ಶಿವನ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮಹಾಕಾಲ ಮಂದಿರವೂ ಒಂದು. ಶಿವಪುರಾಣದ ಪ್ರಕಾರ, ದೂಷಣನೆಂಬ ದಾನವನ ಆಟಾಟೋಪದಿಂದ ಕಂಗೆಟ್ಟ ಉಜ್ಜಯಿನಿಯ ಜನತೆ, ಅವನನ್ನು ನಿವಾರಿಸಲು ಈಶ್ವರನನ್ನು ಮೊರೆ ಹೋಗಿ ಪ್ರಾರ್ಥಿಸಿದರು. ಸಂತೃಪ್ತನಾದ ಈಶ್ವರನು ಪವಿತ್ರ ಜ್ಯೋತಿ ರೂಪದಲ್ಲಿ ಕಾಣಿಸಿಕೊಂಡ. ಅವನು ರಕ್ಕಸನನ್ನು ಸಂಹರಿಸಿ, ಭಕ್ತಾದಿಗಳ ಕೋರಿಕೆಯಂತೆ ಉಜ್ಜಯಿನಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದ.
ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಏಕೈಕ ಶಿವಲಿಂಗವಿದು ಎಂಬ ಖ್ಯಾತಿಯೂ ಇಲ್ಲಿಗಿದೆ. ಮಾಟ-ಮಂತ್ರ-ತಂತ್ರ ಕ್ಷೇತ್ರದಲ್ಲಿಯೂ ಈ ಮಂದಿರಕ್ಕೆ ಮಹತ್ವದ ಇತಿಹಾಸವಿದೆ. ಕೆಲವು ಐತಿಹಾಸಿಕ ಅಂಶಗಳ ಪ್ರಕಾರ, ವೇದವ್ಯಾಸ, ಕಾಳಿದಾಸ, ಬಾಣಭಟ್ಟ ಮತ್ತು ರಾಜಾ ಭೋಜರ ಕೃತಿಗಳಲ್ಲಿ ಮಹಾಕಾಲನ ಸ್ಮರಣೆಯನ್ನು ನಾವು ಕಾಣಬಹುದು.
ಪ್ರಾಚೀನ ಮಹಾಕಾಲ ಮಂದಿರವನ್ನು 11ನೇ ಶತಮಾನದಲ್ಲಿ ಪುನರಪಿ ನಿರ್ಮಿಸಲಾಗಿತ್ತು. ಇದರ ನಿರ್ಮಾಣದ 140 ವರ್ಷಗಳ ಬಳಿಕ ಉಜ್ಜಯಿನಿಗೆ ದಾಳಿ ಮಾಡಿದ ಸುಲ್ತಾನ್ ಇಲ್ತಮಷ್, ಮಂದಿರವನ್ನು ಧ್ವಂಸ ಮಾಡಿದ. ಈಗಿರುವ ಮಂದಿರವು ಮರಾಠರ ಕಾಲದ್ದು. ಈ ಮಂದಿರದ ಪುನರ್ನಿರ್ಮಾಣ ಕಾರ್ಯವನ್ನು ಸುಮಾರು 250 ವರ್ಷಗಳ ಹಿಂದೆ ಮರಾಠರ ದಿವಾನ ಬಾಬಾ ರಾಮಚಂದ್ರ ಶೈನಾವಿಯ ಮೂಲಕ ಮಾಡಲಾಗಿತ್ತು.
ಭಸ್ಮ ಆರತಿ (ಭಸ್ಮ ಅಭಿಷೇಕ) ನಡೆಯುವ ಏಕೈಕ ಶಿವಲಿಂಗ ಇದು ಎನ್ನಲಾಗುತ್ತಿದೆ. ನಸುಕಿನ ಜಾವ 4ರಿಂದ 6 ಗಂಟೆಯ ನಡುವೆ ಈ ಭಸ್ಮಾರತಿಯು ತಾಳ ವಾದ್ಯಗಳ ಸಹಿತ ವೇದ ಮಂತ್ರಗಳು, ಸ್ತೋತ್ರಪಠಣ ನಡೆಯುತ್ತದೆ. ಈ ಆರತಿ ಕಾಲವು ಬಂ ಬಂ ಭೋಲೇ ಎಂಬ ಘೋಷಣೆಯೊಂದಿಗೆ ನಮ್ಮ ಅಂತರಾತ್ಮವನ್ನು ಜಾಗೃತಿಗೊಳಿಸುತ್ತದೆ. ಜನಸಾಮಾನ್ಯರಿಂದ ವಿಶೇಷ ವ್ಯಕ್ತಿಗಳವರೆಗೆ ಎಲ್ಲರೂ ಈ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾತುರತೆಯಿಂದಿರುತ್ತಾರೆ.
