ಇದು ಶ್ರಾವಣ ಮಾಸ. ಈ ಬಾರಿ ತಿಳಿದುಕೊಳ್ಳೋಣ ಮಧ್ಯಭಾರತದ ಪರಶಿವನ ಪ್ರಖ್ಯಾತ ಮಂದಿರಗಳಲ್ಲೊಂದಾದ ಸಿದ್ಧನಾಥ ಮಹಾದೇವನ ಕ್ಷೇತ್ರದ ಬಗ್ಗೆ. ನರ್ಮದಾ ನದಿ ತೀರದ ನೇಮಾವರ್ ಎಂಬಲ್ಲಿದೆ ಈ ಪ್ರಾಚೀನ ಮಂದಿರ. ಪ್ರಾಚೀನ ಕಾಲದಲ್ಲಿ ನಾಭಿಪುರವೆಂದು ಪ್ರಖ್ಯಾತಿ ಪಡೆದಿದ್ದ ಈ ಊರು, ದೇಶದ ವ್ಯಾಪಾರ-ವ್ಯವಹಾರದ ಪ್ರಧಾನ ಕೇಂದ್ರವೂ ಆಗಿತ್ತು ಎಂಬುದು ಉಲ್ಲೇಖನೀಯ.
ಈ ಪ್ರದೇಶದಲ್ಲಿ ಜನಜನಿತವಾಗಿರುವ ಕಥೆಯೊಂದರ ಪ್ರಕಾರ, ಈ ಮಂದಿರದ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದು ಸಿದ್ಧ ಋಷಿಗಳಾದ ಸನಕ, ಸನಂದ, ಸನಾತನ ಮತ್ತು ಸನತ್ ಕುಮಾರ ಎಂಬ ಪುರಾಣಪುರುಷರು. ಸತ್ಯಯುಗದಲ್ಲಿ ಈ ಶಿವಲಿಂಗವನ್ನು ಸಿದ್ಧಋಷಿಗಳಿಂದ ಪ್ರತಿಷ್ಠಾಪಿಸಲಾದ ಕಾರಣ ಸಿದ್ಧನಾಥ ಎಂಬ ಹೆಸರು ಇಲ್ಲಿನ ದೇವರಿಗೆ.
WD
ಈ ಮಂದಿರದ ಶಿಖರವನ್ನು ನಿರ್ಮಿಸಿದ್ದು ಕ್ರಿಸ್ತಪೂರ್ವ 3094ರಲ್ಲಿ ಎನ್ನುತ್ತಾರೆ ಸ್ಥಳೀಯರು. ಮೊದಲು ಈ ಮಂದಿರವು ಪೂರ್ವಾಭಿಮುಖವಾಗಿತ್ತು. ಆದರೆ ಪಂಚಪಾಂಡವರಲ್ಲೊಬ್ಬನಾದ ಭೀಮನು ಈ ಮಂದಿರದ ಮುಖವನ್ನು ಪಶ್ಚಿಮದತ್ತ ತಿರುಗಿಸಿದ ಎಂಬ ಪ್ರತೀತಿ ಇದೆ.
ಪ್ರತಿದಿನ ಬೆಳಿಗ್ಗೆ ನದೀ ತಟದಲ್ಲಿ ದೊಡ್ಡ ದೊಡ್ಡ ಪಾದದ ಗುರುತುಗಳು ಗೋಚರಿಸುತ್ತವೆ. ಇವುಗಳು ಸನಕ-ಸನಂದನಾದಿ ಋಷಿಗಳ ಪಾದ ಗುರುತುಗಳು ಎಂದು ನಂಬುತ್ತಾರೆ ಸ್ಥಳೀಯರು. ಈ ನಂಬಿಕೆಯನ್ನೇ ಮನಸ್ಸಿನಲ್ಲಿ ಬಲವಾಗಿರಿಸಿಕೊಂಡಿರುವ ಕುಷ್ಠ ರೋಗಿಗಳು, ತಾವು ತಮ್ಮ ರೋಗದಿಂದ ಮುಕ್ತಿ ಪಡೆಯುವ ಇಚ್ಛೆಯಿಂದ ಇಲ್ಲಿನ ಮರಳಿನಲ್ಲಿ ಹೊರಳಾಡುತ್ತಾರೆ. ಇಲ್ಲಿಗೆ ಸಮೀಪ ಬೆಟ್ಟ ಗುಡ್ಡಗಳಲ್ಲಿರುವ ಗುಹೆಗಳಲ್ಲಿ ಮಹಾನ್ ಸಂತರು ಕೂಡ ವಾಸವಾಗಿದ್ದಾರೆ ಮತ್ತು ಪ್ರತಿದಿನ ಪವಿತ್ರ ನರ್ಮದಾ ನದಿಯಲ್ಲಿ ಸ್ನಾನಕ್ಕಾಗಿ ಅವರು ಆಗಮಿಸುತ್ತಿರುತ್ತಾರೆ ಎನ್ನುತ್ತಾರೆ ಇಲ್ಲಿನ ಮಂದಿ.
