- ಅನಿರುದ್ಧ ಜೋಷಿ ಬನ್ನಿ, ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ, ರಾಜಸ್ಥಾನದ ಪ್ರಮುಖ ಧಾರ್ಮಿಕ ಸ್ಥಳವೊಂದರ ಪರಿಚಯ ಮಾಡಿಕೊಳ್ಳೋಣ. ಚುರು ಜಿಲ್ಲೆಯ ದತ್ತ ಖೇಡಾದಲ್ಲಿದೆ ಸಿದ್ಧವೀರ ಗೋಗ ದೇವ ಮಂದಿರ. ದೂರದೂರುಗಳಿಂದ ಎಲ್ಲ ಧರ್ಮ ಮತ್ತು ಸಮುದಾಯಗಳ ಮಂದಿ ಇಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಾರೆ.
ದತ್ತ ಖೇಡಾ ಎಂಬ ಈ ಸ್ಥಳವು ನಾಥ ಪಂಥದ ಪ್ರಮುಖ ಗುರುಗಳಲ್ಲೊಬ್ಬರಾದ ಗೋಗದೇವರ ಜನ್ಮಸ್ಥಾನ. ನಾಥ ಪಂಥದ ಸಂತ ಸಮುದಾಯಕ್ಕೆ ಇದು ಅತ್ಯಂತ ಪೂಜನೀಯ ಕ್ಷೇತ್ರ.
WD
ಮಧ್ಯಯುಗದಲ್ಲಿ ಗೋಗಾಜಿ ಎಂಬ ಅರಸರೊಬ್ಬರು ಲೋಕದೇವತಾ (ಜನಸಾಮಾನ್ಯನ ದೇವರು) ಎಂದೇ ಪರಿಗಣಿಸಲ್ಪಟ್ಟಿದ್ದರು. ಸಮಾಜದ ಎಲ್ಲ ವರ್ಗದವರು ಅವರ ಅನುಯಾಯಿಗಳಾಗಿದ್ದರು. ರಾಜಸ್ಥಾನದ ಚುರು ಎಂಬಲ್ಲಿನ ದಾದ್ರೇವ ರಜಪೂತ ಮನೆತನದಲ್ಲಿ ಗೋಗಾಜಿ ಜನಿಸಿದ್ದರು. ಅವರ ತಂದೆ ಜೈಬೀರ್ ಚುರುವಿನ ರಾಜ ಆಗಿದ್ದರು. ತಾಯಿಯ ಹೆಸರು ಬಚಾಲ್. ಗುರು ಗೋರಕ್ಷನಾಥರ ಆಶೀರ್ವಾದ ಫಲದಿಂದ ಗೋಗಾಜಿ ಜನಿಸಿದರು ಎಂಬ ನಂಬಿಕೆ ಜನರಲ್ಲಿದೆ. ಚೌಹಾಣ್ ರಾಜ ಮನೆತನದಲ್ಲಿ, ಪೃಥ್ವಿರಾಜ್ ಚೌಹಾಣ್ ಬಳಿಕ, ಗೋಗಾಜಿ ವೀರ್ ಅವರೇ ಜನಪ್ರಿಯ ರಾಜರಾಗಿ ಪ್ರಸಿದ್ಧಿ ಪಡೆದಿದ್ದರು. ಅವರ ಆಳ್ವಿಕೆಯು ಹರ್ಯಾಣದ ಹನ್ಸಿಯಿಂದ ಸಟ್ಲಜ್‌ವರೆಗೆ ಹರಡಿತ್ತು.
WD
ಸ್ಥಳೀಯ ನಂಬಿಕೆಗಳ ಪ್ರಕಾರ, ಗೋಗಾಜಿಯನ್ನು ಸರ್ಪಗಳ ದೇವತೆ ಎಂದು ಆರಾಧಿಸಲಾಗುತ್ತದೆ. ಜನರು ಅವರನ್ನು ಗೋಗಾಜಿ ಚೌಹಾಣ್, ಗುಗ್ಗಾ, ಜಾಹಿರ್ ವೀರ್ ಮತ್ತು ಜಾಹಿರ್ ಪೀರ್ ಮುಂತಾಗಿ ಕರೆಯುತ್ತಿದ್ದರು. ಅವರು ನಾಥ ಪಂಥದ ಗುರು ಗೋರಕ್ಷನಾಥನಾಥರ ಪ್ರಧಾನ ಶಿಷ್ಯರಲ್ಲೊಬ್ಬರಾಗಿದ್ದರು.
