Select Your Language

Notifications

webdunia
webdunia
webdunia
webdunia

ಶಾಸ್ತ್ರೀಯ ಸ್ಥಾನ ಕಾರ್ಯಾನುಷ್ಠಾನವಿಲ್ಲ!

ಶಾಸ್ತ್ರೀಯ ಸ್ಥಾನ ಕಾರ್ಯಾನುಷ್ಠಾನವಿಲ್ಲ!
ಮೂಡುಬಿದರೆ , ಸೋಮವಾರ, 1 ಡಿಸೆಂಬರ್ 2008 (09:50 IST)
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿದ್ದರೂ ಇದು ಕೇವಲ ಭರವಸೆ ಮಾತ್ರ. ಇದಿನ್ನೂ ಕಾರ್ಯಾನುಷ್ಠಾನವಾಗಿಲ್ಲ ಎಂಬ ಕಠೋರ ಸತ್ಯವನ್ನು ಮುಖ್ಯಮಂತ್ರಿ ಚಂದ್ರು ಜನತೆಯ ಮುಂದಿಟ್ಟಿದ್ದಾರೆ.

ಅವರು ಇಲ್ಲಿ ಆಳ್ವಾಸ್ ನುಡಿಸಿರಿಯ ಸಮಾರೋಪ ಭಾಷಣ ಮಾಡುತ್ತಿದ್ದರು.

"ಕೇಂದ್ರ ಸರಕಾರ ಈ ಸಂಬಂಧ ಹೊರಡಿಸಿದ ಅಧಿಸೂಚನೆಯಲ್ಲಿ ಒಂದು ಷರತ್ತಿದೆ. ತಮಿಳುನಾಡಿನ ವ್ಯಕ್ತಿಯೊಬ್ಬರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯೊಂದನ್ನು ಸಲ್ಲಿಸಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದಕ್ಕೆ ಅಪಸ್ವರ ಎತ್ತಿದ್ದಾರೆ. ಅದು ತೆರವಾದರೆ ಮಾತ್ರ ಈ ಅಧಿಸೂಚನೆ ಜಾರಿಗೆ ಬರುತ್ತದೆ. ಅಲ್ಲಿಯವರೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದ ಯಾವುದೇ ಸವಲತ್ತು ನೀಡಲು ಸಾಧ್ಯವಿಲ್ಲ ಎಂಬ ಷರತ್ತು ವಿಧಿಸಲಾಗಿದೆ" ಎಂದು ಅವರು ತಿಳಿಸಿದರು.

"ಹೀಗಾಗಿ ಈಗ ನಾವು ಕೇವಲ ಶಾಸ್ತ್ರೀಯ ಸ್ಥಾನಮಾನ ಎಂಬ ಬೋರ್ಡನ್ನು ಮಾತ್ರ ತಗುಲಿಸಿಕೊಂಡು ಸಂಭ್ರಮಿಸುವ ಅನಿವಾರ್ಯತೆ ಇದೆ. ಕೋರ್ಟಿಗೆ ಹೋದವರು ಕೂಡಾ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ, ಈ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿದ ಕೇಂದ್ರೀಯ ಸಮಿತಿಯ ರಚನೆ ಸಿಂಧುವಾಗಿಲ್ಲ ಎಂದು ತರಕರಾರು ಎತ್ತಿದ್ದಾರೆ. ಈ ಮೂಲಕ ದಾವೆಯನ್ನು ವರ್ಷಗಟ್ಟಲೆ ಎಳೆಯವುದು ಅವರ ಉದ್ದೇಶ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದಷ್ಟು ಬೇಗ ನ್ಯಾಯಾಲಯದ ಮೂಲಕ ಕಾನೂನು ತೊಡಕು ನಿವಾರಣೆ ಆಗುವಂತೆ ಸರಕಾರ ಮಾಡಬೇಕು" ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

Share this Story:

Follow Webdunia kannada