ಮಧ್ಯಪ್ರದೇಶದ ಉಜ್ಜಯಿನಿ ದೇವಾಲಯಗಳ ನಗರ. ಪುರಾಣಗಳಲ್ಲೂ ಈ ನಗರದ ಉಲ್ಲೇಖವಿದೆ. ಈ ಬಾರಿ ನಮ್ಮ ಧಾರ್ಮಿಕ ಯಾತ್ರೆ ಉಜ್ಜಯಿನಿಯ ಮಂಗಳನಾಥ ದೇವಸ್ಥಾನವನ್ನು ಸಂದರ್ಶಿಸುತ್ತಿದೆ. ಉಜ್ಜಯಿನಿ ಇಂದಿನ ಮಧ್ಯಪ್ರದೇಶ ರಾಜ್ಯದ ಧಾರ್ಮಿಕ ರಾಜಧಾನಿ ಎನ್ನಬಹುದು. ಮಂಗಳನಾಥ ದೇವಸ್ಥಾನ ಉಜ್ಜಯಿನಿಯ ಕಾರಣಿಕದ ಪುಣ್ಯಕ್ಷೇತ್ರ. ಪುರಾಣಗಳಲ್ಲಿ ತಿಳಿಸಿರುವಂತೆ ಉಜ್ಜಯಿನಿ ಮಂಗಳ(ಕುಜ)ನ ತಾಯಿ.ಕುಜನ ಶಕ್ತಿ ಪ್ರಾಬಲ್ಯವಿರುವ ಜಾತಕ ಹೊಂದಿರುವ ವ್ಯಕ್ತಿಗಳ ಈ ದೇವಸ್ಥಾನವನ್ನು ಕಡ್ಡಾಯವಾಗಿ ಸಂದರ್ಶಿಸಿ, ಗ್ರಹದೋಷ ನಿವಾರಿಸಲು ಅಥವಾ ಗ್ರಹಸಂತೃಪ್ತಿಗಾಗಿ ಪೂಜಿಸುತ್ತಾರೆ.ಭಾರತದಲ್ಲಿ ಅವೆಷ್ಟೊ ಮಂಗಳನಾಥ ದೇವಸ್ಥಾನಗಳಿವೆ. ಆದರೆ ಉಜ್ಜಯಿನಿ ಮಂಗಳನ ಜನ್ಮಸ್ಥಾನವಾಗಿರುವುದರಿಂದ ಇಲ್ಲಿಗಾಗಮಿಸಿ ಪೂಜೆ ಪುವನಸ್ಕಾರ ಸಲ್ಲಿಸುವುದರಿಂದ ಇಲ್ಲಿ ಹೆಚ್ಚು ಬೇಗ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ನಂಬಲಾಗಿದೆ.
WD
ಉಜ್ಜಯಿನಿಯ ಮಂಗಳನಾಥ ದೇವಸ್ಥಾನವು ಶತಮಾನಗಳ ಹಿಂದಿನದೆಂದು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಒಂದು ಕಾಲದಲ್ಲಿ ಪ್ರದೇಶದಲ್ಲಿ ಪ್ರಬಲರಾಗಿದ್ದ ಸಿಂಧ್ಯ ರಾಜವಂಶದವರು ಇಂದು ಕಾಣುವ ದೇವಸ್ಥಾನದ ಸಂಕೀರ್ಣವನ್ನು ನಿರ್ಮಿಸಿದರೆಂಬುದರ ಉಲ್ಲೇಖಗಳೂ ಇವೆ.
