ರಾಜಸ್ಥಾನದ ಶೇಖಾವಟಿಯ ಸಿಕರ್ ಜಿಲ್ಲೆಯಲ್ಲಿರುವ ಖಾಟು ಶ್ಯಾಮ್‌ಜೀ (ಕೃಷ್ಣ) ದೇವಾಲಯ ಬಹಳ ಪುರಾತನವಾದುದು. ಅಷ್ಟೇ ಸೌಂದರ್ಯವೂ ಅಡಗಿರುವ ದೇವಾಲಯವಿದು. ಆದರೆ ಇದರ ಅಡಿಗಲ್ಲು ಹಾಕಿ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದ್ದು 1720ರಲ್ಲಿ. ಅಲ್ಲಿರುವ ಇತಿಹಾಸ ತಜ್ಞ ಝಾಬರ್ಮಾಲ್ ಶರ್ಮಾ ಅವರ ಪ್ರಕಾರ 1679ರಲ್ಲಿ ಈ ದೇವಾಲಯ ಔರಂಗಜೇಬನ ಕಾಲದಲ್ಲಿ ನಾಶವಾಗಿ ಹೋಯಿತು.
ಭೀಮನ ಮೊಮ್ಮಗ ಹಾಗೂ ಘಟೋತ್ಗಜನ ಪುತ್ರ ಬಾರ್ಬರಿಕ ಈ ದೇವಾಲಯದಲ್ಲಿ ಶ್ಯಾಮನ ರೂಪದಲ್ಲಿ ಅಂದರೆ ಕೃಷ್ಣನ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಮಹಾಭಾರತದ ಆಧಾರಗಳ ಪ್ರಕಾರ ಶ್ರೀಕೃಷ್ಣನೇ ಬಾರ್ಬರಿಕನಿಗೆ ಮುಂದೆ ಕಲಿಯುಗದಲ್ಲಿ ನೀನು ಶ್ಯಾಮನಾಗಿ ಪೂಜಿಸಲ್ಪಡು ಎಂಬುದಾಗಿ ವರ ನೀಡುತ್ತಾನೆ. ಅಂತೆಯೇ ಕಲಿಯುಗದಲ್ಲಿ ಬಾರ್ಬರಿಕ ಶ್ಯಾಮನಾಗಿ ಅರ್ಚಿಸಲ್ಪಡುತ್ತಿದ್ದಾನಂತೆ.
WD
ಇಲ್ಲಿ ಫಲ್ಗುಣಿ ತಿಂಗಳ ಶುಕ್ಲ ಪಕ್ಷದಲ್ಲಿ ಪ್ರತಿ ವರ್ಷವೂ ವಾರ್ಷಿಕ ಜಾತ್ರೆಯೂ ನಡೆಯುತ್ತದೆ. ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿರುವ ವ್ಯಾಪಾರಿ ರಾಮಚಂದ್ರ ಚೇಜಾರ ಹೇಳುವ ಪ್ರಕಾರ, ಲಕ್ಷಗಟ್ಟಲೆ ಮಂದಿ ಈ ಶ್ಯಾಮನ ದೇವಸ್ಥಾನಕ್ಕೆ ವಾರ್ಷಿಕ ಜಾತ್ರೆಗೆ ಭೇಟಿ ನೀಡುತ್ತಾರೆ. ಭಾನುವಾರ ಹಾಗೂ ಏಕಾದಶಿಯಂದು ಹೆಚ್ಚು ಜನರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ.
ಇಲ್ಲಿ ಮಂಗಳಾರತಿ ಬೆಳಿಗ್ಗೆ ಐದು ಗಂಟೆಗೆ ನಡೆದರೆ, ಏಳು ಗಂಟೆಗೆ ಧೂಪಾರತಿ, ಮಧ್ಯಾಹ್ನ 12.15ಕ್ಕೆ ಭೋಗ ಆರತಿ, ಸಂಜೆ 7.30ಕ್ಕೆ ಸಂಧ್ಯಾರತಿ, ರಾತ್ರಿ 10 ಗಂಟೆಗೆ ಶಯನಾರತಿ ನಡೆಯುತ್ತದೆ. ಆದರೆ ಬೇಸಿಗೆಯಲ್ಲಿ ಪೂಜೆಯ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ. ಕಾರ್ತಿಕ ಶುಕ್ಲ ಏಕಾದಶಿಯಂದು ಶ್ಯಾಮನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದ್ದು, ಆ ಸಮಯದ್ಲಲಿ 24 ಗಂಟೆಗಳ ಕಾಲ ದೇವಾಲಯ ತೆರೆದಿರುತ್ತದೆ.
WD
ಖಾಟು ಶ್ಯಾಮನ ದೇವಾಲಯದ ಪಕ್ಕದಲ್ಲೇ ಶ್ಯಾಮ್‌ಜೀ ಹೂದೋಟ, ಶ್ಯಾಮ ಕುಂಡ ಮೊದಲಾದ ಹಲವು ಪ್ರವಾಸಿ ಸ್ಥಳಗಳಿವೆ. ಈ ಶ್ಯಾಮ ಕುಂಡದಲ್ಲಿ ಸ್ನಾನ ಮಾಡಿದರೆ ಎಲ್ಲ ಬಗೆಯ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
ರಾಜಸ್ಥಾನದ ಜೈಪುರ ಹಾಗೂ ಸಿಕರ್‌ನಿಂದ ಶ್ಯಾಮ ದೇವಾಲಯಕ್ಕೆ ಬಸ್, ಟ್ಯಾಕ್ಸಿ ಹಾಗೂ ಜೀಪ್ ಸೌಕರ್ಯವಿದೆ. ರೈಲಿನಲ್ಲಾದರೆ, ಶ್ಯಾಮ ದೇವಾಲಯಕ್ಕಿಂತ 15 ಕಿ.ಮಿ.ದೂರದ ರಿಂಗಸ್ ಜಂಕ್ಷನ್‌ಗೆ ಬರಬೇಕು. ವಿಮಾನದಲ್ಲಿ ಬರುತ್ತಿದ್ದರೆ, ಜೈಪುರ ಏರ್‌ಪೋರ್ಟ್‍ಗೆ ಬಂದು ನಂತರ 80 ಕಿ.ಮಿ ಪ್ರಯಾಣಿಸಿ ಖಾಟು ಶ್ಯಾಮನಲ್ಲಿಗೆ ಬರಬಹುದು.