Select Your Language

Notifications

webdunia
webdunia
webdunia
webdunia

ಸೂಟು ಬಿಚ್ಚಿ ಕಚ್ಚೆ ತೊಟ್ಟ ನಿಸಾರ್, ಪಲ್ಲಕ್ಕಿಯೇರಿ ಸಂಕೋಚಗೊಂಡ ಕಣವಿ!

ಸೂಟು ಬಿಚ್ಚಿ ಕಚ್ಚೆ ತೊಟ್ಟ ನಿಸಾರ್, ಪಲ್ಲಕ್ಕಿಯೇರಿ ಸಂಕೋಚಗೊಂಡ ಕಣವಿ!
ಮೂಡುಬಿದಿರೆ , ಶುಕ್ರವಾರ, 28 ನವೆಂಬರ್ 2008 (18:53 IST)
ಅವಿನಾಶ್ ಬಿ.

ಜೀವಮಾನದಲ್ಲಿ ಯಾವತ್ತೂ ಸೂಟು- ಬೂಟಿನಲ್ಲಿಯೇ ಕವಿ ನಿಸಾರ್ ಅಹ್ಮದ್ ಅವರನ್ನು ನೋಡಿದವರಿಗೆ, ವೇದಿಕೆಯಲ್ಲಿ ಕಚ್ಚೆ ತೊಟ್ಟು, ಶುಭ್ರ ಅಂಗಿ ಧರಿಸಿ, ಮುಂಡಾಸುಧಾರಿಯಾಗಿ ಬಂದವರನ್ನು ನೋಡಿ, ಅದು ಅವರೋ ... ಅಲ್ಲವೋ ಎಂಬ ಸಂದೇಹ. ಕೆಲವರಂತೂ, ನಿಸಾರ್ ಅಹ್ಮದ್ ಬರಲಿಲ್ಲವೇ? ಎಂದು ವಿಚಾರಿಸುವುದೂ ಕೇಳಿಸುತ್ತಿತ್ತು. ಇಲ್ಲ ಬಂದಿದ್ದಾರೆ ಎಂದಾಗ ಅವರೆಲ್ಲ ನಂಬುವ ಸ್ಥಿತಿಯಲ್ಲಿಯೇ ಇರಲಿಲ್ಲ.

WD
ಇದಕ್ಕೆ ತಮ್ಮ ಉದ್ಘಾಟನಾ ಭಾಷಣದಲ್ಲಿ ಸ್ಪಷ್ಟನೆ ನೀಡಿದ ನಾಡೋಜ ಕವಿ, ನಾನೆಂದಿಗೂ ನನ್ನ ಜೀವನದಲ್ಲಿ ಸೂಟು ಬಿಟ್ಟು ಬೇರೆ ಉಡುಪು ಧರಿಸಿದವನಲ್ಲ. ಇದೇ ಮೊದಲ ಬಾರಿ ನನ್ನ ವಸ್ತ್ರಾಪಹರಣವಾಗಿದೆ. ಆಳ್ವಾ ನನ್ನ ವಸ್ತ್ರ ಬಿಚ್ಚಿಬಿಟ್ಟರು. ಕಚ್ಚೆ ತೊಡಿಸಿದರು. ಇದು ನನಗೆ ಸಂಪೂರ್ಣ ಹೊಸತು. ಸೂಟು ಬಿಚ್ಚಿ ಕಚ್ಚೆ ತೊಡಿಸುತ್ತಿರುವಾಗ ನಾನೇಕೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡೆನೋ ಎಂದೆನಿಸಿತು. ಕಚ್ಚೆ ಕಟ್ಟಿದವರು 'ನೀವು ತುಂಬಾ ಚೆಂದ ಕಾಣುತ್ತಿದ್ದೀರಿ ಸರ್' ಎಂದರು. ಆದರೆ ಇವರೆಲ್ಲ ನಿಜ ಹೇಳುತ್ತಿದ್ದಾರಾ... ವ್ಯಂಗ್ಯ ಮಾಡುತ್ತಿದ್ದಾರಾ ಎಂಬ ಸಂಶಯ.ವಂತೂ ನನ್ನನ್ನು ಕಾಡಿದ್ದು ನಿಜ ಎಂದಾಗ ಸಭೆಯಲ್ಲಿ ನಗೆಬುಗ್ಗೆ.

