Select Your Language

Notifications

webdunia
webdunia
webdunia
webdunia

ಮೊದಲು ಸೋತ ಸುಶೀಲ್ ಕಂಚು ಗೆದ್ದದ್ದು ಹೀಗೆ...!

ಮೊದಲು ಸೋತ ಸುಶೀಲ್ ಕಂಚು ಗೆದ್ದದ್ದು ಹೀಗೆ...!
PTI
ಬೀಜಿಂಗ್ ಒಲಿಂಪಿಕ್ಸ್ ಭಾರತದ ಪಾಲಿಗೆ ಒಂದು ಸ್ವರ್ಣಪದಕದ ನಂತರ ಕಂಚಿನ ಪದಕವನ್ನೂ ತಂದುಕೊಟ್ಟಿದೆ. ಇದೀಗ 66 ಕೆಜಿ ಫ್ರೀಸ್ಟೈಲ್ ಕುಸ್ತಿಪಟು, ಭಾರತದ ಸುಶೀಲ್ ಕುಮಾರ್ ಅವರು ಮೊದಲ ಸುತ್ತಿನಲ್ಲೇ ಸೋತರೂ ಕಂಚಿನ ಪದಕ ಗಳಿಸಿದ್ದು ಹೇಗೆ ಎಂಬುದು ಎಲ್ಲರ ಕುತೂಹಲ. ಅವರು ಧೂಳಿನಿಂದೆದ್ದು ಬಂದ ಬಗೆ ಹೇಗೆ?

ಬುಧವಾರ ಬೆಳಿಗ್ಗೆ, ಉಕ್ರೇನ್‌ನ ಆಂಡ್ರಿ ಸ್ಟಾಡ್ನಿಕ್ ಎದುರಿನ ಹೋರಾಟದಲ್ಲಿ ತಾಂತ್ರಿಕ ಅಂಕಗಳಲ್ಲಿ 3-8 ಅಂತರದಿಂದ ಹಿಂದುಳಿದು ಸುಶೀಲ್ ಸೋಲನ್ನಪ್ಪಿದಾಗ ಮಾಧ್ಯಮಗಳೆಲ್ಲವೂ "ಸುಶೀಲ್ ನಿರ್ಗಮನ" ಎಂದೇ ಬಿಂಬಿಸಿದವು. ಆದರೆ ಅವರು ಮತ್ತೆ ಮೇಲೆದ್ದು ಬಂದದ್ದು ರೆಪೆಶಾಜ್ (Repechage) ಎಂಬ ವಿಧಾನದ ಮೂಲಕ. ಹೀಗೆಂದರೇನು ಎಂಬುದನ್ನು ಈ ಲೇಖನದ ಕೆಳಗೆ ವಿವರಿಸಲಾಗಿದೆ.

ಸುಶೀಲ್ ಎದುರು ಗೆದ್ದಿದ್ದ ಹಾಗೂ ಫೈನಲಿಗೇರಿದ್ದ ಸ್ಟಾಡ್ನಿಕ್ ಹಾಗೂ ಮತ್ತೊಬ್ಬ ಫೈನಲಿಸ್ಟ್, ಟರ್ಕಿಯ ರಮ್ಜಾನ್ ಸಾಹಿನ್ ಅವರೆದುರು ಸೋತವರೆಲ್ಲರೂ ರೆಪೆಶಾಜ್ ವಿಧಾನದ ಮೂಲಕ 2 ಕಂಚಿನ ಪದಕ ಗೆಲ್ಲಲು ಅವಕಾಶ ಪಡೆಯುತ್ತಾರೆ.

ಬುಧವಾರ ಸುಶೀಲ್ ಪಾಲಿಗೆ ಅದೃಷ್ಟದ ಬೆಂಬಲವೂ ಇತ್ತು. ದೊರೆತ ಅವಕಾಶವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡ ಸುಶೀಲ್, ಮುಂದಿನ ಒಂದು ಗಂಟೆಯ ಅವಧಿಯಲ್ಲಿ ಮೂವರು ಕುಸ್ತಿಪಟುಗಳನ್ನು ಮಣಿಸಬೇಕಾಗಿತ್ತು. ಅದನ್ನವರು ಸಾಧಿಸಿಯೂ ಬಿಟ್ಟರು.

ರೆಪೆಶಾಜ್‌ನ ಮೊದಲ ಸುತ್ತಿನಲ್ಲಿ ಸುಶೀಲ್ ಅವರು ಅಮೆರಿಕದ ಶ್ವಾಬ್ ಎದುರು ಹೋರಾಡಿ ಗೆದ್ದರು. ಈ ಪಂದ್ಯದಲ್ಲಿ ಜಯಿಸಿದ ಬಳಿಕ ಮುಂದಿನ ಸುತ್ತಿನಲ್ಲಿ ಸುಶೀಲ್ ಅವರು ಬೆಲಾರುಸ್‌ನ ಅಲ್ಬರ್ಟ್ ಬಾಟಿರೊವ್‌ರನ್ನು ಮಗುಚಿ ಹಾಕಿದರು. ಕೊನೆಯದಾಗಿ ಸೆಮಿಫೈನಲಿನಲ್ಲಿ ಸೋತ ಕಜಕಿಸ್ತಾನದ ಲಿಯೊನಿಡ್ ಸ್ಪಿರಿಡೊನೊವ್ ಅವರನ್ನೂ 2-1, 0-1 ಮತ್ತು 1-0 ಅಂತರದ ಮೂರು ಸುತ್ತುಗಳಲ್ಲಿ ಮಣಿಸಿದರು. ಹೀಗೆ ಒಂದು ಗಂಟೆ ಅವಧಿಯಲ್ಲಿ ಮೂರು ಕುಸ್ತಿ ಪಂದ್ಯಗಳಲ್ಲಿ ಸೆಣಸಾಡಿದ ಸುಶೀಲ್ ಒಂದು ಕಂಚಿನ ಪದಕ ತಮ್ಮ ಬುಟ್ಟಿಗೆ ಹಾಕಿಕೊಂಡು ಇತಿಹಾಸ ನಿರ್ಮಿಸಿದರು.