ಉಜ್ಜಯಿನಿಯು ಮಹಾಕಾಲೇಶ್ವರ ನಗರ ಎಂದೂ ಕರೆಯಲಾಗುತ್ತದೆ. ಮಹಾಕಾಲ ಎಂದರೆ ರುದ್ರ. ಮಂಗಳನಾಥ ದೇವರನ್ನು ಇಲ್ಲಿನ ಜನರು ಶಿವನ ರೂಪದಲ್ಲಿ ಆರಾಧಿಸುತ್ತಾರೆ. ಮಹಾಕಾಲೇಶ್ವರ ಶಿವನಿಗೆ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚು ಈ ಕಾರಣದಿಂದ ಉಜ್ಜಯಿನಿ ಮಂಗಳನಾಥ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಭಕ್ತಾದಿಗಳ ದಟ್ಟಣೆ ಇರುತ್ತದೆ.
ಮಂಗಳ(ಗ್ರಹ)ನ ಜನನ: ಸ್ಕಂಧಪುರಾಣದ ಆವಂತಿಕಾ ಖಂಡದಲ್ಲಿ ಉಜ್ಜಯಿನಿ ಹಾಗೂ ಮಂಗಳನ ಜನನ ವೃತ್ತಾಂತ ಉಲ್ಲೇಖವಾಗಿದೆ. ಅದು ಹೀಗಿದೆ:- ಬಹಳ ಹಿಂದೆ ಅಂಧಕಾಸುರ ಎಂಬ ದಾನವ ಇದ್ದನು. ಈ ರಾಕ್ಷಸನು ಕಠಿಣ ತಪಗೈದು ಶಿವನನ್ನು ಒಲಿಸಿ ವಿಶೇಷ ವರವನ್ನು ಪಡೆದನು. ಈ ವರದ ಫಲವಾಗಿ ತನ್ನ ರಕ್ತದಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಕ್ಷಸರನ್ನು ಸೃಷ್ಟಿಸಿದನು.
ವರಪ್ರಸಾದದ ಶಕ್ತಿಯಿಂದ ಯಾರನ್ನೂ ಲೆಕ್ಕಿಸದೆ ಬೆಳೆದ ಅಂಧಕಾಸುರ ಅಂಕೆಮೀರಿ ಅಧಿಕಾರ ಚಲಾಯಿಸತೊಡಗಿದ. ಆವಂತಿಕಾ ಸಾಮ್ರಾಜ್ಯವನ್ನು ಆಕ್ರಮಿಸಿ ನಾಶಪಡಿಸಲಾರಂಭಿಸಿದ, ಸಾಧುಸಂತರು, ಆಸ್ತಿಕರಿಗೆ ಕಿರುಕುಳ ನೀಡತೊಡಗಿದನು. ಈ ಸಂದರ್ಭದಲ್ಲಿ ಅಂಧಕನಿಂದ ನೊಂದ ಜನರು ಶಿವದೇವರನ್ನು ಸಹಾಯಕ್ಕಾಗಿ ಮೊರೆಯಿಟ್ಟರು.
ಭಕ್ತಾದಿಗಳ ಆರ್ತನಾದವನ್ನು ಕೇಳಿದ ಶಿವನು ಶಂಭುವಾಗಿ ಅಂಧಕಾಸುರನನ್ನು ಎದುರಿಸಿದನು. ಇವರಿಬ್ಬರ ಮಧ್ಯೆ ಘನಘೋರ ಯುದ್ಧ ಸಂಭವಿಸುತ್ತದೆ.
ಈ ಸಂದರ್ಭದಲ್ಲಿ ಶಿವನ ದೇಹದಲ್ಲಿ ಉಷ್ಣತೆ ಹೆಚ್ಚಿ , ಆತ ಬೆವರತೊಡಗುತ್ತಾನೆ. ಬೆವರಿನ ಹನಿಗಳು ದೇಹದಿಂದ ಭೂಮಿಗೆ ತೊಟ್ಟಿಕ್ಕಲಾರಂಭಿಸುತ್ತದೆ.
