಒತ್ತೆ ಇರಿಸಿತು ಎಂಬ ಆರೋಪವನ್ನು ಮನಮೋಹನ್ ಸಿಂಗ್ ಎದುರಿಸುತ್ತಿದೆ.

ಬಿಹಾರ, ಅಸ್ಸಾಂ ಪ್ರವಾಹ
ಕೋಸಿ ನದಿಗೆ ನೇಪಾಳದಲ್ಲಿ ಕಟ್ಟಿದ ಅಣೆಕಟ್ಟೆಯ ಸ್ವಲ್ಪ ದೂರದಲ್ಲಿರುವ ಕಟ್ಟೆ ಒಡೆದು ಹರಿದ ನೀರು ಬಿಹಾರದ ಎಂಟು ಜಿಲ್ಲೆಗಳನ್ನು ಕೊಚ್ಚಿಕೊಂಡೇ ಹೋಯಿತು. ಲಕ್ಷಾಂತರ ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತೆಯೇ ಅಸ್ಸಾಮಿನಲ್ಲಿ ಉಕ್ಕಿಹರಿದ ಪ್ರವಾಹವೂ ಸಾಕಷ್ಟು ವಿಪತ್ತನ್ನು ತಂದಿರಿಸಿದೆ. ಎಲ್ಲವನ್ನೂ ಕಳಕೊಂಡವರು ಸರ್ಕಾರಿ ಶಿಬಿರಗಳಲ್ಲಿ ಅನಿವಾರ್ಯವಾಗಿ ತಂಗಿದ್ದು, ಹೊಸಬೆಳಕಿಗಾಗಿ ಎದುರು ನೋಡುತ್ತಿದ್ದಾರೆ.

ಇತರ
ಕಳೆದ ವರ್ಷ ಸರಣಿ ಕೊಲೆಗಳಿಂದಾಗಿ ಸುದ್ದಿಯಲ್ಲಿದ್ದ ಉತ್ತರ ಪ್ರದೇಶದ ನೋಯ್ಡಾ ಈ ವರ್ಷವೂ ಸುದ್ದಿಯಲ್ಲಿತ್ತು. ಹದಿನಾಲ್ಕು ವರ್ಷದ ಬಾಲಕಿ ಅರುಷಿ ತಲ್ವಾರ್ ಮತ್ತು ಆಕೆಯ ಮನೆಗೆಲಸ ಮಾಡಿಕೊಂಡಿದ್ದ ಹೇಮಂತ್ ಎಂಬಾತನ ಸಾವು ರಾಷ್ಟ್ರಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿದ್ದು, ರಂಗುರಂಗಿನ ಕಥೆಗಳು ಬಿತ್ತರವಾಗಿದ್ದವು. ಇವುಗಳನ್ನು ಯಾವುದು ನಿಜ, ಯಾವುದು ಸುಳ್ಳು ಎಂಬುದು ಸತ್ತವರಿಗಷ್ಟೇ ಗೊತ್ತು. ಸಾವನ್ನಪ್ಪಿರುವ ಹುಡುಗಿ ಅರುಷಿ ತಲ್ವಾರ್‌ಳ ತಂದೆ ರಾಕೇಶ್ ತಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಸುಮಾರು ಒಂದುವರೆ ತಿಂಗಳು ಜೈಲಿನಲ್ಲಿದ್ದರು. ಜೂನ್ ಒಂದರಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆಯಾದರೂ, ಕೊಲೆಗಾರನ್ಯಾರು ಎಂಬುದನ್ನು ಇನ್ನೂ ಭೇದಿಸಲಾಗಿಲ್ಲ. ಮತ್ತು ಈ ಸಂಬಂಧ ಬಂಧನಕ್ಕೀಡಾವರೆಲ್ಲ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದಾರೆ.

ಚಂದ್ರಯಾನ ಎಂಬ ಯಶಸ್ಸಿನ ಕಾವ್ಯ
2008ರ ಅಕ್ಟೋಬರ್ 22ರ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಆ ದಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಒಂದು ನವ ಇತಿಹಾಸ ಬರೆಯಿತು. ಖಂಡಿತ, ಇದರ ಹಿಂದೆ ನಮ್ಮ ವಿಜ್ಞಾನಿಗಳ ಕನಸಿದೆ, ವರ್ಷಗಳಕಾಲದ ಶ್ರಮವಿದೆ. ಇದೆಲ್ಲವೂ ಸಾಕಾರಗೊಂಡ ಆ ಅನಿರ್ವಚನೀಯ ಆನಂದದ ಕ್ಷಣದಲ್ಲಿ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ದೇಶೀ ತಂತ್ರಜ್ಞಾನದ ಮಾನವ ರಹಿತ ಈ ಚಂದ್ರಯಾನ ಉಪಗ್ರಹದ ತನ್ನ ಯಾನ ಆರಂಭಿಸಿದಾಗ ಸಹಸ್ರ ಸಹಸ್ರ ಕಣ್ಣುಗಳು ಕುತೂಹಲದಿಂದ ವೀಕ್ಷಿಸಿದವು.

