Select Your Language

Notifications

webdunia
webdunia
webdunia
webdunia

ಭಾರತೀಯರ ಮನವರಳಿಸಿದ ವಿಜೇಂದ್ರ, ಸುಶೀಲ್

ಭಾರತೀಯರ ಮನವರಳಿಸಿದ ವಿಜೇಂದ್ರ, ಸುಶೀಲ್
ಭಾರತಕ್ಕೆ ಬುಧವಾರ ಶುಭ ದಿನ. ಒಂದು ಕಡೆ ಭಾರತೀಯ ಕ್ರಿಕೆಟ್ ತಂಡವು ಸೋಲಿನ ದವಡೆಯಿಂದ ಪಾರಾಗಿ ಶ್ರೀಲಂಕಾ ವಿರುದ್ಧ ವಿಜಯ ಸಾಧಿಸಿದರೆ, ಇನ್ನೊಂದೆಡೆ ದೂರದ ಬೀಜಿಂಗ್‌ನಲ್ಲಿ ಒಲಿಂಪಿಕ್ಸ್ ಕೂಟದಲ್ಲಿ ಭಾರತದ ಬಾಕ್ಸಿಂಗ್ ಮತ್ತು ಕುಸ್ತಿ ಪಟುಗಳು ತ್ರಿವರ್ಣ ಧ್ವಜವನ್ನು ಎತ್ತರೆತ್ತರಕ್ಕೆ ಹಾರಿಸಿದ್ದಾರೆ.

WD
25ರ ಹರೆಯದ ದೆಹಲಿಯ ಹುಡುಗ ಸುಶೀಲ್ ಕುಮಾರ್ ಅವರು 66 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಕಂಚು ತಂದಿತ್ತು 56 ವರ್ಷಗಳ ಬಳಿಕ ಕುಸ್ತಿಯಲ್ಲಿ ನಮ್ಮ ದೇಶಕ್ಕೆ ಹೆಮ್ಮೆ ತಂದಿತ್ತಿದ್ದಾರೆ. ಸುಶೀಲ್ ಅವರು ಆರಂಭಿಕ ಪಂದ್ಯದಲ್ಲಿ ಸೋತರೂ ರೆಪೆಶಾಜ್ ಪದ್ಧತಿಯ ಮೂಲಕ ಅದ್ಭುತವಾಗಿ ಚೇತರಿಸಿಕೊಂಡು, ಕೆಚ್ಚಿನ ಹೋರಾಟ ಪ್ರದರ್ಶಿಸಿ ಕಂಚಿನ ಪದಕ ಗಿಟ್ಟಿಸಿಕೊಂಡರು.

ಸುಶೀಲ್ ಕುಮಾರ್ ಅರ್ಜುನ ಪ್ರಶಸ್ತಿ ವಿಜೇತರೂ ಹೌದು. ಕೆನಡಾದ ಒಂಟಾರಿಯೋದಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್‌ಷಿಪ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಸುಶೀಲ್, ಕೊರಿಯಾದ ಜೆಜು ದ್ವೀಪದಲ್ಲಿ ನಡೆದ 2008ರ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದಾರೆ. ಅಂತೆಯೇ 2006ರಲ್ಲಿ ಖತಾರ್‌ನ ದೋಹಾದಲ್ಲಿ ನಡೆದಿದ್ದ 15ನೇ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ತಮ್ಮ ಸಾಧನೆಯ ಗರಿಮೆ ಹೆಚ್ಚಿಸಿಕೊಂಡಿದ್ದಾರೆ.

webdunia
WD
ಆ ಬಳಿಕ ಪದಕ ಖಚಿತಪಡಿಸಿಕೊಂಡವರು ಮತ್ತೊಬ್ಬ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು, 75 ಕೆಜಿ ವಿಭಾಗದ ಬಾಕ್ಸಿಂಗ್ ವೀರ ವಿಜೇಂದ್ರ ಕುಮಾರ್. ಇದುವರೆಗೆ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಚಿನ್ನ ಗೆದ್ದಿರುವ ವಿಜೇಂದ್ರ ಕುಮಾರ್ 23ರ ಹರೆಯದವರು. ದೆಹಲಿಯಲ್ಲಿ 2007ರಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಬಾಕ್ಸಿಂಗ್ ಚಾಂಪಿಯನ್‌ಷಿಪ್, ಅಕೋಲದಲ್ಲಿ 2008ರಲ್ಲಿ ನಡೆದ ಸೂಪರ್ ಕಪ್ ಅಂತರ್ ವಲಯ ರಾಷ್ಟ್ರೀಯ ಬಾಕ್ಸಿಂಗ್, 2008ರಲ್ಲಿ ಕಜಕಿಸ್ತಾನದಲ್ಲಿ ನಡೆದ 3ನೇ ಒಲಿಂಪಿಕ್ ಅರ್ಹತಾ ಟೂರ್ನಿ ಹಾಗೂ ಇದೇ ವರ್ಷ ಜರ್ಮನಿಯಲ್ಲಿ ನಡೆದ ಕೆಮಿಸ್ಟ್ರಿ ಕಪ್ ಬಾಕ್ಸಿಂಗ್ ಟೂರ್ನಮೆಂಟ್‌ಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದೀಗ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿಯೂ ಚಿನ್ನದ ಪದಕದ ಮೇಲೆ ದೃಷ್ಟಿ ಇರಿಸಿದ್ದಾರೆ.

Share this Story:

Follow Webdunia kannada