ಆಕೆಯ ಮೊರೆ ಕೇಳಿದ ತಾಯಿ ತುಳಜಾಭವಾನಿ, ರಕ್ಕಸ ಸಂಹಾರಕ್ಕಾಗಿ ನಿರ್ಧರಿಸಿ ಅನುಭೂತಿಯ ಸಿದ್ಧಿಯೋಗದ ಸ್ಥಳಕ್ಕೆ ಆಗಮಿಸಿಳು. ದೇವಿಯು ಕುಕಾರನನ್ನು ಕೊಲ್ಲಲು ಅನುವಾಗುತ್ತಿರುವಂತೆ, ರಾಕ್ಷಸ ತನ್ನ ರೂಪವನ್ನು ಮಹಿಶ(ಕೋಣ) ರೂಪಕ್ಕೆ ಬದಲಿಸಿ ನರ್ತಿಸಲಾರಂಭಿಸಿದ. ಅಶ್ವಯುಜ 10ರಂದು ದೇವಿಯು ಕುಕಾರನನ್ನು ಸಂಹರಿಸಿದ್ದು, ಇದರ ಕುರುಹಾಗಿ ವಿಜಯ ದಶಮಿಯನ್ನು ಆಚರಿಸಲಾಗುತ್ತಿದೆ. ತನ್ನ ಭಕ್ತೆಯನ್ನು ಕಾಪಾಡಲು ದೇವಿಯು ತ್ವರಿತವಾಗಿ ಆಗಮಿಸಿರುವವುದಕ್ಕೆ ಆಕೆಯನ್ನು 'ತ್ವರಿತ' ಎಂಬುದಾಗಿ ಕರೆಯಲಾಗುತ್ತದೆ. ಮರಾಠಿ ಭಾಷೆಯಲ್ಲಿ ತುಳಜಾ ಅಂದರೆ ತ್ವರಿತ ಎಂದರ್ಥ. ತ್ವರಿತ ಮತ್ತು ದೇವಿ ಮರಾಠಿಯಲ್ಲಿ ತುಳಜಾ ಭವಾನಿ ಎಂದು ಕರೆಯಲ್ಪಡುತ್ತದೆ.ದೇವಾಲಯದ ಒಳನೋಟ,
ತುಳಜಾ ಭವಾನಿ ಪೂಜೆ
ಮರಾಠ ಆಡಳಿತ ಕಾಲದಲ್ಲಿ ಈ ದೇವಾಲಯ ಸಮುಚ್ಛಯ ಪ್ರಾಮುಖ್ಯತೆ ಪಡೆದುಕೊಂಡಿತು. ತಾಯಿ ತುಳಜಾ ಮಾತೆಯು ಭೋಂಸ್ಲೆ ಪ್ರಭುಗಳ ಕುಟುಂಬ ದೈವವಾಗಿದ್ದಳು. ಛತ್ರಪತಿ ಶಿವಾಜಿ ದೇವಿಗೆ ವಂದಿಸಿಯೇ ತನ್ನೆಲ್ಲ ಕೆಲಸ ಕಾರ್ಯಗಳನ್ನು ಪೂರೈಸುತ್ತಿದ್ದರು. ಶಿವಾಜಿಗೆ ತುಳಜಾ ಭವಾನಿ ತಾಯಿಯ ರಕ್ಷೆ ಇತ್ತು ಎಂಬ ನಂಬುಗೆ ಇದೆ. ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ತುಳಜಾಪುರ ಒಂದು ಪವಿತ್ರ ಕ್ಷೇತ್ರ. ಮರಾಠವಾಡ ಪ್ರದೇಶದಲ್ಲಿರುವ ಈ ದೇವಾಲಯವು ಸಮುದ್ರ ಮಟ್ಟದಿಂದ 270 ಮೀಟರ್ ಎತ್ತರಕ್ಕಿದ್ದು ಬಾಲಘಾಟ್ ಎಂದು ಇಲ್ಲಿಗೆ ಹೆಸರು. ಇಲ್ಲಿ ಹುಣಸೇ ಮರಗಳೇ ತುಂಬಿದ್ದರಿಂದ ಇಲ್ಲಿಗೆ 'ಚಿಂಚ್ಪುರ' ವೆಂಬ ಹೆಸರಿತ್ತು. ಆದರೆ ಕ್ರಮೇಣ ತುಳಜಾ ಭವಾನಿಯು ಇಲ್ಲಿ ನೆಲೆಸಿರುವ ಕಾರಣ ಇಲ್ಲಿಗೆ ತುಳಜಾಪುರ ಎಂಬ ಹೆಸರಾಯಿತು. ಇದನ್ನೀಗ ಭಾರತದ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ದೇಶಾದ್ಯಂತದಿಂದ ಲಕ್ಷಾಂತರ ಮಂದಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನವರಾತ್ರಿಯ ವೇಳೆ ಇಲ್ಲಿ ವಿಶೇಷ ಪೂಜಾದಿ ಕಾರ್ಯಕ್ರಮಗಳು ಜರುಗುತ್ತವೆ. ಪಾಂಡವಪುರ ಮತ್ತು ಅಕ್ಕಲಕೋಟೆ ಇದರ ಸಮೀಪವಿರುವ ಇತರ ಧಾರ್ಮಿಕ ಕ್ಷೇತ್ರಗಳಾಗಿವೆ.
