Select Your Language

Notifications

webdunia
webdunia
webdunia
webdunia

ವಿದ್ಯಾಗಿರಿಯಲ್ಲಿ ನುಡಿಸಿರಿ: ಸಾಹಿತ್ಯ-ಸಂಸ್ಕೃತಿಯ ಐಸಿರಿ

ವಿದ್ಯಾಗಿರಿಯಲ್ಲಿ ನುಡಿಸಿರಿ: ಸಾಹಿತ್ಯ-ಸಂಸ್ಕೃತಿಯ ಐಸಿರಿ
ಮೂಡುಬಿದಿರೆ , ಶುಕ್ರವಾರ, 28 ನವೆಂಬರ್ 2008 (17:55 IST)
ಅವಿನಾಶ್ ಬಿ.

ಆಳ್ವಾಸ್ ನುಡಿಸಿರಿ ಎಂದರೆ ಒಂದು ರೀತಿಯ ಸಾಹಿತ್ಯದ, ಸಂಸ್ಕೃತಿಯ ಸಿರಿವಂತಿಕೆಯ ಪ್ರದರ್ಶನ. ಇದನ್ನು ನಾವು ಪ್ರಧಾನವಾಗಿ ನೋಡಬಹುದಾದದ್ದು ನುಡಿಸಿರಿಯ ಆಕರ್ಷಕ ಸಭಾ ಮಂಟಪಗಳಲ್ಲಿ, ವೇದಿಕೆಗಳಲ್ಲಿ, ಬಯಲಿನಲ್ಲಿ, ಅಲ್ಲಿ ಮತ್ತು ಇಲ್ಲಿ. ಒಟ್ಟಾರೆಯಾಗಿ ಎಲ್ಲೆಲ್ಲೂ ನಮ್ಮ ಹೆಮ್ಮೆಯ ಜಾನಪದ ಕಲೆಗಳು, ಸಂಸ್ಕೃತಿ ವೈವಿಧ್ಯ ಎಲ್ಲವೂ ಸಮ್ಮೇಳನದ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುವಂತಿತ್ತು.

ಕರಾವಳಿಯ ಇಬ್ಬರು ಸಾಹಿತ್ಯ ದಿಗ್ಗಜರಾದ ವ್ಯಾಸರಾಯ ಬಲ್ಲಾಳ ಸಭಾಂಗಣ, ರತ್ನಾಕರ ವರ್ಣಿ ವೇದಿಕೆಗಳ ಹೆಸರುಗಳೇ ಸಾಹಿತ್ಯಕ್ಕೆ ಸಲ್ಲುವ ಗೌರವದ ಪ್ರತೀಕ. ವಿದ್ಯಾಗಿರಿಯಲ್ಲಿಡೀ ಯಕ್ಷಗಾನದ ಮುಖವರ್ಣಿಕೆಗಳು, ಕಿರೀಟಗಳು ರಾರಾಜಿಸುತ್ತಲೇ ಇರುವುದು ಕಣ್ಣಿಗೆ ಹಬ್ಬ. ಇದರ ಜತೆಗೆ ಅಲ್ಲಲ್ಲಿ ತೂಗುಬಿಟ್ಟಿರುವ ಗೂಡುದೀಪಗಳು ಮನಸೆಳೆಯುತ್ತವೆ.

ಇನ್ನು ವೇದಿಕೆಯತ್ತ ಒಮ್ಮೆ ಕಣ್ಣು ಹೊರಳಿಸಿದರೆ ಸಾಕು, ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದ ಕಿರೀಟಗಳು, ದೇಶದಲ್ಲಿ ಅತ್ಯಧಿಕ ಜ್ಞಾನ ಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯ ಕನ್ನಡದ ಜ್ಞಾನಪೀಠ ಮಹಾನ್ ಚೇತನಗಳ ಪ್ರತಿಕೃತಿ, ಕಲಶ, ದೀಪಗಳ ಸಾಲು ಸಾಲು, ಹೋದಲ್ಲೆಲ್ಲಾ ಕಣ್ಮನ ಸೆಳೆಯುವ ಆಕರ್ಷಕ ಆಕಾಶ ಬುಟ್ಟಿಗಳು... ಇವುಗಳಿಗೆ ಕಲಶವಿಟ್ಟಂತೆ, ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಕೂಡ ನಡೆದಿದ್ದು, ಭತ್ತದ ತೆನೆಗೆ ಹಾಲೆರೆಯುವ ಸಾಂಪ್ರದಾಯಿಕ ಮಾದರಿಯಲ್ಲಿ.

