Select Your Language

Notifications

webdunia
webdunia
webdunia
webdunia

ಕನ್ನಡದ ಅಭಿಮಾನದೊಳಗೆ ಅನ್ಯ ಭಾಷಾ ದೂಷಣೆ ಬೇಡ

ಕನ್ನಡದ ಅಭಿಮಾನದೊಳಗೆ ಅನ್ಯ ಭಾಷಾ ದೂಷಣೆ ಬೇಡ
ಶ್ವೇತಾ ಪಿ.ಎಸ್.
WD
"ಕನ್ನಡ"ವೆಂದರೆ ಅಮೃತ ಕುಡಿದಂತೆ ಎಂಬ ಕವಿವಾಣಿಯೊಂದಿದೆ. ಅಂತಹಾ ಕನ್ನಡದ ನಾಡು ಉದಯವಾದ ದಿನ ನವೆಂಬರ್ 1. ಈ ಕನ್ನಡ ರಾಜ್ಯೋತ್ಸವದ ದಿನ ಕನ್ನಡಕ್ಕೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬ ಮಾತಿಗಿಂತಲೂ ಹೆಚ್ಚಾಗಿ ಚರ್ಚಿತವಾಗುವುದು 'ಕನ್ನಡವನ್ನು ಉಳಿಸಿ ಬೆಳೆಸಿ', 'ಕನ್ನಡಕ್ಕಾಗಿ ಹೋರಾಡಿ' ಎಂಬ ನು(ಕಿ)ಡಿಗಟ್ಟುಗಳು. ಭಾಷಾ ಪ್ರೇಮದೊಂದಿಗೆ ಈ ಘೋಷಣೆಗಳ ಸಮ್ಮಿಲನ ಮುಗಿಲು ಮುಟ್ಟುವಂತಿದ್ದರೂ ಈ ದಿನದಂದು ಕನ್ನಡಕ್ಕೆ ಕಿಂಚಿತ್ ಆದರೂ ಸೇವೆ ನಾವು ಮಾಡಿದ್ದೇವೆಯೇ ಎಂಬುದನ್ನು ಒಂದೆಡೆ ಕುಳಿತು ಆಲೋಚಿಸಬೇಕು. ಆದರೆ ಈ ಯೋಚನೆಯು ಕೇವಲ ಪ್ರಚಾರಪ್ರಿಯವಾಗಬಾರದು ಮತ್ತು ಮಾಧ್ಯಮಗಳಲ್ಲಿ ತಮ್ಮ ಫೋಟೋ ಬರುತ್ತೆವೆಂಬ ಧಾವಂತದ ಕಂಠ ಶೋಷಣೆಯೂ ಆಗಬಾರದು.

ನಮ್ಮ ಗೌರವಾನ್ವಿತ ನಾಡಗೀತೆಯಲ್ಲಿ ಕನ್ನಡ ಹಾಗೂ ಕರ್ನಾಟಕದ ಸೊಬಗು, ಕನ್ನಡದ ಇಂಪನ್ನು ಬಣ್ಣಿಸಿರುವ ರೀತಿಯಿಂದಲೇ ನಾಡು ಹಾಗೂ ನುಡಿಗಿರುವ ವೈಶಿಷ್ಟ್ಯ ಮನದಟ್ಟಾಗುತ್ತದೆ. ಕನ್ನಡ ಭಾಷೆಯಿಂದಲೇ ನಾಡಿಗೆ ಸೊಬಗು. ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿರುವ ನುಡಿ ನಮ್ಮದು. ಆದರೆ ಈ ದಿನದಂದು ನಡೆಯುವ ಹಲವಾರು ಕಾರ್ಯಕ್ರಮಗಳು ಕೇವಲ ತೋರಿಕೆಗೆ ಎಂಬುದು ಮೇಲ್ನೋಟದಿಂದಲೇ ಮನದಟ್ಟಾಗುತ್ತದೆ.

ಈ ಸಲದ ರಾಜ್ಯೋತ್ಸವ ರಾಜಕೀಯ ಕೊಳಕುಗಳಿಂದ ತುಸು ಮಸುಕಾದಂತೆ ಕಾಣುತ್ತಿದೆ. ಭ್ರಷ್ಟ ರಾಜಕಾರಣಕ್ಕೆ ಈಗೀಗ ಪ್ರಸಿದ್ಧವಾಗುತ್ತಿರುವ ಕರ್ನಾಟಕವು ರಾಜ್ಯೋತ್ಸವದ ಗುಂಗಿನಲ್ಲಿಲ್ಲ ಎಂಬುದು ನಿಚ್ಚಳವಾಗಿ ಮನಗಾಣುತ್ತಿದೆ. ನಾಡು ನುಡಿಗಾಗಿ ಪ್ರಾಣ ಕೊಟ್ಟವರು ನಮ್ಮ ರಾಜ್ಯದಲ್ಲಿದ್ದರೂ ಸ್ವಂತ ಭೂಮಿಗಾಗಿ ರಾಜ್ಯದ ಹಿತವನ್ನೇ ಬಲಿ ಕೊಟ್ಟ ರಾಜ್ಯ ದ್ರೋಹಿಗಳು ನಮ್ಮೊಡನಿದ್ದಾರೆ. ಇವರೆಲ್ಲಾ ಕನ್ನಡಕ್ಕೆ ಹೋರಾಡಿದವರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ನಮ್ಮ ನಾಡನ್ನು ಆಳುವವರೇ ಪ್ರಜೆಗಳನ್ನು ಶೋಷಿಸಿದ್ದಾರೆ ಎಂಬುದು ಚಿಂತೆಯ ಸಂಗತಿ. ಹಗರಣಗಳ ಸುಳಿಯಲ್ಲಿ ಈಗ ವಿಲ ವಿಲನೆ ಒದ್ದಾಡುತ್ತಿರುವುದನ್ನು ನೋಡಿದಾಗಲೇ ಅವರ ಪಾಪ ಕೂಪದ ಅರಿವು ನಮಗಾಗುತ್ತದೆ.