1,380 ಕೆಜಿ ತೂಕದ ಚಂದ್ರಯಾನವು 11 ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಉಪಗ್ರಹ ಉಡಾವಣೆಯ ಬಳಿಕದ ಎರಡು ವಾರಗಳ ಸರಣಿ ಪ್ರಕ್ರಿಯೆಯ ಬಳಿಕ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಿದ್ದು ಚಂದ್ರನ ಮೇಲ್ಮೈಗಿಂತ 100 ಕಿಲೋಮೀಟರ್ ಮೇಲ್ಗಡೆಗೆ ತಲುಪಿ ಕಾರ್ಯಾಚರಣೆ ಆರಂಭಿಸಿದೆ.

ಚಂದ್ರಯಾನವು ಒಯ್ದಿರುವ 11 ಪೇಲೋ‌ಡ್‌ಗಳಲ್ಲಿ ಐದನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿದ್ದರೆ, ಮೂರನ್ನು ಯೂರೋಪ್ ಬಾಹ್ಯಾಕಾಶ ಏಜೆನ್ಸಿ ಹಾಗೂ ಒಂದು ಬಲ್ಗೇರಿಯಾ ಮತ್ತು ಎರಡು ಅಮೆರಿಕದಲ್ಲಿ ವೃದ್ಧಿಯಾಗಿದೆ. ಇವುಗಳು ಸುಮಾರು ಎರಡು ವರ್ಷಗಳ ಕಾಲ ಚಂದ್ರನ ಮೈಲೈಯ ಸಮಗ್ರ ವಿಚಾರಗಳ ಮಾಹಿತಿ ಸಂಗ್ರಹಿಸಲಿವೆ.

ಇನ್ನುಳಿದಂತೆ
* ವರ್ಷದ ಆದಿಯಲ್ಲಿ ಬೆಳಕಿಗೆ ಬಂದ ಕಿಡ್ನಿ ಹಗರಣದ ರೂವಾರಿ ಡಾ| ಅಮಿತ್ ನೇಪಾಳದಲ್ಲಿ ಬಂಧನ
* ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಕೇಶ್ ಶರ್ಮಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ.
* ಓಬಿಸಿ ಮೀಸಲಾತಿಗೆ ಅಸ್ತು.
* ನಟ ಸಂಜಯ್ ದತ್ ಮೂರನೇ ವಿವಾಹ ಮತ್ತು ಅದಕ್ಕೆ ಕಾನೂನು ತೊಡಕು.
* ಜೋಧಪುರ ಚಾಮುಂಡ ದೇವಾಲಯದಲ್ಲಿ ಕಾಲ್ತುಳಿತದಿಂದಾಗಿ 224 ಮಂದಿ ಸಾವು
* ತನ್ನ ಮಗನಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮಾರ್ಗರೆಟ್ ಆಳ್ವ ರಾಜೀನಾಮೆ, ಸರಣಿ ಸರಣಿ ದಾಳಿಗಳಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಹಾಗೂ ಮತ್ತಿತರ ಪ್ರಕರಣಗಳು ಮಾಧ್ಯಮಗಳ ಹೆಡ್‌ಲೈನ್ ಹಿಟ್ ಮಾಡಿದ್ದವು.

ಒಟ್ಟಿನಲ್ಲಿ 2008 ಸಿಹಿ ಕಹಿಗಳ ಮಿಶ್ರಣ. ಮುಂಬೈ ದಾಳಿ, ಬಿಹಾರದಲ್ಲಿ ಉಕ್ಕಿ ಹರಿದ ಪ್ರವಾಹ ಮುಂತಾದವುಗಳು ಈ ವರ್ಷ ನಮಗೆ ಮರೆಯಾಗಲಾರದ ಪಾಠಗಳನ್ನು ಕಲಿಸಿದೆ. 2009 ಎಲ್ಲರಿಗೂ ಶಾಂತಿಯ, ಸೌಹಾರ್ದದ, ಅಭ್ಯುದಯದ ಆರೋಗ್ಯಕರ ವರ್ಷವಾಗಲಿ ಎಂಬ ಹಾರೈಕೆಯೊಂದಿಗೆ,

ನಮಸ್ಕಾರ.

Share this Story:

Follow Webdunia kannada