ಇದು ಭಾರತದ ಅತಿದೊಡ್ಡ ಶನಿ ದೇವಸ್ಥಾನದತ್ತ ಪಯಣ. ಮಧ್ಯಪ್ರದೇಶದ ಪ್ರಮುಖ ಪಟ್ಟಣ ಇಂದೋರ್‌ನಿಂದ 30 ಕಿ.ಮೀ. ದೂರದಲ್ಲಿರುವ ಬಾಯ್ ಎಂಬ ಗ್ರಾಮದಲ್ಲಿದೆ ಈ ವಿಶಿಷ್ಟ ಮಂದಿರ.
ಈ ದೇವಸ್ಥಾನದ ಕುರಿತಾಗಿ ಒಂದು ಆಸಕ್ತಿದಾಯಕ ಕಥನವಿದೆ. ಜೈಪುರದ ನಿವಾಸಿ ಮಧುಬಾಲ ಸುರೇಂದ್ರ ಸಿಂಗ್ ಮೀನಾ ಎಂಬವರ ಕುಟುಂಬಿಕರು ಬಾಯ್ ಗ್ರಾಮದಲ್ಲಿ ನೆಲಸಿದ್ದರು. ಸಾಮಾಜಿಕ ಕಾರ್ಯದ ಬಗ್ಗೆ ಚಿಂತಿಸುತ್ತಲೇ ಇರುವ ಮಧುಬಾಲ ಸುರೇಂದ್ರ ಸಿಂಗ್ ಅವರು ಇಲ್ಲೊಂದು ಛತ್ರ ಕಟ್ಟಿಸಬೇಕೆಂಬ ಬಯಕೆ ಮುಂದಿಟ್ಟರು. ಅದರಂತೆ, ಅಗೆಯುತ್ತಿದ್ದಾಗ, ಭೂಮಿಯೊಳಗಿನಿಂದ ಶನಿದೇವರ ವಿಗ್ರಹವೊಂದು ಹೊರಬಂತು. ಇದರಿಂದ ಉತ್ಸಾಹಿತರಾದ ಅವರು, ಹಲವಾರು ಮಂದಿಯನ್ನು ಕೇಳಿ, ಕೊನೆಗೆ ಛತ್ರದ ಬದಲು, ಇಲ್ಲಿ ಶನಿದೇವರಿಗೆ ಭರ್ಜರಿ ಮಂದಿರವೊಂದನ್ನು ಕಟ್ಟಿಸಲು ತೀರ್ಮಾನಿಸಿದರು.
WD
ಶನಿ ದೇವರ ಈ ಆಕರ್ಷಕ ಮೂರ್ತಿಯನ್ನು 2002ರ ಏಪ್ರಿಲ್ 27ರಂದು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಉತ್ತರಾಭಿಮುಖವಾಗಿರುವ ಶ್ರೀ ಗಣೇಶನ ವಿಗ್ರಹ ಹಾಗೂ ದಕ್ಷಿಣಾಭಿಮುಖವಾಗಿರುವ ಶ್ರೀ ಹನುಮಾನ್ ವಿಗ್ರಹಗಳು ಅತ್ಯಂತ ಅಪರೂಪದ್ದಾಗಿವೆ. ಪ್ರತಿವರ್ಷ ಶನಿ ಜಯಂತಿ ಪ್ರಯುಕ್ತ ಐದು ದಿನಗಳ ಉತ್ಸವವನ್ನು ಇಲ್ಲಿ ಏರ್ಪಡಿಸಲಾಗುತ್ತದೆ. ಈ ಸಂದರ್ಭ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶನಿದೇವನನ್ನು ಅರ್ಚಿಸುತ್ತಾರೆ.
ಇಲ್ಲಿಗೆ ಹೋಗುವುದು ಹೇಗೆ?
ರಸ್ತೆ ಮಾರ್ಗ: ಇಂದೋರ್ (30 ಕಿ.ಮೀ.) ಮತ್ತು ಖಾಂಡ್ವಾ (100 ಕಿ.ಮೀ.)ದಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳು ಮತ್ತು ಟ್ಯಾಕ್ಸಿಗಳು ದೊರೆಯುತ್ತವೆ
ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣ ಚೋರಲ್ (10 ಕಿ.ಮೀ.). ಇದು ಇಂದೋರ್-ಖಾಂಡ್ವಾ ಮೀಟರ್‌ಗೇಟ್ ಮಾರ್ಗದ ಮಧ್ಯದಲ್ಲಿದೆ.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವಿರುವುದು ಇಂದೋರ್‌ನ ದೇವಿ ಅಹಿಲ್ಯಾಬಾಯಿ ಏರ್‌ಪೋರ್ಟ್.