Select Your Language

Notifications

webdunia
webdunia
webdunia
webdunia

ಸ್ಲಂಡಾಗ್: ಮುಂಬಯಿಯಲ್ಲಿ ತುಂಬಿ ತುಳುಕುವ ಸ್ಲಮ್‌ಗಳು

ಸ್ಲಂಡಾಗ್: ಮುಂಬಯಿಯಲ್ಲಿ ತುಂಬಿ ತುಳುಕುವ ಸ್ಲಮ್‌ಗಳು
ನವದೆಹಲಿ , ಸೋಮವಾರ, 23 ಫೆಬ್ರವರಿ 2009 (18:05 IST)
ಎಂಟು ಆಸ್ಕರ್ ಪ್ರಶಸ್ತಿಗಳನ್ನು ಭಾನುವಾರ ಬಗಲಿಗೆ ಹಾಕಿಕೊಂಡಿರುವ ಸ್ಲಂ ಡಾಗ್ ಮಿಲಿಯನೇರ್‌ಗೆ ದೆಹಲಿಯಲ್ಲಿ ಮನರಂಜನಾ ತೆರಿಗೆಯನ್ನು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರದ್ದುಗೊಳಿಸಿದ್ದು, ಇತ್ತ ಮುಂಬಯಿಯ ಕೊಳೆಗೇರಿಗಳಲ್ಲಿ ಸಂಭ್ರಮಾಚರಣೆ ಮೇರೆ ಮೀರಿದೆ.

ತಮ್ಮ ಕುರಿತ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ದೊರೆತಿದ್ದನ್ನು ಟಿವಿಯಲ್ಲಿ ನೋಡಿದ ತಕ್ಷಣವೇ ಮುಂಬಯಿಯ ಕಿರಿದಾದ ಕೊಳೆಗೇರಿಗಳಲ್ಲಿ ಬಾಲಿವುಡ್ ಕ್ಯಾಸೆಟ್ ಹಾಕಿ ಕುಣಿಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿದೆ. ಮುಂಬಯಿ ಹೊರವಲಯದ ಸ್ಲಮ್‌ಗಳಿಂದ ಅಜರುದ್ದೀನ್ ಮೊಹಮದ್ ಇಸ್ಮಾಯಿಲ್ (10) ಮತ್ತು ರುಬೀನಾ ಅಲಿ (9) ಎಂಬಿಬ್ಬರು ಮಕ್ಕಳನ್ನು ಆರಿಸಿ, ಈ ಸ್ಲಂ ಡಾಗ್‌ನಲ್ಲಿ ಅವಕಾಶ ನೀಡಲಾಗಿತ್ತು. ಅವರಿಬ್ಬರೂ ಹಾಲಿವುಡ್‌ಗೆ ತೆರಳಿ ಆಸ್ಕರ್ ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದರು. ಅವರ ಗೆಳೆಯರಂತೂ ಕುಣಿದು ಕುಪ್ಪಳಿಸತೊಡಗಿದ್ದರು.

ಅಜರ್ ಮತ್ತು ರುಬೀನಾ ಮನೆಗಳು ತೀರಾ ದಯನೀಯ ಸ್ಥಿತಿಯಲ್ಲಿವೆ. ಅಜರ್ ಮನೆ ಟರ್ಪಾಲಿನ ಚಾವಣಿ ಹೊಂದಿದ್ದರೆ, ರುಬೀನಾ ಮನೆಯದ್ದು ತಗಡಿನ ಶೀಟಿನ ಚಾವಣಿ. ಸೋಮವಾರವಂತೂ ಆ ಗಲ್ಲಿಯಲ್ಲಿ ಪತ್ರಕರ್ತರು, ಕ್ಯಾಮರಾಮನ್‌ಗಳ ದಂಡೇ ನೆರೆದಿತ್ತು.

ಸರಕಾರದ ಸಮೀಕ್ಷೆಯೊಂದರ ಪ್ರಕಾರ, ಸುಮಾರು 65 ದಶಲಕ್ಷ ಭಾರತೀಯರು ಸ್ಲಮ್ಮುಗಳಲ್ಲಿ ವಾಸಿಸುತ್ತಿದ್ದಾರೆ. ಹೆಚ್ಚಿನವರು ತಮ್ಮ ಸ್ಥಳೀಯ ಪುಟಾಣಿ ಸ್ಟಾರ್‌ಗಳ ಹೆಮ್ಮೆ ವ್ಯಕ್ತಪಡಿಸುತ್ತಾರಾದರೂ, ಸ್ಲಮ್‌ಗಳಲ್ಲಿರುವರನ್ನು ನಾಯಿಗೆ ಹೋಲಿಸಿರುವ ಚಿತ್ರದ ಶೀರ್ಷಿಕೆಗೆ ಮಾತ್ರ ಎಲ್ಲರ ವಿರೋಧವಿದೆ. 'ನಾನು ಬಡವನಿರಬಹುದು. ಆದರೆ ಯಾರೂ ನಮ್ಮನ್ನು ನಾಯಿ ಎಂದು ಕರೆಯಲಾಗದು' ಎನ್ನುತ್ತಾರೆ ಅಜರ್ ನೆರೆಮನೆಯವರಾದ 40ರ ಹರೆಯದ ಫಕ್ರುನ್ನಿಸಾ ಶೇಖ್.

ಆ ಕೊಳೆಗೇರಿಗಳಲ್ಲಿರುವವರೆಲ್ಲಾ ತಮ್ಮ ಸ್ಥಳೀಯ ಸ್ಟಾರ್‌ಗಳಾದ ಅಜರ್ ಮತ್ತು ರುಬೀನಾರನ್ನು ಟಿವಿಯಲ್ಲಿ ನೋಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ದೇವತೆಗಳಂತೆ ಕಾಣಿಸುತ್ತಿದ್ದರು ಎಂದು ಹರ್ಷೋದ್ಗಾರದಿಂದ ನುಡಿಯುತ್ತಾರವರು.

Share this Story:

Follow Webdunia kannada