ಪೌರಾಣಿಕ ಹಿನ್ನೆಲೆ: ಹಿಂದಿನ ಕಾಲದಲ್ಲಿ ದಹನವಾದ ಶವಗಳ ಬೂದಿಯಿಂದ ಭಕ್ತರು ಈ ಭಸ್ಮಾರತಿ (ಭಸ್ಮ ಲೇಪನ) ಸಂಪ್ರದಾಯವನ್ನು ನೆರವೇರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಒಂದೊಮ್ಮೆ, ಅರ್ಚಕರೊಬ್ಬರು ಯಾವುದೇ ಶವಗಳ ಭಸ್ಮ ದೊರೆಯದ ಕಾರಣ, ಈ ಸಂಪ್ರದಾಯ ಮುಂದುವರಿಸುವುದಕ್ಕಾಗಿ ತಮ್ಮ ಮಗನನ್ನೇ ದಹಿಸಿದ್ದರು. ಈ ಘಟನೆಯ ಬಳಿಕ, ಗೋಮಯ (ಸೆಗಣಿ) ಬೂದಿಯ ಮೂಲಕ ಮಹಾಕಾಲನಿಗೆ ಭಸ್ಮಾರತಿ ನೆರವೇರಿಸುವುದು ಆರಂಭವಾಯಿತು ಎಂಬ ಪ್ರತೀತಿ ಇದೆ.
ಭಸ್ಮಾರತಿಯ ಸಂದರ್ಭದಲ್ಲಿ ಗರ್ಭ ಗೃಹಕ್ಕೆ ಹೋಗುವುದಕ್ಕೆ ವಸ್ತ್ರ ಸಂಹಿತೆಯೂ ಇದೆ. ಮಹಿಳೆಯರು ಸೀರೆ ಧರಿಸುವಂತಿಲ್ಲ ಮತ್ತು ಪುರುಷರು ರೇಷ್ಮೆ ಧೋತಿ ಧರಿಸುವಂತಿಲ್ಲ. ಪ್ರಧಾನ ಆರತಿ ವೇಳೆ ಪುರುಷರಿಗೆ ಮಾತ್ರವೇ ಒಳ ಪ್ರವೇಶಕ್ಕೆ ಅವಕಾಶವಿದ್ದು, ಮಹಿಳೆಯರಿಗೆ ಗರ್ಭ ಗೃಹಕ್ಕೆ ಪ್ರವೇಶವಿಲ್ಲ. ಗರ್ಭ ಗೃಹದ ಹೊರಗಿರುವ ನಂದಿ ಮಂಟಪದಲ್ಲಿ ಕುಳಿತು ಯಾತ್ರಾರ್ಥಿಗಳು ಈ ಭಸ್ಮಾರತಿಯನ್ನು ನೋಡಬಹುದಾಗಿದೆ.
ಮಹಾಕಾಲ ಮಂದಿರಕ್ಕೆ ಶಿವರಾತ್ರಿ ಹಾಗೂ ಸಾವನ್ (ಶ್ರಾವಣ) ಸೋಮವಾರ ಸಂದರ್ಭ ಭಕ್ತಾದಿಗಳ ಪ್ರವಾಹವೇ ಹರಿದುಬರುತ್ತದೆ. ಸಾವನ್ ತಿಂಗಳಲ್ಲಿ (ಹಿಂದೂ ಪಂಚಾಂಗದ ಐದನೇ ತಿಂಗಳು-ಶ್ರಾವಣ) ಪ್ರತಿ ಸೋಮವಾರ, ಮಹಾರಾಜನಾದ ಮಹಾಕಾಲನು ತನ್ನ ಜನರ ಪರಿಸ್ಥಿತಿ ಅರಿಯಲು ಉಜ್ಜಯಿನಿಗೆ ಭೇಟಿ ನೀಡುತ್ತಾನೆ ಎಂಬ ಪ್ರತೀತಿ ಇದೆ. ಆ ದಿನ, ಭಗವಾನ್ ಮಹಾಕಾಲನ ಮುಖವಾಡವನ್ನು ಪಲ್ಲಕಿಯ ಮೇಲೆ ಇರಿಸಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಗುತ್ತದೆ. ಮಹಾಕಾಲನ ವೈಭವದ ನಗರಪ್ರದಕ್ಷಿಣೆಯನ್ನು ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಸಂಪಾದನೆಗೆ ಭಕ್ತರ ಗಡಣ ನೆರೆದಿರುತ್ತದೆ. ಎಲ್ಲಿ ನೋಡಿದರಲ್ಲಿ ಮಹಾಕಾಲನ ಸ್ತುತಿ ಕೇಳಿಬರುತ್ತದೆ.