ಅಂತೂ ರಾಜಕೀಯ ಲಾಬಿಯಲ್ಲಿ ಕನ್ನಡ, ಕರ್ನಾಟಕ ಬಳಲಿದ್ದರೂ ಕನ್ನಡದ ಅಭಿಮಾನಿಗಳಂತೂ ವಿಜೃಂಭಣೆಯಿಂದ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಅದು ಹೇಗೆ? ಕೆಲವೆಡೆ ಬೇರೆ ರಾಜ್ಯಗಳ ರಾಜಕೀಯ ವ್ಯಕ್ತಿಗಳ ಬೊಂಬೆಯನ್ನು ಸಜೀವ ದಹಿಸಿ ತಮ್ಮ ಕನ್ನಡಾಭಿಮಾನವನ್ನು ಪ್ರದರ್ಶಿಸುತ್ತಾರೆ. ಮಮ್ಮಿ ಡ್ಯಾಡಿ ಬೇಡ, ಅಪ್ಪ ಅಮ್ಮ ಸಾಕು ಮುಂತಾದ ಅಣಿಮುತ್ತುಗಳನ್ನು ಉದುರಿಸುತ್ತಾರೆ ಮತ್ತು ಪರಭಾಷೆಗಳನ್ನು ದೂರುತ್ತಾ ಕನ್ನಡದ ಹಬ್ಬವನ್ನು ಮಾಡುತ್ತಾರೆ. ಅವರ ರಾಜ್ಯೋತ್ಸವ ಇಲ್ಲಿಗೆ ಪರಿಸಮಾಪ್ತಿಯಾಗುತ್ತದೆ. ಇದು ಇಷ್ಟಕ್ಕೇ ನಿಲ್ಲಬಾರದು. ಕನ್ನಡದ ಮನಸ್ಸು ಪ್ರತಿದಿನವೂ ಅರಳುತ್ತಿರಬೇಕು.

ಇದರ ನಡುವೆ, ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಅನ್ಯ ಭಾಷೆಗಳ ತೆಗಳುವಿಕೆಗೆ ಉಪಯೋಗಿಸಬಾರದು ಎಂಬುದು ನೆನಪಿನಲ್ಲಿರಬೇಕಾಗುತ್ತದೆ. ಆಯಾ ಭಾಷೆಗೆ ಅದರದ್ದೇ ಆದ ವೈಶಿಷ್ಟ್ಯ ಇರುವಾಗ, ನಮ್ಮ ಭಾಷೆ ನಮಗೆ ಮೇಲು. ಅದನ್ನು ಗೌರವಿಸೋಣ. ಪರಭಾಷಿಕರ ಹಾವಳಿ ರಾಜ್ಯಕ್ಕೆ ಧಕ್ಕೆ ತರುವುದು ನಿಜವಾಗಿದ್ದರೂ ಕನ್ನಡದ ಹುಟ್ಟಿನಂದೇ ಅನ್ಯ ಭಾಷೆಯ ಕೊಲೆ ಮಾಡಬಾರದು. ಹೆಚ್ಚಾಗಿ ನಾವು ನಮ್ಮ ಭಾಷಾ ದ್ವೇಷವನ್ನು ತೋರಿಸುವುದು ಆಂಗ್ಲ ಭಾಷೆಯ ಮೇಲೆಯೇ. ಅಭಿವೃದ್ಧಿಯ ದೃಷ್ಟಿಕೋನದಿಂದ ಮತ್ತು ಅನ್ಯಭಾಷಿಕರೊಂದಿಗೆ ಸಂವಹನಕ್ಕೆ ಸಾಧ್ಯವಾಗುವ ಆಂಗ್ಲ ಭಾಷೆ ನಮಗೆ ಅಗತ್ಯವೇ. ಹಾಗೆಂದು ಕನ್ನಡಿಗರು ಕನ್ನಡವನ್ನು ಕಡೆಗಣಿಸಿ ಆಂಗ್ಲ ಭಾಷೆಯನ್ನು ನಿಮ್ಮದಾಗಿಸಿ ಅಂತ ಹೇಳುತ್ತಿಲ್ಲ. ಕನ್ನಡದೊಂದಿಗೆ ಇತರ ಭಾಷೆಯನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ಲೋಕ ಜ್ಞಾನಕ್ಕಾದರೂ ನಾವು ಇತರ ಭಾಷೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

Share this Story:

Follow Webdunia kannada