ಈ ರೀತಿ ತೊಟ್ಟಿಕ್ಕಿದ ಬೆವರ ಹನಿಗಳು ಉಜ್ಜಯಿನಿ ನೆಲವನ್ನು ಎರಡಾಗಿ ಸೀಳುತ್ತದೆ. ಆ ಬಿರುಕಿನಿಂದ ಮಂಗಳನ ಜನನವಾಗುತ್ತದೆ. ಇದೇ ಸಂದರ್ಭದಲ್ಲಿ ಶಂಭುವಾದ ಶಿವನು ಅಂಧಕಾಸುರನನ್ನು ಕೊಲ್ಲುತ್ತಾನೆ. ಅಂಧಕನ ದೇಹದಿಂದ ರಕ್ತ ಪ್ರವಾಹವಾಗಿ ಹೊರಚೆಲ್ಲುತ್ತದೆ. ಇದು ನೆಲಸೇರಿದರೆ ಮತ್ತೆ ದಾನವರ ಜನನವಾಗುತ್ತದೆ. ಇದನ್ನು ತಡೆಯಲು ನವಜಾತನಾದ ಮಂಗಳ ಆ ರಕ್ತ ಭೂಸ್ಪರ್ಶಿಸದಂತೆ ಹೀರಿಕೊಳ್ಳುತ್ತಾನೆ. ಇದೇ ಕಾರಣದಿಂದ ಮಂಗಳನ ಮೇಲ್ಮೈ ರಕ್ತವರ್ಣದಲ್ಲಿದೆ ಎಂದು ನಂಬಲಾಗುತ್ತದೆ.
ಆರತಿ-ಗಿಳಿಗಳು: ಮಂಗಳನಾಥ ದೇವಸ್ಥಾನದಲ್ಲಿ ಪ್ರತಿದಿನ ಪ್ರಾತಃಕಾಲದ 6 ಗಂಟೆಗೆ ಆರತಿ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲೊಂದು ವಿಶೇಷ ನಡೆಯುತ್ತದೆ. ಅದೆಲ್ಲಿಂದಲೊ ಗಿಳಿಗಳ ಹಿಂಡು ಅಲ್ಲಿ ನೆರೆಯುತ್ತದೆ....
ಪೂಜೆ ಮುಗಿಯುವ ವರೆಗೂ ಕಾದು ಮೌನವಾಗಿ ಕಾಯುವ ಗಿಳಿಗಳ ಹಿಂಡು, ಪ್ರಸಾದ ಸ್ವೀಕರಿಸಿ ಹಾರಿ ಹೋಗುತ್ತದೆ. ಪ್ರಸಾದಕ್ಕಾಗಿ ಕಾಯುವ ಗಿಳಿಗಳ ಹಿಂಡಿನ ದರ್ಶನವೇ ಅನುಪಮ. ಈ ಕುರಿತು ದೇವಸ್ಥಾನದ ಅರ್ಚಕ ನಿರಂಜನ ಭಾರತಿ - ನಾವೊಂದು ವೇಳೆ ಪ್ರಸಾದ ನೀಡುವುದು ತಡವಾದರೆ, ಈ ಗಿಳಿಗಳು ಗದ್ದಲವೆಬ್ಬಿಸುತ್ತವೆ- ಅನ್ನುತ್ತಾರೆ. ಇದೊಂದು ಅಪೂರ್ವ ದೃಶ್ಯ.
WD
ಭಕ್ತಾದಿಗಳು ಈ ಗಿಳಿಗಳಲ್ಲಿ ದೇವರನ್ನು ಕಾಣುತ್ತಾರೆ. ಮಂಗಳನಾಥನೇ ಗಿಳಿರೂಪದಲ್ಲಿ ಬಂದು ಸ್ವತಃ ಪ್ರಸಾದ ಸ್ವೀಕರಿಸುವುದಾಗಿ ಅವರು ನಂಬುತ್ತಾರೆ. ಮಂಗಳನ ರಾಶಿವಿವರವೆಂದರೆ ಮೇಷ ಹಾಗೂ ಕರ್ಕಟಕ ರಾಶಿ. ಯಾರ ಜಾತಕದ ಚತುರ್ಥ, ಸಪ್ತ,ಅಷ್ಟ ಹಾಗೂ ದ್ವಾದಶ ಸ್ಥಾನಗಳಲ್ಲಿ ಮಂಗಳ ನೆಲೆಗೊಂಡಿರುವನೊ ಅಂಥವರು ಇಲ್ಲಿ ವಿಶೇಷ ಪ್ರಾರ್ಥನೆಗಳಿಂದ ಕುಜತೃಪ್ತಿಗೆ ಪಾತ್ರರಾಗಬಹುದು.