ದತ್ತಖೇಡಾದಲ್ಲಿ ಗುರು ಗೋರಕ್ಷನಾಥರ ಆಶ್ರಮವೂ ಇದೆ. ಇಲ್ಲೇ ಗೋಗಾದೇವಜಿಯವರು ಕುದುರೆ ಮೇಲಿರುವ ಭಂಗಿಯ ವಿಗ್ರಹವಿದೆ. ಭಕ್ತ ಜನರು ಅವರನ್ನು ಪೂಜಿಸಲು ಇಲ್ಲಿಗೆ ಆಗಮಿಸುತ್ತಾರೆ ಮತ್ತು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
WD
ಅವರ ಜನ್ಮಸ್ಥಳದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಹನುಮಾನ್‌ಗಢ ಜಿಲ್ಲೆಯ ನೋಹಾರ್ ಬ್ಲಾಕ್‌ನಲ್ಲಿ ಗೋಗಾಮಡಿ ಧಮೀನ್ ಎಂಬ ಸ್ಥಳವೊಂದಿದೆ. ಇಲ್ಲೇ ಅವರ ಸಮಾಧಿ ಇದೆ. ಇಲ್ಲಿನ ವಿಶೇಷತೆಯೆಂದರೆ ಇಲ್ಲಿರುವ ಪೂಜಾರಿಗಳಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಮುಸ್ಲಿಂ. ಇದು ಕೋಮು ಸೌಹಾರ್ದತೆಯ ಅತ್ಯಂತ ಶ್ರೇಷ್ಠ ಪ್ರತೀಕವಾಗಿ ಗಮನ ಸೆಳೆಯುತ್ತದೆ. ಶ್ರಾವಣ ಹುಣ್ಣಿಮೆಯಿಂದ ಹಿಡಿದು ಭಾದ್ರಪದದ ಹುಣ್ಣಿಮೆವರೆಗೆ ಇಲ್ಲಿ ಉತ್ಸವ ಜರುಗುತ್ತದೆ. ಆ ದಿನಗಳಲ್ಲಿ ಗೋಗ ದೇವರ ಆಶೀರ್ವಾದ ಪಡೆದು ಪುನೀತರಾಗಲು ಇಲ್ಲಿಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಇಡೀ ವಾತಾವರಣವೇ ಭಕ್ತಿ ಸುಧೆಯಲ್ಲಿ ಮಿಂದಿರುತ್ತದೆ.
ರಾಜ್ಯದ ಸಂಸ್ಕೃತಿಯಲ್ಲಿ ಕೂಡ ಗೋಗ ದೇವರ ಪ್ರಭಾವವನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ಗೋಗ ದೇವರ ಜೀವನ ಮತ್ತು ತತ್ವಗಳು ಇಂದಿಗೂ ಕೂಡ ಲಕ್ಷಾಂತರ ಭಕ್ತರಿಗೆ ಪ್ರೇರಣೆಯಾಗಿದ್ದು, ಕೋಮು ಸೌಹಾರ್ದತೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತವೆ ಎನ್ನುತ್ತಾರೆ ಬುದ್ಧಿಜೀವಿಗಳು ಮತ್ತು ಇತಿಹಾಸಜ್ಞರು.
ಹೋಗುವುದು ಹೇಗೆ: ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ 250 ಕಿ.ಮೀ. ದೂರದಲ್ಲಿರುವ ಜೈಪುರ. ರೈಲು ಮಾರ್ಗ: ದತ್ತಖೇಡಾದಿಂದ 15 ಕಿ.ಮೀ. ದೂರದಲ್ಲಿದೆ ಸದಲ್‌ಪುರ ರೈಲು ನಿಲ್ದಾಣ. ಜೈಪುರದಿಂದ ಇಲ್ಲಿಗೆ ಸಾಕಷ್ಟು ರೈಲುಗಳಿವೆ. ರಸ್ತೆ : ಸದಲ್‌ಪುರವು ಜೈಪುರದಿಂದ 250 ಕಿ.ಮೀ. ದೂರದಲ್ಲಿದ್ದು, ಬೇಕಾದಷ್ಟು ಸಂಖ್ಯೆಯಲ್ಲಿ ವಾಹನ ಸೌಲಭ್ಯವಿದೆ. ಅಲ್ಲಿಂದ ದತ್ತಖೇಡಾ 15 ಕಿ.ಮೀ. ಟ್ಯಾಕ್ಸಿ ಮತ್ತು ಇತರ ವಾಹನ ಸೌಲಭ್ಯಗಳು ಸಾಕಷ್ಟಿವೆ.