WD
ಪ್ರಾಚೀನ ಜೈನ ಮತ್ತು ಹಿಂದೂ ಪುರಾಣ ಗ್ರಂಥಗಳಲ್ಲಿಯೂ ಈ ಕ್ಷೇತ್ರದ ಉಲ್ಲೇಖವಿದೆ ಮತ್ತು ಈ ಕಾರಣಕ್ಕೆ ನಂಬಿಕೆ ಮತ್ತು ಭಕ್ತಿಯ ತಾಣ ಎಂದು ಪರಿಗಣಿಸಲ್ಪಟ್ಟಿದೆ. ಈ ಗ್ರಂಥಗಳ ಉಲ್ಲೇಖದಂತೆ, ಇಲ್ಲಿಗೆ ಬರುವವರು ತಮ್ಮೆಲ್ಲಾ ಪಾಪಗಳನ್ನು ನಿವಾರಿಸಿಕೊಂಡು ಮೋಕ್ಷ ಸಾಧಿಸಬಹುದು. ಪ್ರತಿಯೊಂದು ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ ಮತ್ತು ಶಿವರಾತ್ರಿಗಳಂದು ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕಾಗಮಿಸಿ, ಪವಿತ್ರ ನರ್ಮದೆಯಲ್ಲಿ ಶುಚಿರ್ಭೂತರಾಗಿ, ಭಗವಾನ್ ಸಿದ್ಧನಾಥನ ದರ್ಶನ ಪಡೆಯುತ್ತಾರೆ.
10 ಮತ್ತು 11ನೇ ಶತಮಾನದಲ್ಲಿ ಚಾಂದೇಲ ಮತ್ತು ಪಾರಮಾರ ಆಳ್ವಿಕೆಯ ಚಕ್ರವರ್ತಿಗಳು ಈ ಮಂದಿರದ ಜೀರ್ಣೋದ್ಧಾರ ನಡೆಸಿದ್ದರು. ಅಂದಿನ ಕಾಲದ ಸಮೃದ್ಧ ಶಿಲ್ಪಕಲೆಯ ಅತುಲ್ಯ ಉದಾಹರಣೆಯಾಗಿ ಈ ಕ್ಷೇತ್ರ ತಲೆಎತ್ತಿ ನಿಂತಿದೆ. ದೇವಸ್ಥಾನದ ಕಂಬಗಳು, ಗೋಡೆಗಳಲ್ಲಿ ಶಿವ, ಭೈರವ, ಗಣೇಶ, ಚಾಮುಂಡ, ಇಂದ್ರ ಮತ್ತು ಇತರ ಹಿಂದೂ ದೇವ-ದೇವಿಯರ ಶಿಲ್ಪವನ್ನು ಅದ್ಭುತವಾಗಿ ಕೆತ್ತಲಾಗಿದೆ.
WD
ಪ್ರಕೃತಿಯು ಈ ಪ್ರದೇಶವನ್ನು ಹಸಿರಿನ ರಾಶಿಯಿಂದ ಆಶೀರ್ವದಿಸುವ ಶ್ರಾವಣ ಮಾಸದಲ್ಲಿ, ಈ ಕ್ಷೇತ್ರದ ಸೌಂದರ್ಯವು ಪರಾಕಾಷ್ಠೆಯನ್ನು ತಲುಪುತ್ತದೆ. ಹಿನ್ನೆಲೆಯಲ್ಲಿ ನರ್ಮದೆಯು ಹರಿಯುವ ಜುಳುಜುಳು ನಿನಾದದೊಂದಿಗೆ ಭಗವಾನ್ ಸಿದ್ಧನಾಥನನ್ನು ಆಕೆ ಭಜಿಸುತ್ತಿರುವಂತಹ ಭಕ್ತಿ ಭಾವ ಇಲ್ಲಿ ಒಡಮೂಡುತ್ತದೆ.
ಇಲ್ಲಿಗೆ ಹೋಗುವುದು ಹೇಗೆ?
ರಸ್ತೆ ಮಾರ್ಗ: ನೇಮಾವರ್ ಕ್ಷೇತ್ರವು ಮಧ್ಯಪ್ರದೇಶದ ಇಂದೋರ್‌ನಿಂದ 130 ಕಿ.ಮೀ. ಹಾಗೂ ಭೋಪಾಲದಿಂದ ಹಾರ್ದಾ ಮೂಲಕ 170 ಕಿ.ಮೀ. ದೂರದಲ್ಲಿದೆ.
ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣ ಹಾರ್ದಾ (ದೆಹಲಿ-ಮುಂಬಯಿ ರೈಲು ಮಾರ್ಗದಲ್ಲಿದೆ). ನೇಮಾವರ್ ಇಲ್ಲಿಂದ ಕೇವಲ 15 ಕಿ.ಮೀ. ದೂರ.