ವಿಶೇಷ ಜಾತ್ರೆ: ಪ್ರತಿ ವರ್ಷದ ಮಾರ್ಚ್‌ನಲ್ಲಿ ಮಂಗಳನಾಥ ದೇವಸ್ಥಾನದಲ್ಲಿ ಜಾತ್ರೋತ್ಸವವಿದೆ. ಅದು ಅಂಗಾರಕ ಚತುರ್ಥಿಯಂದು ನೆರವೇರುತ್ತದೆ. ವಿಶೇಷ ಪೂಜೆ, ದೇವತಾರ್ಚನೆ ಇತ್ಯಾದಿಗಳು ಈ ದಿನದ ವೈಶಿಷ್ಟ್ಯ. ವಿಶೇಷ ಹೋಮಹವನಾದಿಗಳು ಈ ಸಂದರ್ಭದಲ್ಲಿ ಜರುಗುತ್ತವೆ. ದೇಶಾದ್ಯಂತದ ದೂರದ ಊರುಗಳಿಂದ ಜನರು ಪ್ರಸ್ತುತ ದಿನದಂದು ಇಲ್ಲಿಗಾಗಮಿಸಿ ಪೂಜೆ ಸಲ್ಲಿಸಿ ಮಂಗಳನ ಅವಕೃಪೆಯನ್ನು ನಿವಾರಿಸುತ್ತಾರೆ.
ಉಜ್ಜಯಿನಿ ಮಂಗಳನಾಥ ದೇವಸ್ಥಾನದ ವಿಶೇಷ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
WD
ಐತಿಹ್ಯ: ಮಂಗಳನಾಥ ದೇವರ ಕಾರಣಿಕದ ಕುರಿತಾಗಿ ಹಲವು ನಂಬಿಕೆಗಳು ಚಾಲನೆಯಲ್ಲಿವೆ. ಅವುಗಳಲ್ಲೊಂದು ನವದಂಪತಿಗಳಿಂದ ಪೂಜೆ. ಕುಜದೋಷವಿರುವ ನವದಂಪತಿ ಇಲ್ಲಿಗಾಗಮಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಿದರೆ, ಅವರ ಜಾತಕದಲ್ಲಿನ ದೋಷ ನಿವಾರಣೆಯಾಗುತ್ತದೆ. ದಾಂಪತ್ಯ ಹಾಗೂ ಜೀವನದಲ್ಲಿ ಸುಖ ನೆಮ್ಮದಿ ಲಭಿಸುತ್ತದೆ ಎಂಬುದು ಇಂತಹ ನಂಬಿಕೆಗಳಲ್ಲೊಂದು.
ಕ್ಷೇತ್ರದರ್ಶನ: ಪ್ರತಿ ಮಂಗಳವಾರದಂದು ಮಂಗಳನಾಥ ದೇವರ ದರ್ಶನ ಸಾಮಾನ್ಯವೆಂಬಂತೆ ನಡೆಯುತ್ತದೆ. ಆದರೆ ಮಾರ್ಚ್ ತಿಂಗಳಲ್ಲಿ ಅಂಗಾರಕ ಚತುರ್ಥಿಯಂದು ವಿಶೇಷ ಕೈಂಕರ್ಯವೆಂಬಂತೆ ಜನರು ಇಲ್ಲಿ ಸೇರಿ, ದೇವತಾರ್ಚನೆ ನಡೆಸುತ್ತಾರೆ. ಪ್ರತಿ ಮಂಗಳವಾರವೂ ಇಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತವೆ. ನೀವು ನಿಮ್ಮ ಸೌಕರ್ಯದಂತೆ ದಿನ ನಿಗದಿ ಪಡಿಸಿ ಸಂದರ್ಶಿಸಲು ಅವಕಾಶವಿದೆ.