ಅದನ್ನು ತಮ್ಮ ಭಾಷಣದಲ್ಲೂ ಪ್ರಸ್ತಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರ್ ಪ್ರಸಾದ್, ನಿಸಾರ್ ಅಹ್ಮದ್ ಅವರನ್ನು ಸೂಟು ಬೂಟು ಹೊರತಾದ ಉಡುಪಿನಲ್ಲಿ ಕಾಣಬೇಕೆಂದಿದ್ದೆ. ಈ ನನ್ನ ಜೀವಮಾನದ ಕನಸು ನನಸಾಯಿತು ಎಂದು ಹರ್ಷದಿಂದ ನುಡಿದರು.
webdunia
WD
ಇನ್ನೊಂದೆಡೆ ಜೀವಮಾನದಲ್ಲಿ ಈ ರೀತಿ ಆಗಿರಲಿಲ್ಲ ಎಂದು ಮಾತಿಗೆ ಹಚ್ಚಿದವರು ಸಮ್ಮೇಳನಾಧ್ಯಕ್ಷ ಡಾ.ಚೆನ್ನವೀರ ಕಣವಿ. ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೇದಿಕೆಗೆ ಕರೆ ತಂದಿರುವುದು ಅವರ ಬದುಕಿನ ಅತ್ಯಂತ ಮುಜುಗರದ ಸಂಗತಿಯಾಯಿತಂತೆ. ಅದನ್ನವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ತೀರಾ ಮುಜುಗರಕ್ಕೀಡಾದೆ. ಆದರೆ ಹಿಂದೆ ತಿರುಗಿ ನೋಡಿದಾಗ ಕನ್ನಡ ಗ್ರಂಥಗಳನ್ನೂ ಮೇನೆಯಲ್ಲಿ ಇರಿಸಿ ಭಕ್ತಿ ಭಾವದಿಂದಲೇ ಕರೆತರಲಾಗುತ್ತಿತ್ತು. ಹೀಗಾಗಿ ಕನ್ನಡದ ಕಂದನನ್ನು ಕನ್ನಡ ತಾಯಿ ಕೈಹಿಡಿದು ಮುನ್ನಡೆಸುತ್ತಿದ್ದಾಳೆ ಎಂಬ ಧನ್ಯತಾ ಭಾವ ಅನುಭವಿಸಿದೆ ಎಂದರವರು.

ಪರ್ಯಾಯ ಸಾಹಿತ್ಯ ಸಮ್ಮೇಳನ ಅಲ್ಲ: ಡಾ.ಆಳ್ವಾ
ಆಳ್ವಾಸ್ ನುಡಿಸಿರಿ ಸಾಹಿತ್ಯ ಸಮ್ಮೇಳನವನ್ನು ಪ್ರತಿ ವರ್ಷ ಏರ್ಪಡಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಮಾಡ್ತಾ ಇದ್ದೀರಾ ಅಂತ ಕೆಲವರು ನನಗೆ ಕೇಳಿದರು. ಆದರೆ ಅಂಥ ಉದ್ದೇಶವಾಗಲಿ, ಅಂಥ ಹಂಬಲವಾಗಲಿ ನನಗಿಲ್ಲ ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ. ಮೋಹನ ಆಳ್ವಾ ಸ್ಪಷ್ಟಪಡಿಸಿದರು.

ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ಪ್ರತೀ ಜಿಲ್ಲೆಗಳಲ್ಲೂ ನುಡಿಸಿರಿ ಘಟಕ ಸ್ಥಾಪನೆ ಮಾಡುವ ಉದ್ದೇಶ ಇದೆ, ಈಗಾಗಲೇ 10 ನುಡಿಸಿರಿ ಘಟಕಗಳು ಎಂದರು. ಒಂದು ವರ್ಷದಲ್ಲಿ ಇನ್ನೂ ಐವತ್ತು ಘಟಕಗಳನ್ನು ಸ್ಥಾಪಿಸುವ ಇರಾದೆ ಇದೆ ಎಂದರು.

ರಾಜ್ಯಾದ್ಯಂತ ಸಾಹಿತ್ಯ ಜಾತ್ರೆ: ನಲ್ಲೂರು

ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಡಾ.ಮೋಹನ ಆಳ್ವಾರ ಕನ್ನಡ ಸಮ್ಮೇಳನ ಏರ್ಪಡಿಸುವ ಸಾಮರ್ಥ್ಯವು ನುಡಿಸಿರಿಗಷ್ಟೇ ಸೀಮಿತವಾಗಬಾರದು. ಅವರ ಕಾರ್ಯವ್ಯಾಪ್ತಿ, ಸಾಮರ್ಥ್ಯ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಬೇಕು, ರಾಜ್ಯಾದ್ಯಂತ ಅವರು ಇಂಥ ಸಮ್ಮೇಳನಗಳನ್ನು ನಡೆಸುವಂತಾಗಲಿ ಎಂದು ಸಲಹೆ ನೀಡಿದರು.

webdunia
WD
ರಾಜ್ಯಾದ್ಯಂತ ಪ್ರತಿವರ್ಷ ಒಂದೊಂದು ಕಡೆ ಸಾಹಿತ್ಯ ಜಾತ್ರೆ ನಡೆಸಲಾಗುತ್ತದೆ ಎಂದು ಘೋಷಿಸಿದ ಅವರು, ಮೊದಲ ಸಮಾವೇಶವು ಧಾರವಾಡದಲ್ಲಿ ನಡೆಯಲಿದೆ. ಇದರಲ್ಲಿ ಯುವ ಜನಾಂಗಕ್ಕೇ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಕನ್ನಡ ನಾಡು-ನುಡಿಯ ಚಿಂತನೆಯನ್ನು ಯುವ ಮನಸ್ಸುಗಳಲ್ಲಿ ಬೆಳೆಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಡಲಾಗುವುದು ಎಂದರು.

Share this Story:

Follow Webdunia kannada