ವಿಶೇಷವೆಂದರೆ, 2006ರ ದೋಹಾ ಏಷ್ಯನ್ ಗೇಮ್ಸ್ ಕೂಟದಲ್ಲಿ ಸುಶೀಲ್ ಅವರು ಇದೇ ಲಿಯೋನಿಡ್ ಅವರನ್ನು ಸೋಲಿಸಿ ಕಂಚಿನ ಪದಕ ಗಳಿಸಿದ್ದರು.

ಒಟ್ಟಾರೆ ಇಂದಿನ ಹೋರಾಟದಲ್ಲಿ ಟರ್ಕಿಯ ರಮ್ಜಾನ್ ಸಾಹಿನ್ ಅವರು ಸ್ವರ್ಣ ಪದಕ ಪಡೆದರೆ, ಉಕ್ರೇನಿನ ಆಂಡ್ರಿ ಸ್ಟಾಡ್ನಿಕ್ ರಜತ ಪದಕ ಪಡೆದರು. ಸುಶೀಲ್ ಕುಮಾರ್ ಜತೆಗೆ ಮತ್ತೊಂದು ಕಂಚಿನ ಪದಕ ಪಡೆದುಕೊಂಡವರು ಜಾರ್ಜಿಯಾದ ಒತಾರ್ ತುಶಿಶ್ವಿಲಿ.

ರೆಪೆಶಾಜ್ ವಿಧಾನದಲ್ಲಿ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸುಶೀಲ್ ಕುಮಾರ್ ಬೀಜಿಂಗ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿದರು. 1952ರಲ್ಲಿ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ, ಪುಣೆಯ ಕಶಾಬಾ ಜಾಧವ್ ಅವರ ಬಳಿಕ, ಅಂದರೆ 56 ವರ್ಷಗಳ ನಂತರ ಕುಸ್ತಿಯಲ್ಲಿ ಭಾರತಕ್ಕೆ ಪದಕ ದೊರೆಕಿಸಿಕೊಟ್ಟ ಹೀರೋ ಸುಶೀಲ್ ಕುಮಾರ್. ಆದರೆ ಈ ಸಂಭ್ರಮಾಚರಣೆಗೆ ಜಾಧವ್ ಇಲ್ಲ. ಅವರು ಇತ್ತೀಚೆಗೆ ಶೂಟರ್ ಅಭಿನವ್ ಬಿಂದ್ರಾ ಅವರು ಚಿನ್ನ ಗೆದ್ದ ದಿನವೇ ಇಹಲೋಕ ತ್ಯಜಿಸಿದ್ದರು.

ರೆಪೆಶಾಜ್ (Repechage) ಎಂದರೇನು?

ಈ ಫ್ರೆಂಚ್ ಪದದ ಅರ್ಥ "ರಕ್ಷಿಸು" ಅಥವಾ "ಉಳಿಸು" ಎಂಬುದಾಗಿ. ಅರ್ಹತೆಯ ಗುಣಮಟ್ಟವನ್ನು ತಲುಪಲು ಅತ್ಯಂತ ಅಲ್ಪ ಅಂತರದಿಂದ ವಿಫಲವಾದ ಸ್ಪರ್ಧಾಳುಗಳಿಗೆ ನೀಡುವ ಅವಕಾಶವಿದು.

ಕರಾಟೆ, ಜೂಡೋ, ಟೇಕ್ವಾಂಡೋ ಮತ್ತು ಕುಸ್ತಿ ಟೂರ್ನಿಗಳಲ್ಲಿ, ಪ್ರಥಮ ಮತ್ತು ದ್ವಿತೀಯ ಸ್ಥಾನಕ್ಕಾಗಿ ಫೈನಲ್ ಪಂದ್ಯದಲ್ಲಿ ಸೆಣಸಾಡುವವರನ್ನು ನಿರ್ಧರಿಸಲು ಸಿಂಗಲ್ ಎಲಿಮಿನೇಶನ್ ವಿಧಾನ ಅನುಸರಿಸಲಾಗುತ್ತದೆ. ಈ ಫೈನಲಿಸ್ಟ್‌ಗಳ ಕೈಯಲ್ಲಿ ಸೋತ ಎಲ್ಲ ಅಥ್ಲೀಟ್‌ಗಳನ್ನೂ ಆರಿಸಿ ರೆಪೆಶಾಜ್ ವಿಧಾನದ ಮೂಲಕ ಆಡಿಸಲಾಗುತ್ತದೆ. ಈ ರೀತಿ ಮಾಡುವ ಮೂಲಕ ತೃತೀಯ ಸ್ಥಾನ ಯಾರಿಗೆ ಎಂದು ನಿರ್ಣಯಿಸಲಾಗುತ್ತದೆ. ಅಂದರೆ, ಆರಂಭಿಕ ಸುತ್ತಿನಲ್ಲಿ ಇಬ್ಬರು ಪ್ರಬಲ ಪ್ರತಿಸ್ಪರ್ಧಿಗಳು ಸೆಣಸಾಡಿದಾಗ, ಅದರಲ್ಲಿ ಸೋತ ಪ್ರಬಲ ಕ್ರೀಡಾಳುವಿಗೂ ಪದಕ ಗೆಲ್ಲುವ ಅವಕಾಶ ದೊರಕಿಸಲಾಗುತ್ತದೆ.

Share this Story:

Follow Webdunia kannada