ಉಜ್ಜಯಿನಿಗೆ ಒಬ್ಬನೇ ಒಬ್ಬ ಅರಸ. ಅವನೇ ಮಹಾಕಾಲ. ಈ ಮಾತಿನಿಂದಾಗಿ ಯಾವುದೇ ರಾಜರು ಕೂಡ ಉಜ್ಜಯಿನಿ ಹೊರವಲಯದಲ್ಲಿ ರಾತ್ರಿ ವೇಳೆ ತಂಗುವುದಿಲ್ಲ. ಉಜ್ಜಯಿನಿಯನ್ನು ಸಿಂಧಿಯಾ ಮನೆತನದವರು ಆಳ್ವಿಕೆ ನಡೆಸುತ್ತಿದ್ದರಾದರೂ, ಅವರು ನಗರದ ಗಡಿಯ ಹೊರಗೆ ತಮ್ಮದೇ ಆದ ಕಾಲಿಯೆಡೇ ಅರಮನೆಯನ್ನು ರಚಿಸಿಕೊಂಡಿದ್ದರು ಎನ್ನುತ್ತಾರೆ ಇತಿಹಾಸಜ್ಞರು.
ಆರತಿಯ ಸಮಯ: ಈ ಮಂದಿರದ ಬಾಗಿಲು ಬೆಳಗಿನ ಜಾವ 4 ಗಂಟೆಗೆ ತೆರೆದುಕೊಳ್ಳುತ್ತದೆ. ಅದು ಭಸ್ಮಾರತಿಯ ಸಮಯವಾಗಿದ್ದು, 6 ಗಂಟೆಯವರೆಗೂ ಮುಂದುವರಿಯುತ್ತದೆ.
ಬೆಳಿಗ್ಗೆ 7.30ರಿಂದ 8.15ರವರೆಗೆ ನೈವೇದ್ಯ ಆರತಿ.
ಸಂಜೆ 5ರ ವೇಳೆಗೆ ಜಲಾಭಿಷೇಕ ಮುಕ್ತಾಯವಾಗುತ್ತದೆ.
ಸಂಜೆ 6.30ರಿಂದ 7ರವರೆಗೆ ಸಂಧ್ಯಾ ಆರತಿ.
ರಾತ್ರಿ 10.30ರ ಸುಮಾರಿಗೆ ದೇವರಿಗೆ ಶಯನ ಆರತಿ.
ರಾತ್ರಿ 11.00ಕ್ಕೆಲ್ಲಾ ಮಂದಿರದ ದ್ವಾರ ಮುಚ್ಚಲಾಗುತ್ತದೆ.
( ಬೇಸಿಗೆ ಕಾಲದಲ್ಲಿ ನೈವೇದ್ಯ ಆರತಿಯು ಬೆಳಗ್ಗೆ 7.00ರಿಂದ 7.45ರ ವೇಳೆಗೆ ನಡೆಯಲಿದ್ದರೆ, ಸಂಧ್ಯಾ ಆರತಿಯು 7ರಿಂದ 7.30ರ ಸಮಯಕ್ಕೆ ನಡೆಯುತ್ತದೆ.)
ನಾವು ಯಾವಾಗ ಸಂದರ್ಶಿಸಬೇಕು?