ಮಾರ್ಗನಕ್ಷೆ: ದೇವಸ್ಥಾನಕ್ಕೆ ಬಸ್ ಅಥವಾ ವಾಹನ ಮೂಲಕ ಬರುವವರು ನೇರ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕ ಮೂಲಕ 55 ಕಿ.ಮೀ., ಭೋಪಾಲ್ ನಿಂದ175 ಕಿ.ಮೀ. ಪ್ರಯಾಣಿಸಬೇಕಾಗುವುದು. ಇಲ್ಲಿಗೆ ಖಾಂಡ್ವಾದಿಂದ 185 ಕಿ.ಮೀ., ರಾಟಲಾಂ ದಿಂದ 90 ಕಿ.ಮೀ. ಅಂತರವಿದೆ.
ರೈಲುಮಾರ್ಗದ ಮೂಲಕ ಆಗಮಿಸುವವರಿಗಾಗಿ ಮುಂಬೈ, ದೆಹಲಿ, ಇಂದೋರ್, ಭೋಪಾಲ್ ಹಾಗೂ ಖಾಂಡ್ವಾ ಮುಂತಾದೆಡೆಗಳಿಂದ ನೇರ ರೈಲುಗಾಡಿ ಸಂಪರ್ಕವಿದೆ.
ವಿಮಾನ ಮೂಲಕವೂ ಇಲ್ಲಿಗಾಗಮಿಸಲು, ತ್ವರಿತ ಯಾತ್ರೆಗೆ ಅವಕಾಶವಿದೆ. ಅತಿ ಸಮೀಪದಲ್ಲೇ ಇಂದೋರ್ ವಿಮಾನ ನಿಲ್ದಾಣವಿದೆ. ಇಲ್ಲಿಂದ ದೇವಸ್ಥಾನಕ್ಕೆ 65 ಕಿ.ಮೀ.ಗಳ ಅಂತರವಿದೆ.
ವಸತಿ ಮಾಹಿತಿ: ಉಜ್ಜಯಿನಿಯಲ್ಲಿ ಉತ್ತಮ ಗುಣಮಟ್ಟದ ಲಾಡ್ಜ್ (ಹೊಟೇಲು)ಗಳು, ಛತ್ರ(ಧರ್ಮಶಾಲಾ)ಗಳು ಯಾತ್ರಾರ್ಥಿಗಳಿಗೆ ನೆಲೆಸಲು ಕೈಗೆಟಕುವ ಶುಲ್ಕದಲ್ಲಿ ಲಭ್ಯವಿವೆ. ಮಹಾಕಾಲದೇವಸ್ಥಾನ ಹಾಗೂ ಹರಸಿದ್ಧಿ ದೇವಸ್ಥಾನಗಳಿಗೆ ಸಮೀಪವಾಗಿ ಮಹಾಕಾಲ ಸಮಿತಿಯವರು ನಡೆಸುವ ಛತ್ರಗಳೂ ಇವೆ. ಈ ಛತ್ರಗಳಲ್ಲಿ ಹವಾನಿಂಯತ್ರಿತ (ಎ.ಸಿ.), ಅವಾನಿಯಂತ್ರಕ ರಹಿತ(ನಾನ್ ಎ.ಸಿ.) ಕೊಠಡಿಗಳು ಲಭಿಸುತ್ತವೆ. ದೇವಸ್ಥಾನ ಆಡಳಿತ ಸಮಿತಿ ಈ ಛತ್ರಗಳ ಉಸ್ತುವಾರಿ ವಹಿಸಿವೆ.
ಉಜ್ಜಯಿನಿ ಮಂಗಳನಾಥ ದೇವಸ್ಥಾನದ ವಿಶೇಷ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.