ಬಸ್ಸು, ರೈಲು ಅಥವಾ ವಿಮಾನ ಯಾನದ ಮೂಲಕ ತುಳಜಾಪುರಕ್ಕೆ ಪ್ರಯಾಣ ಮಾಡಬಹುದಾಗಿದೆ.
ಬಸ್ಸಿನಲ್ಲಿ ಬರುವುದಾದರೆ-
ರಾಷ್ಟ್ರದ ದಕ್ಷಿಣದ ಭಾಗದಿಂದ ಬರುವ ಯಾತ್ರಿಕರು, ನಲ್ದುರ್ಗಕ್ಕೆ ತಲುಪಿದರೆ ಮತ್ತೆ ಅಲ್ಲಿಂದ ತುಳಜಾಪುರಕ್ಕೆ 35 ಕಿ.ಮೀ ದೂರವಿದೆ. ಉತ್ತರ ಅಥವಾ ಪಶ್ಚಿಮ ಭಾಗದಿಂದ ಬರುವವರು ಸೋಲಾಪುರ ತಲುಪಿದರೆ, ಅಲ್ಲಿಂದ ಮತ್ತೆ ತುಳಜಾಪುರಕ್ಕೆ 44 ಕಿ.ಮೀ. ಇಲ್ಲವೆ ಯಾತ್ರಿಕರು ಒಸ್ಮಾನಾಬಾದ್ ತಲುಪಿದರೆ ಅಲ್ಲಿಂದ ಮತ್ತೆ 18 ಕಿ.ಮೀಗಳು ಮಾತ್ರ. ಪಶ್ಚಿಮದಿಂದ ಬರುವ ಯಾತ್ರಿಕರು ಲಾಥೂರ್ ತಲುಪಿದರೆ, ಅಲ್ಲಿಂದ ಮತ್ತೆ ತುಳಜಾಮಾತೆ ದರ್ಶನಕ್ಕೆ 75 ಕಿ.ಮೀ ಸಾಗಬೇಕು. ಸೋಲಾಪುರ, ಓಸ್ಮಾನಾಬಾದ್ ಮತ್ತು ನಲ್ದುರ್ಗದಿಂದ ತುಳಜಾಪುರಕ್ಕೆ ಪ್ರತೀ 10 ನಿಮಿಷಕ್ಕೊಂದು ಬಸ್ಸು ಹೊರಡುತ್ತದೆ.
ರೈಲು ಪ್ರಯಾಣಿಕರಿಗೆ-
ತುಳಜಾಪುರಕ್ಕೆ ಬರಲಿಚ್ಚಿಸುವ ಯಾತ್ರಿಕರು ಸೋಲಾಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಬೇಕು. ಇದು ತುಳಜಾಪುರಕ್ಕಿರುವ ಹತ್ತಿರದ ರೈಲ್ವೇ ನಿಲ್ದಾಣ. ಇಲ್ಲಿಂದ ತುಳಜಾಪುರ 44ಕಿ.ಮೀ ದೂರ.
ವಿಮಾನದಲ್ಲಿ ಬರಲಿಚ್ಚಿಸುವವರಿಗೆ-
ತುಳಜಾಪುರದ ಹತ್ತಿರದ ವಿಮಾನ ನಿಲ್ದಾಣವೆಂದರೆ, ಪುಣೆ. ಅಥವಾ ಹೈದರಾಬಾದ್. ಇಲ್ಲಿಂದ ಪ್ರಯಾಣಿಕರು ರೈಲು ಇಲ್ಲವೇ ಬಸ್ ಮುಖಾಂತರ ತುಳಜಾಪುರವನ್ನು ತಲುಪಬೇಕು.
ಲೇಖಕರು: ಮಹೇಶ್ ಜೋಶಿ