ಪ್ರತಿ ದಿನವೂ ಇಲ್ಲಿ ಭಕ್ತರ ಜಂಗುಳಿಯಿದ್ದರೂ, ಶಿವರಾತ್ರಿ ಮತ್ತು ಸಾವನ್ ಮಾಸದ ವೇಳೆ ದೇವರ ಆಶೀರ್ವಾದ ಕೋರಿ ಈ ಕ್ಷೇತ್ರವನ್ನು ಸಂದರ್ಶಿಸುವ ಭಕ್ತಾದಿಗಳ ಸಂಖ್ಯೆ ವಿಪರೀತವಿರುತ್ತದೆ. ಹಾಗಾಗಿ ಈ ತಾಣಕ್ಕೊಂದು ವಿಶೇಷ ಕಳೆ. ಎಲ್ಲಿ ನೋಡಿದರಲ್ಲಿ ಜನರೋ ಜನರು. ಪಾದರಕ್ಷೆಯಿಲ್ಲದೆಯೇ ದೇವರ ಸಂದರ್ಶನಕ್ಕೆ ಆಗಮಿಸಿದವರನ್ನು ದೇವಾಲಯದ ಸುತ್ತಮುತ್ತಲಿನ ಬೀದಿಯಲ್ಲಿ ಕಾಣಬಹುದು. ಸಾವನ್ ತಿಂಗಳಲ್ಲಿ ಶ್ರಾವಣ ಮಹೋತ್ಸವ ಎಂಬ ಧಾರ್ಮಿಕ ವಿಧಿಯೂ ನೆರವೇರುತ್ತದೆ.
ಹೇಗೆ ಹೋಗಬೇಕು?
ರಸ್ತೆಮಾರ್ಗವಾಗಿ:
ಉಜ್ಜಯಿನಿ-ಆಗ್ರಾ-ಕೋಟಾ-ಜೈಪುರ ಮಾರ್ಗ ಉಜ್ಜಯಿನಿ-ಬಾದ್ವಾನಗರ್-ರತ್ಲಾಮ್-ಚಿತ್ತೂರ್ ಮಾರ್ಗ ಉಜ್ಜಯಿನಿ-ಮಾಕ್ಸಿ0ಶಹಜಹಾನ್‌ಪುರ-ಗ್ವಾಲಿಯರ್-ದೆಹಲಿ ಮಾರ್ಗ ಉಜ್ಜಯಿನಿ-ದೇವಾಸ್-ಭೋಪಾಲ ಮಾರ್ಗ ಉಜ್ಜಯಿನಿ-ಧುಲಿಯಾ-ನಾಸಿಕ-ಮುಂಬಯಿ ಮಾರ್ಗ
ರೈಲು ಮೂಲಕ:
ಉಜ್ಜಯಿನಿಯಿಂದ ಮಾಕ್ಸಿ-ಭೋಪಾಲ ಮಾರ್ಗ (ದೆಹಲಿ-ನಾಗ್ಪುರ ಲೈನ್) ಉಜ್ಜಯಿನಿ-ನಾಗ್ಡಾ-ರತ್ಲಾಮ್ ಮಾರ್ಗ (ಮುಂಬಯಿ-ದೆಹಲಿ ಲೈನ್) ಉಜ್ಜಯಿನಿ-ಇಂದೋರ್ ಮಾರ್ಗ (ಖಂಬಾವಾ ಲೈನ್-ಮೀಟರ್ ಗೇಜ್)
ವಿಮಾನ ಮೂಲಕ:
ಉಜ್ಜಯಿನಿಯು ಇಂದೋರ್ ವಿಮಾನ ನಿಲ್ದಾಣದಿಂದ 65 ಕಿ.ಮೀ. ದೂರದಲ್ಲಿದೆ.
ಎಲ್ಲಿ ಉಳಿದುಕೊಳ್ಳುವುದು?
ಉಜ್ಜಯಿನಿಯಲ್ಲಿ ಸಾಕಷ್ಟು ಹೋಟೆಲ್‌ಗಳು ಹಾಗೂ ಧರ್ಮಶಾಲೆಗಳು ಲಭ್ಯವಿವೆ. ಮಹಾಕಾಲ ಸಮಿತಿ ಮತ್ತು ಹರಸಿದ್ಧಿ ಸಮಿತಿಯ ಧರ್ಮಶಾಲೆಗಳು ಕೂಡ ಸಾಮಾನ್ಯ ಮತ್ತು ಲಕ್ಸುರಿ ದರಗಳಲ್ಲಿ ಲಭ್ಯವಿದೆ.