WD
ಅತಿಥಿಗಳು, ಗಣ್ಯರು ಮಾತನಾಡಲು ಬಳಸುವ ಭಾಷಣಪೀಠ (ಪೋಡಿಯಂ) ಅಂತೂ ಎಷ್ಟು ನೋಡಿದರೂ ಮನತಣಿಸುವಂತಿರುವ ಕೆಂಪಡಿಕೆಯ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತದೆ. ಅದಕ್ಕೆ ಭತ್ತದ ತೆನೆ ಕಟ್ಟಿದ ರೀತಿ, ಸಭಾವೇದಿಕೆಯಲ್ಲಿಡೀ ಎದ್ದುಕಾಣುವಂತೆ ಮಾಡುತ್ತದೆ.

ಇದಕ್ಕೆ ಮೊದಲು ನಡೆದ ಮೆರವಣಿಗೆ. ಸಭಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಕನ್ನಡ ಗ್ರಂಥಗಳನ್ನೂ ಮೇನೆಯಲ್ಲಿರಿಸಿ ಕರೆತಂದ ವಿಧಾನ, ಕೇರಳದ ಅಬ್ಬರದ ಚೆಂಡೆವಾದನ, ಯಕ್ಷಗಾನ ವೇಷಗಳು, ಡೊಳ್ಳು ಕುಣಿತ, ಕರಾವಳಿಯ ಹುಲಿವೇಷ ತಂಡ... ಎಲ್ಲವೂ ಈ ಮಣ್ಣಿನ ಸಾಂಸ್ಕೃತಿಕ ವೈಭವವನ್ನು ಸಾರುತ್ತಿತ್ತು.

ಸಭಾಂಗಣವು ತುಳುನಾಡಿನ ಗತ ವೈಭವ ಸಾರುವ, ಪರಂಪರೆಯ ಪ್ರತೀಕವಾಗಿರುವ ಗುತ್ತಿನ ಮನೆಯನ್ನು ನೋಡಿದಂತಾಗುತ್ತದೆ. ತುಳುನಾಡಿನ ಅರಸರ ಮನೆಯನ್ನು ಹೋಲುವ ಇದು, ಕೆತ್ತನೆಶಿಲ್ಪ ಕಲಾ ಸೌಂದರ್ಯದ ಕಂಬಗಳು, ಶಿಲ್ಪ ವೈಭವದಿಂದ ಗಮನ ಸೆಳೆಯುತ್ತದೆ. ಹಿನ್ನೆಲೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ರಾರಾಜಿಸುತ್ತಿದ್ದಾಳೆ.

webdunia
WD
ಇಷ್ಟೆಲ್ಲಾ ಐಸಿರಿಗಳೊಂದಿಗೆ ನುಡಿಸಿರಿ ನಡೆಯುವಾಗ, ಅಚ್ಚುಕಟ್ಟುತನ, ಸಮಯ ಪ್ರಜ್ಞೆ ಬಗ್ಗೆ ಹೇಳದಿದ್ದರೆ ಸಮ್ಮೇಳನದ ವಿವರವೇ ಅಪೂರ್ಣವಾಗಿಬಿಡಬಹುದು. ಡಾ.ಮೋಹನ್ ಆಳ್ವಾ ಅವರು ಸಮಯಕ್ಕೆ ನೀಡುವ ಮಹತ್ವವು ಪ್ರತಿಯೊಬ್ಬ ಭಾಷಣಕಾರನ ಮೇಲೂ ಪ್ರಭಾವ ಬೀರುತ್ತಿದೆ. ಆಮಂತ್ರಣಪತ್ರಿಕೆಯಲ್ಲಿ ಮುದ್ರಿಸಿರುವ ಸಮಯ ಸಮೀಪಿಸುತ್ತಿರುವಂತೆಯೇ ಪೋಡಿಯಂನಲ್ಲಿ ಎಚ್ಚರಿಕೆಯ ದೀಪವೊಂದು ಬೆಳಗುತ್ತದೆ. ಅಷ್ಟೊತ್ತಿಗೆ ಭಾಷಣಕಾರರು ಆಳ್ವರ ಕ್ಷಮೆ ಕೇಳುತ್ತಾ, ಒಂದು ಹೇಳಲೇಬೇಕಾದ ಪ್ರಸಂಗವನ್ನು ಹೇಳಿ ಮುಗಿಸುತ್ತಿರುವುದನ್ನು ನೋಡಿದರೆ, ಯಾವುದೇ ಭಾಷಣಕಾರ ಕೂಡ ಸಮಯಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಬಲವಾಗಿ ನಂಬಿಕೆ ಇರಿಸಬಹುದು.

ಅತ್ತ ಚೆನ್ನೈ ನಗರಿಯಿಡೀ ಮಳೆಯಿಂದ ತೋಯ್ದು ಹೋಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಇತ್ತ ಮೂಡುಬಿದಿರೆಯಲ್ಲಿಯೂ ಸಮ್ಮೇಳನ ತಾಣಕ್ಕೆ ಒಂದಷ್ಟು ಮಳೆ ಸುರಿದು ಇಂಪಾದ ವಾತಾವರಣವನ್ನು ತಂಪಾಗಿಸಿತು.

Share this Story:

Follow Webdunia kannada