Select Your Language

Notifications

webdunia
webdunia
webdunia
webdunia

ವಾರ್ನರ್ ತೆಕ್ಕೆಯಿಂದ ಫಾಕ್ಸ್ ಕೈಸೇರಿದ ಆಸ್ಕರ್ ಗೌರವ

ವಾರ್ನರ್ ತೆಕ್ಕೆಯಿಂದ ಫಾಕ್ಸ್ ಕೈಸೇರಿದ ಆಸ್ಕರ್ ಗೌರವ
, ಸೋಮವಾರ, 23 ಫೆಬ್ರವರಿ 2009 (14:35 IST)
ಒಂದು ಸ್ಟುಡಿಯೋ ಕೈಕೊಟ್ಟಿರುವುದೇ ಮತ್ತೊಂದು ಸ್ಟುಡಿಯೋದ ಏಳಿಗೆಗೆ ಕಾರಣವಾದ ಕಥೆಯಿದು. ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಭಾನುವಾರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೊರೆತ ಅಗ್ರ ಗೌರವವನ್ನು ಅದರ ವಿತರಣಾ ಸಂಸ್ಥೆಯಾದ ಫಾಕ್ಸ್ ಸರ್ಚ್‌ಲೈಟ್ ಆಚರಿಸುತ್ತಿದ್ದರೆ, ಮತ್ತೊಂದು ವಿತರಣಾ ಕಂಪನಿ ವಾರ್ನರ್ ಬ್ರದರ್ಸ್ಗೆ ನಿರಾಶೆಯಾಗುತ್ತಿತ್ತು.

ಕೊಳೆಗೇರಿ ಹುಡುಗನೊಬ್ಬ ಕ್ವಿಜ್ ಕಾರ್ಯಕ್ರಮದಲ್ಲಿ ಮಿಲಿಯಾಧಿಪತಿಯಾಗುವ ಕಥಾನಕವುಳ್ಳ ಈ ಚಿತ್ರವು ಅತ್ಯುತ್ತಮ ಚಿತ್ರವೂ ಸೇರಿದಂತೆ 8 ವಿಭಾಗಗಳಲ್ಲಿ ಆಸ್ಕರಿ ಗರಿ ತನ್ನದಾಗಿಸಿಕೊಳ್ಳುವುದರೊಂದಿಗೆ, ರೂಪರ್ಟ್ ಮುರ್ಡೋಕ್ ಅವರ ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಫಿಲ್ಮ್ ಸ್ಟುಡಿಯೋ ಕೂಡ ಮೊದಲ ಬಾರಿ ಅಗ್ರ ಗೌರವ ಪಡೆದ ಖುಷಿ ಅನುಭವಿಸಿತು.

15 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸ್ಲಂ ಡಾಗ್ ಮಿಲಿಯನೇರ್ ಚಿತ್ರವನ್ನು ಮೂಲತಃ ಉತ್ತರ ಅಮೆರಿಕದಲ್ಲಿ ವಿತರಿಸಬೇಕಾಗಿದ್ದುದು ವಾರ್ನರ್ ಇಂಡಿಪೆಂಡೆಂಟ್ ಪಿಕ್ಚರ್ಸ್. ಆದರೆ ಈ ಕಂಪನಿಯನ್ನು ಅದರ ಮಾತೃಸಂಸ್ಥೆಯು ಕಳೆದ ಮೇ ತಿಂಗಳಲ್ಲಿ ಮುಚ್ಚುವ ಮೂಲಕ, ಅದರ ಕೈಯಲ್ಲಿದ್ದ ಚಿತ್ರಗಳನ್ನೆಲ್ಲಾ ಅನಾಥವನ್ನಾಗಿಸಿತ್ತು; ಬಹುಶಃ ಸ್ಲಂ ಡಾಗ್ ಚಿತ್ರದ ಹೀರೋನಂತೆಯೇ!

ಆದರೆ ವಾರ್ನರ್ ಬ್ರದರ್ಸ್ ಒಂದು ಒಳ್ಳೆಯ ಕೆಲಸ ಮಾಡಿತ್ತು. ಕುತೂಹಲಿ ನಿರ್ಮಾಪಕರು ಅದನ್ನು ಮತ್ತೊಂದು ಸ್ಟುಡಿಯೋಗೆ ತೋರಿಸಲು ಅವಕಾಶ ಮಾಡಿಕೊಟ್ಟರು. ಆಗ ಆಯ್ಕೆಯಾಗಿದ್ದೇ ಫಾಕ್ಸ್ ಸರ್ಚ್‌ಲೈಟ್. ಅದಕ್ಕೆ ಸ್ಲಂ ಡಾಗ್ ಚಿತ್ರ ನಿರ್ದೇಶಕ ಡ್ಯಾನಿ ಬೋಯ್ಲ್ ಅವರೊಂದಿಗೆ 2003ರಿಂದಲೇ ಪರಿಚಯ. ಡ್ಯಾನಿ ಅವರ 28 ಡೇಸ್ ಲೇಟರ್ ಎಂಬ ಚಿತ್ರವನ್ನು ವಿತರಿಸಿದ್ದೂ ಇದೇ ಸರ್ಚ್‌ಲೈಟ್.

ಈ ಚಿತ್ರವನ್ನು ಟೊರಾಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರ್ ಶೋ ನಡೆಸುವ ಕೆಲವೇ ದಿನಗಳ ಮೊದಲು ಕಳೆದ ಆಗಸ್ಟ್ ತಿಂಗಳಲ್ಲಿ ಫಾಕ್ಸ್ ಸರ್ಚ್‌ಲೈಟ್ ಖರೀದಿಸಿತು. ನವೆಂಬರ್ ಅಂತ್ಯಭಾಗದಲ್ಲಿ ಈ ಚಿತ್ರ ಉತ್ತರ ಅಮೆರಿಕದಲ್ಲಿ ಬಿಡುಗಡೆಯಾದ ಬಳಿಕ ಇದುವರೆಗೆ ಅದು ಗಳಿಸಿದ್ದು 98 ದಶಲಕ್ಷ ಡಾಲರ್.

ಸ್ಲಂ ಡಾಗ್ ಚಿತ್ರದ ಅಂತಾರಾಷ್ಟ್ರೀಯ ವಿತರಣೆ ಹಕ್ಕುಗಳ ನಿಯಂತ್ರಣವಿರುವುದು ಬ್ರಿಟಿಷ್ ಚಿತ್ರೋದ್ಯಮ ಸಂಸ್ಥೆ 'ಪಾಥೆ' ಕೈಯಲ್ಲಿ.

Share this Story:

Follow Webdunia kannada